ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಗ ಶಕ್ತ್ಯೋತ್ಸವ, ಸಂಭ್ರಮದ ಮಹಾರಥೋತ್ಸವ

Published 23 ಏಪ್ರಿಲ್ 2024, 22:32 IST
Last Updated 23 ಏಪ್ರಿಲ್ 2024, 22:32 IST
ಅಕ್ಷರ ಗಾತ್ರ

ಬೆಂಗಳೂರು: ಚೈತ್ರ ಪೌರ್ಣಮಿಯ ಬೆಳಕಿನಲ್ಲಿ ನಗರದ ಹೃದಯ ಭಾಗದ ರಸ್ತೆಗಳು ವಿದ್ಯುತ್‌ ದೀಪಗಳಿಂದ ರಂಗೇರಿದ್ದವು. ಹಸಿರು ತೋರಣ, ಹೂವಿನ ಅಲಂಕಾರ, ಗೋವಿಂದ... ಗೋವಿಂದ ಎಂಬ ಜಪ ಮಂಗಳವಾರದ ಸಂಜೆಯಿಂದಲೇ ಕೇಳಿಬರುತ್ತಿತ್ತು...

ದ್ರೌಪದಿದೇವಿ ಕರಗ ಶಕ್ತ್ಯೋತ್ಸವದ (ಬೆಂಗಳೂರು ಕರಗ) ಅಂಗವಾಗಿ ತಿಗಳರಪೇಟೆ, ನಗರ್ತಪೇಟೆ, ಕಬ್ಬನ್‌ಪೇಟೆ, ಗಾಣಿಗರ ಪೇಟೆ, ದೊಡ್ಡಪೇಟೆಯ ಮುಖ್ಯ ರಸ್ತೆ ಹಾಗೂ ಗಲ್ಲಿಗಲ್ಲಿಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ದೇವಸ್ಥಾನ ಹಾಗೂ ಮನೆಗಳ ಮುಂದೆ ನೀರು ಹಾಕಿ, ಸಾರಿಸಿ, ರಂಗೋಲಿ ಹಾಕುವ ಸಡಗರ ಮಂಗಳವಾರ ಬೆಳಿಗ್ಗೆಯಿಂದಲೇ ಇತ್ತು. ಪ್ರಸಿದ್ಧ ಹೂವಿನ ಕರಗವನ್ನು ಕಣ್ತುಂಬಿಕೊಳ್ಳಲು, ಮಲ್ಲಿಗೆ ಹೂವನ್ನು ಚೆಲ್ಲಲು ಪೇಟೆಗಳ ಇಕ್ಕೆಲಗಳಲ್ಲಿ ಜನರು ಸೇರಿದ್ದರು.

ದ್ರೌಪದಿದೇವಿ ಕರಗ ಶಕ್ತ್ಯೋತ್ಸವ ಅಂಗವಾಗಿ ನಗರದ ಪೇಟೆ ಬೀದಿಗಳಲ್ಲಿ ಏಪ್ರಿಲ್‌ 15ರಿಂದಲೇ ಸಿದ್ದತೆಗಳು ನಡೆದಿದ್ದವು. ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು, ಧಾರ್ಮಿಕ ವಿಧಿ–ವಿಧಾನಗಳು ನಡೆಯುತ್ತಿದ್ದವು. ಭಾನುವಾರ ತಡರಾತ್ರಿ ಹಸಿ ಕರಗದ ಪೂಜೆ ನಡೆದು, ಸಂಪಂಗಿ ಕೆರೆಯ ಶಕ್ತಿಪೀಠದಿಂದ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಹಸಿ ಕರಗವನ್ನು ಅರ್ಚಕ ಜ್ಞಾನೇಂದ್ರ ಮೆರಣಿಗೆಯಲ್ಲಿ ಹೊತ್ತು ತಂದಿದ್ದರು.

ಮಂಗವಾರ ತಡರಾತ್ರಿ ನಡೆಯುವ ಹೂವಿನ ಕರಗದ ಹಿನ್ನೆಲೆಯಲ್ಲಿ ಧರ್ಮರಾಯಸ್ವಾಮಿ ದೇವಸ್ಥಾನ ಹೊರಭಾಗದಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಕರ್ಪೂರ ಸೇವೆ ನಡೆಯಿತು. ವರ್ಷಗಳಿಂದ ಹರಕೆ ಮಾಡಿಕೊಂಡವರು, ಅದನ್ನು ತೀರಿಸಲು ಸಣ್ಣ ಗಾತ್ರದ ಕರ್ಪೂರ ಸೇರಿದಂತೆ ಬೃಹತ್‌ ಗಾತ್ರದ ಕರ್ಪೂರಗಳ ಆರತಿ ಮಾಡಿದರು. ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಕರ್ಪೂರದಾರತಿ ನಡೆದು, ಸುತ್ತಮುತ್ತಲ ರಸ್ತೆಗಳಲ್ಲಿ ಕರ್ಪೂರದ ಘಮ ವ್ಯಾಪಿಸಿತ್ತು.

ಎಲ್ಲ ವಯೋಮಾನದ ವೀರಕುಮಾರರು ಸಹಸ್ರ ಸಂಖ್ಯೆಯಲ್ಲಿ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಸಂಜೆಯಿಂದಲೇ ಬಂದು ಸೇರಿಕೊಂಡಿದ್ದರು. ಕರಗ ಸಾಗಿದ ನಂತರ ಆರಂಭಗೊಳ್ಳುವ ಧರ್ಮರಾಯಸ್ವಾಮಿ ಮಹಾರಥೋತ್ಸವದ ಹಿಂದೆ ಸಾಗಲು ನಗರದ ವಿವಿಧ ಭಾಗಗಳಿಂದ ಆಗಮಿಸಿದ್ದ 50ಕ್ಕೂ ಹೆಚ್ಚು ತೇರುಗಳು ಜೆ.ಸಿ.ರಸ್ತೆ, ಟೌನ್‌ಹಾಲ್‌ಗಳ ಬಳಿ ಸಜ್ಜಾಗಿ ನಿಂತಿದ್ದವು.

ಮಧ್ಯರಾತ್ರಿ ಸರಿದ ಮೇಲೆ ಮಲ್ಲಿಗೆಯ ಹೂವಿನಿಂದ ಕೂಡಿದ್ದ ಕರಗ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಆರಂಭಿಸಿತು. ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಬಂದಿದ್ದ ಸಾವಿರಾರು ಭಕ್ತರು ಉತ್ಸವಕ್ಕೆ ಸಾಕ್ಷಿಯಾದರು. ಎಲ್ಲ ಪೇಟೆಗಳು ಹಾಗೂ ಕರಗ ಸಾಗುವ ಮುಖ್ಯರಸ್ತೆ, ಅಡ್ಡರಸ್ತೆಗಳಲ್ಲಿ ಪಲಾವ್‌, ಬಿಸಿಬೇಳೆಬಾತ್‌, ಪೊಂಗಲ್‌ ಸೇರಿದಂತೆ ವಿವಿಧ ರೀತಿಯ ಭಕ್ಷ್ಯಗಳನ್ನು ವಿತರಿಸಲಾಯಿತು. ಪಾನಕ, ಮಜ್ಜಿಗೆಯನ್ನೂ ಕರಗ ನೋಡಲು ಬಂದ ಭಕ್ತರಿಗೆ ನೀಡಲಾಯಿತು.

ಜಾತ್ರೆ: ಎಲೆಕ್ಟ್ರಾನಿಕ್‌ ಹಾಗೂ ಕಂಪ್ಯೂಟರ್‌ ಬಿಡಿಭಾಗಗಳಿಗೆ ಪ್ರಸಿದ್ಧವಾಗಿರುವ ಎಸ್‌.ಪಿ ರಸ್ತೆಯ ಇಕ್ಕೆಲಗಳಲ್ಲಿ ಮಂಗಳವಾರ ಸಂಜೆಯಿಂದ ವ್ಯಾಪಾರ ವಿಭಿನ್ನವಾಗಿತ್ತು. ಆಟಿಕೆ, ಫ್ಯಾನ್ಸಿ ವಸ್ತುಗಳು, ತಿಂಡಿ ತಿನಿಸುಗಳ ವ್ಯಾಪಾರವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT