ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಂಶುಪಾಲ ಹುದ್ದೆಯಿಂದ ವಸಂತ ಕುಮಾರ್ ಬಿಡುಗಡೆ ಆದೇಶಕ್ಕೆ ನ್ಯಾಯಮಂಡಳಿ ತಡೆ

Published 22 ಫೆಬ್ರುವರಿ 2024, 15:35 IST
Last Updated 22 ಫೆಬ್ರುವರಿ 2024, 15:35 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜು ಪ್ರಾಂಶುಪಾಲ ಹುದ್ದೆಯಿಂದ ಬಿ.ವಿ.ವಸಂತಕುಮಾರ್ ಅವರನ್ನು ಬಿಡುಗಡೆಗೊಳಿಸಿದ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರ ಆದೇಶಕ್ಕೆ ಮಧ್ಯಂತರ ತಡೆ ನೀಡಿರುವ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (ಕೆಎಸ್‌ಎಟಿ); ‘ಈ ಆದೇಶದ ಹಿಂದೆ ಮುಖ್ಯಮಂತ್ರಿ ಕಚೇರಿಯ ಒತ್ತಾಸೆಯಿದ್ದಂತೆ ಕಾಣುತ್ತಿದೆ’ ಎಂದು ಕಿಡಿ ಕಾರಿದೆ.

ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರ ಆದೇಶ ಪ್ರಶ್ನಿಸಿ ಬಿ.ವಿ.ವಸಂತಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೆಎಸ್‌ಎಟಿ ನ್ಯಾಯಾಂಗ ಸದಸ್ಯ ನಾರಾಯಣ ಮತ್ತು ಆಡಳಿತಾತ್ಮಕ ಸದಸ್ಯ ಎನ್.ಶಿವಶೈಲಂ ಅವರಿದ್ದ ವಿಭಾಗೀಯ ಪೀಠವು ಈ ಕುರಿತಂತೆ ಇದೇ 21ರಂದು ಆದೇಶಿಸಿದೆ.

ಅರ್ಜಿದಾರರ ಪರ ಹೈಕೋರ್ಟ್‌ನ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್‌ ಮಂಡಿಸಿದ ವಾದ ಮನ್ನಿಸಿರುವ ನ್ಯಾಯಪೀಠ, ‘ವಸಂತಕುಮಾರ್ ವಿರುದ್ಧ ಇಲಾಖಾ ವಿಚಾರಣೆ ನಡೆಸದೇ ಇಂತಹ ಆದೇಶ ಹೊರಡಿಸಿರುವುದು ಕಾನೂನಿಗೆ ವಿರುದ್ಧವಾಗಿದ್ದು, ಜಂಟಿ ನಿರ್ದೇಶಕರ ಆದೇಶ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದು ಹೇಳಿದೆ.

‘ವಸಂತಕುಮಾರ್ ಅವರ ಸ್ಥಾನಕ್ಕೆ ಸಹಾಯಕ ಪ್ರೊಫೆಸರ್‌ ಎಚ್‌.ಎಂ.ಬಸವರಾಜು ಅವರನ್ನು ನೇಮಕ ಮಾಡಿರುವುದೂ ಕಾನೂನಿನ ಅಡಿಯಲ್ಲಿ ಅಸಮರ್ಥನೀಯ ಕ್ರಮ. ಹಾಗಾಗಿ, ಈ ಅರ್ಜಿ ಇತ್ಯರ್ಥವಾಗುವತನಕ ವಸಂತಕುಮಾರ್ ಅವರನ್ನು ಮೊದಲಿದ್ದ ಸ್ಥಾನದಲ್ಲಿ ಮುಂದುವರಿಸಬೇಕು. ಒಂದು ವೇಳೆ ಎಚ್‌.ಎಂ.ಬಸವರಾಜು ಅಧಿಕಾರ ವಹಿಸಿಕೊಂಡ ದಿನದಿಂದ ಅವರು ಯಾವುದಾದರೂ ಆಡಳಿತಾತ್ಮಕ ಕ್ರಮ ಕೈಗೊಂಡಿದ್ದರೆ ಅದನ್ನು ಮರು ಪರಿಶೀಲಿಸಬೇಕು’ ಎಂದು ಆದೇಶದಲ್ಲಿ ವಿವರಿಸಿದೆ.

‘ಹಾಸ್ಟೆಲ್‌ ಹಣದ ವಿಚಾರ ಹಾಗೂ ವಿದ್ಯಾರ್ಥಿ ವೇತನದ ಉಳಿಕೆ ವಿಷಯದಲ್ಲಿ ಅರ್ಜಿದಾರರಿಗೆ ಯಾವುದೇ ಸಂಬಂಧವಿಲ್ಲ. ಲೆಕ್ಕ ಪರಿಶೋಧಕರು ಆಕ್ಷೇಪಣೆ ವ್ಯಕ್ತಪಡಿಸಿರುವುದು 2018ರಲ್ಲಿ. ಅರ್ಜಿದಾರ ವಸಂತಕುಮಾರ್ ಪ್ರಾಂಶುಪಾಲರ ಜವಾಬ್ದಾರಿ ವಹಿಸಿಕೊಂಡಿದ್ದು 2023ರ ಮಾರ್ಚ್‌ನಲ್ಲಿ. ಇಲಾಖೆ ಉಲ್ಲೇಖಿಸಿರುವಂತೆ ಅವರು ಯಾವುದೇ ರಾಜಕೀಯ ಭಾಷಣ ಮಾಡಿಲ್ಲ. ಅದೊಂದು ಪತ್ರಿಕೆಗೆ ಬರೆದ ಶಿಕ್ಷಣ ಬಗೆಗಿನ ಲೇಖನವಾಗಿದ್ದು ಇವರ ವಿರುದ್ಧ ಹೊರಿಸಲಾಗಿರುವ ಆರೋಪಗಳು ನಿರಾಧಾರವಾಗಿವೆ’ ಎಂಬ ಅರ್ಜಿದಾರರ ಪರ ವಕೀಲರ ವಾದವನ್ನು ಪೀಠವು ಮನ್ನಿಸಿದೆ.

ಪ್ರಕರಣವೇನು?: ‘ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಹಲವಾರು ವರ್ಷಗಳಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ವಿದ್ಯಾರ್ಥಿ ವೇತನವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಕಾಲೇಜಿನ ಹಾಸ್ಟೆಲ್‌ನಲ್ಲಿ ₹ 10 ಲಕ್ಷಕ್ಕೂ ಹೆಚ್ಚು ಇಬಿಎಲ್‌ (ಎಕ್ಸ್‌ಟ್ರಾ ಬೋರ್ಡಿಂಗ್ ಅಂಡ್‌ ಲಾಡ್ಜಿಂಗ್‌) ಹಣವನ್ನು ದುರುಪಯೋಗ ಮಾಡಲಾಗಿದೆ’ ಎಂದು ವಸಂತ ಕುಮಾರ್ ವಿರುದ್ಧ ಆರೋಪಿಸಲಾಗಿದೆ.

‘ಕಾಲೇಜಿನಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿ ವೇತನವನ್ನು ನಿಗದಿತ ಸಮಯದಲ್ಲಿ ಪಾವತಿ ಮಾಡದೇ ಇರುವುದರಿಂದ ಈ ಆಕ್ಷೇಪಣೆ ಉಂಟಾಗಿದೆ. ಈ ನಿಟ್ಟಿನಲ್ಲಿ ಕಾಲೇಜು ಪ್ರಾಂಶುಪಾಲ ಬಿ.ವಿ.ವಸಂತಕುಮಾರ್ ರಾಜಕೀಯ ಹಾಗೂ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿ ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮ 2021ರ 3 (1), (2), (3) ಮತ್ತು ನಿಯಮ (4) ಅನ್ನು ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿ.ವಿ.ವಸಂತಕುಮಾರ್ ನಂತರ ಸೇವಾ ಜೇಷ್ಠತೆಯಲ್ಲಿ ಹಿರಿಯರಾದ ಬೋಧಕರಿಗೆ ಪ್ರಾಂಶುಪಾಲರ ಪ್ರಭಾರ ವಹಿಸಿ ತುರ್ತಾಗಿ ವರದಿ ಸಲ್ಲಿಸಿ’ ಎಂದು ಜಂಟಿ ನಿರ್ದೇಶಕರು ಇದೇ 9ರಂದು ಆದೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT