ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅತ್ತಿಬೆಲೆ ಪಟಾಕಿ ದುರಂತ: ಆರು ವಿದ್ಯಾರ್ಥಿಗಳು ಸೇರಿ ಒಂದೇ ಊರಿನ ಎಂಟು ಮಂದಿ ಸಾವು

Published 8 ಅಕ್ಟೋಬರ್ 2023, 2:58 IST
Last Updated 8 ಅಕ್ಟೋಬರ್ 2023, 2:58 IST
ಅಕ್ಷರ ಗಾತ್ರ

ಆನೇಕಲ್: ಓದಿನೊಂದಿಗೆ ದುಡಿದು ತಮ್ಮ ಕುಟುಂಬದ ಮೇಲಿನ ಆರ್ಥಿಕ ಹೊರೆಯನ್ನು ಕೊಂಚವಾದರೂ ತಗ್ಗಿಸಬೇಕೆಂಬ ಆಸೆಯೊಂದಿಗೆ ಪಟಾಕಿ ಮಳಿಗೆಯಲ್ಲಿ ಅರೆಕಾಲಿಕ ಕೆಲಸಕ್ಕೆ ಬಂದಿದ್ದ ಎಳೆಯ ಜೀವಗಳ ಶನಿವಾರ ನಡೆದ ದುರಂತದಲ್ಲಿ ಪ್ರಾಣಬಿಟ್ಟಿವೆ.

ಅತ್ತಿಬೆಲೆಯಲ್ಲಿ ಸಂಭವಿಸಿದ ಪಟಾಕಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿದೆ. ಇದರಲ್ಲಿ ಆರು ಮಂದಿ ವಿದ್ಯಾರ್ಥಿಗಳು ಸೇರಿದ್ದಾರೆ.

ಪದವಿ ಮತ್ತು ಪಿಯುಸಿ ಓದುತ್ತಿದ್ದ ಈ ಮಕ್ಕಳು ಬಡ ಕುಟುಂಬದವರು. ಇವರ ತಂದೆ-ತಾಯಂದಿರು ಕೂಲಿ ಕೆಲಸ ಮಾಡುವವರು.

ದೀಪಾವಳಿ ಹಬ್ಬಕ್ಕಾಗಿ ಕುಟುಂಬದ ಖರ್ಚಿಗೆ ಮತ್ತು ಓದಿನ ಖರ್ಚಿಗೆ ನಾಲ್ಕು ಕಾಸು ಮಾಡಿಕೊಳ್ಳಲು ಪ್ರತಿ ವರ್ಷದಂತೆ ಈ ಬಾರಿಯೂ ಕೆಲಸಕ್ಕೆ ಬಂದಿದ್ದರು. ಆದರೆ ಆ ಜೀವಗಳ ಜೊತೆ ಅವರ ಕನಸುಗಳು ಈಗ ಸುಟ್ಟು ಕರಕಲಾಗಿವೆ.

ಪೊಲೀಸ್ ಆಗಬೇಕೆಂಬ ಕನಸು ಹೊತ್ತು ಪೋಷಕರಲ್ಲಿ ಭರವಸೆ ಮೂಡಿಸಿದ್ದ ಯುವಕನೊಬ್ಬ ದುರಂತದಲ್ಲಿ ಬಲಿಯಾಗಿದ್ದಾನೆ.

ತಮ್ಮ ಮಕ್ಕಳ ಬಗ್ಗೆ ನಾನಾ ಕನಸು ಕಂಡಿದ್ದ ಹೆತ್ತ ಜೀವಿಗಳು ಸುಟ್ಟು ಕರಕಲಾಗಿರುವ ದೇಹಗಳ ಕಂಡು ಕಂಗಾಲಾಗಿದ್ದಾರೆ. ಶವಗಾರದ ಮುಂದೆ ಹೆತ್ತವರು ಗೋಳಾಡುತ್ತಿರುವ ದೃಶ್ಯಗಳು ಕರುಳು ಹಿಂಡಿವಂತಿವೆ.

ದುರಂತದಲ್ಲಿ ಮೃತಪಟ್ಟ 14 ಮಂದಿ ಪೈಕಿ ಎಂಟು ಮಂದಿ ಒಂದೇ ಊರಿನವರು. ಧರ್ಮಪುರಿ ಜಿಲ್ಲೆಯು ಅಮ್ಮಪೇಟೆಯ ಎಂಟು ಮಂದಿ, ತಿರುಪ್ಪೂರು ಜಿಲ್ಲೆ ವಾಣಿ ಅಂಬಾಡಿಯ ಇಬ್ಬರು ದುರಂತದಲ್ಲಿ ಸಾವಿಗೀಡಾಗಿದ್ದಾರೆ. ಇವರೆಲ್ಲರು ಕೃಷಿಕರು ಮತ್ತು ಕೃಷಿ ಕೂಲಿ ಕಾರ್ಮಿಕರು.

ದೀಪಾವಳಿ ಹಬ್ಬದ ಒಂದು ತಿಂಗಳು ಮುನ್ನವೇ ಅತ್ತಿಬೆಲೆ ಪಟಾಕಿ ಗೋದಾಮು ಮತ್ತು ಮಳಿಗೆಗಳಿಗೆ ಕೂಲಿ ಮಾಡಲು ಬಂದವರು ಕೈತುಂಬಾ ಹಣದೊಂದಿಗೆ ಖುಷಿಯಿಂದ ಹಿಂದಿರುಗುತ್ತಿದ್ದರು. ಆದರೆ, ಈ ಬಾರಿ ಹಿಂದಿರುಗುವ ಅದೃಷ್ಟ ಅವರಿಗೆ ಇರಲಿಲ್ಲ. ಮಗ ದುಡಿದು ಹಣ ತರುತ್ತಾನೆ ಎಂದು ಎದುರು ನೋಡುತ್ತಿದ್ದ ಪೋಷಕರು ನಿನ್ನೆಯ ದುರಂತದ ನಂತರ ಪಾತಾಳಕ್ಕೆ ಕುಸಿದಿದ್ದಾರೆ. ಅವರನ್ನು ಸಂತೈಸಲು ಯಾರಿಗೂ ಪದಗಳು ಸಿಗುತ್ತಿಲ್ಲ.

ಮೃತದೇಹ ತೋರಿಸದಿದ್ದಕ್ಕೆ ಸಂಬಂಧಿಕರ ಆಕ್ರೋಶ

ಬೆಂಗಳೂರು: ಅತ್ತಿಬೆಲೆ ಪಟಾಕಿ ದುರಂತದಲ್ಲಿ‌ ಮೃತಪಟ್ಟಿರುವ ಕಾರ್ಮಿಕರ ಮೃತದೇಹ ತೋರಿಸಲು ಆಸ್ಪತ್ರೆಯವರು ಹಾಗೂ ಪೊಲೀಸರು ಹಿಂದೇಟು ಹಾಕುತ್ತಿದ್ದು, ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

'ಶನಿವಾರ ಮಧ್ಯಾಹ್ನ ದುರಂತ ನಡೆದಿದೆ. ಭಾನುವಾರ ಬೆಳಿಗ್ಗೆಯಾದರೂ ಮೃತದೇಹ ತೋರಿಸಿಲ್ಲ. ತಂದೆ-ತಾಯಿಗಾದರೂ ಒಳಗೆ ಬಿಡಬೇಕು' ಎಂದು ಸಂಬಂಧಿಕರು ಕೇಳುತ್ತಿದ್ದಾರೆ.

'ಆಸ್ಪತ್ರೆ ಬಳಿ ಹೋದರೆ ಪೊಲೀಸರು ಲಾಠಿಯಿಂದ ಹೊಡೆಯುತ್ತಿದ್ದಾರೆ. ಇದು ವ್ಯವಸ್ಥೆನಾ. ನಮ್ಮ ನೋವಿಗೆ ಸ್ಪಂದನೆ ಇಲ್ಲವೇ? ನಮ್ಮ ಮಕ್ಕಳನ್ನು ನಮಗೆ ತೋರಿಸಿ' ಎಂದು ಸಂಬಂಧಿಕರು ಗೋಗರೆಯುತ್ತಿದ್ದಾರೆ.

ತಮಿಳುನಾಡಿನಿಂದ ಅಧಿಕಾರಿಗಳಯ ಬಂದಿದ್ದು, ಅವರ ಎದುರು ಸಂಬಂಧಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಮೃತರ ಬಗ್ಗೆ ಮಾಹಿತಿ ಪಡೆಯುತ್ತಿರುವ ತಮಿಳುನಾಡು ಅಧಿಕಾರಿಗಳು

ಮೃತರ ಬಗ್ಗೆ ಮಾಹಿತಿ ಪಡೆಯುತ್ತಿರುವ ತಮಿಳುನಾಡು ಅಧಿಕಾರಿಗಳು

ಅತ್ತಿಬೆಲೆ ಆಕ್ಸ್‌ಫರ್ಡ್ ‌ವೈದ್ಯಕೀಯ ಕಾಲೇಜಿನ ಶವಾಗಾರದ ಎದುರು ಭದ್ರತೆಗೆ ನಿಯೋಜಿಸಲಾಗಿರುವ ಪೊಲೀಸರು

ಅತ್ತಿಬೆಲೆ ಆಕ್ಸ್‌ಫರ್ಡ್ ‌ವೈದ್ಯಕೀಯ ಕಾಲೇಜಿನ ಶವಾಗಾರದ ಎದುರು ಭದ್ರತೆಗೆ ನಿಯೋಜಿಸಲಾಗಿರುವ ಪೊಲೀಸರು

ಶವಾಗಾರದ ಎದುರು ಸೇರಿರುವ ಸಂಬಂಧಿಕರು

ಶವಾಗಾರದ ಎದುರು ಸೇರಿರುವ ಸಂಬಂಧಿಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT