ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ನಿಮ್ಹಾನ್ಸ್ ‘ಉತ್ತರ ಶಾಖೆ’ ನಿರ್ಮಾಣ

Published 21 ಮೇ 2024, 0:30 IST
Last Updated 21 ಮೇ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಗೆ (ನಿಮ್ಹಾನ್ಸ್‌) ಬರುವ ರೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಇದರಿಂದಾಗಿ ನಗರದಲ್ಲಿ ಸಂಸ್ಥೆಯ ಶಾಖೆ ಪ್ರಾರಂಭದ ಪ್ರಸ್ತಾವ ಕೇಂದ್ರ ಸರ್ಕಾರದ ಮುಂದಿದ್ದು, ಅನುಮೋದನೆಗಾಗಿ ಸಂಸ್ಥೆಯ ಆಡಳಿತ ಮಂಡಳಿ ಎದುರು ನೋಡುತ್ತಿದೆ. 

ನಗರದಲ್ಲಿ ಸಂಸ್ಥೆಯ ಕಾರ್ಯವ್ಯಾಪ್ತಿ ವಿಸ್ತರಿಸಬೇಕೆಂಬ ಕೂಗು ಹಲವು ವರ್ಷಗಳಿಂದ ಇದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಲವು ತೋರಿದ್ದರಿಂದ ಸಂಸ್ಥೆಯು ಶಾಖೆ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಸ್ತಾವ ವನ್ನು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಸಲ್ಲಿಸಿತ್ತು. ಇದಕ್ಕೆ ಅನುಮೋದನೆ ನೀಡಿದ್ದ ಸಚಿವಾಲಯ, ವಿಸ್ತೃತ ಪ್ರಸ್ತಾವ ಸಲ್ಲಿಸಲು ಸೂಚಿಸಿತ್ತು. ಅದರಂತೆ ಸಂಸ್ಥೆಯು ಪ್ರಸ್ತಾವ ಸಲ್ಲಿಸಿದೆ. ಬಳಿಕ ಚುನಾವಣೆ ನೀತಿ ಸಂಹಿತೆ ಜಾರಿಯಾದ್ದರಿಂದ ನಿರ್ಮಾಣ ಕಾಮಗಾರಿಗೆ ಅನುಮೋದನೆ ಸಾಧ್ಯವಾಗಿಲ್ಲ. ಇದರಿಂದಾಗಿ ಹೊಸ ಸರ್ಕಾರ ರಚನೆ ಆಗುವವರೆಗೂ ಅನುಮೋದನೆಗೆ ಕಾಯಬೇಕಾಗಿದೆ. 

ನಗರದ ಲಕ್ಕಸಂದ್ರದಲ್ಲಿರುವ ಸಂಸ್ಥೆಯು ಮಾನಸಿಕ ಸಮಸ್ಯೆ ಹಾಗೂ ರಸ್ತೆ ಅಪಘಾತದಲ್ಲಿ ಗಾಯಗೊಂಡವರ ಚಿಕಿತ್ಸೆಗೆ ಪ್ರಸಿದ್ಧಿ ಪಡೆದಿದೆ. 1,096 ಹಾಸಿಗೆಗಳನ್ನು ಒಳಗೊಂಡಿದ್ದು, ದೇಶದ ವಿವಿಧೆಡೆಯಿಂದ ಚಿಕಿತ್ಸೆಗಾಗಿ ರೋಗಿಗಳು ಬರುತ್ತಿದ್ದಾರೆ. ಇದರಿಂದಾಗಿ ರೋಗಿಗಳ ದಟ್ಟಣೆ ಉಂಟಾಗುತ್ತಿದ್ದು, ಚಿಕಿತ್ಸೆಗೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಂಸ್ಥೆಯು ಚಿಕಿತ್ಸೆಯ ಜತೆಗೆ ಬೋಧನೆ ಹಾಗೂ ಸಂಶೋಧನೆಗೂ ಆದ್ಯತೆ ನೀಡಿದೆ. 

ಸ್ಥಳ ಗುರುತು: ಉತ್ತರ ಬೆಂಗಳೂರಿ ನಲ್ಲಿ ನಿಮ್ಹಾನ್ಸ್‌ ಶಾಖೆ ಪ್ರಾರಂಭಿಸುವ ಸಂಬಂಧ ರಾಜ್ಯ ಸರ್ಕಾರವು ಕ್ಯಾಸನಹಳ್ಳಿ ಯಲ್ಲಿ 40 ಎಕರೆ ಪ್ರದೇಶವನ್ನು ಗುರುತಿಸಿ ಹಲವು ದಿನಗಳು ಕಳೆದಿವೆ. ಅಲ್ಲಿ ಕಾಮಗಾರಿಯನ್ನು ಆದಷ್ಟು ಬೇಗ ಪ್ರಾರಂಭಿಸುವಂತೆ ಕೇಂದ್ರ ಸರ್ಕಾರಕ್ಕೂ ರಾಜ್ಯ ಸರ್ಕಾರ ಮನವಿ ಮಾಡಿದೆ. ನೂತನ ಶಾಖೆಯು 300 ಹಾಸಿಗೆಗಳನ್ನು ಒಳಗೊಳ್ಳಲಿದೆ. ಇದಕ್ಕೆ ಅನುಮೋದನೆ ದೊರೆತ ಮೂರು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಸೇವೆ ಪ್ರಾರಂಭಿಸಲು ಸಂಸ್ಥೆಯು ಕಾರ್ಯಯೋಜನೆ ರೂಪಿಸಿದೆ. ಇದಕ್ಕೆ ₹ 500 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. 

‘ಪ್ರಾರಂಭದಲ್ಲಿ 2,200 ಹಾಸಿಗೆಗಳ ಬೃಹತ್ ಆಸ್ಪತ್ರೆ ಯನ್ನು ನಿರ್ಮಿಸಲು ಕಾರ್ಯಯೋಜನೆ ರೂಪಿಸಲಾಗಿತ್ತು. ಬಳಿಕ ಯೋಜನೆ ಪರಿಷ್ಕರಿಸಿ, 300 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಯಿತು. ಚುನಾವಣೆ ನೀತಿ ಸಂಹಿತೆ ಜಾರಿಯಿಂದಾಗಿ ಸಂಸ್ಥೆಯ ಶಾಖೆ ನಿರ್ಮಾಣಕ್ಕೆ ಹಿನ್ನಡೆಯಾಯಿತು. ಹೊಸ ಸರ್ಕಾರ ರಚನೆಯಾದ ಬಳಿಕ ಅನುಮೋದನೆ ಪಡೆದು, ನಿರ್ಮಾಣ ಕಾಮಗಾರಿ ಪ್ರಾರಂಭಿಸಬೇಕಿದೆ’ ಎಂದು ಸಂಸ್ಥೆಯ ಉನ್ನತಾಧಿಕಾರಿಯೊಬ್ಬರು ತಿಳಿಸಿದರು.  

ಹೊರರೋಗಿಗಳ

ಸಂಖ್ಯೆ ಹೆಚ್ಚಳ

ಕೋವಿಡ್‌ ಅವಧಿಗೂ ಮೊದಲು ಸಂಸ್ಥೆಗೆ ಪ್ರತಿನಿತ್ಯ ಸರಾಸರಿ 1,400 ಹೊರರೋಗಿಗಳು ಬರುತ್ತಿದ್ದರು. 2020ರಲ್ಲಿ ಇಲ್ಲಿ ಕೋವಿಡ್ ಕಾಣಿಸಿಕೊಂಡ ಬಳಿಕ ಜೀವನ ವಿಧಾನ ಹಾಗೂ ದೈನಂದಿನ ಕಾರ್ಯಚಟುವಟಿಕೆ ಯಲ್ಲಿ ವ್ಯತ್ಯಯವಾಗಿತ್ತು. ಇದರಿಂದ ಮಾನಸಿಕ ಸಮಸ್ಯೆ ಎದುರಿಸುವವರ ಸಂಖ್ಯೆಯಲ್ಲಿಯೂ ಏರಿಕೆಯಾಗಿತ್ತು. ಉದ್ಯೋಗ ನಷ್ಟ, ಆರ್ಥಿಕ ಸಮಸ್ಯೆ, ಉದ್ಯೋಗದಲ್ಲಿನ ವಾತಾವರಣ ಬದಲಾವಣೆ, ಅತಿಯಾದ ಕೆಲಸದ ಒತ್ತಡ ಸೇರಿದಂತೆ ನಾನಾ ಕಾರಣಗಳಿಂದ ಮನೋರೋಗಿಗಳ ಸಂಖ್ಯೆ ಹೆಚ್ಚಳವಾಗಿದೆ. ಕೋವಿಡ್‌ಗೂ ಮೊದಲು ಪ್ರತಿನಿತ್ಯ ಸರಾಸರಿ 1,400 ಹೊರರೋಗಿಗಳು ಬರುತ್ತಿದ್ದರು. ಈಗ ಆ ಸಂಖ್ಯೆ 2 ಸಾವಿರಕ್ಕೆ ಏರಿಕೆಯಾಗಿದೆ.

ಬೆಂಗಳೂರು ಉತ್ತರದಲ್ಲಿ ಸಂಸ್ಥೆಯ ಶಾಖೆ ನಿರ್ಮಾಣ ಕುರಿತು ವಿಸ್ತೃತ ಪ್ರಸ್ತಾವವನ್ನು ಕೇಂದ್ರಕ್ಕೆ ಸಲ್ಲಿಸಿದ್ದು, ಅನುಮೋದನೆ ಸಿಕ್ಕ ಬಳಿಕ ಕೆಲಸ ಶುರುವಾಗಲಿದೆ.
- ಡಾ.ಪ್ರತಿಮಾಮೂರ್ತಿ,ನಿಮ್ಹಾನ್ಸ್ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT