ಶನಿವಾರ, ಅಕ್ಟೋಬರ್ 24, 2020
23 °C

ಬೆಂಗಳೂರು: ಕೆಪಿಟಿಸಿಎಲ್ ವಿದ್ಯುತ್ ಸ್ಥಾವರದಲ್ಲಿ ಸ್ಫೋಟ, ಐವರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ದೊಡ್ಡಬಳ್ಳಾಪುರ ರಸ್ತೆಯಲ್ಲಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ವಿದ್ಯುತ್ ಸ್ಥಾವರದಲ್ಲಿ ಶುಕ್ರವಾರ ನಸುಕಿನಲ್ಲಿ ಸ್ಫೋಟ ಸಂಭವಿಸಿದ್ದು, ಐವರು ಉದ್ಯೋಗಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ.

ಯಲಹಂಕ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸ್ಥಾವರ ಇದೆ. ಇಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ.

'ರಾತ್ರಿ ಪಾಳಿಯಲ್ಲಿ ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು. ನಸುಕಿನ 3.30ರ ಸುಮಾರಿಗೆ ಗ್ಯಾಸ್ ಸೋರಿಕೆಯಾಗಿ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿತ್ತು' ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ಹೇಳಿದರು.

'ಸ್ಥಾವರದಲ್ಲೇ ಇದ್ದ ಸಿಬ್ಬಂದಿ, ಭಾಗಶಃ ಬೆಂಕಿ ನಂದಿಸಿದ್ದರು. ಗಾಯಾಳುಗಳನ್ನು ಅವರೇ ಆಸ್ಪತ್ರೆಗೆ ಕರೆದೊಯ್ದಿದ್ದರು. ಹೆಚ್ಚುವರಿ ವಾಹನಗಳು ಸ್ಥಾವರಕ್ಕೆ ಹೋಗಿ ಪೂರ್ತಿ ಬೆಂಕಿ ಆರಿಸಲಾಗಿದೆ' ಎಂದೂ ತಿಳಿಸಿದರು.

'ಬೆಳಿಗ್ಗೆ 3.30ರ ಸುಮಾರಿಗೆ ದೊಡ್ಡ ಶಬ್ಧ ಕೇಳಿಸಿತ್ತು. ಮನೆಯಿಂದ ಹೊರಗೆ‌ ಬಂದು ನೋಡಿದಾಗ ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಪೊಲೀಸ್ ಠಾಣೆ ಹಾಗೂ ಅಗ್ನಿಶಾಮಕ ದಳದ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಿದೆವು' ಎಂದು ಯಲಹಂಕ ಉಪನಗರ ನಿವಾಸಿಯೊಬ್ಬರು ಹೇಳಿದರು.

ಆಸ್ಪತ್ರೆಗೆ ಅಲೆದಾಟ; ಗಾಯಾಳುಗಳನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅಲ್ಲಿ ಬೆಡ್ ಇಲ್ಲದ ಕಾರಣಕ್ಕೆ ವಾಪಸು ಕಳುಹಿಸಿದರು. ಮತ್ತೊಂದು ಆಸ್ಪತ್ರೆಗೆ ಹೋದರೂ ಗಾಯಾಳುಗಳಿಗೆ ಚಿಕಿತ್ಸೆ ಸಿಗಲಿಲ್ಲ ಎಂದು ಗೊತ್ತಾಗಿದೆ.

ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಗೋಗರೆಯುತ್ತಿದ್ದ  ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು