ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಂಕಿ ರಸ್ತೆ ಮೇಲ್ಸೇತುವೆ: ಮರ ಕಡಿಯುವ ಕಡತಕ್ಕೆ ತಡೆ

Last Updated 1 ಮಾರ್ಚ್ 2023, 20:46 IST
ಅಕ್ಷರ ಗಾತ್ರ

ಬೆಂಗಳೂರು: ಸ್ಯಾಂಕಿ ರಸ್ತೆ ವಿಸ್ತರಣೆ, ಮೇಲ್ಸೇತುವೆ ಯೋಜನೆಗಾಗಿ ಮರ ಕಡಿಯಲು ಅರಣ್ಯ ಸಂರಕ್ಷಣಾಧಿಕಾರಿಗೆ ನೀಡಿರುವ ಕಡತವನ್ನು ವಾಪಸ್‌ ಪಡೆದುಕೊಳ್ಳುವಂತೆ ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್‌ ಅವರಿಗೆ ತುಷಾರ್‌ ಗಿರಿನಾಥ್‌ ಸೂಚಿಸಿದ್ದಾರೆ.

ಮಲ್ಲೇಶ್ವರ, ವೈಯಾಲಿಕಾವಲ್‌, ಸದಾಶಿವನಗರದ ನಿವಾಸಿಗಳ ಕಲ್ಯಾಣ ಸಂಘಗಳ ಸದಸ್ಯರು ಹಾಗೂ ಸ್ಯಾಂಕಿ ಕೆರೆ ತಂಡದವರು ಬುಧವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ತುಷಾರ್‌ ಗಿರಿನಾಥ್‌, ‘ಮರಗಳ ಕಡಿತ ಮಾಡುವ ಯೋಜನೆ ಇದೀಗ ಬಿಎಲ್‌ಟಿಎಯಲ್ಲಿದೆ. ಅಲ್ಲಿ ತೀರ್ಮಾನವಾಗುವವರೆಗೂ ಮರ ಕಡಿಯಲು ಅನುಮತಿ ನೀಡುವ ಪ್ರಕ್ರಿಯೆ ನಡೆಯುವುದು ಬೇಡ ಎಂದು ಪ್ರಹ್ಲಾದ್‌ ಹಾಗೂ ಡಿಸಿಎಫ್‌ ಸರೀನಾ ಅವರಿಗೆ ಸೂಚಿಸಿದರು’ ಎಂದು ಸ್ಯಾಂಕಿ ಕೆರೆ ತಂಡದ ಸದಸ್ಯರು ಹೇಳಿದರು.

‘ಸ್ಯಾಂಕಿ ರಸ್ತೆ ವಿಸ್ತರಣೆ ಹಾಗೂ ಮೇಲ್ಸೇತುವೆ ಯೋಜನೆಗಾಗಿ ಮರಗಳನ್ನು ಕಡಿಯುವ ಬಗ್ಗೆ ಅನುಮತಿ ಪಡೆಯಲು ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್‌ ಅವರು ಡಿಸಿಎಫ್‌ ಸರೀನಾ ಅವರಿಗೆ ಕಡತ ಕಳುಹಿಸಿದ್ದರು. ಈ ಇಬ್ಬರೂ ಅಧಿಕಾರಿಗಳನ್ನು ಭೇಟಿ ಮಾಡಿ ಪ್ರಕ್ರಿಯೆ ನಿಲ್ಲಿಸುವಂತೆ ಕೋರಿದ್ದೆವು. ಆದರೆ ಅವರು ಸ್ಪಂದಿಸಲಿಲ್ಲ. ಹೀಗಾಗಿ ಮುಖ್ಯ ಆಯುಕ್ತರನ್ನು ಭೇಟಿ ಮಾಡಿ ಮನವಿ ಮಾಡಿದಾಗ ಅವರು ನಮ್ಮ ಮುಂದೆಯೇ ಅಧಿಕಾರಿಗಳಿಗೆ ಸೂಚನೆ ನೀಡಿದರು’ ಎಂದು ಸ್ಯಾಂಕಿ ಕೆರೆ ತಂಡದ ಪ್ರೀತಿ ಸುಂದರ್‌ರಾಜನ್‌ ತಿಳಿಸಿದರು.

‘ಉತ್ತಮ ಬೆಂಗಳೂರಿಗಾಗಿ ನಾಗರಿಕರು ಮತ್ತು ಸರ್ಕಾರಿ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಬೇಕು. ಸ್ಯಾಂಕಿ ರಸ್ತೆ ವಿಸ್ತರಣೆ ಹಾಗೂ ಮೇಲ್ಸೇತುವೆ ಯೋಜನೆಯನ್ನು ಕೈಬಿಡುವವರೆಗೂ ನಮ್ಮ ಹೋರಾಟ ಬಿಡುವುದಿಲ್ಲ’ ಎಂದು ಸಿಟಿಜನ್ಸ್‌
ಫಾರ್‌ ಸ್ಯಾಂಕಿ ಕಿಮ್ಸುಕಾ ಅಯ್ಯರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT