ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಮೇಲಾಟ; ಅನುದಾನ ಮರೀಚಿಕೆ

ಮಲ್ಲಸಂದ್ರ, ಬಾಗಲಕುಂಟೆ, ಟಿ. ದಾಸರಹಳ್ಳಿ ಮತ್ತು ಚೊಕ್ಕಸಂದ್ರ ವಾರ್ಡ್‌ಗಳಲ್ಲಿ ಬಗೆ ಬಗೆಯ ಸಮಸ್ಯೆಗಳು
Last Updated 3 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಂದೊಂದು ವಾರ್ಡ್‌ನಲ್ಲಿ ಒಂದೊಂದು ರೀತಿಯ ಸಮಸ್ಯೆ ಇದೆ. ರಾಜಕಾಲುವೆಗಳಿಗೆ ತಡೆಗೋಡೆಯೇ ಇಲ್ಲ. ಕೆಲವೆಡೆ ರಾಜಕಾಲುವೆ ಒತ್ತುವರಿಯಾಗಿದೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಂಜೂರಾದ ಅನುದಾನವನ್ನು ಬಿಜೆಪಿ ಸರ್ಕಾರ ವಾಪಸ್ ಪಡೆದ ಕಾರಣ ಸಮಸ್ಯೆಗಳು ಹಾಗೇ ಉಳಿದುಕೊಂಡಿವೆ ಎಂಬ ಆರೋಪವೂ ಇದೆ. ಮಲ್ಲಸಂದ್ರ, ಬಾಗಲಕುಂಟೆ, ಟಿ. ದಾಸರಹಳ್ಳಿ ಮತ್ತು ಚೊಕ್ಕಸಂದ್ರ ವಾರ್ಡ್‌ನ ಸ್ಥಿತಿಗತಿಯನ್ನು ವಿಜಯಕುಮಾರ್ ಎಸ್.ಕೆ. ತೆರೆದಿಟ್ಟಿದ್ದಾರೆ.

ವಾರ್ಡ್‌ 13– ಮಲ್ಲಸಂದ್ರ

ಮಲ್ಲಸಂದ್ರ ವಾರ್ಡ್‌ನಲ್ಲಿ ಸರ್ಕಾರಿ ಭೂಮಿ ಒತ್ತುವರಿಯದ್ದೇ ದೊಡ್ಡ ಸಮಸ್ಯೆ. ವಿಧಾನಸೌಧ ಮತ್ತು ವಿಕಾಸಸೌಧ ಕಟ್ಟುವಾಗ ಇದೇ ಮಲ್ಲಸಂದ್ರ ಬಂಡೆಯಿಂದ ಕಲ್ಲು ತೆಗೆಯಲಾಗಿತ್ತು. ಆ ಕ್ವಾರಿಯನ್ನು ಮುಚ್ಚಿ 28 ಎಕರೆ ಜಾಗದಲ್ಲಿ ₹35 ಕೋಟಿ ವೆಚ್ಚದಲ್ಲಿ ಕೆಂಪೇಗೌಡ ಉದ್ಯಾನ ನಿರ್ಮಿಸಿ, ಹಲವು ಸೌಲಭ್ಯಗಳು ಒಂದೇ ಸ್ಥಳದಲ್ಲಿ ದೊರಕುವಂತೆ ನಿರ್ಮಿಸಲಾಗುತ್ತಿದೆ. ಇದೇ ಸರ್ವೆ ನಂಬರ್‌ನಲ್ಲಿ ಸರ್ಕಾರಿ ಜಾಗವನ್ನು ಕೆಲವು ಪ್ರಭಾವಿಗಳು ಒತ್ತುವರಿ ಮಾಡಿ ಮನೆ ಕಟ್ಟಿಕೊಂಡಿದ್ದಾರೆ ಎಂಬ ಆರೋಪ ಈ ಕಾಮಗಾರಿಗೆ ಕರಿನೆರಳಾಗಿ ಕಾಡುತ್ತಿದೆ. ಕೆಲವು ಸ್ಥಳೀಯರು ಹೈಕೋರ್ಟ್‌ನಿಂದ ಕಾಮಗಾರಿಗೆ ತಡೆಯಾಜ್ಞೆ ತಂದಿದ್ದಾರೆ. ಶಾಸಕ ಆರ್. ಮಂಜುನಾಥ್ ಮತ್ತು ಪಾಲಿಕೆ ಸದಸ್ಯ ಎನ್. ಲೋಕೇಶ್ ನಡುವಿನ ರಾಜಕೀಯ ಮೇಲಾಟವೂ ಈ ವ್ಯಾಜ್ಯಕ್ಕೆ ಕಾರಣ ಎನ್ನುತ್ತಾರೆ ನಿವಾಸಿಗಳು.

ಇನ್ನೊಂದೆಡೆ ಮಲ್ಲಸಂದ್ರ ಕೆರೆಯ ಜಾಗವೂ ಒತ್ತುವರಿಯಾಗಿದೆ. ಕೆಲವರು ಈ ಜಾಗವನ್ನು ಸ್ಮಶಾನವಾಗಿ ಬಳಸುತ್ತಿದ್ದಾರೆ. ರಾಜಕಾಲುವೆ ಜಾಗವೂ ಭೂ ವ್ಯಾಜ್ಯದಲ್ಲಿ ಸಿಲುಕಿಕೊಂಡಿದೆ. ರಸ್ತೆ ಮತ್ತು ಕುಡಿಯುವ ನೀರಿನ ಸಮಸ್ಯೆ ಈ ವಾರ್ಡ್‌ನಲ್ಲಿ ಅಷ್ಟಾಗಿ ಇಲ್ಲ. ಆದರೆ, 6 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನಾಲ್ಕು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಈ ವಾರ್ಡ್‌ನ ಕೆಲ ಬಡಾವಣೆಗಳ ಒಳಚರಂಡಿ ನೀರು ಚಿಕ್ಕಬಾಣಾವರ ಕೆರೆ ಸೇರುತ್ತಿದೆ. ಮಲದ ಬಟ್ಟಲಾಗಿರುವ ಈ ಕೆರೆ ತುಂಬಿ ತುಳುಕುತ್ತಿದೆ. ಅದು ಯಾವಾಗ ಒಡೆದು ಹೋಗುತ್ತದೋ ಗೊತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಮಲ್ಲಸಂದ್ರ ನಿವಾಸಿಗಳು.

ವಾರ್ಡ್‌ 14– ಬಾಗಲಕುಂಟೆ

8ನೇ ಮೈಲಿಯಿಂದ ಹೆಸರುಘಟ್ಟ ರಸ್ತೆಯಲ್ಲಿ ಹೊರಟರೆ ಎಡಭಾಗಕ್ಕೆ ಸಿಗುವ ಬಡಾವಣೆಗಳು ಬಾಗಲಕುಂಟೆ ವಾರ್ಡ್‌ ವ್ಯಾಪ್ತಿಗೆ ಸೇರುತ್ತವೆ. ಅಭಿವೃದ್ಧಿ ಹೊಂದಿದ ಕಿರ್ಲೋಸ್ಕರ್ ಬಡಾವಣೆ ಇರುವುದೂ ಈ ವಾರ್ಡ್‌ ವ್ಯಾಪ್ತಿಯಲ್ಲಿ. ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾದ ಸಿಡೇದಹಳ್ಳಿಯೂ ಇದೇ ವಾರ್ಡ್‌ನಲ್ಲಿದೆ. ಸಿಡೇದಹಳ್ಳಿಯಲ್ಲಿ ಒಳಚರಂಡಿ ಮತ್ತು ಕಾವೇರಿನ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿಯನ್ನು ಜಲಮಂಡಳಿ ಕೈಗೆತ್ತಿಕೊಂಡಿದೆ.

ಸೌಂದರ್ಯ ಬಡಾವಣೆ, ಮೀನಾಕ್ಷಿ ಲೇಔಟ್‌ನಲ್ಲಿ ನೀರಿನ ಕೊಳವೆ ಅಳವಡಿಕೆಗಾಗಿ ರಸ್ತೆಗಳನ್ನು ಅಗೆಯಲಾಗಿದ್ದು, ಈ ಪ್ರದೇಶದ ಸೌಂದರ್ಯವೇ ಹಾಳಾಗಿದೆ. ಶಾರದಾ ಶಾಲೆ ಮತ್ತು ರಾಯಲ್ ಎನ್‌ಕ್ಲೇವ್ ನಡುವೆ ರಾಜಕಾಲುವೆಯೇ ಇಲ್ಲ. ಕಾಲುವೆ ಇರುವೆಡೆಯೂ ಒಂದು ಭಾಗದಲ್ಲಿ ತಡೆಗೋಡೆ ಇಲ್ಲ. ಹಲವೆಡೆ ಬೀದಿ ದೀಪಗಳಿಲ್ಲದ ಕಾರಣ ರಾತ್ರಿ ವೇಳೆ ಪಾದಚಾರಿಗಳು ಸಂಚರಿಸಲು ಹೆದರುತ್ತಾರೆ. ಈ ಬಗ್ಗೆ ಎಷ್ಟು ಬಾರಿ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ ಎಂಬುದು ನಿವಾಸಿಗಳ ದೂರು.

ವಾರ್ಡ್‌ 15– ಟಿ. ದಾಸರಹಳ್ಳಿ

ತುಮಕೂರು ರಸ್ತೆಗೆ ಹೊಂದಿಕೊಂಡಂತೆ ಇರುವ ಟಿ. ದಾಸರಹಳ್ಳಿ ವಾರ್ಡ್‌ನಲ್ಲಿ ಅಕ್ಕಪಕ್ಕದ ಬಡಾವಣೆಗಳಿಗೆ ಹೋಲಿಸಿದರೆ ಮೂಲಸೌಕರ್ಯಗಳ ಸಮಸ್ಯೆ ಅಷ್ಟಾಗಿ ಇಲ್ಲ. ರಸ್ತೆಗಳು ಚಿಕ್ಕದಾಗಿದ್ದರೂ ಡಾಂಬರ್ ಕಂಡಿವೆ. ರಾಜಕಾಲುವೆಗಳಿಗೆ ಕಸ ಸುರಿಯುವುದನ್ನು ತಪ್ಪಿಸಲು ಅಲ್ಲಲ್ಲಿ ಜಾಲರಿ ಹಾಕಲಾಗಿದೆ. ಇತ್ತೀಚಿಗೆ ಕಾವೇರಿನ ನೀರಿನ ಸಂಪರ್ಕವೂ ದೊರೆತಿದೆ. ಉದ್ಯಾನಗಳು ಅಭಿವೃದ್ಧಿಯಾಗಿವೆ. ಇನ್ನಷ್ಟು ಮೂಲಸೌಕರ್ಯ ಕಲ್ಪಿಸಬೇಕು ಎನ್ನುತ್ತಾರೆ ನಿವಾಸಿಗಳು.

ಇನ್ನೊಂದೆಡೆ ಖಾಲಿ ನಿವೇಶನಗಳಲ್ಲಿ ಕಸ ಸುರಿಯುವುದು ನಿಂತಿಲ್ಲ. ವಾರ್ಡ್‌ನಲ್ಲಿ ಕೆಲವೆಡೆ ಕಸ ಬಿದ್ದಿರುವುದು ಗೋಚರಿಸುತ್ತದೆ. ರಸ್ತೆ ಕಿರಿದಾಗಿದ್ದು, ಶಾಲೆ ಬಿಟ್ಟಾಗ ಒಮ್ಮೆಲೆ ಶಾಲಾ ಬಸ್‌ಗಳು ಬರುವ ಕಾರಣ ನೆಲಮಹೇಶ್ವರಿ ದೇವಸ್ಥಾನ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತದೆ.

ವಾರ್ಡ್‌ 39– ಚೊಕ್ಕಸಂದ್ರ

ತುಮಕೂರು ರಸ್ತೆಯ 8ನೇ ಮೈಲಿಯ ಪಕ್ಕದಲ್ಲಿರುವ ಚೊಕ್ಕಸಂದ್ರ ಬಡಾವಣೆಯಲ್ಲಿ ರಾಜಕಾಲುವೆ ಒತ್ತುವರಿಯೇ ದೊಡ್ಡ ಸಮಸ್ಯೆ. ಈ ಹಿಂದೆ ಚೊಕ್ಕಸಂದ್ರ ಕೆರೆ ಒಡೆದಾಗ ಅದರ ನೀರೆಲ್ಲವೂ ಬಡಾವಣೆಗಳಿಗೆ ನುಗ್ಗಿತ್ತು. ಖಾಸಗಿ ವ್ಯಕ್ತಿಯೊಬ್ಬರು ರಾಜಕಾಲುವೆಗೆ ಅಡ್ಡಲಾಗಿ ಸೇತುವೆ ಕಟ್ಟಿದ್ದರು. ಈ ನಡುವೆ ರಾಜಕಾಲುವೆ ಒತ್ತುವರಿ ಆಗಿದೆ. ಅಲ್ಲದೇ ಬೆಲ್ಮಾರ್ ಲೇಔಟ್‌ನಲ್ಲಿ ಹಾದುಹೋಗುವ ರಾಜಕಾಲುವೆ ಇಕ್ಕೆಲದಲ್ಲೂ ತಡೆಗೋಡೆಗಳೇ ಇಲ್ಲ. ಈ ಎಲ್ಲಾ ಕಾರಣಗಳಿಂದ ಕೆರೆಯ ನೀರು ಮನೆಗಳಿಗೆ ತುಂಬಿಕೊಂಡಿತ್ತು. ಈ ಘಟನೆ ಸಂಭವಿಸಿ ಎರಡು ತಿಂಗಳು ಕಳೆದಿದೆ. ಆದರೂ ರಾಜಕಾಲುವೆಗೆ ತಡೆಗೋಡೆ ನಿರ್ಮಾಣ ಆರಂಭವಾಗಿಲ್ಲ.

ನೆಲಗದರನಹಳ್ಳಿ ಮುಖ್ಯ ರಸ್ತೆಯೂ ಇದೇ ವಾರ್ಡ್‌ ವ್ಯಾಪ್ತಿಗೆ ಸೇರುತ್ತದೆ. ರಸ್ತೆ ವಿಸ್ತರಣೆ ಆಗಬೇಕೆಂಬ ಪ್ರಸ್ತಾವನೆ ನನೆಗುದಿಗೆ ಬಿದ್ದಿದೆ. ಚೊಕ್ಕಸಂದ್ರ ಕೆರೆ ರಸ್ತೆಯೂ ವಿಸ್ತರಣೆಯಾಗಬೇಕಿದೆ. ಈ ಎರಡೂ ರಸ್ತೆಗಳಲ್ಲಿ ನಿತ್ಯ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಕಾಮಗಾರಿಗಳಿಗೆ ಅನುದಾನ ನೀಡಬೇಕಾದ ಸರ್ಕಾರ, ಇದು ಜೆಡಿಎಸ್ ಶಾಸಕರಿರುವ ಕ್ಷೇತ್ರ ಎಂಬ ಕಾರಣಕ್ಕೆ ಈ ಹಿಂದೆ ಮಂಜೂರಾದ ಅನುದಾನಗಳಿಗೂ ಕತ್ತರಿ ಹಾಕಿದೆ. ಹಾಗಾಗಿ ಮಂಜೂರಾದ ಕಾಮಗಾರಿಗಳೂ ತ್ರಿಶಂಕು ಸ್ಥಿತಿಯಲ್ಲಿವೆ. ಯಾವಾಗ ಮತ್ತೆ ಪ್ರವಾಹ ಉಂಟಾಗುತ್ತದೋ ಎಂಬ ಭಯದಲ್ಲೇಜನರು ಜೀವನ ನಡೆಸುತ್ತಿದ್ದಾರೆ.

ವಾರ್ಡ್‌ನ ಪ್ರಮುಖ ಮೂರು ಸಮಸ್ಯೆಗಳು

ಮಲ್ಲಸಂದ್ರ

* ಸರ್ಕಾರಿ ಭೂಮಿ ಒತ್ತುವರಿಯೇ ಅಭಿವೃದ್ಧಿಗೆ ಅಡ್ಡಿ

* ಅಸಮರ್ಪಕ ಕಸ ವಿಲೇವಾರಿ

* ದುರಸ್ತಿಯಾಗದ ಶುದ್ಧ ಕುಡಿಯುವ ನೀರಿನ ಘಟಕಗಳು

ಬಾಗಲಗುಂಟೆ

* ಕಾಮಗಾರಿಗಾಗಿ ಜಲಮಂಡಳಿ ಅಗೆದಿರುವ ರಸ್ತೆ ದುರಸ್ತಿಯಾಗಿಲ್ಲ

* ಮಳೆ ನೀರು ಹರಿದು ಹೋಗಲು ರಾಜಕಾಲುವೆಯೇ ಇಲ್ಲ

* ರಾತ್ರಿಯಾದರೆ ಕುಡುಕರ ಅಡ್ಡವಾಗಿ ಮಾರ್ಪಾಡಾಗುವ ಭೈರವೇಶ್ವರಿ ವೃತ್ತ

ಟಿ. ದಾಸರಹಳ್ಳಿ

* ಖಾಲಿ ನಿವೇಶನಗಳಲ್ಲಿ ಆಗಾಗ ರಾಶಿ ಬೀಳುವ ಕಸ

‌* ಕಿರಿದಾದ ರಸ್ತೆಗಳಲ್ಲಿ ದೊಡ್ಡ ವಾಹನಗಳು ಬಂದರೆ ತೊಂದರೆ

* ಉದ್ಯಾನಗಳಿಗೆ ಬೇಕಿದೆ ಇನ್ನಷ್ಟು ಮೂಲಸೌಕರ್ಯ

ಚೊಕ್ಕಸಂದ್ರ

* ರಾಜಕಾಲುವೆ ಒತ್ತುವರಿ ಆಗಿರುವ ಕಾರಣ ಮನೆಗಳಿಗೆ ನಿಗ್ಗುವ ನೀರು

* ನೆಲಗದರನಹಳ್ಳಿ ಮುಖ್ಯರಸ್ತೆ ವಿಸ್ತರಣೆಯಾಗದೆ ದಿನವೂ ಸಂಚಾರ ದಟ್ಟಣೆ

* ರಾಜಕಾಲುವೆಗೆ ತಡೆಗೋಡೆಗಳೇ ಇಲ್ಲ

ಪಾಲಿಕೆ ಸದಸ್ಯರು ಹೇಳುವುದೇನು?

‘ಬಡವರಿಗೆ ಮನೆ ನೀಡಲು ವ್ಯಾಜ್ಯ ಅಡ್ಡಿ’

ಮಲ್ಲಸಂದ್ರದಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಕಾಲಕಾಲಕ್ಕೆ ಅಗತ್ಯ ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಿದ್ದೇನೆ. ಸರ್ಕಾರಿ ಭೂಮಿಯಲ್ಲಿ ಬಡವರು ಮನೆ ಕಟ್ಟಿಕೊಂಡಿದ್ದಾರೆ. ಇದರ ವಿರುದ್ಧ ಕೆಲವರು ಹೈಕೋರ್ಟ್‌ ಮೆಟ್ಟಿಲೇರಿರುವ ಕಾರಣ ಅಭಿವೃದ್ಧಿಗೆ ತೊಡಕಾಗಿದೆ. ಬಿಬಿಎಂಪಿಯಿಂದ ಪೂರಕ ಮಾಹಿತಿಯನ್ನು ಹೈಕೋರ್ಟ್‌ಗೆ ಒದಗಿಸಿ ತಡೆಯಾಜ್ಞೆ ತೆರವುಗೊಳಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ಎನ್. ಲೋಕೇಶ್,ಮಲ್ಲಸಂದ್ರ ವಾರ್ಡ್ ಸದಸ್ಯ

‘ ಕಾಮಗಾರಿಗೆ ತೊಡಕು’

ಬಾಗಲಕುಂಟೆ ವಾರ್ಡ್‌ನ ಸಿಡೇದಹಳ್ಳಿಯಲ್ಲಿ ಸಮಸ್ಯೆಗಳಿರುವುದು ನಿಜ. ಜಲಮಂಡಳಿ ಕಾಮಗಾರಿ ನಿರ್ವಹಿಸುವಾಗ ರಸ್ತೆಗಳನ್ನು ಅಗೆದಿರುವ ಕಾರಣ ಸದ್ಯಕ್ಕೆ ತೊಂದರೆಯಾಗಿದೆ. ಕಾಮಗಾರಿ ಮುಗಿದ ನಂತರ ಸಿಡೇದಹಳ್ಳಿ ಅಭಿವೃದ್ಧಿ ಹೊಂದಿದ ಬಡಾವಣೆ ಆಗಲಿದೆ. ಮಂಜೂರಾದ ಅನುದಾನವನ್ನು ಸರ್ಕಾರ ವಾಪಸ್ ಪಡೆದಿರುವ ಕಾರಣ ಅಭಿವೃದ್ಧಿ ಕೆಲಸಗಳಿಗೆ ತೊಡಕಾಗಿದೆ. ಚುನಾವಣೆ ಮುಗಿದ ಕೂಡಲೇ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಅನುದಾನ ಬಿಡುಗಡೆಗೆ ಮನವಿ ಮಾಡಲಾಗುವುದು.

ಕೆ.ನರಸಿಂಹ ನಾಯಕ,ಬಾಗಲಕುಂಟೆ ವಾರ್ಡ್ ಸದಸ್ಯ

‘ಖಾಲಿ ನಿವೇಶನಗಳ ಕಸದ್ದೇ ಸಮಸ್ಯೆ’

ಟಿ. ದಾಸರಹಳ್ಳಿಯಲ್ಲಿ ರಸ್ತೆ ಡಾಂಬರೀಕರಣ, ಚರಂಡಿ, ಕಾವೇರಿ ನೀರಿನ ಸಂಪರ್ಕ, ರಾಜಕಾಲುವೆ ದುರಸ್ತಿ ಕೆಲಸಗಳನ್ನು ಕೈಗೊಳ್ಳಲಾಗಿದೆ. ಕಿರಿದಾದ ರಸ್ತೆಯಾದರೂ ಟ್ರಾಫಿಕ್ ಸಮಸ್ಯೆ ವಾರ್ಡ್‌ನಲ್ಲಿ ಇಲ್ಲ. ಖಾಲಿ ನಿವೇಶನಗಳಲ್ಲಿ ಕಸ ಸುರಿಯುವುದನ್ನು ತಪ್ಪಿಸಲು ಬಿಬಿಎಂಪಿ ಮೂಲಕ ನೋಟಿಸ್ ಕೊಡಿಸುತ್ತಿದ್ದೇನೆ.

ಉಮಾದೇವಿ ನಾಗರಾಜ್,ಟಿ. ದಾಸರಹಳ್ಳಿ ವಾರ್ಡ್ ಸದಸ್ಯೆ

‘ಒತ್ತುವರಿ ತೆರವಿಗೆ ಗುರುತು’

ರಾಜಕಾಲುವೆ ಒತ್ತುವರಿ ತೆರವಿಗೆ ಗುರುತು ಮಾಡಿಸಿದ್ದೇವೆ. ತಡೆಗೋಡೆಗಳ ನಿರ್ಮಾಣ ಕಾಮಗಾರಿಯನ್ನು ಕ್ರಿಯಾಯೋಜನೆಯಲ್ಲಿ ಸೇರಿಸುವುದಾಗಿ ಮೇಯರ್ ಮತ್ತು ಬಿಬಿಎಂಪಿ ಆಯುಕ್ತರು ಭರವಸೆ ನೀಡಿದ್ದಾರೆ. ಪಾಲಿಕೆಯಲ್ಲಿ ಬಿಜೆಪಿ ಆಡಳಿತದಲ್ಲಿದ್ದು, ಸ್ಥಾಯಿ ಸಮಿತಿಗಳು ಕಾಂಗ್ರೆಸ್ ಮತ್ತು ಜೆಡಿಎಸ್‌ನ ಹಿಡಿತದಲ್ಲಿವೆ. ಸದ್ಯದಲ್ಲೇ ಸ್ಥಾಯಿ ಸಮಿತಿ ಚುನಾವಣೆ ನಡೆಯಲಿದೆ. ಈ ಸಮಿತಿಗಳು ಬಿಜೆಪಿ ತೆಕ್ಕೆಗೆ ಬಂದರೆ ಆರು ತಿಂಗಳಲ್ಲಿ ಅಭಿವೃದ್ಧಿಯ ಚಿತ್ರಣವೇ ಬದಲಾಗಲಿದೆ.

ಸರ್ವಮಂಗಳಾ,ಚೊಕ್ಕಸಂದ್ರ ವಾರ್ಡ್ ಸದಸ್ಯೆ

ಜನರ ದೂರುಗಳೇನು?

ಸಮಸ್ಯೆಗಳೇನೂ ಇಲ್ಲ

ಟಿ. ದಾಸರಹಳ್ಳಿ ವಾರ್ಡ್‌ನಲ್ಲಿ ಮೂಲಸೌಕರ್ಯಗಳ ಸಮಸ್ಯೆಗಳೇನೂ ಇಲ್ಲ. ರಸ್ತೆ, ಕುಡಿಯುವ ನೀರಿನ ಸೌಲಭ್ಯವನ್ನು ಬಿಬಿಎಂಪಿ ಒದಗಿಸಿದೆ. ವಾರ್ಡಿನ ಪಾಲಿಕೆ ಸದಸ್ಯರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ.

ಶಿವಣ್ಣ,ಟಿ. ದಾಸರಹಳ್ಳಿ

‘ಒತ್ತುವರಿ ತೆರವುಗೊಳಿಸಿ ಕೆರೆ ಉಳಿಸಿ’

ಮಲ್ಲಸಂದ್ರ ಕೆರೆ ಅಭಿವೃದ್ಧಿಯಾಗದ ಕಾರಣ ಒತ್ತುವರಿಯಾಗಿದೆ. ಜನರು ಕಸ ಸುರಿಯುತ್ತಿದ್ದಾರೆ. ಕೆಲವರು ಈ ಜಾಗವನ್ನು ಸ್ಮಶಾನ ಮಾಡಿಕೊಂಡಿದ್ದಾರೆ. ತೆರವುಗೊಳಿಸಿ ಕೆರೆ ಅಭಿವೃದ್ಧಿಪಡಿಸಬೇಕು. ಇಲ್ಲದಿದ್ದರೆ ಮತ್ತಷ್ಟು ಒತ್ತುವರಿಯಾಗಲಿದೆ.

ಚನ್ನೇಗೌಡ,ಮಲ್ಲಸಂದ್ರ

‘ಒತ್ತುವರಿಯೇ ದೊಡ್ಡ ಸವಾಲು’

ಚೊಕ್ಕಸಂದ್ರ ವಾರ್ಡ್‌ನಲ್ಲಿ ರಾಜಕಾಲುವೆ ಒತ್ತುವರಿಯೇ ದೊಡ್ಡ ಸಮಸ್ಯೆ. ರಾಜಕಾಲುವೆ ಕಿರಿದಾಗಿರುವ ಕಾರಣ ಈ ಹಿಂದೆ ಕೆರೆ ಕೋಡಿ ಒಡೆದಾಗ ನೀರು ಮನೆಗಳಿಗೆ ನುಗ್ಗಿತ್ತು. ಈಗಲೂ ರಾಜಕಾಲುವೆ ಹಾಗೇಯೇ ಇವೆ.

ಚಂದ್ರಶೇಖರ್,8ನೇ ಮೈಲಿ ನಿವಾಸಿ

‘ಭೈರವೇಶ್ವರಿ ವೃತ್ತ ಕುಡುಕರ ಅಡ್ಡ’

ಸಿಡೇದಹಳ್ಳಿಯ ಮೀನಾಕ್ಷಿ ಲೇಔಟ್‌ನ ಭೈರವೇಶ್ವರಿ ವೃತ್ತದಲ್ಲಿ ಎಲ್ಲೆಂದರಲ್ಲಿ ಕಸ ಸುರಿಯಲಾಗುತ್ತದೆ. ಕಾರುಗಳಲ್ಲಿ ಬಂದು ಮದ್ಯ ಸೇವನೆ ಮಾಡುತ್ತಾರೆ. ರಾತ್ರಿಯಾದರೆ ಈ ಪ್ರದೇಶ ಕುಡುಕರ ಅಡ್ಡವಾಗಿ ಮಾರ್ಪಾಡಾಗುತ್ತದೆ. ಆಗ ಮಹಿಳೆಯರು ಮತ್ತು ಮಕ್ಕಳು ಈ ರಸ್ತೆಯಲ್ಲಿ ತಿರುಗಾಡುವುದೇ ಕಷ್ಟ.

ಶ್ರೀನಿವಾಸ್,ಮೀನಾಕ್ಷಿ ಲೇಔಟ್ ನಿವಾಸಿ

‌‘ಕಾಮಗಾರಿ ಬೇಗ ಪೂರ್ಣಗೊಳಿಸಿ’

ಮಲ್ಲಸಂದ್ರದಲ್ಲಿ ರಸ್ತೆ ಹಾಗೂ ಇತರ ಮೂಲಸೌಕರ್ಯಗಳ ಸಮಸ್ಯೆ ಅಷ್ಟಾಗಿ ಇಲ್ಲ. ಉದ್ಯಾನ ಅಭಿವೃದ್ಧಿಯೂ ಆಗುತ್ತಿದ್ದು, ಕಾಮಗಾರಿಯನ್ನು ಬೇಗ ಪೂರ್ಣಗೊಳಿಸಬೇಕು. ಕಸ ವಿಲೇವಾರಿ ಸಮರ್ಪಕವಾಗಿ ಆಗಬೇಕಿದೆ. 6 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 4 ಮಾತ್ರ ಸುಸ್ಥಿತಿಯಲ್ಲಿವೆ. ಉಳಿದವು ದುರಸ್ತಿಯಾಗಬೇಕು

ಮಹೇಶ್,ಮಲ್ಲಸಂದ್ರ

ಎರಡು ರಸ್ತೆಗಳು ವಿಸ್ತರಣೆ ಆಗಬೇಕು

ನೆಲಗದರನಹಳ್ಳಿ ಮತ್ತು ಚೊಕ್ಕಸಂದ್ರಕೆರೆ ರಸ್ತೆಗಳಲ್ಲಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಸಂಚಾರ ದಟ್ಟಣೆ ಉಂಟಾಗುತ್ತದೆ. ಈ ರಸ್ತೆಗಳ ವಿಸ್ತರಣೆ ಆಗದ ಹೊರತು ಸಮಸ್ಯೆಗೆ ಪರಿಹಾರವಿಲ್ಲ. ಬಿಬಿಎಂಪಿ ಇತ್ತ ಗಮನ ಹರಿಸಬೇಕು

ಕಿರಣ್, ಬೆಲ್ಮಾರ್ ಲೇಔಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT