ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: 6ಲಕ್ಷ ಮತದಾರರು ಪಟ್ಟಿಯಿಂದ ಹೊರಕ್ಕೆ, ಡಿ.8ರವರೆಗೆ ಆಕ್ಷೇಪಣೆಗೆ ಅವಕಾಶ

ಮತದಾರರ ಕರಡು ಪಟ್ಟಿ ಬಿಡುಗಡೆ
Last Updated 9 ನವೆಂಬರ್ 2022, 20:40 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 91 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ಜನವರಿ 1ಕ್ಕೆ ಹೋಲಿಸಿದರೆ ಸುಮಾರು 3 ಲಕ್ಷ ಮತದಾರರು ಕಡಿಮೆಯಾಗಿದ್ದು, 6 ಲಕ್ಷ ಮತದಾರರನ್ನು ಪಟ್ಟಿಯಿಂದ ಬಿಡಲಾಗಿದೆ. 3 ಲಕ್ಷ ಮತದಾರರು ಹೊಸದಾಗಿ ನೋಂದಣಿಯಾಗಿದ್ದಾರೆ.

ಮುಂದಿನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಭಾರತ ಚುನಾವಣೆ ಆಯೋಗದ ನಿರ್ದೇಶನದಂತೆ ಬಿಬಿಎಂಪಿ ವ್ಯಾಪ್ತಿಯ ಮತದಾರರ ಕರಡು ಪಟ್ಟಿಯನ್ನು ನ.9ರಂದು ಪ್ರಕಟಿಸಲಾಗಿದೆ. ಡಿ.8ರವರೆಗೆ ಆಕ್ಷೇಪಣೆಗೆ ಅವಕಾಶ ಕಲ್ಪಿಸಿದ್ದು, ಜ.5ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ.

ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, 'ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಯಾವುದೇ ಆಕ್ಷೇಪಣೆ ಅಥವಾ ತಿದ್ದುಪಡಿ ಇದ್ದರೆ ಸರಿಪಡಿಸಿಕೊಳ್ಳಬಹುದು. www.bbmp.gov.in ನಲ್ಲಿ ಕರಡು ಪಟ್ಟಿ ಲಭ್ಯವಿದೆ" ಎಂದರು.

ಬಿಬಿಎಂಪಿಯ ವ್ಯಾಪ್ತಿಯ 28 ವಿಧಾನಸಭೆ ಕ್ಷೇತ್ರಗಳಲ್ಲಿ 8,514 ಮತಗಟ್ಟೆಗಳಿದ್ದು, ಇದೀಗ ಅದರ ಸಂಖ್ಯೆ 8,615ಕ್ಕೆ ಹೆಚ್ಚಾಗಿದೆ. ಕಂದಾಯ ಅಧಿಕಾರಿಗಳು, ವಾರ್ಡ್‌ ಕಚೇರಿಗಳಲ್ಲಿ ಮತದಾರರಿಗೆ ವಿಶೇಷ ನೋಂದಣಿ ಅಭಿಯಾನವನ್ನು ನ.12, 20, ಡಿ.3 ಹಮ್ಮಿಕೊಳ್ಳಲಾಗಿದೆ. ಡಿ.4ರಂದು ಅಂತಿಮ ವಿಶೇಷ ನೋಂದಣಿ ಅಭಿಯಾನ ನಡೆಯಲಿದೆ ಎಂದರು.

2023ರ ಜ.1, ಏ.1, ಜು.1 ಹಾಗೂ ಅ.1ರಂದು 18 ವರ್ಷ ತುಂಬಲಿರುವ ನಾಗರಿಕರು ಈಗಲೇ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಲು ಅರ್ಜಿ ಸಲ್ಲಿಸಬಹುದು ಎಂದರು.

ಆಧಾರ್‌ ಲಿಂಕ್‌; ನಗರ ಹಿಂದೆ
ಮತದಾರರ ಪಟ್ಟಿಗೆ ಆಧಾರ್‌ ಸಂಖ್ಯೆಯನ್ನು ಲಿಂಕ್‌ ಮಾಡುವ ಪ್ರಕ್ರಿಯೆಯಲ್ಲಿ ರಾಜ್ಯಮಟ್ಟದಲ್ಲಿ ಶೇ 68ರಷ್ಟು ಯಶ ಸಾಧಿಸಲಾಗಿದೆ. ಆದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ 26ರಷ್ಟು ಮತದಾರರು ಮಾತ್ರ ಆಧಾರ್‌ ಸಂಖ್ಯೆಯನ್ನು ಲಿಂಕ್‌ ಮಾಡಿದ್ದಾರೆ ಎಂದು ತುಷಾರ್‌ ಗಿರಿನಾಥ್ ತಿಳಿಸಿದರು.

ವೋಟರ್‌ ಹೆಲ್ಪ್‌ಲೈನ್ ಆ್ಯಪ್‌ ಮೂಲಕ ಆಧಾರ್‌ ಲಿಂಕ್‌ ಮಾಡಿಕೊಳ್ಳಬಹುದು. ಅಲ್ಲಿಯೇ ಇ–ಎಪಿಕ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಮತಗಟ್ಟೆ ವಿವರ, ಮತದಾನದ ಮಾಹಿತಿ ಎಲ್ಲವನ್ನೂ ಈ ಆ್ಯಪ್‌ನಲ್ಲಿ ಪಡೆಯಬಹುದಾಗಿದೆ ಎಂದರು.

ಅಧಿಕಾರಿಗಳಿಂದ ಜಾಥಾ
ಮತದಾರರ ಪಟ್ಟಿ ಪರಿಷ್ಕರಣೆ-2023 ಅಂಗವಾಗಿ ಮುಖ್ಯ ಚುನಾವಣೆ ಅಧಿಕಾರಿ ಮನೋಜ್‌ಕುಮಾರ್‌ ಮೀನಾ, ಜಿಲ್ಲಾ ಚುನಾವಣೆ ಅಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಜಾಥಾ ನಡೆಸಿದರು.

ಹಡ್ಸನ್ ವೃತ್ತದಿಂದ ಆರಂಭವಾದ ಜಾಥಾ, ಕಬ್ಬನ್ ಉದ್ಯಾನದ ಮುಖ್ಯದ್ವಾರದಿಂದ, ಸೆಂಟ್ರಲ್ ಲೈಬ್ರರಿ, ಹೈಕೋರ್ಟ್‌, ವಿಧಾನಸೌಧ ರಸ್ತೆ, ಪ್ರೆಸ್ ಕ್ಲಬ್, ಕಬ್ಬನ್ ಉದ್ಯಾನದ ಮೂಲಕ ಬಾಲಭವನದವರೆಗೆ ನಡೆಯಿತು. ಬಿಬಿಎಂಬಿ, ಮುಖ್ಯ ಚುನಾವಣಾಧಿಕಾರಿ ಕಚೇರಿ ಸಿಬ್ಬಂದಿ, ಚುನಾವಣಾ ಸಾಕ್ಷರತಾ ಸಂಘ, ಎನ್.ಸಿ.ಸಿ, ಎನ್.ಎಸ್.ಎಸ್ ವಿದ್ಯಾರ್ಥಿಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಭಾಗವಹಿಸಿದ್ದರು.

ವಿಶೇಷ ಆಯುಕ್ತ ಎಸ್.ರಂಗಪ್ಪ, ಡಾ. ತ್ರಿಲೋಕ್ ಚಂದ್ರ, ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ವೆಂಕಟೇಶ್, ಉಪ ಆಯುಕ್ತ ಮುರಳೀಧರ್, ಸಹಾಯ ಆಯುಕ್ತ ಉಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT