ಬುಧವಾರ, ಜೂನ್ 29, 2022
25 °C
ಕೆಳಸೇತುವೆಯಲ್ಲಿ ನೀರು ನಿಂತಿದ್ದಕ್ಕೆ ರಸ್ತೆಯಲ್ಲಿ ಸಂಚಾರ

ವೇಗದ ಚಾಲನೆ: ಹೆಬ್ಬಾಳದಲ್ಲಿ ಬಿಬಿಎಂಪಿ ಕಸದ ಲಾರಿ ಗುದ್ದಿ ಬಾಲಕಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೆಬ್ಬಾಳ ಬಸ್ ನಿಲ್ದಾಣ ಬಳಿ ರಸ್ತೆ ದಾಟುತ್ತಿದ್ದ ಮೂವರಿಗೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದಿದ್ದು, ತೀವ್ರ ಗಾಯಗೊಂಡ ಬಾಲಕಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

‘ಸದಾಶಿವನಗರ ಶಾಲೆಯಲ್ಲಿ ಓದುತ್ತಿದ್ದ 13 ವರ್ಷದ ಬಾಲಕಿ, ಶಾಲೆ ಮುಗಿಸಿ ಮನೆಗೆ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ. ಗಾಯಗೊಂಡಿರುವ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಹೆಬ್ಬಾಳ ಬಸ್ ನಿಲ್ದಾಣಕ್ಕೆ ಹೊಂದಿಕೊಂಡು ಕೆಳಸೇತುವೆ ಇದ್ದು, ಅದರ ಮೂಲಕವೇ ಪಾದಚಾರಿಗಳು ರಸ್ತೆ ದಾಟುತ್ತಿದ್ದರು. ಆದರೆ, ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ಕೆಳಸೇತುವೆಯಲ್ಲಿ ನೀರು ನಿಂತುಕೊಂಡಿತ್ತು. ಜನರು ಓಡಾಡುವ ಸ್ಥಿತಿ ಇರಲಿಲ್ಲ. ಹೀಗಾಗಿ, ಜನರೆಲ್ಲರೂ ಪ್ರಮುಖ ರಸ್ತೆಯಲ್ಲೇ ನಡೆದುಕೊಂಡು, ರಸ್ತೆ ದಾಟುತ್ತಿದ್ದರು. ರಸ್ತೆ ದಾಟುವ ವೇಳೆಯಲ್ಲೇ ವೇಗವಾಗಿ ಬಂದ ಲಾರಿ, ಬಾಲಕಿ ಸೇರಿ ಮೂವರಿಗೆ ಗುದ್ದಿತ್ತು. ಜೊತೆಗೆ ಬೈಕ್‌ಗೂ ಲಾರಿ ಡಿಕ್ಕಿ ಹೊಡೆದಿದ್ದು, ಅದರ ಸವಾರ ಗಾಯಗೊಂಡಿದ್ದಾರೆ. ಆರ್.ಟಿ.ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ದೂರು ನೀಡಿದರೂ ತೆರವು ಮಾಡದ ಬಿಬಿಎಂಪಿ: ‘ಕೆಳಸೇತುವೆಯಲ್ಲಿ ನೀರು ನಿಂತಿದ್ದರಿಂದ, ಪಾದಚಾರಿಗಳ ಓಡಾಟಕ್ಕೆ ತೊಂದರೆಯಾಗಿದ್ದರಿಂದ ಸ್ಥಳೀಯರು ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದರು. ಆದರೆ, ಬಿಬಿಎಂಪಿ ಸಿಬ್ಬಂದಿ ನೀರು ತೆರವು ಮಾಡಿರಲಿಲ್ಲ. ಬಾಲಕಿ ಸಾವಿಗೆ ಬಿಬಿಎಂಪಿ ಅವರೇ ಕಾರಣ’ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು