ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಪಾರ್ಕಿಂಗ್‌ಗೆ ಬೀಗ

Published 18 ಮಾರ್ಚ್ 2024, 15:36 IST
Last Updated 18 ಮಾರ್ಚ್ 2024, 15:36 IST
ಅಕ್ಷರ ಗಾತ್ರ

ಬೆಂಗಳೂರು: ಬಿಎಂಆರ್‌ಸಿಎಲ್‌–ಗುತ್ತಿಗೆದಾರರ ನಡುವಿನ ತಿಕ್ಕಾಟದಿಂದ ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಲ್ಲಿರುವ ವಾಹನ ಪಾರ್ಕಿಂಗ್‌ ತಾಣದ ಗೇಟ್‌ಗೆ ಬೀಗ ಬಿದ್ದಿದೆ. ಎರಡು ವಾರಗಳಿಂದ ಸಾರ್ವಜನಿಕರು ವಾಹನ ನಿಲ್ಲಿಸಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ.

ಈ ಪಾರ್ಕಿಂಗ್‌ ತಾಣದಲ್ಲಿ 280 ದ್ವಿಚಕ್ರ ವಾಹನಗಳು, 25 ಕಾರು, 10 ಸೈಕಲ್‌ಗಳನ್ನು ನಿಲ್ಲಿಸಬಹುದು. ಪಾರ್ಕಿಂಗ್‌ ಜಾಗದ ನಿರ್ವಹಣೆ ವಹಿಸಿಕೊಂಡಿದ್ದ ಗುತ್ತಿಗೆದಾರರ ಅವಧಿ ಮುಕ್ತಾಯಗೊಂಡಿದೆ. ನಷ್ಟ ಉಂಟಾಗುತ್ತಿದೆ ಎಂಬ ಕಾರಣಕ್ಕೆ ಅವರು ಗುತ್ತಿಗೆ ನವೀಕರಣಕ್ಕೆ ಕೋರಿಲ್ಲ. ಬಳಿಕ ಕರೆದ ಟೆಂಡರ್‌ನಲ್ಲಿ ಗುತ್ತಿಗೆ ವಹಿಸಿಕೊಂಡವರು ಅರ್ಧದಷ್ಟು ಠೇವಣಿ ತುಂಬಿದ್ದರು. ಉಳಿದ ಪ್ರಕ್ರಿಯೆಗಳು ನಡೆಯದೇ ಇರುವುದರಿಂದ ಮಾರ್ಚ್‌ 3ರಿಂದ ಪಾರ್ಕಿಂಗ್‌ ಗೇಟ್‌ಗೆ ಬೀಗ ಹಾಕಲಾಗಿದೆ.

ಬೈಯ್ಯಪ್ಪನಹಳ್ಳಿ–ಕೆ.ಆರ್‌.ಪುರ ನಡುವೆ ಬಾಕಿ ಉಳಿದಿದ್ದ ಸುಮಾರು 2 ಕಿ.ಮೀ. ಮಾರ್ಗದ ಕಾಮಗಾರಿ ಪೂರ್ಣಗೊಂಡು ಮೆಟ್ರೊ ರೈಲು ಸಂಚಾರ ಆರಂಭವಾದ ಬಳಿಕ  ವೈಟ್‌ಫೀಲ್ಡ್‌ ಕಡೆಗೆ ಸಂಚರಿಸುವವರ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಬಹುತೇಕ ಪ್ರಯಾಣಿಕರು ಬೈಯಪ್ಪನಹಳ್ಳಿಯಲ್ಲಿ ತಮ್ಮ ವಾಹನಗಳನ್ನು ಪಾರ್ಕಿಂಗ್‌ ಮಾಡಿ ಮೆಟ್ರೊ ಹತ್ತುತ್ತಿದ್ದಾರೆ. ಈಗ ಪಾರ್ಕಿಂಗ್‌ ಬಂದ್ ಆಗಿರುವುದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ.

‘ತಾತ್ಕಾಲಿಕವಾಗಿ ಮುಚ್ಚಲಾಗಿದೆ’ ಎಂದು ಪಾರ್ಕಿಂಗ್‌ ಗೇಟ್‌ಗೆ ಫಲಕ ಹಾಕಿದ್ದಾರೆ. ಯಾಕೆ ಮುಚ್ಚಲಾಗಿದೆ, ಯಾವಾಗ ತೆರೆಯುತ್ತದೆ ಎಂಬ ಮಾಹಿತಿ ಇಲ್ಲ. ನಮ್ಮ ವಾಹನಗಳನ್ನು ಯಾರದೋ ಮನೆ, ಕಟ್ಟಡಗಳ ಮುಂದೆ ನಿಲ್ಲಿಸಿ ಹೋಗಬೇಕು. ಅದಕ್ಕಾಗಿ ಅವರಿಂದ ಬೈಗುಳಗಳನ್ನು ಕೇಳುವಂತಾಗಿದೆ’ ಎಂದು ಪ್ರಯಾಣಿಕರು ದೂರಿದರು.

‘ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ‘ಯು’ ಆಕಾರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇತ್ತು. ಒಂದು ಕಡೆಯಿಂದ ಪ್ರವೇಶಿಸಿ, ಇನ್ನೊಂದು ಕಡೆಯಿಂದ ಹೊರಹೋಗುತ್ತಿದ್ದ ವ್ಯವಸ್ಥೆ ಅದು. ಅದರಲ್ಲಿ ಒಂದು ತುದಿಯ ಸ್ಥಳವನ್ನು ಬಿಎಂಆರ್‌ಸಿಎಲ್‌ ಬೇರೆ ಉದ್ದೇಶಕ್ಕೆ ಬಳಸಲು ನಿರ್ಧರಿಸಿದ್ದರಿಂದ ಗುತ್ತಿಗೆದಾರರು ಹಿಂದಕ್ಕೆ ಸರಿದಿದ್ದಾರೆ. ಪ್ರಾಪರ್ಟಿ ಡೆವಲಪ್‌ಮೆಂಟ್‌ ಎಕ್ಸಿಕ್ಯುಟಿವ್‌ ಡೈರೆಕ್ಟರ್‌ (ಪಿಡಿಎಡಿ) ಮತ್ತು ಗುತ್ತಿಗೆದಾರರ ತಿಕ್ಕಾಟದಿಂದಾಗಿ ಈ ಸಮಸ್ಯೆ ಉಂಟಾಗಿದೆ. ಪಾರ್ಕಿಂಗ್‌ ಗುತ್ತಿಗೆ ವ್ಯವಸ್ಥೆಯಾಗುವವರೆಗೆ ಸಾರ್ವಜನಿಕರಿಗೆ ಉಚಿತವಾಗಿ ಪಾರ್ಕಿಂಗ್‌ ಮಾಡಲು ಅವಕಾಶ ನೀಡಬೇಕು. ಬೀಗ ಹಾಕಿ ತೊಂದರೆ ಕೊಡುವುದು ಸರಿಯಲ್ಲ’ ಎಂದು ಸ್ಥಳೀಯರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT