ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಚುನಾವಣೆ: ಕೋರ್ಟ್‌ ಮೊರೆ

ಪಾಲಿಕೆ ವಿರೋಧ ಪಕ್ಷ ಎಚ್ಚರಿಕೆ
Last Updated 4 ಸೆಪ್ಟೆಂಬರ್ 2020, 20:44 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಬಿಎಂಪಿ ಚುನಾವಣೆಯನ್ನು ಮತ್ತಷ್ಟು ಮುಂದೂಡಬಾರದು. ಆದಷ್ಟು ಬೇಗ ಚುನಾವಣೆ ನಡೆಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಬೇಕು’ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಆಗ್ರಹಿಸಿದರು.

ಸುದ್ದಿಗಾರರ ಜೊತೆ ಶುಕ್ರವಾರ ಇಲ್ಲಿ ಮಾತನಾಡಿದ ಅವರು, 'ಈ ಹಿಂದೆಯೂ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿಗೆ 3 ವರ್ಷಗಳ ಕಾಲ ಆಡಳಿತಾಧಿಕಾರಿಯನ್ನು ನೇಮಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಡೆಗಣಿಸಲಾಗಿತ್ತು. ಈ ಬಾರಿ ಅದಕ್ಕೆ ಅವಕಾಶ ನೀಡುವುದಿಲ್ಲ. ಚುನಾವಣೆಯನ್ನು ಸಕಾಲದಲ್ಲಿ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್ ಮೊರೆ ಹೋಗುತ್ತೇವೆ' ಎಂದು ತಿಳಿಸಿದರು.

’ಬಿಬಿಎಂಪಿಗೆ 27 ವಾರ್ಡ್‌ಗಳನ್ನು ಸೇರ್ಪಡೆ ಗೊಳಿಸುವ ಮೂಲಕ ವಾರ್ಡ್‌ಗಳ ಸಂಖ್ಯೆಯನ್ನು 225ಕ್ಕೆ ಹೆಚ್ಚಿಸುವುದು ಮತ್ತು ಬಿಬಿಎಂಪಿ ಮಸೂದೆಯನ್ನು ಜಂಟಿ ಸಲಹಾ ಸಮಿತಿಯ ಪರಿಶೀಲನೆಗೆ ಒಳಪಡಿಸಲು ಕಾಲಾವಕಾಶ ಕೇಳುವುದು ಚುನಾವಣೆ ಮುಂದೂಡಲು ಸರ್ಕಾರ ಅನುಸರಿಸುತ್ತಿರುವ ಕಾರ್ಯತಂತ್ರದ ಭಾಗ’ ಎಂದು ಅವರು ಆರೋಪಿಸಿದರು.

‘ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಗೊಂಡ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಹದಗೆಟ್ಟ ರಸ್ತೆಗಳ ಸಮಸ್ಯೆ ಹಾಗೆಯೇ ಇದೆ. ಬಿಬಿಎಂಪಿಗೆ ಮತ್ತೆ 60 ಹಳ್ಳಿಗಳ ಸೇರ್ಪಡೆ ಮಾಡಲು ಸರ್ಕಾರ ಹೊರಟಿದ್ದೇಕೆ’ ಎಂದು ಪ್ರಶ್ನಿಸಿದರು.

‘198 ವಾರ್ಡ್‌ಗಳ ಮರುವಿಂಗಡಣೆ ಇತ್ತೀಚೆಗಷ್ಟೇ ನಡೆದಿದೆ. ನ.30ಕ್ಕೆ ಮತದಾರರ ಪರಿಷ್ಕೃತ ಪಟ್ಟಿಯೂ ಸಿದ್ದವಾಗಲಿದೆ. ಮೀಸಲಾತಿ ಅಂತಿಮಗೊಳಿಸಲು ಒಂದು ವಾರ ಸಮಯ ಸಾಕು. ಇದಾದ ತಕ್ಷಣ ಚುನಾವಣೆ ನಡೆಸಬಹುದು' ಎಂದು ಅಭಿಪ್ರಾಯಪಟ್ಟರು.

‘ಸೋಲುವ ಭೀತಿಯಿಂದ ಈ ನಿರ್ಧಾರ’

‘ಸರ್ಕಾರವು ಬಿಬಿಎಂಪಿ ಚುನಾವಣೆಯನ್ನು ಮುಂದೂಡಲು ವಾರ್ಡ್‌ಗಳ ಸಂಖ್ಯೆಯನ್ನು 225ಕ್ಕೆ ಏರಿಸಲು ಮುಂದಾಗಿದೆ. ಕೊರೊನಾ ಸೋಂಕು ನಿರ್ವಹಣೆಯಲ್ಲಿ ವಿಫಲವಾಗಿರುವ ಬಿಜೆಪಿ ಜನರ ಆಕ್ರೋಶಕ್ಕೆ ಗುರಿಯಾಗಿದೆ. ಹಾಗಾಗಿ ಈಗಾಗಲೇ ವಾರ್ಡ್‌ಗಳ ಮರುವಿಂಗಡಣೆ ಮಾಡಿದ್ದರೂ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂಬುದು ಸ್ಪಷ್ಟ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಟ್ವೀಟ್‌ ಮಾಡಿದ್ದಾರೆ.

‘ಪ್ರಜಾವಾಣಿ’ಯ ಶುಕ್ರವಾರದ ಸಂಚಿಕೆಯಲ್ಲಿ ಪ್ರಕಟವಾದ ವರದಿಯನ್ನೂ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT