ಶನಿವಾರ, ಫೆಬ್ರವರಿ 27, 2021
27 °C
ಬಿಬಿಎಂಪಿ ನಡೆ ಖಂಡಿಸಿ ರವೀಂದ್ರ ಕಲಾಕ್ಷೇತ್ರದ ಪ್ರಾಂಗಣದಲ್ಲಿ ಪ್ರತಿಭಟನೆ ನಾಳೆ

ಬಟ್ಟೆ ಬ್ಯಾನರ್‌ ತೆರವಿಗೆ ರಂಗಕರ್ಮಿಗಳ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ರವೀಂದ್ರ ಕಲಾಕ್ಷೇತ್ರದ ಪ್ರಾಂಗಣದಲ್ಲಿ ನಾಟಕ ಪ್ರದರ್ಶನಗಳ ಮಾಹಿತಿ ನೀಡುವ ಸಲುವಾಗಿ ಹಾಕಿದ್ದ ಬಟ್ಟೆ ಬ್ಯಾನರ್‌ಗಳನ್ನು ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸಿದ್ದಕ್ಕೆ ರಂಗಕರ್ಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಬಿಎಂಪಿಯ ನಡೆಯನ್ನು ಖಂಡಿಸಿ ಇದೇ 3ರಂದು ಕಲಾಕ್ಷೇತ್ರದ ಪ್ರಾಂಗಣದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

‘ನಾವು ನಾಟಕಗಳ ಪ್ರಚಾರಕ್ಕೆ ಫ್ಲೆಕ್ಸ್‌ ಬ್ಯಾನರ್‌ ಅಳವಡಿಸುವುದನ್ನು ಒಂದೂವರೆ ವರ್ಷದ ಹಿಂದೆಯೇ ಸ್ಥಗಿತಗೊಳಿಸಿದ್ದೇವೆ. ಕೇವಲ ಬಟ್ಟೆ
ಬ್ಯಾನರ್‌ಗಳನ್ನು ಮಾತ್ರ ಬಳಸುತ್ತಿದ್ದೆವು. ಅವುಗಳನ್ನೂ ಬಿಬಿಎಂಪಿ ಅಧಿಕಾರಿಗಳು ಮೂರು ದಿನಗಳ ಹಿಂದೆ ತೆರವುಗೊಳಿಸಿದ್ದಾರೆ’ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಚ್ಚರಿಯೆಂದರೆ ನಾಟಕಗಳ ಮಾಹಿತಿ ನೀಡುವ ಬ್ಯಾನರ್‌ ತೆರವುಗೊಳಿಸಿದ ಸ್ಥಳದಲ್ಲಿ ಸರ್ಕಾರದ ವತಿಯಿಂದ ಆಚರಿಸುವ ಕೃಷ್ಣ ಜನ್ಮಾಷ್ಟಮಿಯ ಬ್ಯಾನರ್‌ ಕಟ್ಟಿದ್ದಾರೆ. ಇದು ಯಾವ ನ್ಯಾಯ’ ಎಂದು ಅವರು ಪ್ರಶ್ನಿಸಿದರು.

‘ಕಲಾಕ್ಷೇತ್ರ ಸರ್ಕಾರದ ಸಂಸ್ಥೆಯಾಗಿರಬಹುದು. ಆದರೆ, ಅದನ್ನು ಬಾಡಿಗೆಗೆ ಪಡೆದವರು ಪ್ರಾಂಗಣವನ್ನು ಬಳಸಿಕೊಳ್ಳುವ ಅಧಿಕಾರವನ್ನು ಹೊಂದಿರುತ್ತಾರೆ. ನಮ್ಮ ಕಾರ್ಯಕ್ರಮಕ್ಕೆ ಬರುವವರಿಗೆ ಮಾಹಿತಿ ನೀಡುವ ಹಕ್ಕು ನಮಗಿಲ್ಲವೇ’ ಎಂದು ತಿಳಿಸಿದರು.

‘ಬ್ಯಾನರ್‌ ತೆರವು ವಿಚಾರದಲ್ಲಿ ಬಿಬಿಎಂಪಿ ಹೈಕೋರ್ಟ್‌ನ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡಂತೆ ಕಾಣುತ್ತಿದೆ. ಬ್ಯಾನರ್‌ಗಳನ್ನು ಕಟ್ಟಲು ನಿರ್ಬಂಧಿಸುವ ನಿರ್ಧಾರದಿಂದ ರಂಗ ಚಟುವಟಿಕೆ ಮೇಲೆ ಪರಿಣಾಮ ಉಂಟಾಗುತ್ತದೆ. ಕಲಾಕ್ಷೇತ್ರ, ರಂಗಶಂಕರ, ಕೆ.ಎಚ್‌.ಕಲಾಸೌಧಗಳಂತಹ ರಂಗಮಂದಿರಗಳ ಪ್ರಾಂಗಣದಲ್ಲಿ ಬ್ಯಾನರ್‌ ಹಾಕುವುದಕ್ಕೂ ನಿರ್ಬಂಧ ವಿಧಿಸುವುದು ಸೂಕ್ತ ಅಲ್ಲ’ ಎಂದರು.

ಅಭ್ಯಂತರ ಇಲ್ಲ: ‘ಕಲಾಕ್ಷೇತ್ರದ ಪ್ರಾಂಗಣದ ಒಳಗೆ ಅಳವಡಿಸಿದ್ದ ಬಟ್ಟೆ ಬ್ಯಾನರ್‌ ತೆರವುಗೊಳಿಸಿದ್ದರೆ, ಅದು ತಪ್ಪು. ಅಲ್ಲಿ ಬ್ಯಾನರ್‌ ಅಳವಡಿಸುವುದಕ್ಕೆ ಪಾಲಿಕೆಯ ಅನುಮತಿ ಪಡೆಯುವ ಅಗತ್ಯ ಇಲ್ಲ. ಆದರೆ, ನಗರದಲ್ಲಿ ಎಲ್ಲೂ ಫ್ಲೆಕ್ಸ್‌ ಬ್ಯಾನರ್‌ ಅಳವಡಿಸುವಂತಿಲ್ಲ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಲಾಕ್ಷೇತ್ರದ ಪ್ರಾಂಗಣದಲ್ಲಿ ಕಟ್ಟಿದ್ದ ಬ್ಯಾನರ್‌ಗಳನ್ನು ಪಾಲಿಕೆ ಸಿಬ್ಬಂದಿ ಬಹುಶಃ ತಿಳಿವಳಿಕೆ ಕೊರತೆಯಿಂದ ತೆರವುಗೊಳಿಸಿರಲಿಕ್ಕೂ ಸಾಕು. ಅವರಿಗೆ ಈ ಬಗ್ಗೆ ಮಾಹಿತಿ ನೀಡುತ್ತೇವೆ’ ಎಂದು ತಿಳಿಸಿದರು.

‘ಸೂಚನಾ ಫಲಕ ಸ್ಥಾಪಿಸಲಿ’

‘ಸಂಘಟಕರು ರಂಗ ಪ್ರದರ್ಶನಗಳಿಗೆ ಪ್ರೇಕ್ಷಕರನ್ನು ಸೆಳೆಯಲು ದುಬಾರಿ ಜಾಹೀರಾತು ನೀಡುವಷ್ಟು ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ರಂಗಮಂದಿರದ ಬಳಿ ಬಟ್ಟೆ ಬ್ಯಾನರ್‌ ಅಳವಡಿಸಲು ಬಿಬಿಎಂಪಿ ಅವಕಾಶ ನೀಡುವುದಿಲ್ಲವಾದರೆ, ಪರ್ಯಾಯ ವ್ಯವಸ್ಥೆ ಕಲ್ಪಿಸಲಿ. ರಂಗ ಮಂದಿರಗಳ ಸಮೀಪದ ಮೆಟ್ರೊ ನಿಲ್ದಾಣ ಅಥವಾ ಪ್ರಯಾಣಿಕರ ತಂಗುದಾಣದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿ, ರಂಗ ಚಟುವಟಿಕೆ ಕುರಿತ ಮಾಹಿತಿ ನೀಡಲು ಅವಕಾಶ ನೀಡಲಿ’ ಎಂದು ಜೆ.ಲೋಕೇಶ್‌ ಒತ್ತಾಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು