ಬೆಂಗಳೂರು: ರಸ್ತೆ ಬದಿಯಲ್ಲಿ ನಿಲುಗಡೆ ಮಾಡಿದ್ದ ಕಾರುಗಳ ಗಾಜು ಒಡೆದು ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಕಳ್ಳತನ ಮಾಡುತ್ತಿದ್ದ ತಮಿಳುನಾಡಿನ ಮೂವರನ್ನು ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಸೆಂಥಿಲ್ ಕುಮಾರ್(29), ಮುರಳಿ(37) ಹಾಗೂ ಮೂರ್ತಿ(30) ಬಂಧಿತರು.
ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಬಂಧಿತರಿಂದ ಎರಡು ಚಾಕು, ಖಾರದ ಪುಡಿ, ಎರಡು ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ.
‘ಇಂದಿರಾನಗರದ ಕದಿರಯ್ಯನಪಾಳ್ಯದ ನೀಲಗಿರಿ ತೋಪಿನ ಬಳಿ ಐವರು ಆರೋಪಿಗಳು ಮಾರಕಾಸ್ತ್ರ, ಖಾರದ ಪುಡಿ, ಚಾಕು ಹಿಡಿದು ದರೋಡೆಗೆ ಹೊಂಚು ಹಾಕುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.
‘ಇಂದಿರಾನಗರ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ನಿಲುಗಡೆ ಮಾಡುತ್ತಿದ್ದ ಕಾರಿನಲ್ಲಿ ಬೆಲೆಬಾಳುವ ವಸ್ತುಗಳನ್ನು ಮಾಲೀಕರು ಇಟ್ಟು ಹೋಗಿರುವುದನ್ನು ಆರೋಪಿಗಳನ್ನು ಪತ್ತೆ ಮಾಡುತ್ತಿದ್ದರು. ನಂತರ, ಗಾಜು ಒಡೆದು ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಕದ್ದು ಕ್ಷರ್ಣಾರ್ಧದಲ್ಲಿ ಪರಾರಿ ಆಗುತ್ತಿದ್ದರು. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು. ಆರೋಪಿಗಳಿಂದ ಲ್ಯಾಪ್‌ಟಾಪ್ ಖರೀದಿಸುತ್ತಿದ್ದ ವ್ಯಕ್ತಿಯನ್ನು ಅತ್ತಿಬೆಲೆಯಲ್ಲಿ ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ಹೇಳಿದರು.