ಗುರುವಾರ , ಮಾರ್ಚ್ 30, 2023
24 °C

ಕೋವಿಡ್: 980 ಗ್ರಾಂ ತೂಕದ ಶಿಶು ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿಗೆ ಒಳಗಾಗಿದ್ದ 980 ಗ್ರಾಂ ತೂಕದ ಗಂಡು ಶಿಶು ಸಂಪೂರ್ಣ ಚೇತರಿಸಿಕೊಂಡು, ತಾಯಿಯೊಂದಿಗೆ ಮನೆಗೆ ತೆರಳಿದೆ. 

ಆ.13ರಂದು ಖಾಸಗಿ ಆಸ್ಪತ್ರೆಯೊಂದರಲ್ಲಿ ಜನಿಸಿದ ಶಿಶು, ಕಡಿಮೆ ತೂಕ ಹೊಂದಿತ್ತು. ಹೆಚ್ಚಿನ ಆರೈಕೆಗಾಗಿ ಮಗುವನ್ನು ಅದೇ ದಿನ ವಾಣಿವಿಲಾಸ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆಸ್ಪತ್ರೆಯ ನವಜಾತ ಶಿಶುಗಳ ತುರ್ತು ನಿಗಾ ಘಟಕದಲ್ಲಿ (ಎನ್‌ಐಸಿಯು) ಶಿಶುವಿಗೆ ಚಿಕಿತ್ಸೆ ನೀಡಲಾಯಿತು. ಇದೇ ವೇಳೆ ತಾಯಿ ಹಾಗೂ ಮಗುವಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ತಾಯಿಗೆ ಸೋಂಕು ತಗುಲಿಲ್ಲ ಎಂಬ ವರದಿ ಬಂದಿತ್ತು. ಆದರೆ, ಶಿಶು ಕೋವಿಡ್ ಪೀಡಿತವಾಗಿತ್ತು. 

‘ಕೊರೊನಾ ಸೋಂಕಿತ ಶಿಶುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಿ, ಚಿಕಿತ್ಸೆ ನೀಡಲಾಯಿತು. ಅವಧಿ ಪೂರ್ವ ಜನನದಿಂದಾಗಿ ಕಡಿಮೆ ತೂಕ ಹೊಂದಿದ್ದ ಶಿಶುವು  ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿತ್ತು. ಈ ವೇಳೆ ಸೋಂಕು ಕೂಡ ತಗುಲಿದ ‍ಪರಿಣಾಮ ಚಿಕಿತ್ಸೆ ನೀಡುವುದು ಸವಾಲಾಗಿತ್ತು. ಆದರೆ, ಸೋಂಕಿನ ಲಕ್ಷಣಗಳು ಬಹಿರಂಗವಾಗಿ ಗೋಚರಿಸುತ್ತಿರಲಿಲ್ಲ. ಇದರಿಂದಾಗಿ ಬೇಗ ಚೇತರಿಸಿಕೊಂಡಿತು’ ಎಂದು ವಾಣಿವಿಲಾಸ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಕೆ. ಮಲ್ಲೇಶ್ ತಿಳಿಸಿದರು.

‘ಕಾಯಿಲೆ ನಿವಾರಣೆಗೆ ಚಿಕಿತ್ಸೆ ನೀಡುವ ಜತೆಗೆ ಶಿಶುವಿಗೆ ಅಗತ್ಯವಾದಷ್ಟು ತಾಯಿಯ ಎದೆಹಾಲು ನೀಡಲಾಯಿತು. ನಿಗದಿತ ಅವಧಿಯ ಬಳಿಕ ಮತ್ತೆ ಕೋವಿಡ್ ಪರೀಕ್ಷೆ ನಡೆಸಿದಾಗ ಕಾಯಿಲೆ ವಾಸಿಯಾಗಿರುವುದು ದೃಢಪಟ್ಟಿತು. ಬಳಿಕ ವಾಣಿವಿಲಾಸ ಆಸ್ಪತ್ರೆಯ ಎನ್‌ಐಸಿಯುಗೆ ಸ್ಥಳಾಂತರಿಸಿ, ತಾಯಿಗೆ ನೇರವಾಗಿ ಸ್ತನ್ಯಪಾನ ಮಾಡಿಸಲು ಅವಕಾಶ ನೀಡಲಾಯಿತು. ಆಸ್ಪತ್ರೆಯಿಂದ ತೆರಳುವ ವೇಳೆಗೆ ಶಿಶುವಿನ ತೂಕ 1 ಕೆ.ಜಿ 250 ಗ್ರಾಂಗೆ ಹೆಚ್ಚಳವಾಗಿತ್ತು. ಮಗುವಿನ ಮಿದುಳಿನ ಬೆಳವಣಿಗೆ ಕೂಡ ಉತ್ತಮವಾಗಿತ್ತು. ಸಂಪೂರ್ಣ ಚೇತರಿಸಿಕೊಂಡಿರುವುದನ್ನು ಖಾತ್ರಿಪಡಿಸಿಕೊಂಡ ಬಳಿಕವೇ ಮನೆಗೆ ಕಳುಹಿಸಲಾಯಿತು’ ಎಂದು ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.