ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಿಗೆ ಗ್ರಾಹಕರ ಬರ

Last Updated 2 ಸೆಪ್ಟೆಂಬರ್ 2020, 21:19 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್ ನಂತರ ಬಾಗಿಲು ಮುಚ್ಚಿದ್ದಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳ ಚಟುವಟಿಕೆ ಐದು ತಿಂಗಳ ನಂತರ ಆರಂಭವಾಗಿದೆ. ಆದರೆ, ಗ್ರಾಹಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಾರ್ ಆ್ಯಂಡ್ ರೆಸ್ಟೋರೆಂಟ್, ಪಬ್‌, ದೊಡ್ಡ ಹೋಟೆಲ್‌ಗಳಲ್ಲಿ ಮದ್ಯ ಸೇವನೆ ಜೊತೆಗೆ ಊಟೋಪಚಾರ ಸೇವೆಗೂ ಸರ್ಕಾರ ಅವಕಾಶ ನೀಡಿದೆ. ಅದರಂತೆ ಸೋಮವಾರದಿಂದ ವಹಿವಾಟು ಆರಂಭಿಸಲಾಗಿದೆ.

148 ದಿನಗಳ ನಂತರ ಇಲ್ಲಿನ ಅಡುಗೆ ಮನೆಗಳು ಕಾರ್ಯಾರಂಭಗೊಂಡಿವೆ.ದೂಳು ಹಿಡಿದಿದ್ದ ಟೇಬಲ್‌ಗಳು, ಗಾಜಿನ ಲೋಟಗಳನ್ನು ಸ್ವಚ್ಛಗೊಳಿಸಲಾಗಿದೆ. ಟೇಬಲ್‌ಗಳನ್ನು ಸಿಂಗರಿಸಿಡಲಾಗಿದೆ. ಅಲ್ಲಿ ಕೆಲಸ ಮಾಡುವ ಮಾಣಿಗಳು, ಸಪ್ಲೆಯರ್‌ಗಳು, ಕ್ಲೀನರ್‌ಗಳು, ಅಡುಗೆ ಮಾಡುವವರು ಮದ್ಯಪ್ರಿಯರ ಬರುವಿಕೆಗಾಗಿ ಕಾದು ಕುಳಿತಿದ್ದಾರೆ. ಆದರೆ, ಗ್ರಾಹಕರ ಬರ ಈಗ ಬಾರ್‌ ಆ್ಯಂಡ್ ರೆಸ್ಟೋರೆಂಟ್‌ಗಳನ್ನು ಕಾಡುತ್ತಿದೆ.

ಕಾರ್ಮಿಕ ವರ್ಗದವರು ಹೆಚ್ಚಿರುವ ಪ್ರದೇಶಗಳಲ್ಲಿ ಸ್ವಲ್ಪ ವಹಿವಾಟು ಕಾಣಿಸುತ್ತಿದೆ. ಆದರೆ,ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಕೋರಮಂಗಲ, ಇಂದಿರಾನಗರ, ಗಾಂಧಿನಗರ ಹಾಗೂ ಇತರೆಡೆ ಇರುವ ಪಬ್‌ ಮತ್ತು ಬಾರ್‌ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲಿ ಮದ್ಯ ಸೇವನೆಗೆಂದೇ ಹುಡುಕಿಕೊಂಡು ಹೋಗುತ್ತಿದ್ದ ಗ್ರಾಹಕರು ಈಗ ಕಾಣಿಸುತ್ತಿಲ್ಲ.

ಸರ್ಕಾರ ಅನುಮತಿ ನೀಡಿದರೆ ವಹಿವಾಟು ಚುರುಕುಗೊಳ್ಳಲಿದೆ ಎಂದುಕೊಂಡಿದ್ದ ಮದ್ಯದಂಗಡಿ ಮಾಲೀಕರಿಗೆ ಈಗ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ‘ದಿನವಿಡೀ ಕಾದರೂ ಗ್ರಾಹಕರ ಸಂಖ್ಯೆ ಬೆರಳೆಣಿಕೆಯನ್ನು ದಾಟುತ್ತಿಲ್ಲ. ಎಂದಿನಂತೆ ಪಾರ್ಸೆಲ್ ಸೇವೆಯನ್ನೇ ಕೇಳುತ್ತಿದ್ದಾರೆ. ಹೀಗೆ ಮುಂದುವರಿದರೆ ಕೆಲಸಗಾರರಿಗೆ ಸಂಬಳ ಪಾವತಿ, ವಿದ್ಯುತ್ ಶುಲ್ಕ ಪಾವತಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ’ ಎಂದು ಬೆಂಗಳೂರು ನಗರ ಜಿಲ್ಲಾ ಮದ್ಯ ವ್ಯಾಪಾರಿಗಳ ಸಂಘದ ಅಧ್ಯಕ್ಷ ಲೋಕೇಶ್ ಹೇಳಿದರು.

ಲಾಕ್‌ಡೌನ್ ಕಾಲದಲ್ಲಿ ನಗರವನ್ನು ತ್ಯಜಿಸಿದವರು ಇನ್ನೂ ವಾಪಸ್ ಬಂದಿಲ್ಲ. ಐ.ಟಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವ ಪದ್ಧತಿ ಮುಂದುವರಿದಿದೆ. ಗುಂಪಾಗಿ ಬಂದು ಮದ್ಯ ಸೇವಿಸಿ ಸಂಭ್ರಮಿಸಲು ಕಾಲ ಇನ್ನೂ ಪಕ್ವವಾಗಿಲ್ಲ. ಭಯದ ವಾತಾವರಣ ಕಡಿಮೆಯಾಗಲು ಇನ್ನಷ್ಟು ಸಮಯ ಬೇಕಾಗುತ್ತದೆ ಎಂದು ಮದ್ಯದಂಗಡಿ ಪರವಾನಗಿದಾರರು ಹೇಳುತ್ತಾರೆ.

ಮದ್ಯ ಮಾರಾಟದಲ್ಲಿ ಕಾಣದ ಬದಲಾವಣೆ

ಬಾರ್‌ ಆ್ಯಂಡ್ ರೆಸ್ಟೋರೆಂಟ್‌ಗಳು ತೆರೆಯಲು ಅವಕಾಶ ನೀಡಿದ್ದರೂಮದ್ಯ ಮಾರಾಟದಲ್ಲಿ ಅಷ್ಟೇನೂ ಬದಲಾವಣೆ ಕಾಣಿಸುತ್ತಿಲ್ಲ.

‘ಪಾರ್ಸೆಲ್ ಸೇವೆಗಷ್ಟೇ ಅವಕಾಶ ಇದ್ದ ಸಂದರ್ಭದಲ್ಲಿ ದಿನಕ್ಕೆ 1.7 ಲಕ್ಷ ಬಾಕ್ಸ್ ಮದ್ಯ, 60 ಸಾವಿರ ಬಾಕ್ಸ್ ಬಿಯರ್ ಮಾರಾಟವಾಗುತ್ತಿತ್ತು. ಎರಡು ದಿನಗಳ ಮಾರಾಟ ಪ್ರಮಾಣ ಅಷ್ಟೇ ಇದೆ’ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT