ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟು ನಿಮಿಷಗಳಲ್ಲೇ ರೈಲು ಸ್ವಚ್ಛ!

ಸ್ವಯಂಚಾಲಿತ ಬೋಗಿ ತೊಳೆಯುವ ಘಟಕ ಆರಂಭ
Last Updated 5 ಫೆಬ್ರುವರಿ 2020, 19:52 IST
ಅಕ್ಷರ ಗಾತ್ರ

ಬೆಂಗಳೂರು: ಎಂಟೇ ನಿಮಿಷಕ್ಕೆ ಇಡೀ ರೈಲು ಸ್ವಚ್ಛಗೊಳಿಸಬಲ್ಲ ಸ್ವಯಂ‌ಚಾಲಿತ ಘಟಕ ನೈರುತ್ಯ ರೈಲ್ವೆ ವಲಯದಲ್ಲೇ ಮೊದಲ ಬಾರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಅಸ್ತಿತ್ವಕ್ಕೆ ಬಂದಿದೆ.

ಕೆಎಸ್‌ಆರ್ ರೈಲು ನಿಲ್ದಾಣದಿಂದ ಕಂಟೋನ್ಮೆಂಟ್ ರೈಲು ನಿಲ್ದಾಣದ ಕಡೆಯ ಮಾರ್ಗದ ಬದಿಯಲ್ಲಿ ಈ ಘಟಕ ನಿರ್ಮಾಣವಾಗಿದೆ. 24 ಬೋಗಿಗಳ ಒಂದು ರೈಲು ಗಾಡಿ ತೊಳೆಯಲು ಹೆಚ್ಚೆಂದರೆ 8 ನಿಮಿಷ ಸಾಕಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ರೈಲು ತೊಳೆಯಲು ಹಿಂದೆ ಅನುಸರಿಸುತ್ತಿರುವ ಮಾದರಿಗೂ ಹೊಸ ತಂತ್ರಜ್ಞಾನಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸಿಬ್ಬಂದಿಯ ಸಹಾಯದಿಂದ ರೈಲು ತೊಳೆಯಲು ಈಗ ಬಳಸುತ್ತಿರುವ ನೀರಿನ ಪ್ರಮಾಣದಲ್ಲಿ ಶೇ 50ರಿಂದ ಶೇ 60ರಷ್ಟು ಉಳಿತಾಯವಾಗಲಿದೆ.

ಒಂದು ಬೋಗಿ ತೊಳೆಯಲು ಈ ಹಿಂದೆ 1,500 ಲೀಟರ್ ನೀರಿನ ಅಗತ್ಯ ಇತ್ತು. ಹೊಸ ವ್ಯವಸ್ಥೆಯಲ್ಲಿ 250 ಲೀಟರ್‌ ನೀರು ಸಾಕಾಗಲಿದೆ. ಶೇ 85ರಷ್ಟು ನೀರನ್ನು ಮರುಬಳಕೆ ಮಾಡುವ ಸೌಲಭ್ಯ ಇದೆ.

ಸ್ವಯಂಚಾಲಿತ ಬೋಗಿ ತೊಳೆಯುವ ಘಟಕದೊಳಗೆ ರೈಲು ಗಾಡಿ ನಿಧಾನವಾಗಿ (ಗಂಟೆಗೆ 5–6 ಕಿಲೋ ಮಿಟರ್ ಕಡಿಮೆ ವೇಗದಲ್ಲಿ) ಚಲಿಸುವಾಗಲೇ ಎರಡೂ ಬದಿಯಲ್ಲಿ ಯಂತ್ರಗಳೇ ಸ್ವಚ್ಛಗೊಳಿಸುತ್ತವೆ. ಇಡೀ ಘಟಕವನ್ನು ಒಬ್ಬ ಸಿಬ್ಬಂದಿಯೇ ನಿರ್ವಹಿಸಬಹುದು.

ಈಸ್ಟ್‌ ಕೋಸ್ಟ್‌ ರೈಲ್ವೆ ವಿಭಾಗದ ಭುವನೇಶ್ವರದಲ್ಲಿ ಸದ್ಯ ಈ ರೀತಿಯ ವ್ಯವಸ್ಥೆ ಅಸ್ತಿತ್ವದಲ್ಲಿದೆ. ನೈರುತ್ಯ ರೈಲ್ವೆಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ನಿರ್ಮಾಣವಾಗುತ್ತಿರುವ ಘಟಕವೇ ಮೊದಲನೆಯದು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

₹1.78 ಕೋಟಿ ವೆಚ್ಚ:ಈ ಘಟಕ ನಿರ್ಮಾಣಕ್ಕೆ ₹1.78 ಕೋಟಿ ವೆಚ್ಚವಾಗಲಿದೆ ಎಂದು ರೈಲ್ವೆ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಮುಂದಿನ ದಿನಗಳಲ್ಲಿ ಬೈಯ್ಯಪ್ಪನಹಳ್ಳಿ ಮತ್ತು ಬಾಣಸವಾಡಿಯಲ್ಲೂ ಇದೇ ಮಾದರಿಯ ಘಟಕ ತೆರೆಯುವ ಉದ್ದೇಶ ಇದೆ ಎಂದು ಅವರು ಹೇಳಿದರು. ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್ ಸಿಂಗ್ ಅವರು ಬುಧವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಈ ಘಟಕಕ್ಕೆ ಚಾಲನೆ ನೀಡಿದರು.

ವಿಶೇಷಗಳೇನು?

*ಚಲಿಸುವ ರೈಲನ್ನುತೊಳೆಯುವ ಸ್ಥಿರ ಘಟಕ

*ತ್ಯಾಜ್ಯ ನೀರು ಮರುಬಳಕೆ

*ಕಂಪ್ಯೂಟರೀಕೃತ ವ್ಯವಸ್ಥೆ, ಒಬ್ಬ ನಿರ್ವಾಹಕ ಸಾಕು

*ಕಡಿಮೆ ನೀರಿನ ಬಳಕೆ

*ಒಣಗಿಸುವ ವ್ಯವಸ್ಥೆಯೂ ಇದೆ

*ಬಿಡಿ ಭಾಗಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯ

*ಗಾಳಿಯ ನಿರಂತರ ಒತ್ತಡದಿಂದ ಸ್ವಚ್ಛಗಳಿಸುವ ತಿರುಗುವ ನೈಲಾನ್ಹ, ಹತ್ತಿ ಬ್ರಷ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT