ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಬಿ ತುಳುಕಿತು ಬಸವನಪುರ ಕೆರೆ

ಪುನರುಜ್ಜೀವನಗೊಂಡ ಬಳಿಕ ಮೊದಲ ಸಲ ಭರ್ತಿಯಾಯಿತು ಕೆರೆ ಒಡಲು
Last Updated 27 ಜುಲೈ 2021, 19:45 IST
ಅಕ್ಷರ ಗಾತ್ರ

ಬೆಂಗಳೂರು: ಪುನರುಜ್ಜೀವನಗೊಂಡು ಐದು ವರ್ಷಗಳ ಬಳಿಕ ಕೆ.ಆರ್‌.ಪುರ ಸಮೀಪದ ಬಸವನಪುರ ಕೆರೆ ಭರ್ತಿಯಾಗಿ ಕೋಡಿ ಹರಿದಿದೆ. ಈ ಕೆರೆ ತುಂಬುವುದಕ್ಕೆ ಕಾತರದಿಂದ ಕಾಯುತ್ತಿದ್ದ ಸ್ಥಳೀಯರು ಖುಷಿಯಲ್ಲಿ ಮಿಂದೆದ್ದಿದ್ದಾರೆ.

‘18 ಎಕರೆ ವಿಸ್ತೀರ್ಣದ ವಿಶಾಲವಾದ ಕೆರೆ ಇದು. ಎರಡು ದಶಕಗಳಲ್ಲಿ ಈ ಕೆರೆ ಇಷ್ಟೊಂದು ಸ್ವಚ್ಛ ನೀರಿನಿಂದ ತುಂಬಿದ್ದನ್ನು ಕಂಡಿಲ್ಲ. ಕೊಳಚೆ ನೀರಿನಿಂದ ಕಲುಷಿತಗೊಂಡಿದ್ದ ಈ ಜಲಕಾಯವನ್ನು ಐದು ವರ್ಷಗಳ ಹಿಂದೆ ಬಿಬಿಎಂಪಿಯು ₹ 3.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿತ್ತು. ಕೆರೆಗೆ ಒಳಚರಂಡಿಯ ತ್ಯಾಜ್ಯ ನೀರು ಸೇರದಂತೆ ವ್ಯವಸ್ಥೆ ಕಲ್ಪಿಸಿತ್ತು. ಆ ಬಳಿಕ ಮಳೆ ನೀರು ಮಾತ್ರ ಕೆರೆ ಒಡಲು ಸೇರುತ್ತಿದೆ. ಸ್ವತಂತ್ರನಗರ, ಕೊಡಿಗೆಹಳ್ಳಿ ರಸ್ತೆಗಳ ಪ್ರದೇಶದ ಮಳೆನೀರು ಈ ಜಲಕಾಯಕ್ಕೆ ಹರಿದುಬರುತ್ತಿದೆ’ ಎಂದು ಸ್ಥಳೀಯರಾದ ಬಾಲಾಜಿ ರಘೋತ್ತಮ್‌ ತಿಳಿಸಿದರು.

‘ಜಲಕಾಯಗಳ ಸರಣಿಯ ಮೊದಲ ಕೆರೆ ಇದು. ಹಾಗಾಗಿ ಮಳೆ ನೀರು ಮಾತ್ರ ಇದರ ಒಡಲಿಗೆ ಹರಿದು ಬರುತ್ತದೆ. ಈ ಜಲಕಾಯ ಭರ್ತಿಯಾಗಿ ಕೋಡಿ ಹರಿದ ನೀರು ಬೇರೆ ಕೆರೆಗಳಿಗೆ ಹರಿಯುತ್ತದೆ. ಅಭಿವೃದ್ಧಿಗೊಂಡ ಬಳಿಕ ಒಮ್ಮೆಯೂ ಭರ್ತಿ ಆಗಿರಲಿಲ್ಲ. ಕಳೆದ ವರ್ಷ ಭಾರಿ ಮಳೆ ಸುರಿದರೂ ಕೋಡಿ ಹರಿದಿರಲಿಲ್ಲ. ಏಕೆ ಹೀಗಾಗುತ್ತಿದೆ ಎಂಬ ಸಂದೇಹ ಕಾಡಿತ್ತು. ನಾವು ಕೆರೆಗಿಳಿದು ಪರಿಶೀಲಿಸಿದಾಗ ಈ ಕೆರೆ ಅಭಿವೃದ್ಧಿ ಕಾಮಗಾರಿಗೆ ನೀರು ಬರಿದುಮಾಡಲು ಅಳವಡಿಸಿದ್ದ ಕೊಳವೆಯೊಂದನ್ನು ತೆರವುಗೊಳಿಸದೇ ಬಿಟ್ಟಿದ್ದು ಪತ್ತೆಯಾಗಿತ್ತು. ಬಿಬಿಎಂಪಿ ಎಂಜಿನಿಯರ್‌ಗಳ ಗಮನಕ್ಕೆ ತಂದು ಅದನ್ನು ತೆಗೆಯಿಸಿದ್ದೆವು. ಹಾಗಾಗಿ ನೀರು ಪೋಲಾಗುವುದು ನಿಂತಿದೆ. ಈ ಬಾರಿಯ ಮೊದಲ ಮಳೆಯಲ್ಲೇ ಜಲಕಾಯ ಭರ್ತಿಯಾಗುವ ದೃಶ್ಯ ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದೆ’ ಎಂದು ಅವರು ಸಂತಸ ಹಂಚಿಕೊಂಡರು.

‘ಈ ಜಲಕಾಯ ಹಿಂದೆ ದುರ್ವಾಸನೆಯಿಂದ ಕೂಡಿತ್ತು. ಹಕ್ಕಿಗಳೂ ಕಣ್ಮರೆಯಾಗಿದ್ದವು. ಆದರೆ, ಪುನರುಜ್ಜೀವನಗೊಳಿಸಿದ ಬಳಿಕ ಕೆರೆಯಲ್ಲಿ ಹಕ್ಕಿಗಳ ಕಲರವ ಮತ್ತೆ ಕೇಳುತ್ತಿದೆ. ಕೊಕ್ಕರೆ, ನೀರುಗೋಳಿಗಳ ಹಿಂಡುಗಳು ಈ ಜಲಕಾಯದಲ್ಲಿ ವಿಹರಿಸುವುದನ್ನು ನೋಡಿದಾಗ ಮನ ಮುದಗೊಳ್ಳುತ್ತದೆ’ ಎನ್ನುತ್ತಾರೆ ಸ್ಥಳೀಯರಾದ ವಿಶ್ವನಾಥ ತೋರಗಲ್‌.

‘ನಾವು ಈ ಕೆರೆ ದಂಡೆಯ ಆಸುಪಾಸಿನಲ್ಲಿ 2ಸಾವಿರಕ್ಕೂ ಅಧಿಕ ಗಿಡ–ಮರಗಳನ್ನು ಬೆಳೆಸಿದ್ದೇವೆ. ನೂರಾರು ಹಕ್ಕಿಗಳು ಇಲ್ಲಿಗೆ ಬರುವುದಕ್ಕೆ ಇದು ಕೂಡಾ ಕಾರಣ. ಈ ಕೆರೆಯ ಸುತ್ತಲೂ ಬೇಲಿ ಹಾಕಿದ್ದಾರೆ. ಆದರೆ, ಪಶ್ಚಿಮ ದಿಕ್ಕಿನಲ್ಲಿ ಸ್ವಲ್ಪ ಭಾಗದಲ್ಲಿ ಮಾತ್ರ ಬೇಲಿ ಹಾಕುವ ಕೆಲಸ ಬಾಕಿ ಇದೆ. ಅದನ್ನು ಪೂರ್ಣಗೊಳಿಸಿದರೆ ಒಳ್ಳೆಯದು’ ಎಂದು ಬಾಲಾಜಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT