ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಬೂ ಬಜಾರ್‌ನಲ್ಲಿ ರಸ್ತೆಯೇ ಇಲ್ಲ

ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ಅಗೆದಿರುವ ರಸ್ತೆಗಳು: ಮಾರುಕಟ್ಟೆಯಲ್ಲಿ ಸಂಚಾರವೇ ದುಸ್ತರ
Last Updated 7 ಅಕ್ಟೋಬರ್ 2020, 19:21 IST
ಅಕ್ಷರ ಗಾತ್ರ

ಬೆಂಗಳೂರು: ಹಗಲು–ರಾತ್ರಿ ಎನ್ನದೆ ವಹಿವಾಟು ನಡೆಯುವ, ಸದಾ ಗಿಜಿಗುಡುವ ಪ್ರದೇಶವಾದ ಕಲಾಸಿಪಾಳ್ಯದ ಬಂಬೂ ಬಜಾರ್‌ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಈಗ ರಸ್ತೆಗಳೇಇಲ್ಲವಾಗಿವೆ. ಕಾಂಕ್ರೀಟ್‌ ರಸ್ತೆ ನಿರ್ಮಿಸಲು ಇದ್ದ ರಸ್ತೆ ಅಗೆಯಲಾಗಿದ್ದು, ಮಾರುಕಟ್ಟೆಯಲ್ಲಿ ಸಂಚಾರವೇ ದುಸ್ತರವಾಗಿದೆ.

ಕೆ.ಆರ್‌.ಮಾರುಕಟ್ಟೆ ಎದುರಿನ ಹಳೆ ಬಂಬೂ ಬಜಾರ್‌ನಲ್ಲಿ ಈಗ ಕಾಲಿಡಲೂ ಜಾಗವಿಲ್ಲದಂತಾಗಿದೆ. ಕಬ್ಬಿಣದ ಅಂಗಡಿಗಳು, ಫ್ಲೈವುಡ್ ಶೀಟ್, ಗುಜರಿ ಅಂಗಡಿಗಳೇ ಹೆಚ್ಚಿರುವ ಪ್ರದೇಶ ಇದು.

ಇಲ್ಲಿಶಾಸಕರ ನಿಧಿಯ ಅನುದಾನದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡುವ ಯೋಜನೆಯನ್ನು ಬಿಬಿಎಂಪಿ ಕೈಗೆತ್ತಿಕೊಂಡಿದೆ. ಕಾಮಗಾರಿ ಆರಂಭವಾಗಿ ಚರಂಡಿ ಮತ್ತು ಪೈಪ್‌ಲೈನ್ ಕೆಲಸ ಪೂರ್ಣಗೊಳ್ಳುವಷ್ಟರಲ್ಲಿ ಕೋವಿಡ್ ಆರಂಭವಾಯಿತು. ಅಷ್ಟರಲ್ಲಾಗಲೇ ರಸ್ತೆಗಳನ್ನು ಅಗೆಯಲಾಗಿದ್ದು, ಮತ್ತೆ ಕಾಮಗಾರಿ ತ್ವರಿತಗತಿಯಲ್ಲಿ ಆರಂಭವಾಗಿಲ್ಲ.

‘ಬಂಬೂ ಬಜಾರ್ ರಸ್ತೆ, ಬಂಬೂ ಬಜಾರ್ ಕ್ರಾಸ್ ರಸ್ತೆ, ಎನ್‌.ಆರ್‌.ರಸ್ತೆ,ಕಸಾಯಿಖಾನೆ ರಸ್ತೆ, ಕುಂಬಾರಗುಂಡಿ ಬಡಾವಣೆಗಳಲ್ಲಿ ವಾಹನ ಸಂಚಾರವಿರಲಿ, ಜನ ಸಂಚಾರವೇ ಸಾಧ್ಯವಾಗದ ಸ್ಥಿತಿ ಇದೆ. ಮಳೆ ಬಂದರೆ ಅಂಗಡಿಯಿಂದ ಹೊರಕ್ಕೆ ಕಾಲಿಡಲು ಸಹ
ಸಾಧ್ಯವಾಗುವುದಿಲ್ಲ’ ಎಂದು ವ್ಯಾಪಾರಿಗಳು ಹೇಳುತ್ತಾರೆ.

‘ಕಾಮಗಾರಿ ಆರಂಭಿಸಿ ರಸ್ತೆ ಅಗೆದು ಬಿಟ್ಟು ಹೋದ ಅಧಿಕಾರಿಗಳು ಮತ್ತೆ ತಿರುಗಿ ನೋಡಿಲ್ಲ. ಕೋವಿಡ್ ಕಾರಣಕ್ಕೆ ವಹಿವಾಟು ಕಡಿಮೆಯಾಗಿದೆ. ಈಗ ಇಡೀ ಬಂಬೂ ಬಜಾರ್‌ಗೆ ವಾಹನಗಳೇ ಬಾರದ ಕಾರಣ ವ್ಯಾಪಾರವೇ ನಿಂತು ಹೋಗಿದೆ’ ಎಂದು ಅಳಲು ತೋಡಿಕೊಂಡರು.

‘ರಾಜ್ಯದ ವಿವಿಧ ನಗರ ಮತ್ತು ಹೊರ ರಾಜ್ಯಗಳಿಂದಲೂ ಗ್ರಾಹಕರು ಬರುತ್ತಾರೆ. ರಸ್ತೆಯೇ ಇಲ್ಲದ ಕಾರಣ ಯಾರೊಬ್ಬರೂ ಬಾರದಂತಾಗಿದೆ. ವಹಿವಾಟೇ ಇಲ್ಲದ ಕಾರಣ ಸಾಲದ ಕಂತು ಪಾವತಿಸಲು ಪರದಾಡುತ್ತಿದ್ದೇವೆ’ ಎಂದು ಹೇಳಿದರು.

‘ತಳ್ಳುವ ಗಾಡಿಯನ್ನೇ ನಂಬಿಕೊಂಡಿರುವ ನೂರಾರು ಕಾರ್ಮಿಕರಿದ್ದಾರೆ. ಈ ಗುಂಡಿಗಳ ನಡುವೆ ಗಾಡಿ ತಳ್ಳಲು
ಸಾಧ್ಯವಾಗುತ್ತಿಲ್ಲ. ಒಂಟೆತ್ತಿನ ಗಾಡಿ ಇಟ್ಟುಕೊಂಡವರ ಜೀವನವೂ ಬೀದಿಗೆ ಬಿದ್ದಿದೆ.ಕೂಡಲೇ ಕಾಮಗಾರಿಯನ್ನು ಪುನರ್ ಆರಂಭಿಸಿ ಶೀಘ್ರವಾಗಿ ಪೂರ್ಣಗೊಳಿಸಬೇಕು’ ಎಂದು ಮನವಿ ಮಾಡಿದರು.

15 ದಿನದಲ್ಲಿ ಕಾಮಗಾರಿ ಪೂರ್ಣ

‘ಲಾಕ್‌ಡೌನ್ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಕಾಮಗಾರಿ ಮತ್ತೆ ಆರಂಭವಾಗಿದ್ದು, 15 ದಿನಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದು ಶಾಸಕ ಉದಯ ಗರುಡಾಚಾರ್ ತಿಳಿಸಿದರು.

‘ಬಂಬೂ ಬಜಾರ್ ಮತ್ತು ಸುತ್ತಲ ಪ್ರದೇಶವನ್ನು ಸ್ವಚ್ಛ ಮತ್ತು ಸುಂದರಗೊಳಿಸಬೇಕು ಎಂಬ ಕಾರಣದಿಂದ ಶಾಸಕರ ನಿಧಿಯಿಂದಲೇ ಯೋಜನೆ ಕೈಗೆತ್ತಿಕೊಂಡಿದ್ದೇನೆ. ಲಾಕ್‌ಡೌನ್ ಆಗದಿದ್ದರೆ ಕಾಮಗಾರಿ ಮುಗಿದು ಎಷ್ಟೋ ದಿನಗಳಾಗುತ್ತಿತ್ತು’ ಎಂದರು.

‘ಮಂಗಳವಾರವಷ್ಟೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ‍ಪಕ್ಕದಲ್ಲೇ ಹಾದು ಹೋಗುವ ರಾಜಕಾಲುವೆಯನ್ನೂ ಸ್ವಚ್ಛಗೊಳಿಸುವ ಕಾಮಗಾರಿಯನ್ನೂ ಆರಂಭಿಸಿದ್ದೇವೆ. ರಸ್ತೆ ಪಕ್ಕದ ಚರಂಡಿ, ಪೈಪ್‌ಲೈನ್ ಅಳವಡಿಕೆ ಎಲ್ಲವೂ ಮಗಿದಿದೆ. ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸಲು ಸೂಚನೆ ನೀಡಿದ್ದೇನೆ. ಮಳೆ ಬಾರದೆ ಇದ್ದರೆ ಕೆಲವೇ ದಿನಗಳಲ್ಲಿ ಬಂಬೂ ಬಜಾರ್ ಸುಂದರವಾಗಲಿದೆ’ ಎಂದು ಹೇಳಿದರು.

ಜಲ ಮಂಡಳಿಯ ಯಡವಟ್ಟು

‘850 ಮೀಟರ್‌ ಉದ್ದದ ಒಂದು ರಸ್ತೆಯಲ್ಲಿ ಜಲಮಂಡಳಿಯವರು ಒಳಚರಂಡಿ ಪೈಪ್ ಅಳವಡಿಸಿದ್ದಾರೆ. ಮತ್ತೆ ರಸ್ತೆಯನ್ನು ಅವರು ಸದೃಢಗೊಳಿಸದ ಕಾರಣ ಕಾಮಗಾರಿ ವಿಳಂಬವಾಗಿದೆ’ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.

‘ಇಡೀ ರಸ್ತೆಯನ್ನು 15 ಅಡಿ ಆಳ ಮತ್ತು 6 ಅಡಿ ಅಗಲದ ಗುಂಡಿ ತೆಗೆದು ಪೈಪ್ ಅಳವಡಿಸಿದರು. ಅಷ್ಟೇ ಆಳದಿಂದ ಬಲಗೊಳಿಸಬೇಕಿದ್ದ ಜಲಮಂಡಳಿ ತನ್ನ ಪಾಲಿನ ಕೆಲಸ ಮಾಡಲಿಲ್ಲ. ಈಗ ಬಿಬಿಎಂಪಿಯಿಂದಲೇ ಈ ಕೆಲಸ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

ಅಂಕಿ–ಅಂಶ

₹3 ಕೋಟಿ - ಯೋಜನೆಯ ಒಟ್ಟು ಮೊತ್ತ

1.2 ಕಿಲೋ ಮೀಟರ್ - ನಿರ್ಮಾಣವಾಗಲಿರುವ ಕಾಂಕ್ರೀಟ್ ರಸ್ತೆಯ ಉದ್ದ

ಫೆಬ್ರುವರಿ 2020 - ಕಾಮಗಾರಿ ಆರಂಭವಾದ ತಿಂಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT