ಬೆಂಗಳೂರು: ಖಾಸಗಿ ವಾಹನಗಳಿಗೂ ಶಕ್ತಿ ಯೋಜನೆ ಅನುಷ್ಠಾನಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜುಲೈ 27ರಂದು ಬೆಂಗಳೂರು ಬಂದ್ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ತಿಳಿಸಿದೆ.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆದರ್ಶ ಆಟೊ ಮತ್ತು ಟ್ಯಾಕ್ಸಿ ಡ್ರೈವರ್ಸ್ ಯೂನಿಯನ್ ಅಧ್ಯಕ್ಷ ಎಂ. ಮಂಜುನಾಥ್, ‘ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಅಂದು ಬೆಳಿಗ್ಗೆ 10.30ಕ್ಕೆ ಕ್ರಾಂತಿವೀರ ಸಂಗೊಳಿ ರಾಯಣ್ಣ ವೃತ್ತದಿಂದ ಪ್ರತಿಭಟನಾ ರ್‍ಯಾಲಿ ಹಮ್ಮಿಕೊಳ್ಳಲಾಗುವುದು. ಸ್ವಾತಂತ್ರ್ಯ ಉದ್ಯಾನದಲ್ಲಿ ಸಂಜೆ 7ಗಂಟೆವರೆಗೂ ಪ್ರತಿಭಟನೆ ನಡೆಸಲಾಗುವುದು’ ಎಂದು ಹೇಳಿದರು.
ಒಕ್ಕೂಟದ ರಾಧಾಕೃಷ್ಣ ಹೊಳ್ಳ ಮಾತನಾಡಿ, ‘ರಾಜ್ಯದಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಆಟೊ, 3 ಲಕ್ಷಕ್ಕೂ ಹೆಚ್ಚು ಟ್ಯಾಕ್ಸಿ, 55 ಸಾವಿರಕ್ಕೂ ಹೆಚ್ಚು ಖಾಸಗಿ ಬಸ್‌ಗಳಿವೆ. ಈ ಎಲ್ಲ ವಾಹನಗಳಿಂದ ಸರ್ಕಾರಕ್ಕೆ ಸುಮಾರು ₹2 ಸಾವಿರ ಕೋಟಿ ನೇರ ತೆರಿಗೆ, ₹20 ಸಾವಿರ ಕೋಟಿ ಪರೋಕ್ಷ ತೆರಿಗೆ ಭರಿಸಲಾಗುತ್ತಿದೆ. ಖಾಸಗಿ ವಾಹನ ಮಾಲೀಕರ ಮತ್ತು ಚಾಲಕರ ಕಷ್ಟಗಳಿಗೆ ಸರ್ಕಾರ ಸ್ಪಂದಿಸಬೇಕು. ಶಕ್ತಿ ಯೋಜನೆಯಿಂದ ಖಾಸಗಿ ವಾಹನಗಳ ಮಾಲೀಕರ ಮತ್ತು ಚಾಲಕರ ಆದಾಯ ಕುಂಠಿತಗೊಂಡಿದೆ. ಆದ್ದರಿಂದ ಪ್ರತಿತಿಂಗಳು ₹ 10 ಸಾವಿರ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.
‘ಆಟೊ, ಟ್ಯಾಕ್ಸಿ ಚಾಲಕರಿಗೆ ವಸತಿ ಯೋಜನೆ, ವಾಹನ ಖರೀದಿಸಲು ಸಬ್ಸಿಡಿ, ಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನ, ಶೇ 5ಕ್ಕಿಂತ ಹೆಚ್ಚು ಕಮಿಷನ್ ಪಡೆಯುವ ಓಲಾ, ಉಬರ್‌ನಂತಹ ಕಂಪನಿಗಳಿಗೆ ನಿರ್ಬಂಧ ವಿಧಿಸಬೇಕು. ಶಕ್ತಿ ಯೋಜನೆಯಡಿ ರಾಜ್ಯ ಸರ್ಕಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಹಣ ಮರುಪಾವತಿಸುವಂತೆ ಖಾಸಗಿ ಬಸ್‌ಗಳಿಗೂ ನೀಡಬೇಕು ಅಥವಾ ರಸ್ತೆ ತೆರಿಗೆ ರದ್ದುಪಡಿಸಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.