ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಸ್ತಿ ತೆರಿಗೆ ಸರಾಸರಿ ಶೇ 6.5ರಷ್ಟು ಹೆಚ್ಚಳ: ಡಿ.ಕೆ. ಶಿವಕುಮಾರ್‌

ಮಾರ್ಗಸೂಚಿಯಂತೆ ತೆರಿಗೆ ನಿಗದಿ: ಗರಿಷ್ಠ ಹೆಚ್ಚಳ ಮಿತಿ ಶೇ 10: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿವರಣೆ
Published 12 ಮಾರ್ಚ್ 2024, 0:02 IST
Last Updated 12 ಮಾರ್ಚ್ 2024, 0:02 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಆಸ್ತಿಗಳಿಗೆ ಮಾರ್ಗಸೂಚಿ ದರದ ಆಧಾರದಲ್ಲಿ ತೆರಿಗೆ ವಿಧಿಸುವ ಹೊಸ ಪದ್ಧತಿಯಲ್ಲಿ ಅಲ್ಪ ಪ್ರಮಾಣದಲ್ಲಿ ಕಡಿತ ಮಾಡಲಾಗಿದೆ.

ಹೊಸ ಪದ್ಧತಿಯಂತೆ ಆಸ್ತಿಗಳ ತೆರಿಗೆ ಸರಾಸರಿ ಶೇ 6.5 ರಷ್ಟು ಹೆಚ್ಚಾಗಲಿದೆ. ಇದರಂತೆ ಖಾಲಿ ನಿವೇಶನದ ಆಸ್ತಿ ತೆರಿಗೆ ಅತಿಹೆಚ್ಚಿನ ಪ್ರಮಾಣದಲ್ಲಿ ಅಧಿಕವಾಗಲಿದೆ.‌ 

‘ಹೊಸ ಆಸ್ತಿ ತೆರಿಗೆ ವ್ಯವಸ್ಥೆಯಿಂದ ತೆರಿಗೆ ಹೊರೆಯನ್ನು ಹೆಚ್ಚಿಸುವುದಲ್ಲ. ಆದರೆ ವಿಧಾನವನ್ನು ಸರಳಗೊಳಿಸುವುದಾಗಿದೆ. ಪ್ರತಿ ಆಸ್ತಿಗೆ ತೆರಿಗೆಯ ಗರಿಷ್ಠ ಹೆಚ್ಚಳವನ್ನು ಶೇ 10ಕ್ಕೆ ಮಿತಿಗೊಳಿಸಲಾಗಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

2008ರಲ್ಲಿ ಯುನಿಟ್‌ ವಿಸ್ತೀರ್ಣ ಮೌಲ್ಯ (ಯುಎವಿ) ಆಸ್ತಿ ತೆರಿಗೆ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಪ್ರಸ್ತುತ ಈ ಪದ್ಧತಿಯಲ್ಲಿ 18 ವಿವಿಧ ವರ್ಗಗಳಲ್ಲಿ ಇಡೀ ನಗರವನ್ನು ಆರು ವಲಯಗಳಾಗಿ ವಿಂಗಡಿಸಿ ಆಸ್ತಿ ತೆರಿಗೆ ವಿಧಿಸಲಾಗುತ್ತಿದೆ. ನಾಗರಿಕರಿಗೆ ಸ್ವಯಂ– ಘೋಷಣೆ ಸಲ್ಲಿಸಲೂ ಗೊಂದಲವಾಗಿದೆ. ಹೀಗಾಗಿ ಹೊಸ ಆಸ್ತಿ ತೆರಿಗೆ ಪದ್ಧತಿಯಲ್ಲಿ ಆರು ವರ್ಗಗಳಲ್ಲಿ ಮಾತ್ರ ಆಸ್ತಿಗಳನ್ನು ವರ್ಗೀಕರಿಸಿ, ತೆರಿಗೆ ವ್ಯವಸ್ಥೆಯನ್ನು ಸರಳೀಕರಿಸಲಾಗಿದೆ ಎಂದು ಹೇಳಿದರು.

ವಸತಿ (ಸ್ವಂತ ಮತ್ತು ಬಾಡಿಗೆ), ವಾಣಿಜ್ಯ, ಕೈಗಾರಿಕೆ, ಸ್ಟಾರ್‌ ಹೋಟೆಲ್‌, ವಿನಾಯಿತಿ ಕಟ್ಟಡಗಳು, ಸಂಪೂರ್ಣ ಖಾಲಿ ನಿವೇಶನಗಳು ಎಂಬ ಆರು ವರ್ಗಗಳಲ್ಲಿ ನಿವೇಶನ ವಿಸ್ತೀರ್ಣ, ಕಟ್ಟಡ ಪ್ರದೇಶ, ಸ್ವತ್ತಿನ ಬಳಕೆ, ಸ್ವತ್ತಿಗೆ ಅನ್ವಯವಾಗುವ ಪ್ರಸ್ತುತ ಮಾರ್ಗಸೂಚಿ ದರವನ್ನು ಆಧರಿಸಿ ಆಸ್ತಿ ತೆರಿಗೆ ಲೆಕ್ಕಹಾಕಲಾಗುವುದು. ನಾಗರಿಕರು ಮಾರ್ಗಸೂಚಿ ದರ ನಮೂದಿಸಬಹುದು. ಒಂದು ವೇಳೆ ಕಡಿಮೆ ಕ್ಲೇಮ್‌ ಮಾಡಿದ್ದರೆ ಆನ್‌ಲೈನ್‌ನಲ್ಲಿಯೇ ಮೂರು ತಿಂಗಳೊಳಗೆ ಬಿಬಿಎಂಪಿ ಅದನ್ನು ಸರಿಪಡಿಸುತ್ತದೆ. ಈ ಅವಧಿಯಲ್ಲಿ ನಿರ್ಧಾರವಾಗದಿದ್ದರೆ ನಾಗರಿಕರ ಕ್ಲೇಮ್‌ ಸ್ವೀಕರಿಸಿ ಪರಿಗಣಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಆಸ್ತಿ ತೆರಿಗೆಯನ್ನು 2016ರಲ್ಲಿ ಪರಿಷ್ಕರಿಸಲಾಗಿದ್ದು, ಆಗ ವಸತಿ ಆಸ್ತಿಗಳಿಗೆ ಶೇ 20 ಹಾಗೂ ವಸತಿಯೇತರ ಆಸ್ತಿಗಳಿಗೆ ಶೇ 25ರಷ್ಟು ಹೆಚ್ಚಿಸಲಾಗಿತ್ತು. ಇದೀಗ ಹೊಸ ಪದ್ದತಿಯಂತೆ ಆಸ್ತಿ ತೆರಿಗೆ ಹೆಚ್ಚಳದ ಸರಾಸರಿ ಶೇ 6.5ರಷ್ಟಿದ್ದು, ಎಂಟು ವರ್ಷಗಳಿಗೆ ಹೋಲಿಸಿದರೆ ವಾರ್ಷಿಕ ಶೇ 1ಕ್ಕಿಂತ ಕಡಿಮೆ ಹೆಚ್ಚಳವಾಗಿದೆ ಎಂದು ಹೇಳಿದರು.

ಆಸ್ತಿ ತೆರಿಗೆ ಹೆಚ್ಚಳದ ಲೆಕ್ಕಾಚಾರ

ಸ್ವತ್ತಿನ ವರ್ಗ; ಹೊಸ ಪದ್ಧತಿ

(ಮಾರ್ಗಸೂಚಿ ದರದಂತೆ ಶೇಕಡವಾರು); ಹಳೆ ಪದ್ಧತಿಯಂತೆ ಸರಾಸರಿ ₹ಗಳಲ್ಲಿ; ಹೊಸ ಪದ್ಧತಿಯಂತೆ ನಿರೀಕ್ಷಿತ ಸರಾಸರಿ ₹ಗಳಲ್ಲಿ; ಶೇಕಡವಾರು ಹೆಚ್ಚಳ ವಸತಿ; 0.075 ಮತ್ತು 0.15; 4942; 5274; 6.7 ವಸತಿಯೇತರ; 0.37; 69525; 74040; 6.5 ಕೈಗಾರಿಕೆ; 0.15; 80550 84816; 5.3 ತಾರಾ ಹೋಟೆಲ್‌; 0.75; 12160791; 12963392; 6.6 ಖಾಲಿ ನಿವೇಶನ; 0.03; 1460; 1580; 8.2 ಹೊಸ ಪದ್ಧತಿಯಂತೆ ಒಟ್ಟಾರೆ ಪ್ರಮಾಣ; 6.5

ಏಪ್ರಿಲ್‌ನಿಂದ ಜಾರಿ ಇಲ್ಲ?

ಹೊಸ ಆಸ್ತಿ ತೆರಿಗೆ ಯಾವ ಆರ್ಥಿಕ ವರ್ಷದಿಂದ ಜಾರಿಯಾಗುತ್ತದೆ ಎಂಬ ಮಾಹಿತಿಯನ್ನು ಉಪ ಮುಖ್ಯಮಂತ್ರಿಯವರೂ ನೀಡಲಿಲ್ಲ ಬಿಬಿಎಂಪಿ ಅಧಿಕಾರಿಗಳಿಗೂ ಈ ಬಗ್ಗೆ ಸ್ಪಷ್ಟತೆ ಇಲ್ಲ. ಹೊಸ ಆಸ್ತಿ ತೆರಿಗೆ ಪದ್ಧತಿಗೆ ಸಂಬಂಧಿಸಿದಂತೆ ಕರಡು ಅಧಿಸೂಚನೆ ಫೆಬ್ರುವರಿ 20ರಂದು ಪ್ರಕಟಗೊಂಡಿತ್ತು. ನಾಗರಿಕರ ಆಕ್ಷೇಪಣೆಗೆ 15 ದಿನಗಳ ಅವಕಾಶ ನೀಡಲಾಗಿತ್ತು. ಅಂತಿಮ ಅಧಿಸೂಚನೆ ಇನ್ನೂ ಹೊರಬಿದ್ದಿಲ್ಲ. ಇದರ ಪ್ರಕಟಣೆ ಬಗ್ಗೆ ಬಿಬಿಎಂಪಿ ಅಧಿಕಾರಿಗಳಲ್ಲೂ ಸ್ಪಷ್ಟ ಮಾಹಿತಿ ಇಲ್ಲ. ‘ಏಪ್ರಿಲ್‌ನಿಂದ ಹೊಸ ಪದ್ಧತಿ ಜಾರಿಯಾಗುವುದಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ಅಧಿಕಾರಿ ಮಾಹಿತಿ ನೀಡಿದರು.

ಮಾರ್ಚ್‌ 20ರಿಂದ ಆನ್‌ಲೈನ್‌ ಖಾತಾ

ಆಸ್ತಿ ಮಾಲೀಕರು ಖಾತಾಗಳನ್ನು ಪಡೆಯಲು ‘ಬಿಬಿಎಂಪಿ ಆಸ್ತಿ ತೆರಿಗೆ ನೋಂದಣಿ’ ಆನ್‌ಲೈನ್‌ ವ್ಯವಸ್ಥೆಯನ್ನು ಮಾರ್ಚ್‌ 20ರಿಂದ ಜಾರಿಗೆ ತರಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು. ಆನ್‌ಲೈನ್‌ನಲ್ಲಿ ಆಸ್ತಿಗಳನ್ನು ನಮೂದಿಸಿ ಮಾಲೀಕರು ಆಸ್ತಿ ತೆರಿಗೆಯನ್ನು ತಕ್ಷಣವೇ ಪಾವತಿಸಬಹುದು. ಅವರಿಗೆ ಆಸ್ತಿ ತೆರಿಗೆ ಸಂಖ್ಯೆ ನೀಡಲಾಗುತ್ತದೆ. ಮೊಬೈಲ್‌ ಸಂಖ್ಯೆ ಆಧಾರ್‌ ಮಾಲೀಕರು ಮತ್ತು ಆಸ್ತಿಯ ಚಿತ್ರ ಜಿಪಿಎಸ್‌ ಅನ್ನು ಅಪ್‌ಲೋಡ್‌ ಮಾಡಬೇಕು. ನೋಂದಣಿ ಪತ್ರ ಸೇರಿದಂತೆ ಎಲ್ಲ ದಾಖಲೆಗಳನ್ನೂ ಸಲ್ಲಿಸಬೇಕು. ಇದನ್ನು ಖಾತಾಗಾಗಿ ಸಲ್ಲಿಸಿರುವ ಅರ್ಜಿ ಎಂದು ಪರಿಗಣಿಸಲಾಗುತ್ತದೆ ಎಂದರು. ಹೊಸದಾಗಿ ತೆರಿಗೆ ಪಾವತಿಸುವವರು ಖಾತಾ ಬದಲಾಯಿಸುವವರು ಬಿಬಿಎಂಪಿಯ ವೆಬ್‌ಸೈಟ್‌ನಲ್ಲಿ ಮಾರ್ಚ್‌ 20ರಿಂದ  ಅರ್ಜಿ ಸಲ್ಲಿಸಬಹುದು. ‘ಬೆಂಗಳೂರು ಒನ್‌’ ಕೇಂದ್ರಗಳಲ್ಲೂ ಅರ್ಜಿ ಸಲ್ಲಿಸುವ ವ್ಯವಸ್ಥೆ ಶೀಘ್ರವೇ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT