ಭಾನುವಾರ, ಏಪ್ರಿಲ್ 2, 2023
31 °C
ಇತರ ಮುಖ್ಯ ಎಂಜಿನಿಯರ್‌ ವೃಂದದ ಹುದ್ದೆಗಳಲ್ಲೂ ಮಾರ್ಪಾಡು

ಬಿಬಿಎಂಪಿಯ ಕಸ ನಿರ್ವಹಣೆ ಮುಖ್ಯ ಎಂಜಿನಿಯರ್‌ ಹುದ್ದೆ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಕಸ ನಿರ್ವಹಣೆ ನಿಯಮಿತ ಸಂಸ್ಥೆಯ ಸ್ಥಾಪನೆಯಾಗುತ್ತಿರುವುದರಿಂದ ಬಿಬಿಎಂಪಿಯ ಕಸ ನಿರ್ವಹಣೆ ವಿಭಾಗದ ಮುಖ್ಯ ಎಂಜಿನಿಯರ್‌ (ಸಿ.ಇ) ಹುದ್ದೆಯನ್ನು ರದ್ದುಪಡಿಸಿ ನಗರಾಭಿವೃದ್ಧಿ ಇಲಾಖೆ ಮಂಗಳವಾರ ಅಧಿಸೂಚನೆ ಹೊರಡಿಸಿದೆ.

ವೈಟ್‌ಟಾಪಿಂಗ್‌  ಕಾಮಗಾರಿಗಳನ್ನು ಯೋಜನೆ ಕೇಂದ್ರ ವಿಭಾಗದಿಂದ ಬೇರ್ಪಡಿಸಿ ರಸ್ತೆ ಮೂಲಸೌಕರ್ಯ ವಿಭಾಗಕ್ಕೆ ವರ್ಗಾಯಿಸಲಾಗಿದೆ.

ದೈನಂದಿನ ಕೆಲಸ ಕಾರ್ಯಗಳ ಹಿತದೃಷ್ಟಿಯಿಂದ ಇಲಾಖೆಯು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಅನುಗುಣವಾಗಿ ಬಿಬಿಎಂಪಿಯ ಮುಖ್ಯ ಎಂಜಿನಿಯರ್‌ ವೃಂದದ ಹುದ್ದೆಗಳಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿದೆ.

ಒಎಫ್‌ಸಿ ವಿಭಾಗದ ಮುಖ್ಯ ಎಂಜಿನಿಯರ್‌ ಹುದ್ದೆಯನ್ನು ಸೂಪರಿಂಟೆಂಡಿಂಗ್‌ ಎಂಜಿನಿಯರ್‌ (ಒಎಫ್‌ಸಿ) ಸ್ವತಂತ್ರ ಪ್ರಭಾರ ಹುದ್ದೆಯನ್ನಾಗಿ ಬದಲಾಯಿಸಲಾಗಿದೆ. ದಾಸರಹಳ್ಳಿ ವಲಯದ ಮುಖ್ಯ ಎಂಜಿನಿಯರ್‌ ಹುದ್ದೆಯನ್ನು ಸೂಪರಿಂಟೆಂಡಿಂಗ್‌ ಎಂಜಿನಿಯರ್‌ (ಎಸ್‌.ಇ) ಹುದ್ದೆಯನ್ನಾಗಿ ಮಾರ್ಪಾಡು ಮಾಡಲಾಗಿದೆ. ಈ ವಲಯಕ್ಕೆ ಸಂಬಂಧಿಸಿ ಮುಖ್ಯ ಎಂಜಿನಿಯರ್‌ ಅವರು ಲೋಕೋಪಯೋಗಿ ಇಲಾಖೆ ಡಿ–ಕೋಡ್‌ನಂತೆ ನೀಡಬೇಕಾದ ತಾಂತ್ರಿಕ ಮಂಜೂರಾತಿಗಳನ್ನು ಇನ್ನು ಯಲಹಂಕ ವಲಯದ ಮುಖ್ಯ ಎಂಜಿನಿಯರ್‌ ಅವರಿಂದ ಪಡೆದುಕೊಳ್ಳಬೇಕಾಗುತ್ತದೆ. ಉಳಿದಂತೆ ದಾಸರಹಳ್ಳಿ ವಲಯದ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಅವರು ಸ್ವತಂತ್ರ ಪ್ರಭಾರವನ್ನು ಹೊಂದಿರಲಿದ್ದಾರೆ.

ಬಿಬಿಎಂಪಿಯ ಮುಖ್ಯ ಎಂಜಿನಿಯರ್‌ ವೃಂದದ ಮತ್ತು ಸ್ವತಂತ್ರ ಪ್ರಭಾರದ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ಗಳ ಹುದ್ದೆಗಳಿಗೆ ಗ್ರೂಪ್‌ ಎ ವೃಂದದ ಎಂಜಿನಿಯರ್‌ಗಳನ್ನು ನಿಯುಕ್ತಿಗೊಳಿಸಲಾಗಿದೆ.

ಬಿಬಿಎಂಪಿ– ಎಂಜಿನಿಯರ್‌ ಹುದ್ದೆ ಬದಲಾವಣೆಗಳೇನು?
ಕಸ ನಿರ್ವಹಣೆ ವಿಭಾಗದ ಮುಖ್ಯ ಎಂಜಿನಿಯರ್‌ ಆಗಿದ್ದ ಪಿ.ವಿಶ್ವನಾಥ್‌ ಅವರನ್ನು ಪಶ್ಚಿಮ ವಲಯದ ಮುಖ್ಯ ಎಂಜಿನಿಯರ್‌ ಆಗಿ ಹಾಗೂ ಒಎಫ್‌ಸಿ ವಿಭಾಗದ ಮುಖ್ಯ ಎಂಜಿನಿಯರ್‌ ಎನ್‌.ರಮೇಶ್‌ ಅವರನ್ನು ಬೊಮ್ಮನಹಳ್ಳಿ ವಲಯದ ಮುಖ‌್ಯ ಎಂಜಿನಿಯರ್‌ ಆಗಿ ನಿಯುಕ್ತಿಗೊಳಿಸಲಾಗಿದೆ.

ಮುಖ್ಯ ಎಂಜಿನಿಯರ್‌ ಬಿ.ಎಸ್‌.ಪ್ರಹ್ಲಾದ್ ಅವರಿಗೆ ಈಗಿರುವ ರಸ್ತೆ ಮೂಲಸೌಕರ್ಯ ಮತ್ತು ರಾಜಕಾಲುವೆ ಹೊಣೆಯ ಜೊತೆ ಮೊದಲ ಹಂತ ವೈಟ್‌ಟಾಪಿಂಗ್‌ ಕಾಮಗಾರಿಗಳ ಹೊಣೆಯೂ ಹೆಗಲೇರಿದೆ. ಮುಖ್ಯ ಎಂಜಿನಿಯರ್‌ ಎ.ಬಿ.ದೊಡ್ಡಯ್ಯ ಅವರಿಂದ ಪಶ್ಚಿಮ ವಲಯದ ಮುಖ್ಯ ಎಂಜಿನಿಯರ್‌ ಹೊಣೆಯನ್ನು ಹಿಂಪಡೆಯಲಾಗಿದ್ದು, ಅವರು ಜಾಗೃತ ಮತ್ತು ಪಿಪಿ‌ಇಡಿ ಮುಖ್ಯ ಎಂಜಿನಿಯರ್‌ ಆಗಿ ಮುಂದುವರಿಯಲಿದ್ದಾರೆ. ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಎನ್‌.ವಿಜಯ ಕುಮಾರ್‌ ಅವರಿಂದ ದಾಸರಹಳ್ಳಿ ವಲಯದ ಮುಖ್ಯ ಎಂಜಿನಿಯರ್‌ ಪ್ರಭಾರ ಹೊಣೆಯನ್ನು ಹಿಂಪಡೆಯಲಾಗಿದೆ. 

ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಬಿ.ಟಿ.ಮೋಹನ್‌ ಕೃಷ್ಣ ಅವರಿನ್ನು ಕೆರೆ ವಿಭಾಗದ ಪ್ರಭಾರ ಮುಖ್ಯ ಎಂಜಿನಿಯರ್‌ ಬದಲು ಈ ವಿಭಾಗದ ಸ್ವತಂತ್ರ ಪ್ರಭಾರ ಸೂಪರಿಂಟೆಂಡಿಂಗ್‌ ಎಂಜಿನಿಯರ್‌. ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಆರ್‌.ಸುಗುಣ ಅವರಿಗೆ ಈಗಿನ ಹೊಣೆಯ ಜೊತೆಗೆ ದಾಸರಹಳ್ಳಿ ವಲಯದ ಸ್ವತಂತ್ರ ಪ್ರಭಾರದ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಹೊಣೆ ವಹಿಸಲಾಗಿದೆ. ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಬಿ.ಎಲ್‌.ನರಸರಾಮರಾವ್‌ ಅವರಿಗೆ ಈಗಿನ  ಹೊಣೆಯ ಜೊತೆ ಒಎಫ್‌ಸಿ ವಿಭಾಗದ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಹೊಣೆಯನ್ನು ಹೆಚ್ಚುವರಿಯಾಗಿ ವಹಿಸಲಾಗಿದೆ. 

ಪ್ರಭಾರ ಪ್ರಧಾನ ಎಂಜಿನಿಯರ್ ಎಸ್‌.ಪ್ರಭಾಕರ್‌; ಮುಖ್ಯ ಎಂಜಿನಿಯರ್‌ಗಳಾದ ಎಸ್‌.ಪಿ.ರಂಗನಾಥ್‌, ಪಿ.ರಾಜೀವ್‌, ಪರಮೇಶ್ವರಯ್ಯ ಹಾಗೂ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಲೋಕೇಶ್‌ ಅವರು ಹಿಂದಿನ ಹುದ್ದೆಗಳಲ್ಲೇ ಮುಂದುವರಿದಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು