ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ಶಿಕ್ಷಣದಲ್ಲೂ ಲಿಂಗತ್ವ ಪಕ್ಷಪಾತ

ಪಾಲಿಕೆಯ ಶಾಲಾ–ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹೆಚ್ಚು: ವಿದ್ಯಾರ್ಥಿಗಳು ಕಡಿಮೆ
Last Updated 11 ಅಕ್ಟೋಬರ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು: ಐ.ಟಿ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಖ್ಯಾತಿ ಪಡೆದಿರುವ ಬೆಂಗಳೂರಿನಂತಹ ನಗರದಲ್ಲೂ ಲಿಂಗತ್ವ ಪಕ್ಷಪಾತ ಹೆಚ್ಚುತ್ತಿದೆಯೇ? ‘ಹೌದು’ ಎನ್ನುತ್ತವೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿನ ವಿದ್ಯಾರ್ಥಿ–ವಿದ್ಯಾರ್ಥಿನಿಯರ ಸಂಖ್ಯೆಗಳು.

ಅಷ್ಟೇನು ಗುಣಮಟ್ಟದ ಶಿಕ್ಷಣ ನೀಡುವುದಿಲ್ಲ ಎಂದು ಹೇಳಲಾಗುವ ಪಾಲಿಕೆಯ ಶಾಲಾ–ಕಾಲೇಜುಗಳಿಗೆ ಬಡ ಕುಟುಂಬಗಳು ಬಾಲಕಿಯರನ್ನು ದಾಖಲು ಮಾಡುತ್ತಿವೆ. ಆ ಕುಟುಂಬಗಳೇ ಉತ್ತಮ ಶಿಕ್ಷಣ ಸಿಗುತ್ತದೆ ಎಂಬ ಮನೋಭಾವದಿಂದ ಖಾಸಗಿ ಮತ್ತು ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೆ ಗಂಡು ಮಕ್ಕಳನ್ನು ದಾಖಲಿಸುತ್ತಿವೆ.

‘ಬಿಬಿಎಂಪಿ ಶೈಕ್ಷಣಿಕ ಸಂಸ್ಥೆಗಳು–2018’ರ ಮಾರ್ಗಸೂಚಿ ವರದಿ ಪ್ರಕಾರ ಪಾಲಿಕೆಯ ಶಾಲಾ–ಕಾಲೇಜುಗಳಲ್ಲಿ ಶೇ 64.15 ರಷ್ಟು ಹೆಣ್ಣು ಮಕ್ಕಳು ಮತ್ತು ಶೇ 35.85ರಷ್ಟು ಗಂಡು ಮಕ್ಕಳು ಕಲಿಯುತ್ತಿದ್ದಾರೆ. ಪ್ರಾಥಮಿಕ ಮಟ್ಟದಿಂದ ಉನ್ನತ ಶಿಕ್ಷಣಕ್ಕೆ ತೆರಳಿದಂತೆ ಈ ಅಂತರ ಮತ್ತಷ್ಟು ಹೆಚ್ಚುತ್ತಿದೆ.

ಶೈಕ್ಷಣಿಕ ಕಲಿಕೆಯ ಪ್ರತಿ ಹಂತದಲ್ಲಿ ಬಾಲಕ–ಬಾಲಕಿಯರ ಸಂಖ್ಯೆಯ ಅನುಪಾತದಲ್ಲಿ ಅಂತರ ಹೆಚ್ಚುತ್ತಿರುವುದಕ್ಕೆಪೋಷಕರ ಚಿಂತನಾಕ್ರಮವೇ ಕಾರಣ ಎಂದು ಅಧಿಕಾರಿಗಳು ಮತ್ತು ತಜ್ಞರು ಗುರುತಿಸಿದ್ದಾರೆ.

‘ಹೆಚ್ಚು ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಗುತ್ತಿರುವುದು ಸಂತಸದ ವಿಚಾರ. ಗಂಡು ಮಕ್ಕಳನ್ನು ಚೆನ್ನಾಗಿ ಓದಿಸಿದರೆ, ಕೊನೆಗಾಲದಲ್ಲಿ ನೋಡಿಕೊಳ್ಳುತ್ತಾರೆ ಎಂಬ ಮನಸ್ಥಿತಿಯಿಂದ, ಅವರ ಶಿಕ್ಷಣಕ್ಕೆ ಹೆಚ್ಚು ಖರ್ಚು ಮಾಡುತ್ತಾರೆ. ಹೆಣ್ಣು ಮಕ್ಕಳು ಮದುವೆ ಆಗುವವರೆಗೆ ಮಾತ್ರ ಮನೆಯಲ್ಲಿ ಇರುತ್ತಾರೆ. ಅವರಿಗೇಕೆ ದುಬಾರಿ ಶಿಕ್ಷಣ ಎಂಬ ಮನೋಭಾವ ಪೋಷಕರಲ್ಲಿ ಇರಬಹುದು’ ಎನ್ನುತ್ತಾರೆ ಪಾಲಿಕೆಯ ವಿಶೇಷ ಆಯುಕ್ತ(ಶಿಕ್ಷಣ) ಎಸ್‌.ಜಿ.ರವೀಂದ್ರ.

ಗಂಡುಮಕ್ಕಳ ಸಂಖ್ಯೆ ಕಡಿಮೆ ಇರುವುದಕ್ಕೆ ಸಮಾಜಶಾಸ್ತ್ರಜ್ಞ ಜಿ.ಕೆ.ಕಾರಂತ ಆರ್ಥಿಕ ಕಾರಣ ಗುರುತಿಸುತ್ತಾರೆ. ‘ಕುಟುಂಬಕ್ಕೆ ಒಂದಿಷ್ಟುವರಮಾನ ಬರುತ್ತದೆ ಎಂದು ಬಡವರು ಗಂಡು ಮಕ್ಕಳನ್ನು ಶಾಲಾ ಕಲಿಕೆಯಿಂದ ಬಿಡಿಸಿ ದುಡಿಮೆಗೆ ಹಚ್ಚುತ್ತಿರಬಹುದು. ಹಾಗಾಗಿ ಅಂತರ ಹೆಚ್ಚುತ್ತಿರಬಹುದು. ಆಡಳಿತ ವರ್ಗ ಈ ಪಕ್ಷಪಾತಕ್ಕೆ ಇರುವ ಕಾರಣಗಳನ್ನು ಕಂಡುಕೊಂಡು, ಅದನ್ನು ಸರಿಪಡಿಸಲು ಪ್ರಯತ್ನಿಸಬೇಕು’ ಎಂಬುದು ಕಾರಂತರ ಅಭಿಮತ.

‘ಸರ್ಕಾರಿ ಶಾಲೆಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಗುಣಮಟ್ಟಕ್ಕಿಂತ ಕಡಿಮೆ ಇಲ್ಲ ಎಂಬಂತೆ ಅಭಿವೃದ್ಧಿ ಪಡಿಸಬೇಕು. ಆಗ ಪೋಷಕರ ಮನಸ್ಥಿತಿ ಬದಲಾಗುತ್ತಿದೆ. ‘ಬೇಟಿ ಬಚಾವೊ, ಬೇಟಿ ಪಡಾವೊ’ದಂತಹ ಯೋಜನೆಯಿದ್ದರೂ ಗುಣಮಟ್ಟದ ಶಿಕ್ಷಣ ಬಾಲಕಿಯರಿಗೆ ಸಿಗುತ್ತಿಲ್ಲ ಎಂಬುದು ಲಿಂಗ ತಾರತಮ್ಯದ ಮತ್ತೊಂದು ಮುಖ’ ಎಂದು ಶಿಕ್ಷಣತಜ್ಞ ವಿ.ಪಿ.ನಿರಂಜನಾರಾಧ್ಯ ಹೇಳುತ್ತಾರೆ.

ಪಾಲಿಕೆ ಶಿಕ್ಷಣ ಸಂಸ್ಥೆಗಳಲ್ಲಿನ ವಿದ್ಯಾರ್ಥಿಗಳ ಪ್ರಮಾಣ(ಶೇಕಡವಾರು)

ಪ್ರೌಢಶಾಲೆ;64.10;35.90

ಪಿಯುಸಿ;80.90;19.10

ಪದವಿ;90.60;9.40

ಶೈಕ್ಷಣಿಕ ವರ್ಷ;ವಿದ್ಯಾರ್ಥಿನಿಯರು;ವಿದ್ಯಾರ್ಥಿಗಳು

2017-18;8,500;4,500

2018–19;10,580;5,913

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT