ಬೆಂಗಳೂರು: ನಗರದಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಪ್ರಕರಣದ ಆರೋಪಿ ಜುನೈದ್ ತಲೆಮರೆಸಿಕೊಂಡಿದ್ದು, ಇದೀಗ ಆತನ ಸಹಚರ ಮೊಹಮ್ಮದ್ ಅರ್ಷದ್ ಖಾನ್‌ನನ್ನು ಆರ್.ಟಿ.ನಗರ ಪೊಲೀಸರು ಬಂಧಿಸಿದ್ದಾರೆ.
'ಆರ್.ಟಿ. ನಗರ ನಿವಾಸಿ ಮೊಹಮ್ಮದ್ ಅರ್ಷದ್ ಖಾನ್, 2017ರಲ್ಲಿ ನಡೆದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ನೂರ್ ಅಹ್ಮದ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಜುನೈದ್ ಜೊತೆ ಅರ್ಷದ್ ಖಾನ್ ಸಹ ಕೆಲ ತಿಂಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ' ಎಂದು ಪೊಲೀಸ್ ಮೂಲಗಳು ಹೇಳಿವೆ.
'ಅಪರಾಧ ಹಿನ್ನೆಲೆಯುಳ್ಳ ಅರ್ಷದ್ ಖಾನ್ ಹೆಸರು ರೌಡಿಯಲ್ಲಿದೆ. ತಲೆಮರೆಸಿಕೊಂಡು ಸುತ್ತಾಡುತ್ತಿದ್ದ ಈತನ ಬಂಧನಕ್ಕಾಗಿ ಶೋಧ ನಡೆದಿತ್ತು.'
'ಆರ್.ಟಿ.ನಗರದ ಮನೆ ಮೇಲೆ ಸೋಮವಾರ ದಾಳಿ ಮಾಡಲಾಗಿತ್ತು. ಇದೇ ವೇಳೆ ಅರ್ಷದ್ ಖಾನ್, ಕತ್ತು ಕೊಯ್ದುಕೊಳ್ಳುವುದಾಗಿ ಸಿಬ್ಬಂದಿಯನ್ನು ಬೆದರಿಸಿದ್ದ. ಆದರೆ, ಸಿಬ್ಬಂದಿ ಏನು ಮಾಡುವುದುಲ್ಲವೆಂದು ಸಮಾಧಾನಪಡಿಸಿದ್ದರು. ಚಾಕಿ ಎಸೆದಿದ್ದ ಅರ್ಷದ್ ಖಾನ್, ಎರಡನೇ ಮಹಡಿಯಿಂದ ಜಿಗಿದು ಪರಾರಿಯಾಗಲು ಯತ್ನಿಸಿದ್ದ. ಸಿಬ್ಬಂದಿ ಈತನನ್ನು ಬೆನ್ನಟ್ಟಿ ಹಿಡಿದಿದ್ದಾರೆ' ಎಂದು ಪೊಲೀಸ್ ಮೂಲಗಳು ತಿಳಿಸಿವೆ.
'ತಲೆಮರೆಸಿಕೊಂಡಿರುವ ಜುನೈದ್, ಅರ್ಷದ್ ಖಾನ್ ಜೊತೆ ಆಗಾಗ ಮಾತಾನಾಡುತ್ತಿದ್ದ. ಹೀಗಾಗಿ, ಅರ್ಷದ್ ಖಾನ್‌ನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು' ಎಂದು ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.