ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಅಭಿವೃದ್ಧಿಗೆ – ಕಸ ವಿಲೇವಾರಿಗೆ ಶೀಘ್ರ ಕ್ರಮ: ಬಿಬಿಎಂಪಿ ಆಯುಕ್ತ

ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಬಿಬಿಎಂಪಿ ಆಯುಕ್ತ ಗೌರವ್‌ ಗುಪ್ತ ಭೇಟಿ
Last Updated 21 ಆಗಸ್ಟ್ 2021, 19:49 IST
ಅಕ್ಷರ ಗಾತ್ರ

ಬೆಂಗಳೂರು: ‘ಪೀಣ್ಯದ ಕೈಗಾರಿಕಾ ಪ್ರದೇಶದ ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ 14ನೇ ಮುಖ್ಯ ರಸ್ತೆಯನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು. ಈ ಪ್ರದೇಶಕ್ಕೆ ಮೂಲಸೌಕರ್ಯಗಳನ್ನು ಆದ್ಯತೆ ಮೇರೆಗೆ ಕಲ್ಪಿಸಬೇಕು. ಕಸ ವಿಲೇವಾರಿ ಕ್ರಮಬದ್ಧವಾಗಿ ನಡೆಯುವಂತೆ ನೋಡಿಕೊಳ್ಳಬೇಕು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿದ ಅವರುಪೀಣ್ಯ ಕೈಗಾರಿಕಾ ಸಂಸ್ಥೆ ಪದಾಧಿಕಾರಿಗಳ
ಜೊತೆ ಸಭೆ ನಡೆಸಿದರು. ದಾಸರಹಳ್ಳಿ ಕ್ಷೇತ್ರದ ಶಾಸಕ ಆರ್‌.ಮಂಜುನಾಥ್‌ ಅವರ ಜೊತೆ ಕೈಗಾರಿಕಾ ಪ್ರದೇಶಗಳಿಗೂ ಭೇಟಿ ನೀಡಿ ಕೈಗಾರಿಕೋದ್ಯಮಿಗಳ ಹಾಗೂ ಸ್ಥಳೀಯರ ಅಹವಾಲು ಆಲಿಸಿದರು.

‘ಇಲ್ಲಿನ ರಸ್ತೆಗಳು ಗುಂಡಿಗಳು ಬಿದ್ದು ವರ್ಷಗಳೇ ಕಳೆದರೂ ದುರಸ್ತಿ ಆಗಿಲ್ಲ. ಕೈಗಾರಿಕಾ ಕಸ ಎಂಬ ನೆಪ ಹೇಳುವ ಬಿಬಿಎಂಪಿ ಅಧಿಕಾರಿಗಳು ಯಾವ ಕಸವನ್ನೂ ಒಯ್ಯುತ್ತಿಲ್ಲ. ಇಲ್ಲಿನ ಬೀದಿದೀಪಗಳು ಉರಿಯುತ್ತಿಲ್ಲ. ಈ ಪ್ರದೇಶಕ್ಕೆ ಪ್ರಮುಖ ಸಂಪರ್ಕ ಕೊಂಡಿಯಂತಿರುವ 14ನೇ ಮುಖ್ಯರಸ್ತೆಯೂ ಅಧ್ವಾನ ಸ್ಥಿತಿ ತಲುಪಿದೆ’ ಎಂದು ಉದ್ಯಮಿಗಳು ಮುಖ್ಯ ಆಯುಕ್ತರ ಗಮನ ಸೆಳೆದರು.

‘ಕೈಗಾರಿಕಾ ವಲಯದ ನಾಲ್ಕು ವಾರ್ಡ್‌ಗಳ ಪ್ರಮುಖ ಸಮಸ್ಯೆಗಳನ್ನು ಉದ್ಯಮಿಗಳು ಗಮನಕ್ಕೆ ತಂದಿದ್ದಾರೆ. ರಸ್ತೆಗಳ ಗುಂಡಿಗಳನ್ನು ಮುಚ್ಚುವುದೂ ಸೇರಿದಂತೆ ಇಲ್ಲಿನ ಸಣ್ಣ ‍ಪುಟ್ಟ ನ್ಯೂನತೆಗಳನ್ನು ತಕ್ಷಣವೇ ಸರಿಪಡಿಸಲಿದ್ದೇವೆ. ದೀರ್ಘಕಾಲದ ಸಮಸ್ಯೆಗಳನ್ನು ನಿವಾರಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸುತ್ತೇವೆ. ಕಸ ವಿಲೇವಾರಿ ಸಮಸ್ಯೆ ನೀಗಿಸುವ ಕುರಿತು ಕಸ ನಿರ್ವಹಣಾ ವಿಭಾಗದ ಅಧಿಕಾರಿಗಳ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಈ ಸಮಸ್ಯೆ ನೀಗಿಸಲು ಅಧಿಕಾರಿಗಳ ಪ್ರತ್ಯೇಕ ತಂಡವನ್ನು ನಿಯೋಜನೆ ಮಾಡಲಿದ್ದೇವೆ. ಬೀದಿದೀಪದ ಸಮಸ್ಯೆಯನ್ನು ವಾರದೊಳಗೆ ಬಗೆಹರಿಸುತ್ತೇವೆ’ ಎಂದು ಮುಖ್ಯ ಆಯುಕ್ತರು ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಶಾಸಕ ಆರ್.ಮಂಜುನಾಥ್, ‘ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಮೂಲಸೌಕರ್ಯಗಳ ಕೊರತೆ ತೀವ್ರವಾಗಿದೆ. ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳಲ್ಲಿ ಸೇರ್ಪಡೆಯಾಗಿರುವ ಪ್ರದೇಶದಲ್ಲಿ ರಸ್ತೆಗಳ ದುರಸ್ತಿ ಆಗಬೇಕಿದೆ. ನೆಲಗದರನಹಳ್ಳಿ ರಸ್ತೆ ಹಾಗೂ ಹೆಸರಘಟ್ಟ ಮುಖ್ಯ ರಸ್ತೆಗಳಲ್ಲಿ ಕಾವೇರಿ 5ನೇ ಹಂತದ ಕೊಳವೆ
ಮಾರ್ಗ ಅಳವಡಿಸಲಾಗುತ್ತಿದೆ. ಹಾಗಾಗಿ ಇಲ್ಲಿನ ರಸ್ತೆ ಸಂಪೂರ್ಣ ಹಾಳಾ
ಗಿದೆ. ಅದನ್ನು ಸರಿಪಡಿಸಿಕೊಡಬೇಕು’ ಎಂದು ಒತ್ತಾಯಿಸಿದರು.

ರಾಜ್ ಗೋಪಾಲ್ ನಗರ ವಾರ್ಡ್, ಕೆಂಪೇಗೌಡ ಗಾರ್ಡನ್ ಹಾಗೂ ಸುತ್ತಮುತ್ತಲಿನ ಪ್ರದೇಶದ ರಸ್ತೆಗಳನ್ನು ಮುಖ್ಯ ಆಯುಕ್ತರು ತಪಾಸಣೆ ನಡೆಸಿದರು. ರಸ್ತೆಗಳು ಹದಗೆಟ್ಟಿದ್ದು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅವುಗಳನ್ನು ಕೂಡಲೇ ದುರಸ್ತಿ ಪಡಿಸುವಂತೆ ಸೂಚನೆ ನೀಡಿದರು.

‘ತಿಂಗಳಿಗೊಮ್ಮೆ ಸಭೆ’

‘ಕೈಗಾರಿಕಾ ಪ್ರದೇಶದ ತೆರಿಗೆ ವಸೂಲಿ ಸಮಸ್ಯೆ ಇಲ್ಲ. ಬಾಕಿ ಇರುವ ತೆರಿಗೆ ಪಾವತಿಸಲು ಉದ್ಯಮಿಗಳೂ ಒಪ್ಪಿದ್ದಾರೆ. ಪೀಣ್ಯ ಕೈಗಾರಿಕಾ ಸಂಸ್ಥೆಯ ಪದಾಧಿಕಾರಿಗಳ ಜೊತೆ ತಿಂಗಳಿಗೊಮ್ಮೆ ಸಭೆ ನಡೆಸುವ ಮೂಲಕ ಈ ಪ್ರದೇಶದ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಗೌರವ್ ಗುಪ್ತ ತಿಳಿಸಿದರು.

‘ರಾಜಕಾಲುವೆ ದುರಸ್ತಿಗೆ ಕ್ರಮ’

ರಾಜಕಾಲುವೆಗಳು ಸಮರ್ಪಕವಾಗಿಲ್ಲದ ಕಾರಣ ಮಳೆಗಾಲದಲ್ಲಿ ಪ್ರವಾಹ ಉಂಟಾಗುತ್ತಿರುವ ಕುರಿತು ಶಾಸಕ ಆರ್‌.ಮಂಜುನಾಥ್‌ ಹಾಗೂ ಸ್ಥಳೀಯರು ಮುಖ್ಯ ಆಯುಕ್ತರ ಗಮನ ಸೆಳೆದರು.

‘ಎಲ್ಲೆಲ್ಲಿ ಮಳೆ ನೀರಿನ ಸಹಜ ಹರಿವಿಗೆ ಅಡ್ಡಿಯಾಗುತ್ತಿದೆ ಎಂದು ಪತ್ತೆ ಹಚ್ಚಬೇಕು. ಪ್ರವಾಹ ಉಂಟಾಗುವುದನ್ನು ತಡೆಯಲು ಇಲ್ಲಿನ ರಾಜಕಾಲುವೆಗಳನ್ನು ದುರಸ್ತಿಗೊಳಿಸಲು ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಬೇಕು’ ಎಂದು ಗೌರವ್‌ ಗುಪ್ತ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT