ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಜಲಾವೃತ ಆಗುವುದನ್ನು ತಪ್ಪಿಸಿ: ತುಷಾರ್ ಗಿರಿನಾಥ್

ಯಲಹಂಕ ವಲಯ ವ್ಯಾಪ್ತಿಯಲ್ಲಿ ಜಲಾವೃತವಾದ ಪ್ರದೇಶಗಳಿಗೆ ಭೇಟಿ
Published 3 ಜೂನ್ 2024, 16:19 IST
Last Updated 3 ಜೂನ್ 2024, 16:19 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ, ಬಿಡಿಎ, ಜಲಮಂಡಳಿ, ಎನ್‌ಎಚ್‌ಎಐ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಿ ನಗರದಲ್ಲಿ ಎಲ್ಲಿಯೂ ರಸ್ತೆಗಳು ಜಲಾವೃತವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚಿಸಿದರು.

ಯಲಹಂಕ ವಲಯ ವ್ಯಾಪ್ತಿಯಲ್ಲಿ ಜಲಾವೃತವಾದ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿದ ಅವರು ಪರಿಶೀಲನೆ ನಡೆಸಿದರು.

ಹೆಬ್ಬಾಳ ಜಂಕ್ಷನ್‌ನಲ್ಲಿ ರಸ್ತೆಯ ಮೇಲೆ ನೀರು ನಿಲ್ಲದಂತೆ ರಾಜಕಾಲುವೆಗೆ ಸರಾಗವಾಗಿ ಹರಿದು ಹೋಗಲು ಬಿಡಿಎ ವತಿಯಿಂದ 1,200 ಎಂ.ಎಂ ಪೈಪ್ ಅಳವಡಿಸಲಾಗಿತ್ತು. ಮೆಟ್ರೊ  ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಪೈಪ್‌ಗಳು ಮಣ್ಣಿನಿಂದ ತುಂಬಿಕೊಂಡಿವೆ. ಇದರಿಂದ ಮಳೆ ನೀರು ರಸ್ತೆಯ ಮೇಲೆ ಹೆಚ್ಚಾಗಿ ನಿಲ್ಲುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ‘ಮೆಟ್ರೊ ಅಧಿಕಾರಿಗಳ ಜೊತೆಗೆ ಸಮನ್ವಯ ಸಾಧಿಸಿ ಪೈಪ್‌ಗಳನ್ನು ಸರಿಪಡಿಸಿ, ನೀರು ಹರಿದುಹೋಗುವಂತೆ ಮಾಡಿ’ ಎಂದು ತುಷಾರ್‌ ತಿಳಿಸಿದರು.

ಸಹಕಾರ ನಗರದ ಸಮೀಪ ಎನ್‌ಎಚ್‌ಎಐ ಸರ್ವೀಸ್ ರಸ್ತೆ ಜಲಾವೃತವಾಗಿದೆ. ಈ ಸ್ಥಳದಲ್ಲಿ ಒಳಚರಂಡಿ ನೀರೂ ಹೊರಗೆ ಹರಿಯುತ್ತಿದೆ. ಎನ್‌ಎಚ್‌ಎಐ ಮಾಡಿರುವ ಕಲ್ವರ್ಟ್‌ ಸಂಪರ್ಕ ಸರಿಯಾಗಿಲ್ಲದ್ದರಿಂದ ಸಮಸ್ಯೆ ಆಗಿರುವುದನ್ನು ಅರಿತ ತುಷಾರ್‌ ಗಿರಿನಾಥ್‌, ಜಲಮಂಡಳಿಯಿಂದ ರಸ್ತೆಯ ಎರಡೂ ಬದಿ 900 ಎಂ.ಎಂ ಪೈಪ್ ಅಳವಡಿಸಲು ಜಲಮಂಡಳಿ ಅಧ್ಯಕ್ಷರಿಗೆ ದೂರವಾಣಿ ಮೂಲಕ ಸೂಚಿಸಿದರು. ರಾಜಕಾಲುವೆ ನೀರು ಹರಿದು ಹೋಗಲು ಹೆಚ್ಚಿನ ಪೈಪ್ ಅಳವಡಿಸಲು ಎನ್‌ಎಚ್‌ಎಐ ಅಧಿಕಾರಿಗಳಿಗೆ ಹೇಳಿದರು.

ಸಹಕಾರ ನಗರ ಬಾಟಾ ಶೋರೂಂ ಬಳಿ ರಾಜಕಾಲುವೆಯಿಂದ ರಸ್ತೆಗೆ ನೀರು ಬರುತ್ತಿರುವುದನ್ನು ಪರಿಶೀಲಿಸಿದ ಮುಖ್ಯ ಆಯುಕ್ತರು, ಅದನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜಕಾಲುವೆಯಲ್ಲಿ ತಿರುವು ವ್ಯವಸ್ಥೆ ಮಾಡಬೇಕು ಎಂದು ಬಿಬಿಎಂಪಿ ಎಂಜಿನಿಯರ್‌ಗಳಿಗೆ ಸೂಚಿಸಿದರು.

ಕಲ್ವರ್ಟ್ ಬ್ಲಾಕ್: ಯಲಹಂಕದಲ್ಲಿರುವ ಸ್ಪರ್ಶ್‌ ಆಸ್ಪತ್ರೆಯ ಬಳಿ ಎನ್‌ಎಚ್‌ಎಐ ಕಲ್ವರ್ಟ್ ಡ್ರೈನ್ ಮಾಡಿದ್ದು, ಮೆಟ್ರೊ ಪಿಲ್ಲರ್–573 ಬಳಿ ಕಾಮಗಾರಿಯಿಂದ ಕಲ್ವರ್ಟ್ ಬ್ಲಾಕ್ ಆಗಿದೆ. ಈ ಸಮಸ್ಯೆ ಬಗೆಹರಿಸಲು ಮೆಟ್ರೊ ವ್ಯವಸ್ಥಾಪಕ ನಿರ್ದೇಶಕರಿಗೆ ದೂರವಾಣಿ ಮೂಲಕ ತಿಳಿಸಿದರು.

ಕೋಗಿಲು ಸಿಗ್ನಲ್: ಕೋಗಿಲು ಸಿಗ್ನಲ್ ಬಳಿ ರಾಜಕಾಲುವೆ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಮಳೆ ನೀರು ನಿಂತು ಸಮಸ್ಯೆಯಾಗುತ್ತದೆ. ಈ ಪ್ರದೇಶದಲ್ಲಿ ಮಳೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು, ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ನಿಟ್ಟೆ ವಿದ್ಯಾ ಸಂಸ್ಥೆ: ನಿಟ್ಟೆ ವಿದ್ಯಾಸಂಸ್ಥೆಗೆ ಹೋಗುವ ಬಳಿ ಮೆಟ್ರೊ ಸ್ಟೇಷನ್ ಕಾಮಗಾರಿ ನಡೆಯುತ್ತಿದ್ದು, ಕಲ್ವರ್ಟ್ ಬ್ಲಾಕ್ ಆಗಿರುತ್ತದೆ. ಇದನ್ನು ಸರಿಪಡಿಸಲು ಎನ್‌ಎಚ್‌ಎಐ ಹಾಗೂ ಮೆಟ್ರೊ ಅಧಿಕಾರಿಗಳಿಗೆ ಹೇಳಿದರು.

ಟೆಲಿಕಾಂ ಲೇಔಟ್: ಭಾನುವಾರ ರಾತ್ರಿ ಸುರಿದ ಮಳೆಯಿಂದ ರಾಚೇನಹಳ್ಳಿ ಕೆರೆ ಬಳಿಯ ಟೆಲಿಕಾಂ ಲೇಔಟ್‌ ಜಲಾವೃತವಾಗಿದೆ. ಈ ಸಂಬಂಧ ಜವಾಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಸೆಂಟರ್‌ನಲ್ಲಿ ನಡೆಯುತ್ತಿರುವ ರಾಜಕಾಲುವೆ ಕಾಮಗಾರಿ ಬಳಿ, ಕಾಲುವೆ ವಿಸ್ತರಿಸಲು ಮುಖ್ಯ ಆಯುಕ್ತರು ಸೂಚನೆ ನೀಡಿದರು.

ಯಲಹಂಕ ವಲಯ ಆಯುಕ್ತ ಕರೀಗೌಡ, ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್, ಪ್ರಧಾನ ಎಂಜಿನಿಯರ್ ಪ್ರಹ್ಲಾದ್, ಕೆರೆಗಳ ವಿಭಾಗದ ಮುಖ್ಯ ಎಂಜಿನಿಯರ್ ವಿಜಯ್ ಕುಮಾರ್ ಹರಿದಾಸ್, ಬಿಡಿಎ ಅಧಿಕಾರಿಗಳು, ಎನ್‌ಎಚ್‌ಎಐ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT