ಬೆಂಗಳೂರು: ‘ಕಂದಾಯ ಇಲಾಖೆಯ ಎಲ್ಲ ನೌಕರರು ನಿತ್ಯ ಬೆಳಿಗ್ಗೆ 10.30ರ ಒಳಗೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗಬೇಕು. ಕಚೇರಿಯಿಂದ ಸಂಜೆ ತೆರಳುವಾಗ ತಮ್ಮ ಶಾಖೆಯ ಸಂಬಂಧಪಟ್ಟ ಜಂಟಿ ಅಥವಾ ಉಪ ಕಾರ್ಯದರ್ಶಿಯ ಅನುಮತಿ ಪಡೆಯಬೇಕು’ ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಫರ್ಮಾನು ಹೊರಡಿಸಿದ್ದಾರೆ.
‘ಈ ಸೂಚನೆಯನ್ನು ಎಲ್ಲ ನೌಕರರು ಪಾಲಿಸಲೇಬೇಕು. ಪಾಲಿಸದವರ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಟಿಪ್ಪಣಿ ಹೊರಡಿಸಿರುವ ಕಟಾರಿಯಾ, ನಿಗದಿತ ವೇಳೆಯಲ್ಲಿ ಕಚೇರಿಗೆ ಹಾಜರಾಗಬೇಕೆಂದು ಸೂಚಿಸಲು ಕಾರಣವಾದ ಅಂಶವನ್ನೂ ವಿವರಿಸಿದ್ದಾರೆ.
‘ಇಲಾಖೆಯ ಅಧೀನ ಶಾಖೆಗಳಿಗೆ ಹಲವಾರು ಬಾರಿ ನಾನು ಬೆಳಿಗ್ಗೆ 10.45ಕ್ಕೆ ತಪಾಸಣೆಗೆಂದು ಭೇಟಿ ನೀಡಿದಾಗ ಶಾಖೆಯ ಅಧಿಕಾರಿ, ಸಿಬ್ಬಂದಿ ವರ್ಗದವರು ಕರ್ತವ್ಯಕ್ಕೆ ಇನ್ನೂ ಹಾಜರಾಗರಾಗಿರಲಿಲ್ಲ. ಅಲ್ಲದೆ, ಕಚೇರಿಯ ತುರ್ತು ಕೆಲಸ ನಿರ್ವಹಣೆಗೆ ಸಂಜೆ ವೇಳೆಯಲ್ಲಿ ಸಿಬ್ಬಂದಿಯನ್ನು ಕರೆದಾಗಲೂ ಕಚೇರಿಯಿಂದ ಅತೀ ಬೇಗ ನಿರ್ಗಮಿಸಿರುವುದು ಕಂಡುಬಂದಿದೆ. ಇದರಿಂದ ಕಚೇರಿ ಕೆಲಸಕ್ಕೆ ಅಡ್ಡಿಯಾಗುತ್ತಿದೆ. ಸಾರ್ವಜನಿಕರು ಟಪಾಲು, ಕಡತ ವಿಚಾರಣೆಗಾಗಿ ಬಂದಾಗ ವಿನಾಕಾರಣ ಕಾಲಹರಣ ಮಾಡುತ್ತಿರುವುದು, ಗಂಟೆಗಟ್ಟಲೆ ಟೀ, ಕಾಫಿ, ಉಪಾಹಾರ ಸೇವನೆಗೆಂದು ಕಚೇರಿ ಬಿಟ್ಟು ಹೋಗುವುದು, ಸಂತೆ ಬೀದಿಗಳಲ್ಲಿ ಓಡಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇನ್ನು ಮುಂದೆ ಈ ರೀತಿಯ ವರ್ತನೆ ಪುನರಾವರ್ತನೆಯಾದರೆ ಅಂಥ ನೌಕರರ ವಿರುದ್ಧ ಕ್ರಮಕೈಗೊಳ್ಳಲಾಗುವುದು’ ಎಂದೂ ಟಿಪ್ಪಣಿಯಲ್ಲಿ ಅವರು ಉಲ್ಲೇಖಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.