ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್‌ ಚುನಾವಣೆ: ಕಮಲ ಬಲವೃದ್ಧಿ, ‘ಕೈ’ ಹಿಡಿಯದ ಹಣಬಲ

ಬೆಂಗಳೂರು ನಗರ ಕ್ಷೇತ್ರದಲ್ಲಿ ಬಿಜೆಪಿಗೆ ಮೊದಲ ಗೆಲುವು
Last Updated 14 ಡಿಸೆಂಬರ್ 2021, 22:17 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್‌ ಸದಸ್ಯರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಚ್‌.ಎಸ್‌.ಗೋಪಿನಾಥ್‌ ವಿಜಯ ಪತಾಕೆ ಹಾರಿಸಿದ್ದಾರೆ. ಈ ಕ್ಷೇತ್ರದಲ್ಲಿ ಮೊದಲ ಗೆಲುವಿನೊಂದಿಗೆ ‘ಕಮಲ’ ಬಲ ಹೆಚ್ಚಿಸಿಕೊಂಡಿದೆ. ಈ ಕ್ಷೇತ್ರದಲ್ಲಿ ಇದುವರೆಗೂ ಪ್ರಾಬಲ್ಯ ಹೊಂದಿದ್ದ ಕಾಂಗ್ರೆಸ್‌ ಪಾಳೆಯದಲ್ಲಿ ಇದು ತಳಮಳ ಮೂಡಿಸಿದೆ.

ಸಂಘಟನೆ, ವ್ಯಕ್ತಿತ್ವ, ಹಣಬಲದ ಸುತ್ತ ಗಿರಕಿ ಹೊಡೆದಿದ್ದ ಈ ಚುನಾವಣೆಯಲ್ಲಿ ಕಾಂಚಾಣದ ಪ್ರಭಾವಳಿ ದಟ್ಟವಾಗಿ ಮೇಳೈಸಿತ್ತು. ಈ ನಡುವೆಯೂ ಬೇರುಮಟ್ಟದಲ್ಲಿ ಪಕ್ಷದ ಸಂಘಟನೆ ಮತ್ತು ಕಾರ್ಯಕರ್ತರ ನಿರಂತರ ಪ್ರಯತ್ನದ ಫಲವಾಗಿ ಬಿಜೆಪಿ ಅಭ್ಯರ್ಥಿ ಗೆಲುವಿನ ದಡ ಸೇರಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಯೂಸುಫ್‌ ಷರೀಫ್‌ (ಕೆಜಿಎಫ್‌ ಬಾಬು) ಪ್ರಬಲ ಸ್ಪರ್ಧೆ ನೀಡಿದ್ದರಾದರೂ, ವಿಜಯಲಕ್ಷ್ಮಿಯನ್ನು ಒಲಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ.

ಈ ಇಬ್ಬರು ‘ಶ್ರೀಮಂತ ಅಭ್ಯರ್ಥಿ’ಗಳ ನಡುವೆಯೇ ನೇರ ಹಣಾಹಣಿ ನಡೆದಿತ್ತು. ಜೆಡಿಎಸ್‌ ಈ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಮತ ಎಣಿಕೆ ವೇಳೆ ಆರಂಭದಲ್ಲಿ ಮೊದಲ ಪ್ರಾಶಸ್ತ್ರ್ಯ ಗಳಿಕೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮುನ್ನಡೆ ಹೊಂದಿದ್ದರು. ಬಳಿಕ, ಬಿಜೆಪಿ ಅಭ್ಯರ್ಥಿಯೇ ಮೇಲುಗೈ ಸಾಧಿಸಿದರು.

2009ರಲ್ಲಿ ಕೇವಲ ಒಂಬತ್ತು ಮತಗಳ ಅಂತರದಿಂದ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಸೋಲು ಅನುಭವಿಸಿದ್ದ ಎಚ್‌.ಎಸ್‌. ಗೋಪಿನಾಥ್‌ ಅವರು, ಮತ ಕೇಳುವಾಗಲೂ ಈ ವಿಷಯವನ್ನು ಪದೇ ಪದೇ ಪ್ರಸ್ತಾಪಿಸಿದ್ದರು. ಮತದಾರರ ಅನುಕಂಪ ಗಿಟ್ಟಿಸಿಕೊಳ್ಳುವಲ್ಲಿ ಈ ತಂತ್ರ ಫಲ ನೀಡಿದೆ.

ಇನ್ನೊಂದೆಡೆ, ಯೂಸುಫ್‌ ಷರೀಫ್‌ ಅವರ ವಿರುದ್ಧದ ಆರೋಪಗಳನ್ನೇ ಪ್ರಚಾರದ ವಿಷಯವನ್ನಾಗಿ ಬಳಸಿಕೊಳ್ಳುವ ಮೂಲಕ ಬಿಜೆಪಿ ಟೀಕಾ ಪ್ರಹಾರ ನಡೆಸಿತ್ತು.

2015ರಲ್ಲಿ ಬಿಜೆಪಿಯ ದೊಡ್ಡ ಬಸವರಾಜು ವಿರುದ್ಧ ಜಯಗಳಿಸಿದ್ದ ಕಾಂಗ್ರೆಸ್‌ನ ಎಂ.ನಾರಾಯಣಸ್ವಾಮಿ ಈ ಬಾರಿ ಸ್ಪರ್ಧಿಸಲಿಲ್ಲ. ಹೀಗಾಗಿ, ಅಭ್ಯರ್ಥಿಗಳ ಹುಡುಕಾಟದಲ್ಲಿದ್ದ ಕಾಂಗ್ರೆಸ್‌, ಕೋಲಾರದ ರಿಯಲ್‌ ಎಸ್ಟೇಟ್‌ ಉದ್ಯಮಿ ಯೂಸುಫ್‌ ಷರೀಫ್‌ ಅವರನ್ನು ಕೊನೆಯ ಕ್ಷಣದಲ್ಲಿ ಕಣಕ್ಕಿಳಿಸಿ ಅಚ್ಚರಿ ಮೂಡಿಸಿತ್ತು. ಅವರಿಗೆ ಚುನಾವಣೆ ಕಣವೂ ಹೊಸದಾಗಿತ್ತು. ಅವರು ಪಕ್ಷಕ್ಕೆ ಹೊಸ ಮುಖ ಎಂಬ ಬಗ್ಗೆ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಅಸಮಾಧಾನವಿತ್ತು. ಚುನಾವಣಾ ಕಣದಲ್ಲಿದ್ದ ಅತ್ಯಂತ ಶ್ರೀಮಂತ ಅಭ್ಯರ್ಥಿ ಅವರಾಗಿದ್ದರು. ಚುನಾವಣಾ ಪ್ರಚಾರದ ಅಂಗಳದಲ್ಲೂ ‘ಶ್ರೀಮಂತಿಕೆಯ ಅಬ್ಬರ’ ಚರ್ಚೆಗೆ ಗ್ರಾಸವಾಗಿತ್ತು.

ನಾಯಕತ್ವದ ಕೊರತೆ ಮತ್ತು ಹೊರಗಿನ ಅಭ್ಯರ್ಥಿಗೆ ಟಿಕೆಟ್‌ ನೀಡಿದ್ದು ಕಾಂಗ್ರೆಸ್‌ಗೆ ಮುಳುವಾಯಿತೇ ಎನ್ನುವ ಕುರಿತು ಈಗ ವಿಶ್ಲೇಷಿಸಲಾಗುತ್ತಿದೆ. ಜತೆಗೆ, ಹೈಕಮಾಂಡ್‌ ಆಯ್ಕೆಯ ಅಭ್ಯರ್ಥಿಯನ್ನು ಪಕ್ಷದ ಮುಖಂಡರು ಗೆಲ್ಲಿಸುವಲ್ಲಿ ವಿಫಲರಾದರು ಎನ್ನುವ ಬಗ್ಗೆಯೂ ಪಕ್ಷದ ವಲಯದಲ್ಲಿ ಚರ್ಚೆ ನಡೆದಿದೆ. ಸಂಘಟಿತ ಪ್ರಯತ್ನದ ಕೊರತೆಯಿಂದ ಕಾಂಗ್ರೆಸ್‌ ಸೋಲು ಅನುಭವಿಸಬೇಕಾಯಿತು ಎಂದು ಕೆಲವು ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರದ ವ್ಯಾಪ್ತಿಯಲ್ಲಿರುವ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯೇ ಪ್ರಾಬಲ್ಯ ಹೊಂದಿದೆ. ಒಬ್ಬರು ಸಚಿವರು ಮತ್ತು ಮೂವರು ಶಾಸಕರ ಬಲ ಬಿಜೆಪಿ ಅಭ್ಯರ್ಥಿಗೆ ವರವಾಯಿತು ಎಂದು ವಿಶ್ಲೇಷಿಸಲಾಗಿದೆ. ಈ ಕ್ಷೇತ್ರದಲ್ಲಿ ಇಬ್ಬರು ಮಾತ್ರ ಕಾಂಗ್ರೆಸ್‌ನ ಶಾಸಕರಿದ್ದಾರೆ.

ಆನೇಕಲ್‌, ಮಹದೇವಪುರ, ಬ್ಯಾಟರಾಯನಪುರ, ಯಲಹಂಕ, ಯಶವಂತಪುರ, ಬೆಂಗಳೂರು ದಕ್ಷಿಣ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತರು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೈಗೊಂಡ ಪ್ರಚಾರ ಮತ್ತು ಪ್ರತಿಯೊಬ್ಬ ಸದಸ್ಯರ ಮನವೊಲಿಸುವ ಪ್ರಯತ್ನಗಳೇ ಬಿಜೆಪಿ ಅಭ್ಯರ್ಥಿಯ ಗೆಲುವಿನ ಹಾದಿಯನ್ನು ಸುಲಭಗೊಳಿಸಿದವು ಎಂದು ವಿಶ್ಲೇಷಿಸಲಾಗಿದೆ.

‘ಹಣಕ್ಕೆ ಸೋಲು, ಕಾರ್ಯಕರ್ತರಿಗೆ ಗೆಲುವು‘
‘ಹಣ ಮುಖ್ಯವಲ್ಲ. ಕಾರ್ಯಕರ್ತರಿಂದ ಏನೂ ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಈ ಚುನಾವಣೆ ಸಾಕ್ಷಿ’ ಎಂದು ಎಚ್‌.ಎಸ್‌. ಗೋಪಿನಾಥ್‌ ತಿಳಿಸಿದರು.

ಜಯ ಸಾಧಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಹಣವಂತರಷ್ಟೇ ರಾಜಕಾರಣದಲ್ಲಿ ಬೆಳೆಯಲು ಸಾಧ್ಯ ಎನ್ನುವ ಮಾತು ಸುಳ್ಳಾಗಿದೆ. ಸಾಮಾನ್ಯ ಕಾರ್ಯಕರ್ತರನ್ನು ಸಹ ಸಂಘಟನೆ ಶಕ್ತಿಯಿಂದ ಗೆಲ್ಲಿಸಬಹುದು. ನಾನು ರಾಜಕಾರಣಿ ಅಲ್ಲ. ರಾಜಕೀಯ ಕಾರ್ಯಕರ್ತ’ ಎಂದು ಹೇಳಿದರು.

’ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಶ್ರಮದಿಂದ ಗೆಲುವು ಸಾಧಿಸಲಾಗಿದೆ. ಇದು ಸಂಘಟಿತ ಪ್ರಯತ್ನ. ಕಾಂಗ್ರೆಸ್‌ ವಿರುದ್ಧ ನಮ್ಮ ಹೋರಾಟವೇ ಹೊರತು ಯಾವುದೇ ವ್ಯಕ್ತಿಯ ವಿರುದ್ಧ ಅಲ್ಲ. ಇದು ಸಾಮಾನ್ಯ ಕಾರ್ಯಕರ್ತನ ಗೆಲುವು’ ಎಂದು ಅವರು
ಹೇಳಿದರು.

‘ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮತ್ತು ಪಂಚಾಯಿತಿಗಳಲ್ಲಿನ ಇ–ಖಾತೆ ಸಮಸ್ಯೆಯನ್ನು ಬಗೆಹರಿಸಲು ಶ್ರಮಿಸುತ್ತೇನೆ’ ಎಂದು ತಿಳಿಸಿದರು.

ಶೂನ್ಯ ಮತ!
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿ.ಎಂ.ಶೀನಪ್ಪ ಅವರಿಗೆ ಒಂದೂ ಮತವು ಬಿದ್ದಿಲ್ಲ!

ಈ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಗೆ ಮಾತ್ರ ಮತ ಚಲಾಯಿಸುವ ಹಕ್ಕು ಇರುತ್ತದೆ. ಹೀಗಾಗಿ, ಅಭ್ಯರ್ಥಿಗೂ ಮತ ಚಲಾಯಿಸುವ ಅವಕಾಶ ಇರುವುದಿಲ್ಲ.

‘ನಮ್ಮ ಪ್ರಯತ್ನ ಮಾಡಿದ್ದೇವೆ’
‘ಬೆಂಗಳೂರು ನಗರ ಕ್ಷೇತ್ರದ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಬೆಂಬಲಿಗರ ಸಂಖ್ಯೆ ಜಾಸ್ತಿ ಇತ್ತು. ಹೀಗಾಗಿ, ಬಿಜೆಪಿ ಗೆಲುವು ಸಾಧಿಸಿದೆ’ ಎಂದು ಕಾಂಗ್ರೆಸ್‌ ಶಾಸಕ ಕೃಷ್ಣ ಬೈರೇಗೌಡ ಹೇಳಿದ್ದಾರೆ.

‘ನಮ್ಮ ಪ್ರಯತ್ನ ಮಾಡಿದ್ದೇವೆ. ಅಭ್ಯರ್ಥಿಯ ಬಗ್ಗೆ ಯಾವುದೇ ರೀತಿ ಅಸಮಾಧಾನ ಇರಲಿಲ್ಲ. ಪಕ್ಷದ ಎಲ್ಲ ನಾಯಕರು ಒಗ್ಗೂಡಿ ಹೋರಾಟ ಮಾಡಿದ್ದೇವೆ. ರಾಜ್ಯದ ಇತರ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಿದೆ. ಸಂಘಟಿತ ಹೋರಾಟ ನಡೆಸಿದ್ದರಿಂದ ಉತ್ತಮ ಫಲಿತಾಂಶ ದೊರೆತಿದೆ’ ಎಂದರು.

ಮತಗಳ ವಿವರ
ಎಚ್‌.ಎಸ್. ಗೋಪಿನಾಥ್‌
: 1227
ಯೂಸುಫ್‌ ಷರೀಫ್‌: 830
ಜಿ.ಎಂ.ಶೀನಪ್ಪ: 0
ತಿರಸ್ಕೃತ ಮತಗಳು: 13
ಒಟ್ಟು ಪರಿಗಣಿಸಲ್ಪಟ್ಟ ಮತಗಳು: 2057
ಚಲಾವಣೆಯಾದ ಒಟ್ಟು ಮತಗಳು 2070

**

ಬೆಂಗಳೂರು ನಗರ ಕ್ಷೇತ್ರದಲ್ಲಿ ಇದೇ ಮೊದಲ ಬಾರಿ ಬಿಜೆಪಿ ಜಯಭೇರಿ ಬಾರಿಸಿದೆ. ಪಕ್ಷದ ಅಭ್ಯರ್ಥಿ ಗೋಪಿನಾಥ ಗೆಲುವು ದಾಖಲಿಸುವ ಮೂಲಕ ಚರಿತ್ರೆ ನಿರ್ಮಾಣವಾಗಿದೆ.
–ಡಾ.ಸಿ.ಎನ್. ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT