ಭಾನುವಾರ, ಜೂನ್ 20, 2021
29 °C
ಮೋಟಾರುರಹಿತ ಸಾರಿಗೆ ವ್ಯವಸ್ಥೆ ಕಲ್ಪಿಸುವ ₹81.84 ಕೋಟಿ ಕಾಮಗಾರಿ

ಬೆಂಗಳೂರು| ತಪ್ಪು ಮಾಹಿತಿಗೆ ಕಾಮಗಾರಿ ಗುತ್ತಿಗೆಯ ಉಡುಗೊರೆ!

ಮಂಜುನಾಥ ಹೆಬ್ಬಾರ್‌ Updated:

ಅಕ್ಷರ ಗಾತ್ರ : | |

BBMP

ಬೆಂಗಳೂರು: ತಮ್ಮ ವಾರ್ಷಿಕ ವಹಿವಾಟಿನ ಬಗ್ಗೆ ತಪ್ಪು ಮಾಹಿತಿ ಕೊಟ್ಟ ಗುತ್ತಿಗೆದಾರನಿಗೇ ಬಿಬಿಎಂಪಿಯು ₹81.84 ಕೋಟಿ ವೆಚ್ಚದ ಕಾಮಗಾರಿಗಳ ಹೊಣೆ ವಹಿಸಿದೆ.

ಮೆಟ್ರೊ ಸಂಪರ್ಕ ಕಲ್ಪಿಸುವ ಎಂ.ಜಿ.ರಸ್ತೆ, ಇಂದಿರಾನಗರ, ಬೈಯಪ್ಪನಹಳ್ಳಿ, ಹೊರವರ್ತುಲ ರಸ್ತೆ ಹಾಗೂ ಐಟಿ ಹಬ್‌ಗೆ (ಸುರಂಜನ್‌ದಾಸ್ ರಸ್ತೆ ಸೇರಿ) ₹51.84 ಕೋಟಿ ವೆಚ್ಚದಲ್ಲಿ ಮೋಟಾರುರಹಿತ ಸಾರಿಗೆ ವ್ಯವಸ್ಥೆ (ಪಾದಚಾರಿ ಮಾರ್ಗ, ಸೈಕಲ್‌ ಪಥ) ಕಲ್ಪಿಸಲು ಬಿಬಿಎಂಪಿ ಆಹ್ವಾ ನಿಸಿದ್ದ ಟೆಂಡರ್‌ ಪ್ರಕ್ರಿಯೆಯಲ್ಲಿ ಐವರು ಗುತ್ತಿಗೆದಾರರು ಭಾಗವಹಿಸಿದ್ದರು. ಕಾಮಗಾರಿ ಮೊತ್ತಕ್ಕಿಂತ ದುಪ್ಪಟ್ಟು ವಾರ್ಷಿಕ ವಹಿವಾಟು ಹೊಂದಿರಬೇಕು ಎಂಬ ಷರತ್ತು ವಿಧಿಸಲಾಗಿತ್ತು. ದಾಖಲೆಗಳು ಸಮರ್ಪಕವಾಗಿಲ್ಲ ಎಂಬ ಕಾರಣಕ್ಕೆ ಇಬ್ಬರ ಬಿಡ್‌ಗಳನ್ನು ಬಿಬಿಎಂಪಿ ತಿರಸ್ಕರಿಸಿತ್ತು.

ಅತಿಕಡಿಮೆ ಮೊತ್ತಕ್ಕೆ ಬಿಡ್‌ ಮಾಡಿದ್ದ ಎಂ.ವೆಂಕಟಾಚಲಪತಿ ಅವರಿಗೆ ಜುಲೈ 20ರಂದು ಕಾಮ ಗಾರಿಯ ಗುತ್ತಿಗೆ ನೀಡಲಾಗಿದೆ. ಮಾಗಡಿ ರಸ್ತೆ, ದೀಪಾಂಜಲಿನಗರ, ಮೈಸೂರು ರಸ್ತೆ, ಜಯನಗರ– ಆರ್‌.ವಿ.ರಸ್ತೆ, ಜೆ.ಪಿ.ನಗರ, ಮಹಾಲಕ್ಷ್ಮಿಪುರ, ರಾಜಾಜಿನಗರ, ಯಶವಂತ ಪುರ, ಬನಶಂಕರಿ ಮೆಟ್ರೊ ನಿಲ್ದಾಣಗಳ ಬಳಿ ಮೋಟಾರುರಹಿತ ಸಾರಿಗೆ ವ್ಯವಸ್ಥೆ ಕಲ್ಪಿಸಲು ಇದೇ ಗುತ್ತಿಗೆದಾರ ರಿಗೆ ₹30 ಕೋಟಿಯ ಕಾಮಗಾರಿ ವಹಿ ಸಲಾಗಿದೆ. ಟೆಂಡರ್‌ನಲ್ಲಿ ಭಾಗವ ಹಿ ಸುವ ವೇಳೆಯಲ್ಲಿ ವೆಂಕಟಾಚಲಪತಿ ಅವರು ಒಂದೊಂದು ಕಾಮಗಾರಿಗೆ ಒಂದೊಂದು ರೀತಿಯ ವಾರ್ಷಿಕ ವಹಿ ವಾಟಿನ ಪ್ರಮಾಣಪತ್ರ ಸಲ್ಲಿಸಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯಿಂದ ಗೊತ್ತಾಗಿದೆ. 

ಈ ಗುತ್ತಿಗೆದಾರರು 2015ರಲ್ಲಿ ಕಾಡುಗೋಡಿ ಸೇತುವೆ ಮತ್ತು ಹೂಡಿ ರೈಲ್ವೆ ಗೇಟ್‌ನಿಂದ ಸಾದರಮಂಗಲ ದವರೆಗೆ ರಸ್ತೆ ಅಭಿವೃದ್ಧಿ (₹8.40 ಕೋಟಿ ವೆಚ್ಚ) ಕಾಮಗಾರಿ ನಡೆಸಿದ್ದರು. ಟೆಂಡರ್‌ಗೆ ಅರ್ಜಿ ಹಾಕುವ ವೇಳೆ ವಾರ್ಷಿಕ ವಹಿವಾಟಿನ ಮೊತ್ತ ₹24.75 ಕೋಟಿ (2013–14) ಹಾಗೂ ₹25.32 ಕೋಟಿ (2014–15) ಎಂದು ಲೆಕ್ಕಪರಿಶೋಧಕರಿಂದ ಪಡೆದ ಪ್ರಮಾಣಪತ್ರ ಸಲ್ಲಿಸಿದ್ದರು. ಅವರು 2017ರಲ್ಲಿ ನಡೆಸಿದ ಹೊರವರ್ತುಲ ರಸ್ತೆಯ ಅಭಿವೃದ್ಧಿ ಕಾಮಗಾ ರಿಗೆ ಮತ್ತೊಂದು ಬಗೆಯ ಪ್ರಮಾಣಪತ್ರ ಕೊಟ್ಟಿ ದ್ದರು. ವಾರ್ಷಿಕ ವಹಿ ವಾಟಿನ ಮೊತ್ತ ₹56.08 ಕೋಟಿ (2013–14) ಹಾಗೂ 59.10 ಕೋಟಿ (2014–15) ಎಂದು ಅದೇ ಲೆಕ್ಕಪರಿಶೋಧಕರು ಪ್ರಮಾಣಪತ್ರ ದಲ್ಲಿ ಉಲ್ಲೇಖಿಸಿದ್ದರು. ಆಗಲೂ ಅಧಿಕಾರಿಗಳು ಪ್ರಮಾಣಪತ್ರ ಪರಿಶೀ ಲಿಸದೆಯೇ ಕಾಮಗಾರಿಯ ಗುತ್ತಿಗೆ ನೀಡಿದ್ದರು. ಅವರಿಗೆ ಪಾಲಿಕೆಯು 2018ರ ಜ. 10ರಂದು ಕಾಮಗಾರಿ ನಡೆಸಿದ ಪ್ರಮಾಣಪತ್ರ ನೀಡಿತ್ತು. ಇದರಲ್ಲಿ ವಾರ್ಷಿಕ ವಹಿವಾಟಿನ ಮೊತ್ತ ₹79.40 ಕೋಟಿ (2015–16) ಹಾಗೂ ₹99.70 ಕೋಟಿ (2016–17) ಎಂದು ಉಲ್ಲೇಖಿಸಲಾಗಿತ್ತು. 

ಮೋಟಾರುಹಿತ ಸಾರಿಗೆ ವ್ಯವಸ್ಥೆ ಕಲ್ಪಿಸಲು ಕರೆದಿದ್ದ ಟೆಂಡರ್‌ಗೆ ದಾಖಲೆ ಸಲ್ಲಿಸುವ ವೇಳೆ ವೆಂಕಟಾಚಲಪತಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ನಾಗರಿಕ ರೊಬ್ಬರು ಬಿಬಿಎಂಪಿ ಆಯುಕ್ತರಿಗೆ ಪುರಾವೆಸಹಿತ ದೂರು ನೀಡಿದ್ದರು. ಜುಲೈ 13ರಂದು ಪಾಲಿಕೆಯ ಅಂದಿನ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ದೂರಿನ ವಿಚಾರಣೆ ನಡೆಸಿದ್ದರು.

‘ವೆಂಕಟಾಚಲಪತಿ ಅವರ ವಾರ್ಷಿಕ ವಹಿವಾಟು ₹128 ಕೋಟಿ (2016–17) ಹಾಗೂ ₹139.25 ಕೋಟಿ ಎಂದು ಲೆಕ್ಕಪರಿಶೋಧಕರು ಪ್ರಮಾಣಪತ್ರ ಸಲ್ಲಿಸಿದ್ದಾರೆ. ಹೀಗಾಗಿ, ಕಾಮಗಾರಿ ನಿರ್ವಹಿಸಲು ಅವರು ತಾಂತ್ರಿಕವಾಗಿ ಸಮರ್ಥರು. ಆರೋಪದಲ್ಲಿ ಹುರುಳಿಲ್ಲ‘ ಎಂದು ದೂರನ್ನು ವಜಾಗೊಳಿಸಿದ್ದರು.

‘ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಟೆಂಡರ್‌ ಪರಿಶೀ ಲನಾ ತಾಂತ್ರಿಕ ಸಮಿತಿಗೆ ಮುಖ್ಯಸ್ಥರು. ಈ ಹಿಂದಿನ ಮುಖ್ಯ ಎಂಜಿನಿಯರ್‌ ಹಾಗೂ ಸಂಬಂಧಿಸಿದ ಕಾರ್ಯಪಾಲಕ ಎಂಜಿನಿಯರ್‌ ದಾಖಲೆಗಳನ್ನು ಸರಿ ಯಾಗಿ ಪರಿಶೀಲಿಸದೆ ಗುತ್ತಿಗೆ ನೀಡಲು ಶಿಫಾರಸು ಮಾಡಿದ್ದಾರೆ. ಆಯುಕ್ತರನ್ನು ಕತ್ತಲಲ್ಲಿ ಇಟ್ಟಿದ್ದಾರೆ. ಗುತ್ತಿಗೆಯಲ್ಲಿ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತ ವಾಗಿದೆ‘ ಎಂದು ದೂರುದಾರರು ಆರೋಪಿಸಿದ್ದಾರೆ.

‘ಎರಡು ಬೇರೆಬೇರೆ ಕಾಮಗಾರಿಗಳ ಟೆಂಡರ್‌ನಲ್ಲಿ ಒಂದೇ ಗುತ್ತಿಗೆದಾರರು ಒಂದೇ ಆರ್ಥಿಕ ವರ್ಷಕ್ಕೆ ಬೇರೆ ಬೇರೆ ವಹಿವಾಟು ಮೊತ್ತ ತೋರಿಸಿದ್ದ ದಾಖಲೆಗಳು ಇ-ಪ್ರೊಕ್ಯೂರ್‌ಮೆಂಟ್‌ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದರೂ ಅದನ್ನು ಕಡೆಗಣಿಸಿ ಗುತ್ತಿಗೆ ನೀಡಲಾಗಿದೆ‘ ಎಂದು ಅವರು ದೂರಿದ್ದಾರೆ.

ವಾರ್ಷಿಕ ವಹಿವಾಟಿನ ಪ್ರಮಾಣಪತ್ರ

ವರ್ಷ; ವಹಿವಾಟು (₹ಕೋಟಿಗಳಲ್ಲಿ)

2012–13; 7.99

2013–14; 24.75

2014–15; 25.32

(*09.10.2015ರ ಪ್ರಮಾಣಪತ್ರ)

ವರ್ಷ; ವಹಿವಾಟು (₹ಕೋಟಿಗಳಲ್ಲಿ)

2013–14; 56.08

2014–15; 59.10

2015–16; 79.40

2016–17; 99.70

(10.01.2018ರ ಪ್ರಮಾಣಪತ್ರ)

ವರ್ಷ; ವಹಿವಾಟು (₹ಕೋಟಿಗಳಲ್ಲಿ)

2013–14; 56.08

2014–15; 59.10

2015–16; 79.40

2016–17; 128.50

2017–18; 139.25

(10.01.2018ರ ಮತ್ತೊಂದು ಪ್ರಮಾಣಪತ್ರ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು