ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಂ ನೌಕರರ ವಜಾಕ್ಕೆ ಮೊದಲಿನಿಂದಲೂ ಬಿಜೆಪಿ ಶಾಸಕರ ಒತ್ತಡ!

ಬಿಜೆಪಿ ಶಾಸಕರ ಒತ್ತಾಯ ತಿರಸ್ಕರಿಸಿದ್ದ ಅಧಿಕಾರಿಗಳು
Last Updated 7 ಮೇ 2021, 21:30 IST
ಅಕ್ಷರ ಗಾತ್ರ

ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ದಕ್ಷಿಣ ವಲಯದ ಕೋವಿಡ್‌ ವಾರ್‌ ರೂಮ್‌ ಮೇಲೆ ದಾಳಿ ನಡೆಯುವುದಕ್ಕೂ ಹಲವು ದಿನಗಳ ಮುನ್ನವೇ, ವಾರ್ಡ್‌ ರೂಮ್‌ನಲ್ಲಿನ 17 ಮುಸ್ಲಿಂ ನೌಕರರನ್ನು ವಜಾ ಮಾಡಬೇಕೆಂದು ಬಿಜೆಪಿ ಶಾಸಕರೊಬ್ಬರು ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.

‘ವಾರ್‌ ರೂಮ್‌ನಲ್ಲಿನ ಎಲ್ಲ ಮುಸ್ಲಿಂ ಸಿಬ್ಬಂದಿಯನ್ನು ತಕ್ಷಣವೇ ಕೆಲಸದಿಂದ ತೆಗೆದು ಹಾಕಬೇಕು ಎಂದು ಶಾಸಕ ಮತ್ತು ಬೆಂಬಲಿಗರು ಮೇ 1ರಂದೇ ನಮ್ಮ ಮೇಲೆ ಒತ್ತಡ ಹೇರಿದ್ದರು’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ 17 ಮುಸ್ಲಿಂ ಸಿಬ್ಬಂದಿ ಮೇಲೆ ಯಾವುದೇ ದೂರು ಇಲ್ಲ ಮತ್ತು ಅವರು ಏನೂ ತಪ್ಪು ಮಾಡಿಲ್ಲ. ವಿನಾಕಾರಣ ಅವರನ್ನು ಕೆಲಸದಿಂದ ತೆಗೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೆವು. ನಂತರ, ಕೆಳಹಂತದ ಅಧಿಕಾರಿಯೊಬ್ಬರ ಮೇಲೂ ಒತ್ತಡ ಹೇರಿದ್ದರು. ಅವರು ಈ ಕುರಿತು ಬರೆದ ಪತ್ರವನ್ನೂ ತಂದಿದ್ದರು. ಅದನ್ನೂ ನಾನು ತಿರಸ್ಕರಿಸಿದ್ದೆ’ ಎಂದು ಅವರು ಹೇಳಿದರು.

‘ಮುಸ್ಲಿಂ ನೌಕರರನ್ನು ವಜಾಗೊಳಿಸದಿದ್ದರೆ ನಿಮಗೇ ತೊಂದರೆಯಾಗುತ್ತದೆ ಎಂದು ಶಾಸಕ ಎಚ್ಚರಿಕೆ ನೀಡಿದ್ದರು. ಅದಕ್ಕೂ ನಾವು ಒಪ್ಪದಿದ್ದಾಗ ಮೇ 4ರಂದು ದಾಳಿ ಮಾಡಲಾಯಿತು’ ಎಂದು ಅವರು ತಿಳಿಸಿದರು.

‘ಬೊಮ್ಮನಹಳ್ಳಿ ವಲಯದ ಕೋವಿಡ್‌ ವಾರ್‌ ರೂಮ್‌ನಲ್ಲಿ ಶಾಸಕರು ತಮಗೆ ಬೇಕಾದ ವ್ಯಕ್ತಿಗಳನ್ನು ಬಿಟ್ಟಿದ್ದರು. ಹಾಸಿಗೆಗಳ ಹಂಚಿಕೆ ಸೇರಿದಂತೆ ಹಲವು ಕಾರ್ಯಗಳ ಮೇಲುಸ್ತುವಾರಿಯನ್ನು ಅವರೇ ನೋಡಿಕೊಳ್ಳುತ್ತಿದ್ದರು. ಅದೇ ರೀತಿ ದಕ್ಷಿಣ ವಲಯದ ವಾರ್‌ ರೂಮ್‌ನಲ್ಲಿ ಈ 17 ಜನರನ್ನು ತೆಗೆದು ಹಾಕಿ ತಮ್ಮವರನ್ನೇ ನಿಯೋಜಿಸುವ ಉದ್ದೇಶ ಶಾಸಕರದ್ದಾಗಿತ್ತು’ ಎಂದೂ ಅವರು ಹೇಳಿದರು.

ಏ.20ರ ನಂತರ ನೇಮಕ:

‘ದಕ್ಷಿಣ ವಲಯದ ವಾರ್‌ ರೂಮ್‌ನಲ್ಲಿ ಮೊದಲು 47 ಜನ ಮಾತ್ರ ಕಾರ್ಯನಿರ್ವಹಿಸುತ್ತಿದ್ದರು. ಹೆಚ್ಚು ಸಿಬ್ಬಂದಿ ಅಗತ್ಯವಿದೆ. ಪೂರೈಸಿ ಎಂದು ಬಿಬಿಎಂಪಿ ಏ.15ರಂದು ಸೂಚಿಸಿತು. ಈ 17 ಮುಸ್ಲಿಮರು ಸೇರಿದಂತೆ ಸುಮಾರು 160 ಮಂದಿಯನ್ನು ಏ.20ರ ನಂತರ ನೇಮಕ ಮಾಡಿಕೊಳ್ಳಲಾಯಿತು. ಈಗ 207 ಜನ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಈ ವಾರ್‌ ರೂಮ್‌ಗೆ ಸಿಬ್ಬಂದಿ ಪೂರೈಸಿದ ಹೊರಗುತ್ತಿಗೆ ಸಂಸ್ಥೆ ಕ್ರಿಸ್ಟಲ್‌ ಏಜೆನ್ಸಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೊಮ್ಮನಹಳ್ಳಿ ವಾರ್‌ ರೂಮ್‌ಗೆ ಸಿಬ್ಬಂದಿಯನ್ನು ಪೂರೈಸಿರುವ ಸಂಸ್ಥೆಯೇ ಬೇರೆ. ದಕ್ಷಿಣ ವಲಯದ ವಾರ್‌ ರೂಮ್‌ಗೆ ನಾವು ಸಿಬ್ಬಂದಿ ಪೂರೈಸಿದ್ದೇವೆ’ ಎಂದು ಹೇಳಿದರು.

‘ಏ.20ರ ನಂತರ ಕೆಲವು ದಿನಗಳವರೆಗೆ ಈ ಸಿಬ್ಬಂದಿಗೆ ತರಬೇತಿ ನೀಡಿದ್ದೆವು. ನಂತರವೇ ಅವರು ಕೆಲಸ ಆರಂಭಿಸಿದ್ದರು. ಈ 17 ಸಿಬ್ಬಂದಿ ಬೆಡ್‌ ಬ್ಲಾಕಿಂಗ್‌ ಹಗರಣದಲ್ಲಿ ಭಾಗಿಯಾಗಿದ್ದರು ಎಂಬ ಆರೋಪ ಸುಳ್ಳು. ಹಾಸಿಗೆ ನಿಯೋಜಿಸುವ ಅಧಿಕಾರ ಹಿರಿಯ ಅಧಿಕಾರಿಗಳು ಮತ್ತು ವೈದ್ಯರಿಗೆ ಇರುತ್ತದೆ. ನಾವು ನಿಯೋಜಿಸಿರುವ ಸಿಬ್ಬಂದಿಗೆ ಅಂತಹ ಅಧಿಕಾರವೇ ಇಲ್ಲ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT