ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಬಿಎಂಪಿ ಚುನಾವಣೆಯಲ್ಲಿ ಚೇತರಿಕೆ: ಡಿ.ಕೆ.ಶಿವಕುಮಾರ್‌ ವಿಶ್ವಾಸ

Published 15 ಜೂನ್ 2024, 23:30 IST
Last Updated 15 ಜೂನ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆಯಾದರೂ, ಮುಂದೆ ಎದುರಾಗುವ ಬಿಬಿಎಂಪಿ ಚುನಾವಣೆ ಗೆದ್ದು ಆಡಳಿತ ಚುಕ್ಕಾಣಿ ಹಿಡಿಯಬೇಕೆಂಬ ಗುರಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಪಕ್ಷದ ನಗರ ಬ್ಲಾಕ್ ನಾಯಕರಿಗೆ ನೀಡಿದ್ದಾರೆ.

ಬಿಬಿಎಂಪಿ ಚುನಾವಣೆ ಸಿದ್ಧತೆ ಬಗ್ಗೆ ಕುರಿತಂತೆ ಶನಿವಾರ ಸಭೆ ನಡೆಸಿದ ಅವರು, ಸುದ್ದಿಗಾರರ ಜೊತೆ ಮಾತನಾಡಿ, ‘ಖಾಲಿ ಇರುವ ಪದಾಧಿಕಾರಿಗಳ ಹುದ್ದೆ ಭರ್ತಿ ಮಾಡಲು, ನಿಷ್ಕ್ರಿಯರಾಗಿರುವ ಪದಾಧಿಕಾರಿಗಳ ಜಾಗಕ್ಕೆ ಬೇರೆಯವರನ್ನು ನೇಮಿಸುವಂತೆ ಸೂಚನೆ ನೀಡಿದ್ದು ಒಂದು ತಿಂಗಳ ಕಾಲಾವಕಾಶ ನೀಡಿದ್ದೇನೆ’ ಎಂದರು.

‘ಪಾಲಿಕೆಯ ಚುನಾವಣೆ ಶೀಘ್ರದಲ್ಲಿಯೇ ನಡೆಯಲಿದೆ. ಅಷ್ಟರ ವೇಳೆಗೆ ಪಕ್ಷವನ್ನು ಸಜ್ಜುಗೊಳಿಸಬೇಕಿದೆ. ಬೆಂಗಳೂರು ನಗರ ವ್ಯಾಪ್ತಿಯ ಲೋಕಸಭಾ ಕ್ಷೇತ್ರಗಳನ್ನು ನಾವು ಸೋತಿರಬಹುದು. ಆದರೆ, ಪಾಲಿಕೆ ಚುನಾವಣೆಯಲ್ಲಿ ನಾವು ಚೇತರಿಸಿಕೊಳ್ಳುವ ವಿಶ್ವಾಸವಿದೆ’ ಎಂದರು.

‘ಯಡಿಯೂರಪ್ಪ ಪ್ರಕರಣದಲ್ಲಿ ದ್ವೇಷ ರಾಜಕಾರಣ ನಡೆಯುತ್ತಿದೆ’ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಇದು ಕಾನೂನು ಪ್ರಕ್ರಿಯೆ. ಬಿಜೆಪಿ ನಾಯಕರು ನಮ್ಮ ಹೆಸರು ಯಾಕೆ ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿದಿಲ್ಲ. ಇದರಲ್ಲಿ ನಮ್ಮ ಹಸ್ತಕ್ಷೇಪವಿಲ್ಲ ಎಂದು ಅವರಿಗೂ ಗೊತ್ತಿದೆ. ಆದರೂ, ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಕಾನೂನು ಪ್ರಕ್ರಿಯೆ ನಡೆಯುತ್ತಿದ್ದು, ಈ ವಿಚಾರವಾಗಿ ‌ಮಾತನಾಡುವುದು ಸರಿಯಲ್ಲ’ ಎಂದರು.

ಪ್ರತಿಪಕ್ಷ ನಾಯಕ ಆರ್‌. ಅಶೋಕ ಅವರ ಟೀಕೆ ಬಗ್ಗೆ ಕೇಳಿದಾಗ, ‘ಅಶೋಕ್ ಒಬ್ಬ ಸುಳ್ಳುಗಾರ ಮತ್ತು ಜೋಕರ್. ಅವರು ಯಾವುದಾದರೂ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಿ. ತಮ್ಮ ಸರ್ಕಾರದ ಅವಧಿಯಲ್ಲಿ ಮಾಡಿದ ಅನುಭವವನ್ನು ಈಗ ಹೇಳುತ್ತಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT