ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್ ಸುಲಿಗೆ: ಎಂಜಿನಿಯರ್ ಬಂಧನ– ಚಿನ್ನಾಭರಣ ಜಪ್ತಿ

₹ 35 ಲಕ್ಷ ಸಾಲ ತೀರಿಸಲು ಕೃತ್ಯವೆಸಗಿದ್ದ ಆರೋಪಿ
Last Updated 22 ಜನವರಿ 2022, 19:59 IST
ಅಕ್ಷರ ಗಾತ್ರ

ಬೆಂಗಳೂರು: ಬಿಟಿಎಂ ಲೇಔಟ್‌ನ ಒಂದನೇ ಹಂತದಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಶಾಖೆಯಲ್ಲಿ ನಡೆದಿದ್ದ ಸುಲಿಗೆ ಪ್ರಕರಣ ಸಂಬಂಧ ಆರೋಪಿ ಎಸ್‌. ಧೀರಜ್ (28) ಎಂಬಾತನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.

‘ಕಾಮಾಕ್ಷಿಪಾಳ್ಯದ ಮಣಿ ವಿಲಾಸ್ ಗಾರ್ಡನ್‌ ರಸ್ತೆಯ ನಿವಾಸಿ ಧೀರಜ್, ಮೆಕ್ಯಾನಿಕಲ್ ಎಂಜಿನಿಯರ್. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆತನಿಂದ ₹ 6.50 ಲಕ್ಷ ನಗದು ಹಾಗೂ 1 ಕೆ.ಜಿ 805 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ‘ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಷಿ ಹೇಳಿದರು.

‘ಸಂಬಳಕ್ಕಿಂತ ಹೆಚ್ಚು ಹಣ ಖರ್ಚು ಮಾಡುತ್ತಿದ್ದ ಆರೋಪಿ, ಐಷಾರಾಮಿ ಜೀವನ ನಡೆಸುತ್ತಿದ್ದ. ಅದಕ್ಕಾಗಿ ಆನ್‌ಲೈನ್ ಆ್ಯಪ್‌ ಹಾಗೂ ಇತರರ ಬಳಿ ₹ 35 ಲಕ್ಷ ಸಾಲ ಮಾಡಿಕೊಂಡಿದ್ದ. ಆನ್‌ಲೈನ್‌ ಕಂಪನಿಯೊಂದರಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದ. ಅದನ್ನೆಲ್ಲ ತೀರಿಸಲು ಸಾಧ್ಯವಾಗದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ’ ಎಂದೂ ತಿಳಿಸಿದರು.

ಹಬ್ಬದಂದೇ ಬ್ಯಾಂಕ್‌ಗೆ ನುಗ್ಗಿ ಸುಲಿಗೆ: ‘ಮಾಡಿದ್ದ ಸಾಲ ತೀರಿಸಲು ಮತ್ತೆ ಬೇರೆಯವರ ಕಡೆ ಆರೋಪಿ ಸಾಲ ಕೇಳಲಾರಂಭಿಸಿದ್ದ. ಯಾರೂ ಕೊಟ್ಟಿರಲಿಲ್ಲ. ಅವಾಗಲೇ, ಬ್ಯಾಂಕ್ ಸುಲಿಗೆ ಮಾಡಲು ಸಂಚು ರೂಪಿಸಿದ್ದ. ಯೂಟ್ಯೂಬ್‌ನಲ್ಲಿ ವಿಡಿಯೊ ನೋಡಿ ತಯಾರಿ ಮಾಡಿಕೊಂಡಿದ್ದ. ಬ್ಯಾಂಕ್‌ ಬಳಿಯೂ ಸುತ್ತಾಡಿ ಸಮಯಕ್ಕಾಗಿ ಕಾಯುತ್ತಿದ್ದ‌’ ಎಂದು ಪೊಲೀಸರು ಹೇಳಿದರು.

‘ಸಂಕ್ರಾಂತಿ ಹಬ್ಬದ ದಿನ ಸಂಜೆ ಬ್ಯಾಂಕ್‌ಗೆ ನುಗ್ಗಿದ್ದ ಆರೋಪಿ, ವ್ಯವಸ್ಥಾಪಕನ ಕೊಠಡಿಗೆ ಹೋಗಿ ಕುಳಿತಿದ್ದ. ಅವರಿಗೆ ಚಾಕು ತೋರಿಸಿ ಬ್ಯಾಂಕ್‌ನಲ್ಲಿದ್ದ ನಗದು ಹಾಗೂ ಚಿನ್ನಾಭರಣ ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದ. ಕೃತ್ಯದ ವೇಳೆ ಭದ್ರತಾ ಸಿಬ್ಬಂದಿ ಇರಲಿಲ್ಲ. ಆರೋಪಿ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು‘ ಎಂದೂ ತಿಳಿಸಿದರು.

ಹೊರ ಜಿಲ್ಲೆಗಳಲ್ಲಿ ಸುತ್ತಾಡಿದ್ದ: ‘ಕೃತ್ಯದ ನಂತರ ಬ್ಯಾಂಕ್‌ನಿಂದ ಹೊರ ಬಂದು, ಮೆಜೆಸ್ಟಿಕ್‌ನತ್ತ 5 ಕಿ.ಮೀ ನಡೆದಿದ್ದ. ನಂತರ, ಆಟೊದಲ್ಲಿ ಮೆಜೆಸ್ಟಿಕ್‌ ತಲುಪಿದ್ದ. ಅಲ್ಲಿಂದ ಚಿಕ್ಕಮಗಳೂರು, ಶಿವಮೊಗ್ಗ, ಬಳ್ಳಾರಿ ಜಿಲ್ಲೆಗಳಿಗೆ ಹೋಗಿ ತಂಗಿದ್ದ. ಅಲ್ಲಿಂದ ಬೆಂಗಳೂರಿಗೆ ಬಂದಿದ್ದ‘ ಎಂದು ಪೊಲೀಸರು ಹೇಳಿದರು.

‘ಸಾಲಗಾರರಿಗೆ ಹಣ ವಾಪಸು ಕೊಡಲು ಆರೋಪಿ ಓಡಾಡುತ್ತಿದ್ದ. ಸುಳಿವು ಪತ್ತೆ ಹಚ್ಚಿದ್ದ ಪೊಲೀಸರು, ಆತನ ಬೆನ್ನು ಬಿದ್ದಿದ್ದರು. ಸಾಲಗಾರರೊಬ್ಬರಿಗೆ ಹಣ ಕೊಡುವಾಗಲೇ ಆರೋಪಿಯನ್ನು ಬಂಧಿಸಲಾಯಿತು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT