ಶುಕ್ರವಾರ, ಮೇ 27, 2022
31 °C
ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ 2021–22ನೇ ಸಾಲಿನ ಬಜೆಟ್‌

ಬಿಬಿಎಂಪಿ: ಅನುಪಾಲನಾ ವರದಿಯನ್ನೂ ‘ಗುಪ್ತ’ವಾಗಿಟ್ಟ ಪಾಲಿಕೆ

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ಬಜೆಟ್‌ ಮಂಡನೆಯ ಸಂದರ್ಭದಲ್ಲೇ ಹಿಂದಿನ ಸಾಲಿನ ಬಜೆಟ್‌ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಬಂಧಿಸಿದ ಅನುಪಾಲನಾ ವರದಿಯನ್ನೂ ಮಂಡಿಸುವುದು ವಾಡಿಕೆ. ಬಜೆಟ್‌ ಮಂಡಿಸುವ ಪರಿಪಾಠಕ್ಕೆ ಈ ಸಲ ಇತಿಶ್ರಿ ಹಾಡಿರುವ ಬಿಬಿಎಂಪಿ, ಹಿಂದಿನ ಸಾಲಿನ ಬಜೆಟ್‌ನ ಅನುಪಾಲನಾ ವರದಿಯನ್ನೂ ‘ಗುಪ್ತ’ವಾಗಿಟ್ಟಿದೆ. 

2022–23ನೇ ಸಾಲಿನ ಬಜೆಟ್‌ ಅನ್ನು ಮಾರ್ಚ್‌ 31ರ ರಾತ್ರೋರಾತ್ರಿ ವೆಬ್‌ಸೈಟ್‌ನಲ್ಲಿ (https://bbmp.gov.in) ಪ್ರಕಟಿಸಿರುವ ಬಿಬಿಎಂಪಿ, ಹಿಂದಿನ ಬಜೆಟ್‌ ಕಾರ್ಯಕ್ರಮಗಳ ಅನುಪಾಲನಾ ವರದಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಇದರಿಂದ 2021–22ನೇ ಸಾಲಿನ ಬಜೆಟ್‌ ಕಾರ್ಯಕ್ರಮಗಳು ಎಷ್ಟರಮಟ್ಟಿನ ಅನುಷ್ಠಾನವಾಗಿವೆ ಎಂಬುದು ನಿಗೂಢವಾಗಿಯೇ ಉಳಿದಿದೆ.

ಅನುಪಾಲನಾ ವರದಿಯ ಆಧಾರದಲ್ಲೇ ಬಜೆಟನ್ನು ಸಿದ್ಧಪಡಿಸಬೇಕು, ಯಾವೆಲ್ಲ ಕಾರ್ಯಕ್ರಮಗಳು ಎಷ್ಟು ಪ್ರಮಾಣದಲ್ಲಿ ಅನುಷ್ಠಾನಗೊಂಡಿವೆ, ಅವುಗಳಲ್ಲಿ ಏನಾದರೂ ಬದಲಾವಣೆ ಮಾಡಲಾಗಿದೆಯೇ, ಒಂದು ವೇಳೆ ಯೋಜನೆಗಳು ಪೂರ್ಣಗೊಳ್ಳದೇ ಮುಂದಿನ ಆರ್ಥಿಕ ವರ್ಷದಲ್ಲೂ ಮುಂದುವರಿದರೆ, ಅದಕ್ಕೆ ಎಷ್ಟು ಹೆಚ್ಚುವರಿ ಅನುದಾನ ಒದಗಿಸಬೇಕಾಗುತ್ತದೆ ಎಂಬ ಲೆಕ್ಕಾಚಾರಗಳ ಆಧಾರದಲ್ಲೇ ಆರ್ಥಿಕ ವಿಭಾಗದವರು ಬಜೆಟ್‌ ಅಂಕಿ ಅಂಶಗಳನ್ನು ಸಿದ್ಧಪಡಿಸಬೇಕಾಗುತ್ತದೆ. ಈ ಸಲದ ಬಜೆಟ್‌ನಲ್ಲಿ 2021–22ನೇ ಸಾಲಿನ ಪರಿಷ್ಕೃತ ಬಜೆಟ್‌ ವಿವರಗಳನ್ನು ಉಲ್ಲೇಖಿಸಲಾಗಿದೆ. ಆದರೆ, ಅದರ ವಿವರಗಳನ್ನು ಅನುಪಾಲನಾ ವರದಿಯಲ್ಲಿ ಒದಗಿಸಬೇಕಿತ್ತು. ಈ ವಿಚಾರದಲ್ಲಿ ಬಿಬಿಎಂಪಿ ಪಾರದರ್ಶಕವಾಗಿ ನಡೆದುಕೊಂಡಿಲ್ಲ ಎಂದು ಮಾಜಿ ಮೇಯರ್‌ ಗಂಗಾಂಬಿಕೆ ಅಸಮಾಧಾನ ವ್ಯಕ್ತಪಡಿಸಿದರು.

‘ರಾತ್ರೋರಾತ್ರಿ ಬಜೆಟ್‌ ಅನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಮೂಲಕ ಬಿಬಿಎಂಪಿಯ ಸಂಪ್ರದಾಯಕ್ಕೆ ಅಪಚಾರ ಎಸಗಲಾಗಿದೆ. ಈಗ ಕಳೆದ ವರ್ಷದ ಬಜೆಟ್ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಬಂಧಿಸಿದ ವಿವರಗಳನ್ನು ಅಧಿಕಾರಿಗಳು ಕತ್ತಲಲ್ಲಿ ಇಟ್ಟಿದ್ದಾರೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದರು.

‘ಬಿಬಿಎಂಪಿ ಆಡಳಿತ ವ್ಯವಸ್ಥೆಯನ್ನು ಹೇಳುವವರು ಕೇಳುವವರು ಯಾರೂ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಬಜೆಟ್ ಮಂಡನೆ ವಿಚಾರದಲ್ಲಿ ಬಿಬಿಎಂಪಿ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸಿದ್ದರೂ, ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಸರ್ಕಾರವೂ ಈ ವಿಚಾರದಲ್ಲಿ ಏಕಿಷ್ಟು ಮೌನ ವಹಿಸಿದೆಯೋ ತಿಳಿಯುತ್ತಿಲ್ಲ’ ಎಂದರು. 

‘ಅನುಪಾಲನಾ ವರದಿ ಶೀಘ್ರ ಪ್ರಕಟ’: ‘ಬಜೆಟ್‌ ಸಿದ್ಧಪಡಿಸುವ ಸಂದರ್ಭದಲ್ಲೇ ಅನುಪಾಲನಾ ವರದಿಯನ್ನೂ ಸಿದ್ಧಪಡಿಸಿದ್ದೇವೆ. ಇದನ್ನು ಸರ್ಕಾರದ ಗಮನಕ್ಕೂ ತಂದಿದ್ದೇವೆ. ಬಜೆಟ್‌ ಪ್ರತಿಯನ್ನು ಬಿಬಿಎಂಪಿ ವೆಬ್‌ಸೈಟ್‌ನನಲ್ಲಿ ಪ್ರಕಟಿಸಿದಂತೆಯೇ, ಅನುಪಾಲನಾ ವರದಿಯನ್ನೂ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತರಾದ (ಹಣಕಾಸು) ತುಳಸಿ ಮದ್ದಿನೇನಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು