ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಸ್ಯಾಂಕಿ ರಸ್ತೆಗೆ ಬೇಕೆ ‘ಮೇಲ್ಸೇತುವೆ’ ಕುಣಿಕೆ?

Last Updated 2 ಮಾರ್ಚ್ 2023, 4:31 IST
ಅಕ್ಷರ ಗಾತ್ರ

ಬೆಂಗಳೂರು: ಸಂಚಾರ ದಟ್ಟಣೆ ನಿವಾರಣೆಗೆ ಮೇಲ್ಸೇತುವೆ ನಿರ್ಮಾಣ ಮಾಡಬೇಕು, ಇದಕ್ಕಾಗಿ ಕೆರೆಯ ಏರಿಯನ್ನೂ ವಿಸ್ತರಿಸಲಾಗುತ್ತದೆ ಎಂದು ಬಿಬಿಎಂಪಿ ಸ್ಯಾಂಕಿ ರಸ್ತೆಯಲ್ಲಿ ಕಾಮಗಾರಿಗೆ ಮುಂದಾಗಿದೆ. ಮೇಲ್ಸೇತುವೆ ನಿರ್ಮಾಣದಿಂದ ಸುಗಮ ಸಂಚಾರ ಸಾಧ್ಯವಾಗುವುದಿಲ್ಲ, ಬದಲಿಗೆ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಸ್ಥಳೀಯ ನಿವಾಸಿಗಳು ಉದಾಹರಣೆ ಸಹಿತ ವಿವರಿಸುತ್ತಿದ್ದಾರೆ. ಆದರೂ ನಾಗರಿಕರ ಸೇವೆಗಳನ್ನು ನೀಡಬೇಕಾದ ಬಿಬಿಎಂಪಿ ಕೇಳುತ್ತಿಲ್ಲ...

ನಗರದ ಪ್ರತಿಷ್ಠಿತ ಸ್ಯಾಂಕಿ ಕೆರೆ ಏರಿ ಮೇಲಿನ ರಸ್ತೆಯ ವಿಸ್ತರಣೆ ಹಾಗೂ ಆ ಕಾಮಗಾರಿಗೆ ಹೆಚ್ಚುವರಿಯಾಗಿ ಮೇಲ್ಸೇತುವೆ ನಿರ್ಮಾಣ ತೀವ್ರ ವಿವಾದಕ್ಕೆ ಗುರಿಯಾಗಿದೆ. ಸ್ಥಳೀಯ ನಿವಾಸಿಗಳು ‘ಸ್ಯಾಂಕಿ ಕೆರೆ ತಂಡ’ವಾಗಿ ಈ ಮೇಲ್ಸೇತುವೆ, ರಸ್ತೆ ವಿಸ್ತರಣೆ ಬೇಡ ಎನ್ನುತ್ತಿದ್ದಾರೆ. ಪ್ರತಿಭಟನೆ, ರ‍್ಯಾಲಿ, ಕಪ್ಪುಬಟ್ಟೆ ಪ್ರದರ್ಶನವನ್ನು ನಿತ್ಯವೂ ಮಾಡುತ್ತಿದ್ದಾರೆ. ಆದರೆ, ಬಿಬಿಎಂಪಿ ಅಧಿಕಾರಿಗಳು ತಮ್ಮ ಪಟ್ಟು ಬಿಡದೆ ಮೇಲ್ಸೇತುವೆಯನ್ನು ಮಾಡಿಯೇ ತೀರುತ್ತೇವೆ ಎನ್ನುತ್ತಿದ್ದಾರೆ. ನಾಗರಿಕರ ಹಿತರಕ್ಷಣೆ ಕಾಪಾಡಬೇಕಾದ, ಅವರ ಬೇಡಿಕೆ, ಆಗ್ರಹಗಳನ್ನು ಪರಿಶೀಲಿಸುವ ಸೌಜನ್ಯವನ್ನೂ ಪಾಲಿಕೆ ಮರೆಯುತ್ತಿರುವ ಹಿಂದಿನ ಉದ್ದೇಶವೇನು ಎಂಬುದು ಸ್ಥಳೀಯರ ಪ್ರಶ್ನೆ.

ಸ್ಯಾಂಕಿ ರಸ್ತೆ ಮೇಲ್ಸೇತುವೆ ನಿರ್ಮಾಣ ಮಾಡಿದರೆ ಪಾರಂಪರಿಕ 50ಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗುತ್ತದೆ. ಇದರಿಂದ ಪಾರಂಪರಿಕ ಮರಗಳು ಬುಡಮೇಲಾಗುತ್ತವೆ. ಮೇಲ್ಸೇತುವೆ ನಿರ್ಮಾಣದಿಂದ ಸಂಚಾರ ದಟ್ಟಣೆ ನಿವಾರಣೆ ಆಗುವುದಿಲ್ಲ. ಹೀಗಾಗಿ ಮೇಲ್ಸೇತುವೆ ಬೇಡ’ ಎಂಬ ಆಗ್ರಹದ ಝಟ್ಕಾ.ಒಆರ್‌ಜಿ ಸಂಸ್ಥೆ ಆಯೋಜಿಸಿದ್ದ ಸಹಿ ಆಂದೋಲನಕ್ಕೆ 25 ಸಾವಿರಕ್ಕೂ ಹೆಚ್ಚು ಮಂದಿ ಡಿಜಿಟಲ್‌ ಸಹಿ ಮಾಡಿ ಬೆಂಬಲಿಸಿದ್ದಾರೆ. ಆದರೂ ಬಿಬಿಎಂಪಿ ಒಂದಷ್ಟು ಜನ ಮೇಲ್ಸೇತುವೆ ಬಯಸುತ್ತಿದ್ದಾರೆ ಎನ್ನುತ್ತಿದೆ. ಬೆಂಬಲಿಸುವವರು ಯಾರು ಎಂಬುದನ್ನು ಬಹಿರಂಗಪಡಿಸಿಲ್ಲ.


‘ಬೊಮ್ಮಾಯಿ ಅಂಕಲ್‌’ ಮೇಲ್ಸೇತುವೆ ಬೇಡ...

ಮಲ್ಲೇಶ್ವರ, ವೈಯಾಲಿಕಾವಲ್‌ ಮತ್ತು ಸದಾಶಿವನಗರದಲ್ಲಿರುವ ಸುಮಾರು 2 ಸಾವಿರ ವಿದ್ಯಾರ್ಥಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು, ‘ಬೊಮ್ಮಾಯಿ ಅಂಕಲ್‌... ಮೇಲ್ಸೇತುವೆ ನಿರ್ಮಿಸಬೇಡಿ. ನಮಗೆ ಆಟವಾಡಲು ಸ್ಥಳ ಇಲ್ಲವಾಗುತ್ತದೆ. ದಟ್ಟಣೆ, ಮಾಲಿನ್ಯ ಹೆಚ್ಚಾಗುತ್ತದೆ’ ಎಂದಿದ್ದಾರೆ.

‘ಸ್ಯಾಂಕಿ ಕೆರೆ ತಂಡ’ ಹೇಳುವುದೇನು?

ಮೇಲ್ಸೇತುವೆ ನಿರ್ಮಾಣ ಮಾಡಿದರೆ ಮೊದಲ ದಿನದಿಂದಲೇ ದಟ್ಟಣೆ ಹೆಚ್ಚಾಗುತ್ತದೆ. ಸ್ಯಾಂಕಿ ಕೆರೆಯ ವಿಸ್ತೀರ್ಣವೂ ಕಡಿಮೆಯಾಗಿ, ಪ್ರವಾಹದ ಆತಂಕ ಎದುರಾಗುತ್ತದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಾಪಮಾನ, ಮಾಲಿನ್ಯ ಹೆಚ್ಚಾಗುತ್ತದೆ. ದಟ್ಟಣೆಯಿಂದ ಸದಾಶಿವನಗರದ ವಸತಿ ಪ್ರದೇಶಗಳ ರಸ್ತೆ ಹಾಗೂ ಪೂರ್ಣಪ್ರಜ್ಞ ಶಾಲೆ, ಮೈದಾನದ ಸುತ್ತಮುತ್ತ ವಾಹನಗಳ ಸಂಚಾರ ಅಧಿಕವಾಗುತ್ತದೆ. ಪಾದಚಾರಿ ಮಾರ್ಗ ಕಡಿತವಾಗುತ್ತದೆ.

ಸ್ಯಾಂಕಿ ರಸ್ತೆ ವಿಸ್ತರಣೆ ಹಾಗೂ ಮೇಲ್ಸೇತುವೆ ನಿರ್ಮಾಣ ಯೋಜನೆಯನ್ನು ಕೈಬಿಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ, ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಮುಖೇನ ಮನವಿ ಮಾಡಿಕೊಳ್ಳಲಾಗಿದೆ. ಈ ಮೇಲ್ಸೇತುವೆಯಿಂದ ಉಂಟಾಗುವ ಸಮಸ್ಯೆಗಳನ್ನು ಡಲ್ಟ್‌
ಹಾಗೂ ಬಿಎಂಎಲ್‌ಟಿಎಗೆ ಸಲ್ಲಿಸಲಾಗಿದೆ.

ಪರಿಸರದ ಮೇಲಾಗುವ ದುಷ್ಪರಿಣಾಮ...

ಸ್ಯಾಂಕಿ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಿಸಿದರೆ 58 ಮರಗಳ ಬದಲು 85 ಮರಗಳನ್ನು ಕಡಿಯಬೇಕಾಗುತ್ತದೆ. ಅಲ್ಲದೆ 400ಕ್ಕೂ ಹೆಚ್ಚು ಗಿಡ–ಮರಗಳಿಗೆ ಹಾನಿಯಾಗುತ್ತದೆ ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ‘ಪರಿಸರದ ಮೇಲಿನ ಪರಿಣಾಮ’ ವರದಿ ತಿಳಿಸಿದೆ. ಮೇಲ್ಸೇತುವೆ ಮಾಡುವ ಪ್ರದೇಶದಲ್ಲಿ ಪಾರಂಪರಿಕವಾದ ಹಾಗೂ ಅಸಾಮಾನ್ಯವಾದ 85 ಮರಗಳನ್ನು ಕಡಿಯಬೇಕಾಗುತ್ತದೆ. ಇದರಲ್ಲಿ 34 ಪ್ರಭೇದದ ಮರಗಳಿವೆ. ಸ್ಯಾಂಕಿ ಕೆರೆಯ ಏರಿ ಸೇರಿದಂತೆ ಈ ಭಾಗದಲ್ಲಿ ಬೆಳೆದು ನಿಂತಿರುವ ಸುಮಾರು 400 ಗಿಡಗಳಿಗೆ ಮೇಲ್ಸೇತುವೆ ನಿರ್ಮಾಣದಿಂದ ಪರೋಕ್ಷವಾಗಿ ಹಾನಿಯಾಗಲಿದೆ. ಏರಿ ಅಗೆತದಿಂದ ಗಿಡಗಳ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ಪ್ರೊ. ಹರಿಣಿ ನಾಗೇಂದ್ರ, ಪ್ರೊ. ಸೀಮಾ ಮುಂಡೋಲಿ ಹಾಗೂ ವೃಕ್ಷ ಫೌಂಡೇಷನ್‌ನ ವಿಜಯ್‌ ನಿಶಾಂತ್‌ ಅವರು ನೀಡಿರುವ ವರದಿಯಲ್ಲಿ ವಿವರಿಸಿದ್ದಾರೆ.

ಈ ವರದಿಯಂತೆ, ಪರಿಸರದ ಮೇಲೆ ಪ್ರಮುಖವಾಗಿ ಐದು ಅಂಶಗಳಲ್ಲಿ ದುಷ್ಪರಿಣಾಮವಾಗಲಿದೆ. ಹಸಿರು ಹೊದಿಕೆ ಕಡಿಮೆಯಾಗಿ, ಇಂಗಾಲದ ಪ್ರಮಾಣ ಹೆಚ್ಚಾಗುತ್ತದೆ. ವಾಯುಮಾಲಿನ್ಯ ಹೆಚ್ಚಾಗುತ್ತದೆ. ವಾತಾವರಣದಲ್ಲಿ ಅನಿರೀಕ್ಷಿತ ದುಷ್ಪರಿಣಾಮ ಹೆಚ್ಚಾಗುತ್ತದೆ. ನಗರ ಜೀವವೈವಿಧ್ಯದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ. ಸ್ಯಾಂಕಿ ಕೆರೆಯಲ್ಲಿನ ಜೀವವೈವಿಧ್ಯಕ್ಕೆ ದಕ್ಕೆಯಾಗುತ್ತದೆ.

ಪರ್ಯಾಯ ಪರಿಹಾರ...

ಐಐಎಸ್‌ಸಿಯ ಟ್ರಾಫಿಕ್‌ ಸಿಸ್ಟಮ್ಸ್‌ ಎಂಜಿನಿಯರಿಂಗ್‌ ವಿಭಾಗದ ಡಾ. ಆಶಿಸ್‌ ವರ್ಮಾ ಅವರ ಪ್ರಕಾರ, ‘ಟ್ರಾಫಿಕ್‌ ಸಿಗ್ನಲ್‌ ಟೈಮಿಂಗ್ ಆಪ್ಟಿಮೈಸೇಷನ್‌’ನಿಂದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಬಹುದು. ಇದರಿಂದ ಮೇಲ್ಸೇತುವೆಯ ಕೋಟ್ಯಂತರ ರೂಪಾಯಿ ವೆಚ್ಚವನ್ನೂ ಉಳಿಸಬಹುದಾಗಿದೆ’.

ಪಾಲಿಕೆ ಅಧಿಕಾರಿಗಳು ಹೇಳುವುದೇನು?

ವಾಹನ ದಟ್ಟಣೆ ನಿವಾರಣೆಗೆ ಸ್ಯಾಂಕಿ ರಸ್ತೆ ವಿಸ್ತರಣೆ ಜೊತೆಗೆ ಮೇಲ್ಸೇತುವೆ ನಿರ್ಮಿಸುವುದು ಅನಿವಾರ್ಯ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಸ್ಯಾಂಕಿ ರಸ್ತೆ ವಿಸ್ತರಣೆ ಬಗ್ಗೆ ನಾವು ನ್ಯಾಯಾಲಯದಲ್ಲೇ ಸ್ಪಷ್ಟಪಡಿಸಿದ್ದೇವೆ. ಇದೀಗ ಮೇಲ್ಸೇತುವೆ ಹಾಗೂ ಅಂಡರ್‌ ಪಾಸ್‌ ನಿರ್ಮಿಸಲು ತಾಂತ್ರಿಕವಾಗಿ ಯೋಜನೆ ಮಾಡಿದ್ದೇವೆ. ಇದು ಅತ್ಯಗತ್ಯವಾಗಿ ಬೇಕಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು.

‘ರಸ್ತೆ ವಿಸ್ತರಣೆ ಮಾತ್ರ ಮಾಡಿದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಹೀಗಾಗಿ ತಾಂತ್ರಿಕವಾಗಿ ನಾವು ಮೇಲ್ಸೇತುವೆ, ಅಂಡರ್‌ಪಾಸ್‌ ನಿರ್ಮಾಣಕ್ಕೆ ಬದ್ಧವಾಗಿದ್ದೇವೆ. ಹಲವರು ಮೇಲ್ಸೇತುವೆ ಮಾಡಿ ಎನ್ನುತ್ತಿದ್ದಾರೆ. ಕೆಲವರು ಬೇಡ ಎನ್ನುತ್ತಿದ್ದಾರೆ. ತಾಂತ್ರಿಕವಾಗಿ ನಾವು ಮುಂದಡಿ ಇಟ್ಟಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಬೇರೆ ಬೇರೆ ಅಭಿಪ್ರಾಯ ಇದ್ದೇ ಇರುತ್ತದೆ. ಬೆಂಗಳೂರು ಮೆಟ್ರೊಪಾಲಿಟನ್‌ ಭೂಸಾರಿಗೆ ಪ್ರಾಧಿಕಾರದವರಿಗೂ (ಬಿಎಂಎಲ್‌ಟಿಎ) ಈ ಮೇಲ್ಸೇತುವೆ ಬಗ್ಗೆ ಮಾಹಿತಿ ನೀಡಲಾಗಿದೆ’ ಎಂದು ಹಲವು ಸಂದರ್ಭದಲ್ಲಿ ಮೇಲ್ಸೇತುವೆ ನಿರ್ಮಾಣವನ್ನು ಸಮರ್ಥಿಸಿಕೊಂಡಿದ್ದಾರೆ.

ಇನ್ನು ಸ್ಯಾಂಕಿ ರಸ್ತೆ ಮೇಲ್ಸೇತುವೆಯ ರುವಾರಿ, ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್‌, ‘ಸರ್ಕಾರದಿಂದ ಅನುಮತಿ ಪಡೆದು ಆರಂಭಿಸಲಾಗಿದೆ. ದೂರದೃಷ್ಟಿಯಿಂದ ಈ ಮೇಲ್ಸೇತುವೆ ನಿರ್ಮಿಸಲಾಗುತ್ತಿದ್ದು, ವಾಹನ ದಟ್ಟಣೆ ಕಡಿಮೆಯಾಗಲಿದೆ. ಕಾವೇರಿ ಜಂಕ್ಷನ್‌ನಲ್ಲಿ ದಟ್ಟಣೆ ಆಗುತ್ತದೆ ಎಂದರೆ ಅಲ್ಲೊಂದು ಮೇಲ್ಸೇತುವೆ ಕಟ್ಟೋಣ’ ಎಂದು ಸಾರ್ವಜನಿಕ ಸಭೆಯಲ್ಲೇ ಹೇಳಿದ್ದಾರೆ.

ಬಿಬಿಎಂಪಿಯ ಡಿಪಿಆರ್‌ನಲ್ಲಿ ಹೀಗಿದೆ...

ಸ್ಯಾಂಕಿ ಕೆರೆಯ ಮೇಲಿನ ರಸ್ತೆ ವಿಸ್ತರಣೆ ಜೊತೆಗೆ, ಭಾಷ್ಯಂ ವೃತ್ತದ ಮೂಲಕ ಗುಟ್ಟಹಳ್ಳಿ ಮುಖ್ಯರಸ್ತೆ ಮತ್ತು ಸ್ಯಾಂಕಿ ರಸ್ತೆ ನಡುವೆ 995 ಮೀಟರ್‌ ಮೇಲ್ಸೇತುವೆ ನಿರ್ಮಾಣದಿಂದ ಜಂಕ್ಷನ್‌ಗಳಲ್ಲಿನ ವಾಹನ ದಟ್ಟಣೆ ನಿವಾರಣೆಯಾಗಿ, ಪ್ರಯಾಣದ ಅವಧಿ ಕಡಿಮೆಯಾಗುತ್ತದೆ ಎಂದು ಬಿಬಿಎಂಪಿ ಸಿದ್ಧಪಡಿಸಿರುವ ವಿಸ್ತೃತ ಯೋಜನಾ ವರದಿಯಲ್ಲಿ ತಿಳಿಸಲಾಗಿದೆ. ಜಂಕ್ಷನ್‌ಗಳಲ್ಲಿ ಆಗುತ್ತಿರುವ ವಿಳಂಬ ಹಾಗೂ ಸಂಚಾರ ಸ್ಥಗಿತದಿಂದಾಗುವ ವೆಚ್ಚವನ್ನೂ ಕಡಿಮೆ ಮಾಡಬಹುದು. ಜಂಕ್ಷನ್‌ಗಳಲ್ಲಿ ಸುರಕ್ಷಿತ ಹಾಗೂ ಸುಗಮ ಸಂಚಾರ ಸಾಧ್ಯವಾಗುತ್ತದೆ. ಅಪಘಾತ ಮತ್ತು ಸಣ್ಣಪುಟ್ಟ ಘರ್ಷಣೆಗಳು ಕಡಿಮೆಯಾಗುತ್ತವೆ ಎಂದು ಡಿಪಿಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗುತ್ತದೆ. ಬಿಎಂಎಲ್‌ಟಿಎ ಈ ಯೋಜನೆಯನ್ನು ಪರಿಶೀಲಿಸಿಲ್ಲ. ಅಲ್ಲದೆ, ಕೆರೆಯ 30 ಮೀಟರ್‌ ಬಫರ್‌ ಝೋನ್‌ನಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಿದರೆ ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ) ಆದೇಶವನ್ನು ಉಲ್ಲಂಘಿಸಿದಂತಾಗುತ್ತದೆ. ಈ ಯೋಜನೆಯ ಬಗ್ಗೆ ವಿಸ್ತೃತವಾಗಿ ನಾಗರಿಕರೊಂದಿಗೆ ಚರ್ಚೆ ನಡೆಸಿಲ್ಲ. ಸ್ಯಾಂಕಿ ಕೆರೆಯ ಏರಿ ಇದರಿಂದ ದುರ್ಬಲವಾಗುವುದು ಅತ್ಯಂತ ಆತಂಕದ ವಿಷಯ. ಈ ಮೇಲ್ಸೇತುವೆ ನಿರ್ಮಾಣದ ಬದಲು ಪರ್ಯಾಯ ಮಾರ್ಗಗಳ ಬಗ್ಗೆ ಗಂಭೀರವಾಗಿ ಚಿಂತಿಸಬೇಕು. ಪಾರಂಪರಿಕ ಮರಗಳು ನಷ್ಟವಾಗುತ್ತವೆ. ಹಲವು ಸ್ತರಗಳಲ್ಲಿ ವಾಹನ ಸಂಚಾರ ಹೆಚ್ಚಾಗುವ ಜೊತೆಗೆ ದಟ್ಟಣೆಯೂ ಅಧಿಕವಾಗಿ ವೃದ್ಧರು, ವಿದ್ಯಾರ್ಥಿಗಳು ಸೇರಿದಂತೆ ಪಾದಚಾರಿಗಳಿಗೆ ಸಂಕಷ್ಟ ಹೆಚ್ಚಾಗುತ್ತದೆ ಎಂಬುದು ಮಲ್ಲೇಶ್ವರ, ಸದಾಶಿವನಗರ, ವೈಯಾಲಿಕಾವಲ್‌ ನಿವಾಸಿಗಳ ಅಭಿಪ್ರಾಯ.

ಯೋಜನಾಬದ್ಧ ನಗರ ನಮ್ಮ ಹಕ್ಕು

ಬಿಬಿಎಂಪಿ ಮತ್ತು ಸರ್ಕಾರ ಸ್ಯಾಂಕಿ ರಸ್ತೆ ಮೇಲ್ಸೇತುವೆ ಯೋಜನೆಯಲ್ಲಿ ಪ್ರಾಥಮಿಕ ಪ್ರಕ್ರಿಯೆ ಅನುಸರಿಸಿಲ್ಲ. ಜನಪ್ರತಿನಿಧಿಗಳು ದೀರ್ಘಕಾಲದ ಪರಿಹಾರಗಳನ್ನು ಇಲ್ಲಿನ ದಟ್ಟಣೆ ನಿವಾರಣೆಗೆ ನೀಡಬೇಕಿತ್ತು. ಮರಗಳು, ಕೆರೆಗಳು ನಮ್ಮ ಪರಂಪರೆ. ನಾವು ಇವುಗಳನ್ನು ಇಂತಹ ಅನಗತ್ಯ ಯೋಜನೆಗಳಿಗಾಗಿ ಕಳೆದುಕೊಳ್ಳುತ್ತಿದ್ದೇವೆ. ಇನ್ನು ಮುಂದೆ ನಾಗರಿಕರು ಇಂತಹವುಗಳ ಅಗತ್ಯವಿಲ್ಲ ಎಂದು ಹೇಳಬೇಕಿದೆ. ಯೋಜನಾಬದ್ಧ ನಗರ ನಮ್ಮ ಹಕ್ಕಾಗಿದ್ದು, ಅದನ್ನು ಸಾಧಿಸಿಕೊಳ್ಳಬೇಕಿದೆ.

ಕಿಮ್ಸುಕಾ ಅಯ್ಯರ್‌, ಸಿಟಿಜನ್ಸ್‌ ಫಾರ್‌ ಸ್ಯಾಂಕಿ

ಪರಂಪರೆ, ಪರಿಸರ ಉಳಿಯಬೇಕು

ಸ್ಯಾಂಕಿ ರಸ್ತೆಯ ವಿಸ್ತರಣೆ ಹಾಗೂ ಮೇಲ್ಸೇತುವೆಯನ್ನು ನಾನು ಸ್ಥಳೀಯ ನಿವಾಸಿಯಾಗಿ ವಿರೋಧಿಸುತ್ತೇನೆ. ಈ ಯೋಜನೆ ಕಾರ್ಯಗತವಾದರೆ ಇಲ್ಲಿನ ವಾಹನ ದಟ್ಟಣೆ ಹೆಚ್ಚಾಗುವ ಜೊತೆಗೆ ಪರಿಸರ ನಿಯಮಗಳನ್ನು ಉಲ್ಲಂಘಿಸಿದಂತಾಗುತ್ತದೆ. ನಾಗರಿಕರ ಸುರಕ್ಷೆ ಹಾಗೂ ಸ್ವಾಸ್ಥ್ಯವೂ ಹಾಳಾಗುತ್ತದೆ. ಪ್ರತಿಯೊಬ್ಬರಿಗೂ ಅನುಕೂಲವಾಗುವ ಸುಸ್ಥಿರ ಅಭಿವೃದ್ಧಿಯತ್ತ ಗಮನಹರಿಸಬೇಕು. ಉತ್ತಮ ದಾರಿಯಲ್ಲಿ ನಡೆದು ನಮ್ಮ ಪರಂಪರೆ, ಪರಿಸರ, ನಮ್ಮ ಜನರನ್ನು ಉಳಿಸಬೇಕಿದೆ.

ಮಧುಸೂಧನ್‌, ಸದಾಶಿವನಗರ

ದಟ್ಟಣೆ ಹೆಚ್ಚಿಸುವುದು ಪ್ರಮಾದ

ಸುಸ್ಥಿರ ಮತ್ತು ದೀರ್ಘಕಾಲಿಕ ಪರಿಹಾರಗಳು ನಮಗೆ ಬೇಕಿವೆ. ಮರಗಳನ್ನು ಕಡಿಯುವುದು, ಕಟ್ಟಡ, ಮೇಲ್ಸೇತುವೆ ನಿರ್ಮಾಣ, ರಸ್ತೆ ವಿಸ್ತರಣೆ ಯೋಜನೆಯಿಂದ ನಮ್ಮ ಸಮಸ್ಯೆಗಳು ನಿವಾರಣೆ ಆಗುವುದಕ್ಕಿಂತ ಅವೇ ಸಮಸ್ಯೆಗಳಾಗುತ್ತವೆ. ಈ ಮೇಲ್ಸೇತುವೆಯಿಂದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ದಟ್ಟಣೆಯನ್ನು ವರ್ಗಾಯಿಸುತ್ತಿದ್ದೇವೆ. ಈಗಾಗಲೇ ಅಧಿಕ ದಟ್ಟಣೆ ಕಾವೇರಿ ಮ್ಯಾಜಿಕ್‌ ಬಾಕ್ಸ್‌ ಬಳಿ ಇದ್ದು, ಇದನ್ನು ಮತ್ತಷ್ಟು ಹೆಚ್ಚಿಸುವುದು ದೊಡ್ಡ ಪ್ರಮಾದ.

ಲಕ್ಷ್ಮಿ ಶರತ್‌, ಸಿಟಿಜನ್ಸ್‌ ಫಾರ್‌ ಸ್ಯಾಂಕಿ

ಅನಗತ್ಯ ಯೋಜನೆ ಬೇಡ

ವೈಟ್‌ ಟಾಪಿಂಗ್‌, ರಸ್ತೆ ವಿಸ್ತರಣೆ, ಮೇಲ್ಸೇತುವೆ ಸೇರಿದಂತೆ ನಗರದಲ್ಲಿ ಅನಗತ್ಯವಾದ ಮೂಲಸೌಕರ್ಯಗಳನ್ನು ನಿರ್ಮಿಸಲಾಗುತ್ತಿದೆ. ಸಾರ್ವಜನಿಕ ಸಾರಿಗೆಯನ್ನು ಬಿಟ್ಟು, ಖಾಸಗಿ ವಾಹನಗಳತ್ತ ಜನರು ವಾಲುವುದನ್ನು ನಾವು ಕಂಡಿದ್ದೇವೆ. ಇದೀಗ ಬಸ್‌ಗಳನ್ನು ಮತ್ತೆ ಬಳಸಬೇಕಾಗಿದೆ. ಪಾದಚಾರಿಗಳು, ವಾಯುವಿಹಾರಿಗಳು ಮತ್ತು ಸೈಕಲ್‌ ಸವಾರರಿಗೆ ನಗರ ಯೋಜನೆ ಕೇಂದ್ರೀಕೃತವಾಗಬೇಕು. ಕಡಿಮೆ ಅಂತರದ ಪ್ರದೇಶಗಳ ರಸ್ತೆಗಳು ನಡೆದು ಸಾಗುವಂತಿರಬೇಕು.

ಕೃಷ್ಣ ಪನ್ಯಾಮ್‌, ಮಲ್ಲೇಶ್ವರ

ಮೇಲ್ಸೇತುವೆ ಬೇಡವೇ ಬೇಡ

ಉತ್ತಮ ಆಡಳಿತದ ಖಾತರಿ ಒದಗಿಸುವ ಯೋಜನೆಯೊಂದರಲ್ಲಿ ನಾಗರಿಕರ ಪಾತ್ರ ಎಷ್ಟು ಮುಖ್ಯ ಎಂಬುದು ಸ್ಯಾಂಕಿ ರಸ್ತೆ ಮೇಲ್ಸೇತುವೆ ಯೋಜನೆಯಿಂದ ಬಹಿರಂಗವಾಗಿದೆ. ಈ ಯೋಜನೆಯನ್ನು ಸಾರ್ವಜನಿಕವಾಗಿ ಪ್ರಕಟಿಸಿದ ನಂತರ, ಸುತ್ತಮುತ್ತಲಿನ ಜನರ ಸಹಕಾರ ದೊರೆತು, ಸ್ಥಳೀಯ ನಿವಾಸಿಗಳು ಒಗ್ಗಟ್ಟಾಗಿ ಹೋರಾಡುವ ‘ಸ್ಯಾಂಕಿ ಕೆರೆ ತಂಡ’ ರಚನೆಯಾಯಿತು. ನಮ್ಮ ಮರ, ಪಕ್ಷಿ, ಕೆರೆಯನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ. ಮೇಲ್ಸೇತುವೆ ಬೇಡ ಎಂಬುದೇ ನಮ್ಮ ಮುಖ್ಯ ಬೇಡಿಕೆ.

ಪ್ರೀತಿ ಸುಂದರ್‌ರಾಜನ್‌, ಸ್ಯಾಂಕಿ ಕೆರೆ ತಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT