ಗುರುವಾರ , ಆಗಸ್ಟ್ 11, 2022
21 °C

PV Web Exclusive: ಬಿಬಿಎಂಪಿ ಚುನಾವಣೆ; ಕನವರಿಕೆಗಳಿಗೆ ಕೊನೆ ಎಂದು?

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬಿಬಿಎಂಪಿ ಕೌನ್ಸಿಲ್‌ ಸಭೆಯ ಸಂಗ್ರಹ ಚಿತ್ರ

ಬೆಂಗಳೂರು: ಬಿಬಿಎಂಪಿಯ ಚುನಾವಣೆ ನಡೆಯುವುದು ಯಾವಾಗ? ಬೆಂಗಳೂರಿನ ಜನತೆಯ ಈ ಕುತೂಹಲ ತಣಿಯಬೇಕಾದರೆ ಸುಪ್ರೀಂ ಕೋರ್ಟ್‌ ತೀರ್ಪಿನವರೆಗೆ ಕಾಯಬೇಕು. ಬಿಬಿಎಂಪಿ ಚುನಾವಣೆ ಕುರಿತ ರಿಟ್‌ ಅರ್ಜಿ ಸಂಬಂಧ ಹೈಕೋರ್ಟ್‌ ನೀಡಿರುವ ಆದೇಶವನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಸುಪ್ರೀಂ ಕೋರ್ಟ್‌ನಲ್ಲಿ ಇದೇ 18ರಂದು ವಿಚಾರಣೆಗೆ ಬರಲಿದೆ.

ಬಿಬಿಎಂಪಿ ಚುನಾವಣೆಯನ್ನು ಮುಂದೂಡಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್‌ ಮುಖಂಡರಾದ ಎಂ.ಶಿವರಾಜು ಹಾಗೂ ಅಬ್ದುಲ್‌ ವಾಜಿದ್‌ ಅವರು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ವಿಭಾಗೀಯ ಪೀಠವು 1976 ಕೆಎಂಸಿ ಕಾರ್ಯೆಗೆ ತಿದ್ದುಪಡಿ ತಂದು ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಂಡಿದ್ದರೂ ಈಗಿರುವಂತೆ 198 ವಾರ್ಡ್‌ಗಳಿಗೆ ಚುನಾವಣೆ ನಡೆಸಬೇಕು ಎಂದು  2020ರ ಡಿಸೆಂಬರ್‌ 4ರಂದು ಆದೇಶ ಮಾಡಿದೆ. ಕಾಯ್ದೆಗೆ ತಿದ್ದುಪಡಿ ತಂದರೂ ಕಾಲಬದ್ಧವಾಗಿ ಚುನಾವಣೆ ನಡೆಸುವುದಕ್ಕೆ ಮಹತ್ವ ಸಿಗಬೇಕು ಎಂಬುದು ಹೈಕೋರ್ಟ್‌ ಆದೇಶದ ತಾತ್ಪರ್ಯ.

ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಡಿ.10ರಂದು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಸಕಾಲದಲ್ಲಿ ಚುನಾವಣೆ ನಡೆಸಬೇಕು ಎಂಬ ಸಾಂವಿಧಾನಿಕ ಬದ್ಧತೆಯನ್ನು ಎತ್ತಿ ಹಿಡಿಯುತ್ತದೋ ಅಥವಾ ಕಾನೂನಿಗೆ ತಿದ್ದುಪಡಿ ತಂದಿರುವ ಸರ್ಕಾರ ಕ್ರಮವನ್ನು ಎತ್ತಿಹಿಡಿಯಲಿದೆಯೋ  ಕಾದು ನೋಡಬೇಕಿದೆ.

ದೇಶದ ಪ್ರಮುಖ ಮಹಾನಗರಗಳಲ್ಲಿ ಒಂದಾದ ಬೆಂಗಳೂರಿನ ಆಡಳಿತ ಸುಧಾರಣೆ  ಸಲುವಾಗಿ ವಾರ್ಡ್‌ಗಳ ಸಂಖ್ಯೆಯನ್ನು ಕನಿಷ್ಠ 225ಕ್ಕೆ ಹೆಚ್ಚಿಸುವ ಉದ್ದೇಶದಿಂದ 1976ರ ಕೆಂಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು. ಸರ್ಕಾರ ಸಾಂವಿಧಾನಿಕವಾಗಿ ಜಾರಿಗೆ ತಂದ ಕಾನೂನು ತಿದ್ದುಪಡಿಯ ಸಿಂಧುತ್ವವನ್ನು ಹೈಕೋರ್ಟ್‌ ಎತ್ತಿ ಹಿಡಿಯಬೇಕಿತ್ತು. ಕಾನೂನು ತಿದ್ದುಪಡಿಯು ಸಂವಿಧಾನದ 243 (ಯು) ವಿಧಿಯ ಆಶಯಗಳಿಗೆ ವಿರುದ್ಧವಾಗಿಲ್ಲ ಎಂಬುದು ಸರ್ಕಾರದ ವಾದ.

ಸಂವಿಧಾನದ 243 (ಯು 3) ಪ್ರಕಾರ ಯಾವುದೇ ಚುನಾಯಿತ ನಗರಾಡಳಿತ ಸಂಸ್ಥೆಯ ಅಧಿಕಾರದ ಅವಧಿ ಪೂರ್ಣಗೊಳ್ಳುವುದಕ್ಕೆ ಮುನ್ನ ಅದಕ್ಕೆ ಚುನಾವಣೆ ನಡೆಸುವುದು ಕಡ್ಡಾಯ. ಬಿಬಿಎಂಪಿಗೆ 2015ರ ಆ. 22ರಂದು ಚುನಾವಣೆ ನಡೆದಿತ್ತು. ಈ ಹಿಂದಿನ ಚುನಾಯಿತ ಕೌನ್ಸಿಲ್ ಅವಧಿಯು ಸೆ. 10ರಂದು ಕೊನೆಗೊಂಡಿದ್ದು, ಅದಕ್ಕೂ ಮುನ್ನವೇ ಚುನಾವಣೆ ನಡೆಯಬೇಕಿತ್ತು. ಪ್ರತಿ ಬಾರಿಯೂ ಸರ್ಕಾರ ಒಂದಲ್ಲ ಒಂದು ನೆಪ ಹೇಳಿ ಚುನಾವಣೆ ಮುಂದೂಡಲು ಪ್ರಯತ್ನ ನಡೆಸುವುದು ಚಾಳಿ ಆಗಿ ಬಿಟ್ಟಿದೆ. ಈ ಕಾರಣಕ್ಕೆ ರಾಜ್ಯ ಚುನಾವಣಾ ಆಯೋಗವು ಈ ಬಾರಿ 2020ರ ಜ. 24ರಂದು ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿ, ‘ಕೌನ್ಸಿಲ್‌ನ ಅವಧಿ ಪೂರ್ಣಗೊಳ್ಳುವ ಮುನ್ನವೇ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು’ ಎಂದು ಕೋರಿತ್ತು. ಸರ್ಕಾರ ಚುನಾವಣೆ ಮುಂದೂಡಿದ್ದನ್ನು ಪ್ರಶ್ನಿಸಿದ್ದ ಎಂ. ಶಿವರಾಜು ಹಾಗೂ ಅಬ್ದುಲ್‌ ವಾಜಿದ್‌ ಅವರ ಅವರ ರಿಟ್‌ ಅರ್ಜಿಯ ತಾತ್ಪರ್ಯವೂ ಇದೇ ಆಗಿತ್ತು.

ಹೈಕೋರ್ಟ್ 2020ರ ಫೆ. 18ರಂದು ಮಧ್ಯಂತರ ಆದೇಶದಲ್ಲಿ, ಬಿಬಿಎಂಪಿ ವಾರ್ಡ್‌ಗಳ ಮರುವಿಂಗಡಣೆ ಹಾಗೂ ವಾರ್ಡ್‌ವಾರು ಮೀಸಲಾತಿ ಪಟ್ಟಿ ಪ್ರಕಟಿಸುವ ಪ್ರಕ್ರಿಯೆಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಸರ್ಕಾರ ಮಾರ್ಚ್‌ 2ರಂದು ವಾರ್ಡ್‌ಗಳ ಮರುವಿಂಗಡಣೆಗೆ ಅಧಿಸೂಚನೆ ಪ್ರಕಟಿಸಿತ್ತು. ಈ ಪ್ರಕ್ರಿಯೆಯನ್ನು ಏಪ್ರಿಲ್‌ 1ರ ಒಳಗೆ ಪೂರ್ಣಗೊಳಿಸುವಂತೆ ಮಾರ್ಚ್‌ 4ರಂದು ಹೈಕೋರ್ಟ್‌ ಮತ್ತೊಮ್ಮೆ ಸರ್ಕಾರಕ್ಕೆ ತಾಕೀತು ಮಾಡಿತ್ತು. 

ಈ ಮಧ್ಯೆ ಸರ್ಕಾರ ಮಾರ್ಚ್‌ 24ರಂದು ಬಿಬಿಎಂಪಿ ಮಸೂದೆಯನ್ನು ವಿಧಾನಮಂಡಲದಲ್ಲಿ ಮಂಡಿಸಿತ್ತು. ಈ ಮಸೂದೆಯನ್ನು ಜಂಟಿ ಪರಿಶೀಲನಾ ಸಮಿತಿಯ ಪರಾಮರ್ಶೆಗೆ ಒಪ್ಪಿಸಲಾಗಿತ್ತು. ಸಮಿತಿಯು ಸೆ. 15ರಂದು ಮಧ್ಯಂತರ ವರದಿಯನ್ನು ವಿಧಾನಸಭಾಧ್ಯಕ್ಷರಿಗೆ ಸಲ್ಲಿಸಿತ್ತು. ಬಿಬಿಎಂಪಿ ಮಸೂದೆ ಅಂತಿಮಗೊಳ್ಳದ ಕಾರಣ ಸದ್ಯಕ್ಕೆ ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಿಸಲು 1976ರ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಸಲಹೆ ನೀಡಿತ್ತು. 

ಬಿಬಿಎಂಪಿ ಮಸೂದೆಯ ಪರಾಮರ್ಶೆ ನಡೆಯುತ್ತಿರುವಂತೆಯೇ ಸರ್ಕಾರ ಜೂನ್‌ 23ರಂದು ವಾರ್ಡ್‌ಗಳ ಸಂಖ್ಯೆಯನ್ನು ಈಗಿನಷ್ಟೇ (198) ಉಳಿಸಿಕೊಂಡು ಮರುವಿಂಗಡಣೆಯ ಅಂತಿಮ ಅಧಿಸೂಚನೆಯನ್ನು ಪ್ರಕಟಿಸಿದೆ. ವಾರ್ಡ್‌ವಾರು ಮೀಸಲಾತಿ ಪಟ್ಟಿಯ ಕರಡನ್ನು ಸೆ. 14ರಂದು ಪ್ರಕಟಿಸಿದೆ. ಬಿಬಿಎಂಪಿಯು ಕನಿಷ್ಠ 225 ಹಾಗೂ ಗರಿಷ್ಠ 250 ವಾರ್ಡ್‌ಗಳನ್ನು ಹೊಂದಲು ಅವಕಾಶ ಕಲ್ಪಿಸಲು 1976ರ ಕೆಎಂಸಿ ಕಾಯ್ದೆಗೆ ತಂದ ಮೂರನೇ ತಿದ್ದುಪಡಿ ಜಾರಿಗೆ ಬಂದಿದ್ದು ಅ.3ರಂದು. ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸುವ ಕುರಿತು ಸರ್ಕಾರ ಅ.14ರಂದು ಅಧಿಸೂಚನೆ ಹೊರಡಿಸಿದೆ. ಅದನ್ನು ಅನುಷ್ಠಾನಗೊಳಿಸಲು ವಾರ್ಡ್‌ ಮರುವಿಂಗಡಣಾ ಸಮಿತಿಯನ್ನೂ ರಚಿಸಿದೆ.

ಈ ಎಲ್ಲ ಅಂಶಗಳನ್ನು ಪರಿಗಣಿಸಿದ ಬಳಿಕವೇ ಹೈಕೋರ್ಟ್‌, ಸರ್ಕಾರ ಜೂನ್‌ 23ರಂದು ಪ್ರಕಟಿಸಿರುವ ವಾರ್ಡ್‌ ಮರುವಿಂಗಡಣೆ ಪಟ್ಟಿಯ ಪ್ರಕಾರ 198 ವಾರ್ಡ್‌ಗಳಿಗೆ ಚುನಾವಣೆ ನಡೆಸಬೇಕು ಎಂದು ಸ್ಪಷ್ಟ ಆದೇಶವನ್ನು ನೀಡಿದೆ. ಒಂದು ತಿಂಗಳ ಒಳಗೆ ವಾರ್ಡ್‌ವಾರು ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸಬೇಕು ಎಂದೂ ಸರ್ಕಾರಕ್ಕೆ ಸೂಚಿಸಿದೆ. ವಾರ್ಡ್‌ವಾರು ಮೀಸಲಾತಿಯ ಅಂತಿಮ ಪಟ್ಟಿ ಪ್ರಕಟವಾದ ಆರು ವಾರಗಳ ಒಳಗೆ ಚುನಾವಣೆ ಪೂರ್ಣಗೊಳಿಸವಂತೆ ರಾಜ್ಯ ಚುನಾವಣಾ ಆಯೋಗಕ್ಕೂ ಸೂಚನೆ ನೀಡಿದೆ. ಸರ್ಕಾರ ಕೆಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿಯೂ ಸಾಂವಿಧಾನಿಕ ಸಿಂಧುತ್ವವನ್ನು ಹೈಕೋರ್ಟ್‌ ತಳ್ಳಿಹಾಕಿಲ್ಲ. 

ಕೆಎಂಸಿ ಕಾಯ್ದೆ ತಿದ್ದುಪಡಿ ಜಾರಿಗೆ ಬಂದ ಬಳಿಕ ಚುನಾವಣೆ ನಡೆಸಬೇಕಾದ ಅವಧಿ ಮುಗಿದಿದೆ ಎಂಬ ಅಂಶ ಮಹತ್ವ ಕಳೆದುಕೊಳ್ಳುತ್ತದೆ. ಜಾರಿಯಾಗಿರುವ ಕಾನೂನನ್ನು ಸಕಾರಣವಿಲ್ಲದೇ ಅನೂರ್ಜಿತಗೊಳಿಸಲು ಬರುವುದಿಲ್ಲ. ಇದನ್ನು ಹೈಕೋರ್ಟ್ ಗಮನಿಸಿಲ್ಲ ಎಂದು ಮೇಲ್ಮನವಿ ಅರ್ಜಿಯಲ್ಲಿ ರಾಜ್ಯ ಸರ್ಕಾರ ಹೇಳಿಕೊಂಡಿದೆ.

2009ರಲ್ಲಿ ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 198ಕ್ಕೆ ಹೆಚ್ಚಿಸಲಾಗಿತ್ತು. ಆ ಬಳಿಕ ನಗರದ ಜನಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಪ್ರತಿನಿಧಿತ್ವ ಹೊಂದುವ ಉದ್ದೇಶದಿಂದ ವಾರ್ಡ್‌ಗಳ ಸಂಖ್ಯೆ ಹೆಚ್ಚಿಸುವ ಅಗತ್ಯವಿದೆ. ‌ನಗರದಲ್ಲಿ ಪರಿಣಾಮಕಾರಿ ಆಡಳಿತದ ದೃಷ್ಟಿಯಿಂದಲೂ ಇದು ಅನಿವಾರ್ಯ. ಒಂದು ವೇಳೆ ವಾರ್ಡ್‌ ಸಂಖ್ಯೆ ಹೆಚ್ಚಳ ಮಾಡುವ ಕಾಯ್ದೆ ಜಾರಿಗೆ ಅವಕಾಶ ನೀಡದಿದ್ದರೆ ಐದು ವರ್ಷಗಳ ಕಾಲ ನಗರದ ಆಡಳಿತ ವ್ಯವಸ್ಥೆ ಅದರ ದುಷ್ಪರಿಣಾಮ ಎದುರಿಸಬೇಕಾಗುತ್ತದೆ. ಸಂವಿಧಾನದ ವಿಧಿ 243 ಜೆಡ್‌ಎ (2) ಪ್ರಕಾರ ನಗರಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದ ಅಧಿಕಾರ ಇರುವುದು ರಾಜ್ಯದ ಶಾಸಕಾಂಗಕ್ಕೆ. ಈ ಅಂಶಗಳನ್ನು ಹೈಕೋರ್ಟ್‌ ಗಮನಕ್ಕೆ ತರಲಾಗಿತ್ತು. ಆದರೂ ಇವುಗಳನ್ನು ಹೈಕೋರ್ಟ್‌ ಪರಿಗಣಿಸಿಲ್ಲ ಎಂಬುದು ಸರ್ಕಾರದ ಅಳಲು.

2020 ಜೂನ್‌ 23ರಂದು ವಾರ್ಡ್‌ಗಳ ಮರುವಿಂಗಡಣೆ ಮಾಡುವುದಕ್ಕೆ ಮುನ್ನವೇ ಈ ಪ್ರಯತ್ನವನ್ನು ಸರ್ಕಾರ ಏಕೆ ನಡೆಸಿಲ್ಲ ಎಂಬುದು ಯಕ್ಷಪ್ರಶ್ನೆ. ಈಗ ಬಿಬಿಎಂಪಿ ಮಸೂದೆ 2020 ಎರಡೂ ಸದನಗಳಲ್ಲಿ ಅಂಗೀಕಾರಗೊಂಡಿದೆ. ರಾಜ್ಯಪಾಲರ ಅಂಕಿತ ಹಾಕಿ ಅದನ್ನು ಕಾಯ್ದೆಯಾಗಿ ಜಾರಿಗೊಳಿಸುವುದಷ್ಟೇ ಬಾಕಿ. ಒಂದು ವೇಳೆ ಸುಪ್ರೀಂ ಕೋರ್ಟ್‌ ಸರ್ಕಾರದ ವಾದವನ್ನು ಮನ್ನಿಸಿ ಹೈಕೋರ್ಟ್‌ ಆದೇಶವನ್ನು ರದ್ದುಪಡಿಸಿದರೆ ಬಿಬಿಎಂಪಿ ಚುನಾವಣೆ ಏನಿಲ್ಲವೆಂದರೂ ಒಂದು ವರ್ಷ ಕಾಲ ಮುಂದೂಡಿಕೆ ಆಗಲಿದೆ.

ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಲು ಐಎಎಸ್‌ ಅಧಿಕಾರಿ ಎನ್‌.ಮಂಜುನಾಥ ಪ್ರಸಾದ್‌ ನೇತೃತ್ವದಲ್ಲಿ ಸಮಿತಿಯನ್ನು ಅ. 14ರಂದೇ ರಚಿಸಿದ್ದರೂ, ಅದಕ್ಕೆ ಮಾನದಂಡಗಳನ್ನು ಸರ್ಕಾರ ಇನ್ನೂ ನಿಗದಿಪಡಿಸಿಲ್ಲ. ಹಾಗಾಗಿ ಈ ಸಮಿತಿ ಇದುವರೆಗೆ ಒಂದೂ ಸಭೆಯನ್ನು ನಡೆಸುವುದಕ್ಕೆ ಸಾಧ್ಯವಾಗಿಲ್ಲ.

ಬಿಬಿಎಂಪಿಯ ಈಗಿರುವ ವ್ಯಾಪ್ತಿ ಉಳಿಸಿಕೊಂಡೇ ವಾರ್ಡ್ ಮರುವಿಂಗಡಣೆ ನಡೆಸಲಾಗುತ್ತದೆ ಎಂದು ಶಾಸಕ ಎಸ್‌.ರಘು ನೇತೃತ್ವದ ಜಂಟಿ ಪರಿಶೀಲನಾ ಸಮಿತಿ ಈ ಹಿಂದೆ ಹೇಳಿತ್ತು. ಬಿಬಿಎಂಪಿ ಗಡಿ ಪ್ರದೇಶದಲ್ಲಿ 1 ಕಿ.ಮೀ ವ್ಯಾಪ್ತಿಯ ಗ್ರಾಮಗಳನ್ನು ಪಾಲಿಕೆ ತೆಕ್ಕೆಗೆ ಸೇರಿಸಿಕೊಳ್ಳಲಾಗುತ್ತದೆ ಎಂದು ಸರ್ಕಾರ ಈಗ ಹೇಳುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕೆ ಕನಿಷ್ಠ ಆರು ತಿಂಗಳು ಕಾಲಾವಕಾಶ ಬೇಕು ಎನ್ನುತ್ತಾರೆ ಹಿರಿಯ ಐಎಎಸ್‌ ಅಧಿಕಾರಿಗಳು. ಆ ಬಳಿಕ ವಾರ್ಡ್‌ವಾರು ಮತದಾರರ ಪಟ್ಟಿ ಸಿದ್ಧಪಡಿಸಬೇಕು. ವಾರ್ಡ್‌ವಾರು ಮೀಸಲಾತಿ ಪ್ರಕಟಿಸಬೇಕು. ಪ್ರತಿಯೊಂದು ಪ್ರಕ್ರಿಯೆ ವೇಳೆಯೂ ಸಾರ್ವಜನಿಕರು ಆಕ್ಷೇಪಣೆ ಅಥವಾ ಪ್ರತಿಕ್ರಿಯೆ ಸಲ್ಲಿಸಲು ಕಾಲಾವಕಾಶ ನೀಡಬೇಕು. ಅಲ್ಲಿಯವರೆಗೆ ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತ ಕನವರಿಕೆಯೇ ಸರಿ. ಇದಕ್ಕೆ ಸುಪ್ರೀಂ ಕೋರ್ಟ್‌ ಅವಕಾಶ ಕಲ್ಪಿಸುತ್ತದೆಯೇ? ಅಥವಾ ಪ್ರತಿ ಬಾರಿಯೂ ಬಿಬಿಎಂಪಿ ಚುನಾವಣೆ ಸನ್ನಹಿತವಾದಾಗ ಧುತ್ತೆಂದು ಎದುರಾಗುವ ಗೊಂದಲಗಳಿಗೆ ಶಾಶ್ವತ ಪೂರ್ಣವಿರಾಮ ಹಾಕಲಿದೆಯೇ? ಕಾದು ನೋಡಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು