ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ರೇವ್ ಪಾರ್ಟಿ: ತೆಲುಗು ನಟಿ ಹೇಮಾ ಸೇರಿ 86 ಮಂದಿ ಡ್ರಗ್ಸ್ ಸೇವನೆ ದೃಢ

Published 23 ಮೇ 2024, 13:09 IST
Last Updated 23 ಮೇ 2024, 13:09 IST
ಅಕ್ಷರ ಗಾತ್ರ

ಬೆಂಗಳೂರು:ಬೆಂಗಳೂರು: ‘ಹೆಬ್ಬಗೋಡಿ ಬಳಿಯ ಹುಸ್ಕೂರು ಸಮೀಪದಲ್ಲಿರುವ ಜಿ.ಆರ್. ಫಾರ್ಮ್‌ ಹೌಸ್‌ನಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ 86 ಮಂದಿ ಡ್ರಗ್ಸ್ ಸೇವನೆ ಮಾಡಿದ್ದರು’ ಎಂಬ ಮಾಹಿತಿ ವೈದ್ಯಕೀಯ ವರದಿಯಿಂದ ಗೊತ್ತಾಗಿದೆ.

‘ಸನ್‌ಸೆಟ್‌ ಟು ಸನ್‌ರೈಸ್ ವಿಕ್ಟರಿ’ ಹೆಸರಿನಲ್ಲಿ ಮೇ 19ರಂದು ರೇವ್‌ ಪಾರ್ಟಿ ಆಯೋಜಿಸಲಾಗಿತ್ತು. ತೆಲುಗು ಸಿನಿಮಾ ನಟಿ ಹೇಮಾ ಸೇರಿ ಹಲವರು ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಸಿಸಿಬಿ ಪೊಲೀಸರು ದಾಳಿ ಮಾಡಿ, 103 ಮಂದಿಯನ್ನು ವಶಕ್ಕೆ ಪಡೆದಿದ್ದರು. ಡ್ರಗ್ಸ್ ಸಹ ಜಪ್ತಿ ಮಾಡಿದ್ದರು.


ರೇವ್ ಪಾರ್ಟಿ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ, ರೇವ್ ಪಾರ್ಟಿ ನಡೆಸಿದ್ದ ಫಾರ್ಮ್‌ಹೌಸ್ ಹೆಬ್ಬಗೋಡಿ ಠಾಣೆ ವ್ಯಾಪ್ತಿಯಲ್ಲಿರುವುದು ಪರಿಶೀಲನೆಯಿಂದ ಗೊತ್ತಾಗಿತ್ತು. ಹೀಗಾಗಿ, ಪ್ರಕರಣವನ್ನು ಹೆಬ್ಬಗೋಡಿ ಠಾಣೆಗೆ ವರ್ಗಾಯಿಸಲಾಗಿತ್ತು.


ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ‘ರೇವ್ ಪಾರ್ಟಿ ಸಂಬಂಧ ಬೆಂಗಳೂರು ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಬೇಕು’ ಎಂದು ಆದೇಶ ಹೊರಡಿಸಿದ್ದಾರೆ. ಹೀಗಾಗಿ, ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ಕೈಗೆತ್ತಿಕೊಂಡಿದ್ದಾರೆ.


ಸಿಂಥೆಟಿಕ್ ಡ್ರಗ್ಸ್ ಸೇವನೆ ವರದಿ: ‘ಪಾರ್ಟಿಯಲ್ಲಿ ಪಾಲ್ಗೊಂಡಿದ್ದ 103 ಮಂದಿಯನ್ನು ವಶಕ್ಕೆ ಪಡೆದು, ಸಿಂಥೆಟಿಕ್ ಡ್ರಗ್ಸ್ ತೆಗೆದುಕೊಂಡಿದ್ದ ಅನುಮಾನದಡಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ವೈದ್ಯರು, ಎಲ್ಲರ ರಕ್ತದ ಮಾದರಿ ಸಂಗ್ರಹಿಸಿದ್ದರು. ವಿಶೇಷ ಪ್ರಕರಣವೆಂದು ಪರಿಗಣಿಸಿದ್ದ ವೈದ್ಯರು, ತ್ವರಿತಗತಿಯಲ್ಲಿ ವರದಿ ಸಿದ್ಧಪಡಿಸಿ ಸಿಸಿಬಿಗೆ ಸಲ್ಲಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.


‘103 ಜನರ ಪೈಕಿ ನಟಿ ಹೇಮಾ ಸೇರಿ 86 ಮಂದಿ ಡ್ರಗ್ಸ್ ತೆಗೆದುಕೊಂಡಿದ್ದರು’ ಎಂಬುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. 73 ಪುರುಷರ ಪೈಕಿ 59 ಪುರುಷರಲ್ಲಿ ಹಾಗೂ 30 ಮಹಿಳೆಯರ ಪೈಕಿ 27 ಮಹಿಳೆಯರ ರಕ್ತದ ಮಾದರಿಯಲ್ಲಿ ಡ್ರಗ್ಸ್ ಅಂಶ ಪತ್ತೆಯಾಗಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.


‘ಡ್ರಗ್ಸ್ ಗ್ರಾಹಕ’ರೆಂದು ಎಫ್‌ಐಆರ್:

‘ಡ್ರಗ್ಸ್ ಸಾಗಣೆ ಹಾಗೂ ಮಾರಾಟದ ಜೊತೆಯಲ್ಲಿ ಸೇವನೆಯೂ ಅಪರಾಧವಾಗಿದೆ. ವೈದ್ಯಕೀಯ ವರದಿ ಆಧರಿಸಿ ನಟಿ ಹೇಮಾ ಸೇರಿ 86 ಮಂದಿಯನ್ನು ‘ಡ್ರಗ್ಸ್ ಗ್ರಾಹಕರು’ ಎಂಬುದಾಗಿ ಪರಿಗಣಿಸಿ ಎಫ್‌ಐಆರ್‌ನಲ್ಲಿ ಹೆಸರು ನಮೂದಿಸಲಾಗುವುದು. ಜೊತೆಗೆ, ಎಲ್ಲರಿಗೂ ಪುನಃ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT