ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ಗಾಪೂಜೆ– ಸಾರ್ವಜನಿಕ ಆಚರಣೆಗೆ ಷರತ್ತು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ಕಳೆದ ವರ್ಷದ ನಿಬಂಧನೆಗಳಷ್ಟೇ ಈ ವರ್ಷವೂ ಜಾರಿ– ಬಿಬಿಎಂಪಿ ಮುಖ್ಯ ಆಯುಕ್ತ ಸ್ಪಷ್ಟನೆ
Last Updated 6 ಅಕ್ಟೋಬರ್ 2021, 16:46 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ದುರ್ಗಾ ಪೂಜೆಯನ್ನು ಸಾರ್ವಜನಿಕವಾಗಿ ಆಚರಿಸುವುದಕ್ಕೂ ಬಿಬಿಎಂಪಿ ಕೋವಿಡ್‌ ಹರಡುವಿಕೆ ನಿಯಂತ್ರಿಸುವ ಉದ್ದೇಶದಿಂದ ಕೆಲವೊಂದು ನಿರ್ಬಂಧಗಳನ್ನು ವಿಧಿಸಿದೆ. ಮೂರ್ತಿಯ ಎತ್ತರ 4 ಅಡಿಗಳನ್ನು ಮೀರಬಾರದು. ಮೂರ್ತಿ ಪ್ರತಿಷ್ಠಾಪಿಸಿದ ಸ್ಥಳದಲ್ಲಿ ಪ್ರಾರ್ಥನೆ ವೇಳೆ ಏಕಕಾಲದಲ್ಲಿ 50ಕ್ಕಿಂತ ಹೆಚ್ಚು ಮಂದಿ ಸೇರಬಾರದು. ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಡ್ರಂ, ಡೋಲುಗಳನ್ನು ಬಳಸಬಾರದು ಎಂದು ಷರತ್ತುಗಳನ್ನು ವಿಧಿಸಲಾಗಿದೆ.

ದುರ್ಗಾಪೂಜೆಯನ್ನು ಸಾರ್ವಜನಿಕವಾಗಿ ಆಚರಣೆಯ ನಿಬಂಧನೆಗಳ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಮಂಗಳವಾರ ಆದೇಶ ಹೊರಡಿಸಿದ್ದಾರೆ. ಇದರಲ್ಲಿರುವ ಕೆಲವೊಂದು ನಿರ್ಬಂಧಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಸಂಸದ ತೇಜಸ್ವೀ ಸೂರ್ಯ ಅವರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ‍ಬುಧವಾರ ಪತ್ರ ಬರೆದಿದ್ದಾರೆ. ಬಿಬಿಎಂಪಿಯು ಹಿಂದೂಗಳ ಹಬ್ಬಗಳಿಗೆ ಮಾತ್ರ ನಿರ್ಬಂಧ ಹೇರಿ, ಅನ್ಯಧರ್ಮಗಳ ಹಬ್ಬಗಳ ಸಂದರ್ಭದಲ್ಲಿ ಕಣ್ಣು ಮುಚ್ಚಿಕೊಂಡಿರುವುದು ಬೇಸರದ ಸಂಗತಿ. ಈ ರೀತಿ ತಾರತಮ್ಯದಿಂದ ಕೂಡಿದ ನಿರ್ಬಂಧಗಳನ್ನು ವಿಧಿಸುವುದು ಖಂಡನೀಯ ಹಾಗೂ ಅಸಾಂವಿಧಾನಿಕ ಎಂದು ಅವರು ಟೀಕಿಸಿದ್ದಾರೆ.

‘ಮೂರ್ತಿಯ ಎತ್ತರ ಎಷ್ಟಿರಬೇಕು ಎಂಬುದನ್ನು ಸೂಚಿಸಿ ಬಿಬಿಎಂಪಿ ಹೊರಡಿಸಿರುವ ಆದೇಶದ ಹಿಂದೆ ಯಾವುದೇ ತರ್ಕವಿಲ್ಲ. ಮೂರ್ತಿಯ ಎತ್ತರಕ್ಕೂ ಕೋವಿಡ್‌ ಹರಡುವಿಕೆಗೂ ಏನು ಸಂಬಂಧ ಎಂಬುದು ಅರ್ಥವಾಗುತ್ತಿಲ್ಲ. ಇದೊಂದು ಅನುಚಿತ ಹಾಗೂ ನಿರಂಕುಶ ನಿರ್ಧಾರದಂತೆ ತೋರುತ್ತಿದೆ’ ಎಂದು ತೇಜಸ್ವೀ ಸೂರ್ಯ ಅಭಿಪ್ರಾಯಪಟ್ಟಿದ್ದಾರೆ.

‘ಪೂಜೆಯನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ಸೂಚನೆ ನೀಡುವುದಕ್ಕೆ ಸ್ಥಳೀಯ ಆಡಳಿತಕ್ಕೆ ಯಾವುದೇ ಅಧಿಕಾರ ಇಲ್ಲ. ಪೂಜಾ ಪದ್ಧತಿ ಬಗ್ಗೆ ಭಕ್ತರೇ ನಿರ್ಧಾರ ಕೈಗೊಳ್ಳಬೇಕು. ಡೋಲು ಮತ್ತು ಡ್ರಮ್‌ ಬಾರಿಸುವುದಕ್ಕೆ ನಿರ್ಬಂಧ ವಿಧಿಸಿದರೆ ಸಡಗರವನ್ನೇ ಕಿತ್ತುಕೊಂಡಂತೆ. ಈ ಯಾವುದೇ ನಿಯಮಗಳಿಗೂ ಕೋವಿಡ್‌ ಹರಡುವಿಕೆಗೂ ಪರಸ್ಪರ ಸಂಬಂಧವಿಲ್ಲ. ಜನ ಸೇರುವಿಕೆ ಮತ್ತು ಡೋಲು, ಡ್ರಂ ಭಾರಿಸುವುದಕ್ಕೆ ನಿರ್ಬಂಧ ಹೇರುವುದು ಅರ್ಥವಿಲ್ಲದ ನಡೆ. ಈ ಬಗ್ಗೆ ಮರುಪರಿಶೀಲನೆ ಮಾಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಸಂಸದರ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ಗೌರವ್‌ ಗುಪ್ತ, ‘ನಾವು ಹೊಸತಾಗಿ ಯಾವುದೇ ನಿರ್ಬಂಧಗಳನ್ನು ಹೇರಿಲ್ಲ. ಕಳೆದ ವರ್ಷ ದುರ್ಗಾ ಪೂಜೆಯ ಸಂದರ್ಭದಲ್ಲಿಕೋವಿಡ್‌ ನಿಯಂತ್ರಣದ ಸಲುವಾಗಿ ಹೇರಿದ್ದ ನಿರ್ಬಂಧಗಳನ್ನಷ್ಟೇ ಈ ಬಾರಿಯೂ ಜಾರಿಗೊಳಿಸುತ್ತಿದ್ದೇವೆ. ಇದನ್ನು ಸಂಸದರಿಗೂ ತಿಳಿಸಿದ್ದೇನೆ’ ಎಂದರು.

‘ಸಾರ್ವಜನಿಕವಾಗಿ ದುರ್ಗಾ ‍ಪೂಜೆ ಆಚರಿಸುವ ಸಮಿತಿಗಳು ಈ ನಿರ್ಬಂಧಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಬಿಬಿಎಂಪಿಗೆ ಯಾವುದೇ ಪತ್ರ ಬರೆದಿಲ್ಲ. ಯಾವುದಾದರೂ ನಿಬಂಧನೆ ಸಡಿಲಿಕೆ ಅಗತ್ಯವಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

ಸಾರ್ವಜನಿಕ ದುರ್ಗಾಪೂಜೆ: ಇತರ ನಿಬಂಧನೆಗಳು

* ವಲಯದ ಜಂಟಿ ಆಯುಕ್ತರಿಂದ ಅನುಮತಿ ಪಡೆದು ವಾರ್ಡ್‌ನಲ್ಲಿ ಒಂದೇ ಕಡೆ ಸಾರ್ವಜನಿಕವಾಗಿ ದುರ್ಗಾ ಪೂಜೆ ಆಚರಿಸಬೇಕು

* ಮೂರ್ತಿಯನ್ನು ಸೊಂಕು ನಿವಾರಕದಿಂದ ಶುದ್ಧೀಕರಿಸಬೇಕು

* ಮೂಲತಃ ಆಚರಿಸುವ ವಿಧಿವಿಧಾನಗಳಿಗಷ್ಟೇ ಅನುಮತಿ

* ಪರಸ್ಪರ ಅಂತರ ಕಾಪಾಡಬೇಕು

* ಕೋವಿಡ್‌ ನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕು

* ಸಿಹಿತಿಂಡಿ, ಹಣ್ಣುಗಳು ಹಾಗೂ ಹೂವುಗಳನ್ನು ಹಂಚುವಂತಿಲ್ಲ

* ಧಾರ್ಮಿಕ ಸಮಾರಂಭಕ್ಕೆ 100ಕ್ಕಿಂತ ಹೆಚ್ಚು ಮಂದಿಯನ್ನು ಆಹ್ವಾನಿಸುವಂತಿಲ್ಲ

* ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ 10ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ

* ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ಪರಸ್ಪರ ಅಂತರ ಕಾಪಾಡಬೇಕು

* ಸಿಂಧೂರ್‌ ಕೇಳ (ಓಕಳಿ) ಸಂದರ್ಭದಲ್ಲೂ 10ಕ್ಕಿಂತ ಹೆಚ್ಚು ಜನ ಗುಂಪುಗೂಡುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT