ಗುರುವಾರ , ಅಕ್ಟೋಬರ್ 22, 2020
27 °C
ಸಂಪರ್ಕಿತರ ಮಾಹಿತಿ ನೀಡುವಂತೆ ಬಿಬಿಎಂಪಿ ಸಿಬ್ಬಂದಿ ದುಂಬಾಲು

ಕೋವಿಡ್: ಒತ್ತಾಯಪೂರ್ವಕ ಸಂಪರ್ಕ ಸೃಷ್ಟಿ

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರುಗತಿ ಪಡೆದ ಬಳಿಕ ಸೋಂಕಿತರ ಸಂಪರ್ಕ ಪತ್ತೆಗೆ ಹಿನ್ನಡೆ ಉಂಟಾಗಿದೆ. ಆದರೆ, ಈಗ ವಲಯವಾರು ಪರೀಕ್ಷೆಯ ಜತೆಗೆ ಸಂಪರ್ಕಿತರ ಪತ್ತೆಗೆ ಕೂಡ ಬಿಬಿಎಂಪಿ ಗುರಿ ನೀಡಿದ ಪರಿಣಾಮ ಸಿಬ್ಬಂದಿ ತಾವೇ ಸಂಪರ್ಕಿತರನ್ನು ಸೃಷ್ಟಿಸಲಾರಂಭಿಸಿದ್ದಾರೆ.

ನಗರದಲ್ಲಿ ಮೊದಲ ಪ್ರಕರಣ ವರದಿಯಾದ ಬಳಿಕ (ಮಾ.8) ಪ್ರತಿ ರೋಗಿಯ ಪ್ರಯಾಣದ ಇತಿಹಾಸ ಕಲೆ ಹಾಕಿ, ನೇರ ಹಾಗೂ ಪರೋಕ್ಷ ಸಂಪರ್ಕ ಹೊಂದಿದವರನ್ನು ಪತ್ತೆ ಹಚ್ಚಲಾಗುತ್ತಿತ್ತು. ಅವರನ್ನು ನಿಗದಿತ ಅವಧಿಯವರೆಗೆ ಕ್ವಾರಂಟೈನ್‌ಗೆ ಒಳಪಡಿಸಿ, ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿತ್ತು. ಸೋಂಕು ತಗುಲಿಲ್ಲ ಎಂಬುದು ಖಚಿತವಾದ ಬಳಿಕವಷ್ಟೇ ಮನೆಗೆ ತೆರಳಲು ಅವಕಾಶ ನೀಡಲಾಗುತ್ತಿತ್ತು. ಇದರಿಂದಾಗಿ ಕೊರೊನಾ ಸೋಂಕು ನಿಯಂತ್ರಣದಲ್ಲಿತ್ತು. ಆದರೆ, ಲಾಕ್‌ ಡೌನ್‌ ಸಡಿಲಿಸಿದ ಬಳಿಕ ಕೋವಿಡ್‌ ಪೀಡಿತರ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ, ಕ್ವಾರಂಟೈನ್‌ ಹಾಗೂ ಕೋವಿಡ್‌ ಪರೀಕ್ಷೆಯ ನಿಯಮಗಳನ್ನು ಸಡಿಲಿಸಲಾಗಿದೆ.

ಇತ್ತೀಚೆಗೆ ವರದಿಯಾಗುತ್ತಿರುವ ಬಹುತೇಕ ಪ್ರಕರಣಗಳಲ್ಲಿ ಸೋಂಕಿನ ಲಕ್ಷಣಗಳು ಬಹಿರಂಗವಾಗಿ ಗೋಚರಿಸುತ್ತಿಲ್ಲ. ಕೋವಿಡ್ ಪರೀಕ್ಷೆಗೆ ಒಳಗಾದಾಗ ಮಾತ್ರ ಸೋಂಕು ತಗುಲಿರುವುದು ಪತ್ತೆಯಾಗುತ್ತಿದೆ. ಪರಿಣಾಮ ವ್ಯಕ್ತಿಗೆ ಹೇಗೆ ಸೋಂಕು ತಗುಲಿತು, ಎಷ್ಟು ಮಂದಿಯ ಜತೆಗೆ ಸಂಪರ್ಕ ಹೊಂದಿದ್ದರು ಎಂಬುದನ್ನು ಪತ್ತೆ ಮಾಡಲು ಸಿಬ್ಬಂದಿಗೆ ಸಾಧ್ಯವಾಗುತ್ತಿಲ್ಲ. ಆದರೆ, ಪರಿಣಾಮಕಾರಿಯಾಗಿ ಸಂಪರ್ಕಿತರನ್ನು ಗುರುತಿಸಬೇಕು ಎಂದು ಅಧಿಕಾರಿಗಳು ಸೂಚಿಸಿದ ಕಾರಣ ಸಿಬ್ಬಂದಿ ಪರೀಕ್ಷಾ ಕೇಂದ್ರದಲ್ಲಿ ಹಾಗೂ ದೂರವಾಣಿಯ ಮೂಲಕ 5ರಿಂದ 10 ಮಂದಿಯ ಹೆಸರು ಸೂಚಿಸುವಂತೆ ಸೋಂಕಿತರ ಬಳಿ ದುಂಬಾಲು ಬೀಳುತ್ತಿದ್ದಾರೆ.

ನಿಗಾ ವ್ಯವಸ್ಥೆಯಿಲ್ಲ: ‘ಅನಾರೋಗ್ಯ ಲಕ್ಷಣಗಳು ಕಾಣಿಸಿಕೊಂಡ ಕಾರಣ ಕೋವಿಡ್ ಪರೀಕ್ಷೆ ಮಾಡಿಸಿಕೊಂಡೆ. ಸೋಂಕಿತನಾಗಿರುವುದು ಖಚಿತಪಟ್ಟ ಬಳಿಕ ಮಾತ್ರೆಗಳನ್ನು ನೀಡಿದ ಸಿಬ್ಬಂದಿ, ಸಂಪರ್ಕಿತರ ವಿವರ ನೀಡುವಂತೆ ಸೂಚಿಸಿದರು. ಕೆಲ ದಿನಗಳಿಂದ ಮನೆಯಲ್ಲಿಯೇ ಇದ್ದ ಕಾರಣ ಕುಟುಂಬದ ಸದಸ್ಯರ ಹೆಸರನ್ನು ನೀಡಿದೆ. ಆದರೆ, ಕನಿಷ್ಠ 5 ಮಂದಿಯ ಹೆಸರನ್ನು ನೀಡಬೇಕು ಎಂದು ಒತ್ತಾಯಿಸಿದರು. ಬೇರೆ ಯಾರೂ ಇಲ್ಲ ಎಂದು ತಿಳಿಸಿದಾಗ ಪರಿಚಯಸ್ಥರ ಹೆಸರು ಹೇಳುವಂತೆ ದುಂಬಾಲು ಬಿದ್ದರು. ನಾವು ಅವರನ್ನು ಸಂಪರ್ಕಿಸುವುದಿಲ್ಲ‌ ಎಂದೂ ಭರವಸೆ ನೀಡಿದರು’ ಎಂದು ಭುವನೇಶ್ವರಿನಗರದ ಮಹಿಳೆಯೊಬ್ಬರು ಮಾಹಿತಿ ನೀಡಿದರು.

‘ಸಂಪರ್ಕಿತರ ವಿಳಾಸ, ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡಿಲ್ಲ. ಹೆಸರನ್ನು ಮಾತ್ರ ನೀಡುವಂತೆ ಸೂಚಿಸಿದರು. ಮಾತ್ರೆಗಳನ್ನು ಕೂಡ ಎಷ್ಟು ದಿನ ತೆಗೆದುಕೊಳ್ಳಬೇಕು, ಯಾವ ರೀತಿ ಆರೈಕೆ ಮಾಡಿಕೊಳ್ಳಬೇಕು ಎನ್ನುವುದನ್ನು ಸ್ಥಳದಲ್ಲಿದ್ದ ವೈದ್ಯರು ಸಮರ್ಪಕವಾಗಿ ತಿಳಿಸಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

 ‘ಅಧಿಕಾರಿಗಳ ಸೂಚನೆ ಅನುಸಾರ ಸಂಪರ್ಕಿತರ ಹೆಸರನ್ನು ಪಡೆದುಕೊಳ್ಳುತ್ತಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾಗುತ್ತಿರುವ ಪರಿಣಾಮ ಮನೆಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ’ ಎಂದು ಕೋವಿಡ್ ಪರೀಕ್ಷೆಯಲ್ಲಿ ನಿರತವಾಗಿರುವ ಬಿಬಿಎಂಪಿ ಸಿಬ್ಬಂದಿಯೊಬ್ಬರು ತಿಳಿಸಿದರು. 

***

ಕೋವಿಡ್‌ ಪ್ರಕರಣಗಳು ಅಧಿಕ ಸಂಖ್ಯೆಯಲ್ಲಿ ವರದಿಯಾಗುತ್ತಿರುವುದರಿಂದ ಸಂಪರ್ಕಿತರ ಪತ್ತೆ ಸವಾಲಾಗಿದೆ. ಜನತೆ ಸಹಕಾರ ನೀಡಬೇಕು

- ಎನ್. ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು