ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ತೆರೆದುಕೊಳ್ಳಲಿದೆ ತಂತ್ರಜ್ಞಾನ ಲೋಕ

ಅಂತರರಾಷ್ಟ್ರೀಯ ತಂತ್ರಜ್ಞಾನ ಶೃಂಗ ಇಂದಿನಿಂದ
Last Updated 19 ನವೆಂಬರ್ 2019, 2:18 IST
ಅಕ್ಷರ ಗಾತ್ರ

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅತಿದೊಡ್ಡ ಕಾರ್ಯಕ್ರಮ ಎಂದೇ ಪರಿಗಣಿಸಲಾದ ಅಂತರರಾಷ್ಟ್ರೀಯ ತಾಂತ್ರಿಕ ಶೃಂಗವು ಬೆಂಗಳೂರು ಅರಮನೆ ಮೈದಾನದಲ್ಲಿ ಸೋಮವಾರದಿಂದ ಆರಂಭವಾಗಲಿದೆ. ಮೂರು ದಿನಗಳವರೆಗೆ (ನ.18–20) ನಡೆಯುವ ಈ ಮೇಳದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಅಭಿವೃದ್ಧಿ ಮತ್ತು ಸಂಶೋಧನೆಗಳ ಪ್ರಗತಿ ಮತ್ತು ಮುನ್ನೋಟ ಅನಾವರಣಗೊಳ್ಳಲಿದೆ.

ಅಮೆರಿಕ, ಆಸ್ಟ್ರೇಲಿಯಾ, ಜಪಾನ್, ಜರ್ಮನಿ, ಫ್ರಾನ್ಸ್‌,ಬೆಲ್ಜಿಯಂ,ಡೆನ್ಮಾರ್ಕ್‌ ಸೇರಿದಂತೆ ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದು, ತಂತ್ರಜ್ಞಾನ ಕ್ಷೇತ್ರದ ಹೊಸ ಆವಿಷ್ಕಾರಗಳು ಅನಾವರಣಗೊಳ್ಳಲಿವೆ. ವಿದ್ಯಾರ್ಥಿಗಳಿಗೆ ರೋಬೊಟಿಕ್ ಪ್ರೀಮಿಯರ್ ಲೀಗ್‌ ಹಮ್ಮಿಕೊಂಡಿದ್ದು, 200ಕ್ಕೂ ಅಧಿಕ ಮಂದಿ ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ತಂತ್ರಜ್ಞರು ಮತ್ತು ಈ ಕ್ಷೇತ್ರದ ಸಾಧಕರ ಜೊತೆ ಜೊತೆಗೆ ವಿದ್ಯಾರ್ಥಿಗಳು ಹಾಗೂ ಸಂದರ್ಶಕರು ಸಂವಾದ ನಡೆಸಲು ಅವಕಾಶ ಕಲ್ಪಿಸಲಾಗಿದೆ.

ಸಮಾವೇಶದ ಸಿದ್ಧತೆ ಪರಿಶೀಲಿಸಿದ ಬಳಿಕ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ‘ವಿದ್ಯಾರ್ಥಿಗಳು ಮತ್ತು ಉದ್ಯಮಿಗಳ ಪ್ರೋತ್ಸಾಹ ನೀಡುವ ವೇದಿಕೆಯಾಗಿ ಮೇಳ ಕಾರ್ಯನಿರ್ವಹಿಸಲಿದೆ. 20ಕ್ಕೂ ಹೆಚ್ಚಿನ ಜೈವಿಕ ತಂತ್ರಜ್ಞಾನ ನವೋದ್ಯಮಗಳು ಶೃಂಗದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ’ ಎಂದರು.

‘ಐಟಿ ಬಿಟಿ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಬೆಂಗಳೂರು4ನೇ ಅತಿ ದೊಡ್ಡ ತಂತ್ರಜ್ಞಾನದ ಸಮೂಹವಾಗಿ ಹೊರಹೊಮ್ಮಿದೆ. ಕೃತಕ ಬುದ್ಧಿಮತ್ತೆ, ಬ್ಲಾಕ್‌ಚೈನ್, ಸೈಬರ್ ಭದ್ರತೆ, ವಿದ್ಯುತ್ ವಾಹನಗಳು, ಡ್ರೋನ್‌, ಕೃಷಿಯಲ್ಲಿ ತಂತ್ರಜ್ಞಾನ, ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ತಂತ್ರಜ್ಞಾನಗಳ ಮೂಲಕ ಚಿಕಿತ್ಸೆ ಸೇರಿದಂತೆ ವಿವಿಧ ವಿಷಯಗಳ ಮೇಲೆ ಚರ್ಚೆ ನಡೆಯಲಿವೆ’ ಎಂದು ತಿಳಿಸಿದರು.

ನವೋದ್ಯಮ ನೀತಿ:‘ನವೋದ್ಯಮಗಳಲ್ಲಿ ಯುವಕರು ಮತ್ತು ತಂತ್ರಜ್ಞರು ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಇವುಗಳನ್ನು ಉತ್ತೇಜಿಸಲು ಪ್ರತ್ಯೇಕ ವಿಷನ್‌ ಗ್ರೂಪ್‌ ರಚನೆ ಮಾಡಲಾಗುತ್ತಿದೆ. ಈ ವಲಯದಲ್ಲಿ ಕಾನೂನಿನ ಅಡೆ–ತಡೆಗಳು ಹೆಚ್ಚಾಗಿವೆ. ಈ ನಿಟ್ಟಿನಲ್ಲಿ ನವೋದ್ಯಮ ನೀತಿ–2019 ರೂಪಿಸಲಾಗುತ್ತಿದ್ದು, ಸದ್ಯದಲ್ಲಿಯೇ ಘೋಷಿಸಲಾಗುವುದು’ ಎಂದು ಅಶ್ವತ್ಥನಾರಾಯಣ ತಿಳಿಸಿದರು.

‘ರಾಜ್ಯದ ಉದ್ದಗಲಕ್ಕೂ ಈ ನವೋದ್ಯಮ ಬೆಳವಣಿಗೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಅಲ್ಲದೆ, ರಾಜ್ಯದ ಹಲವು ಕಡೆಗೆ ಸಾಫ್ಟ್‌ವೇರ್‌ ಪಾರ್ಕ್‌ ನಿರ್ಮಿಸಲಾಗಿದೆ. ಸಂಶೋಧನೆ ಮತ್ತು ಅಭಿವೃದ್ಧಿ ವಲಯದಲ್ಲಿ ಹೆಚ್ಚು ಅವಕಾಶಗಳು ಮತ್ತು ಬೇಡಿಕೆ ಇದ್ದು, ಈ ನಿಟ್ಟಿನಲ್ಲಿ ತಂತ್ರಜ್ಞಾನ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು’ ಎಂದರು.

‘ಸೈಬರ್‌ ಸುರಕ್ಷತೆಗೆ ಆದ್ಯತೆ’

‘ಸೈಬರ್‌ ಅಪರಾಧ ತಡೆ ಇಂದು ಎಲ್ಲ ದೇಶಗಳಿಗೂ ದೊಡ್ಡ ಸವಾಲಾಗಿದೆ. ಒಂದೊಂದು ದೇಶವು ಸೈಬರ್‌ ಸುರಕ್ಷತೆ ಕ್ಷೇತ್ರ ಒಂದರಿಂದಲೇ ₹15 ಸಾವಿರ ಕೋಟಿ ವಹಿವಾಟು ನಡೆಸುತ್ತಿವೆ. ಸವಾಲಿನ ಜೊತೆಗೆ ಅವಕಾಶಗಳು ಹೆಚ್ಚಾಗಿದ್ದು, ಸೈಬರ್‌ ಅಪರಾಧ ನಿರ್ವಹಣೆ ಮತ್ತು ತಡೆಗೆ ಹೆಚ್ಚು ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ’ ಎಂದು ಅಶ್ವತ್ಥ ನಾರಾಯಣ ಹೇಳಿದರು.

‘ಸೈಬರ್‌ ಅಪರಾಧ ತಡೆಯುವ ನಿಟ್ಟಿನಲ್ಲಿ ಸಾಕಷ್ಟು ಅನ್ವೇಷಣೆಗಳನ್ನು ಮತ್ತು ಸುಧಾರಣೆಗಳನ್ನು ರಾಜ್ಯ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಮಾಡುತ್ತಿದೆ’ ಎಂದು ಅವರು ತಿಳಿಸಿದರು.

ಅಂಕಿಸಂಖ್ಯೆ

ಮೇಳದಲ್ಲಿ ಭಾಗವಹಿಸಲಿರುವ ವಿವಿಧ ರಾಜ್ಯ–ದೇಶಗಳ ಪ್ರತಿನಿಧಿಗಳ ಸಂಖ್ಯೆ3,500. ಒಟ್ಟು ಸಂದರ್ಶಕರು12,000. ಭಾಗವಹಿಸಲಿರುವ ತಂತ್ರಜ್ಞರು200.ಮೇಳದಲ್ಲಿ ಒಟ್ಟು36 ಗೋಷ್ಠಿಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT