ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಬಾಗಿಲಿಗೆ ಪಾಲಿಕೆ ವೈದ್ಯರ ನಡೆ 16 ರಿಂದ

ಬಿಬಿಎಂಪಿ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ 108 ತಂಡ ರಚನೆ: ಆರ್‌.ಅಶೋಕ
Last Updated 9 ಆಗಸ್ಟ್ 2021, 12:46 IST
ಅಕ್ಷರ ಗಾತ್ರ

ಬೆಂಗಳೂರು: 'ಬಿಬಿಎಂಪಿ ವ್ಯಾಪ್ತಿಯಲ್ಲಿ ಇದೇ 16ರಿಂದ ‘ಜನರ ಮನೆ ಬಾಗಿಲಿಗೆ ಪಾಲಿಕೆ ವೈದ್ಯರ ನಡೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ 108 ವಿಶೇಷ ತಂಡಗಳನ್ನು ರಚಿಸಲಾಗಿದೆ' ಎಂದು ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ ನಿಯಂತ್ರಣ ಕಾರ್ಯಗಳ ಕುರಿತು ಪರಿಶೀಲನಾ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದರು. ‘ರೋಗಿಗಳ ಸಂರಕ್ಷಣೆ, ರೋಗ ಬರದಂತೆ ತಡೆಯುವುದು, ಬೇರೆ ಕಾಯಿಲೆ ಹೊಂದಿರುವವರ ವಿವರ ಮತ್ತು ಲಸಿಕೆ ಪಡೆದವರ ವಿವರ ಸಂಗ್ರಹ ಈ ಕಾರ್ಯಕ್ರಮದ ಉದ್ದೇಶ’ ಎಂದರು.

‘ಪ್ರತಿ ತಂಡದಲ್ಲಿ ವೈದ್ಯಾಧಿಕಾರಿ ಶುಶ್ರೂಷಕಿ, ಸಹಾಯಕ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಇರುತ್ತಾರೆ. ಪ್ರತಿ ಮನೆಗೂ ಭೇಟಿ ನೀಡಲಿರುವ ತಂಡವು ಆ ಕುಟುಂಬದಲ್ಲಿ ಯಾರಿಗಾದರೂ ನೆಗಡಿ, ಜ್ವರ ಮುಂತಾದ ಕೊರೋನಾ ಸೋಂಕಿನ ಲಕ್ಷಣಗಳಿವೆಯೇ, ಯಾರಾದರೂ ಅನ್ಯ ಕಾಯಿಲೆಗಳನ್ನು ಹೊಂದಿದ್ದಾರೆಯೇ ಎಂಬ ಮಾಹಿತಿ ಕಲೆ ಹಾಕಲಿದೆ. ಇದಕ್ಕಾಗಿ ಆ್ಯಪ್‌ ಸಿದ್ಧಪಡಿಸಲಾಗಿದ್ದು, ಅಗತ್ಯ ವಿವರಗಳನ್ನು ತಂಡದ ಸದಸ್ಯರು ಅದರಲ್ಲಿ ತುಂಬಲಿದ್ದಾರೆ. ಅಗತ್ಯಬಿದ್ದರೆ ಕೋವಿಡ್‌ ಪರೀಕ್ಷೆ ನಡೆಸಲು ತಂಡವು ಕ್ರಮ ಕೈಗೊಳ್ಳಲಿದೆ’ ಎಂದು ತಿಳಿಸಿದರು.

‘ಕುಟುಂಬದ ಎಷ್ಟು ಮಂದಿ ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಹಾಗೂ ಎರಡನೇ ಡೋಸ್‌ ಪಡೆದಿದ್ದಾರೆ. ಎಷ್ಟು ಮಂದಿ ಇನ್ನಷ್ಟೇ ಲಸಿಕೆ ಪಡೆಯಬೇಕಿದೆ ಎಂಬ ವಿವರವನ್ನೂ ಕಲೆ ಹಾಕಲಿದೆ. ಆರಂಭದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದ ಎರಡು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಈ ಕಾರ್ಯಕ್ರಮ ಜಾರಿಯಾಗಲಿದೆ. ಕ್ರಮೇಣ ಪಾಲಿಕೆ ವ್ಯಾಪ್ತಿಯ 29 ಲಕ್ಷ ಮನೆಗಳನ್ನೂ ವೈದ್ಯರ ತಂಡ ತಲುಪಲಿದೆ. ಈ ತಂಡಗಳಿಗೆ ವಾಹನ ಸೌಕರ್ಯ, ಪಿಪಿಇ ಕಿಟ್‌, ಔಷಧಗಳನ್ನು ಒದಗಿಸುತ್ತೇವೆ’ ಎಂದು ವಿವರಿಸಿದರು.

‘ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕೊರೋನಾ ಸೋಂಕಿತರ ಆರೈಕೆಗೂ ತಂಡಗಳನ್ನು ರಚಿಸಲಾಗಿದೆ. ಸೋಂಕು ಪತ್ತೆಯಾದವರನ್ನು ಪರೀಕ್ಷೆಗೆ ಒಳಪಡಿಸಿ ಔಷಧ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಮನೆಯಲ್ಲೇ ಆರೈಕೆಗೆ ಒಳಗಾಗುವವರನ್ನು ಆಶಾ ಕಾರ್ಯಕರ್ತೆಯರು ಹಾಗೂ ಅಥವಾ ಅಂಗನವಾಡಿ ಕಾರ್ಯಕರ್ತೆಯರು ಭೇಟಿ ಮಾಡುತ್ತಿದ್ದರು. ಇನ್ನು ಸೋಂಕು ಪತ್ತೆಯಾದ ಆರು ಗಂಟೆ ಒಳಗೆ ವೈದ್ಯರ ತಂಡ ಸೋಂಕಿತರ ಮನೆಗೆ ತಲುಪಿ ಅವರಿಗೆ ಆತ್ಮಸ್ಥೈರ್ಯ ತುಂಬಲಿದೆ’ ಎಂದು ಸಚಿವರು ತಿಳಿಸಿದರು.

‘ಸೋಂಕಿತರಿಗೆ ನಿಡುವ ಕಿಟ್‌ನಲ್ಲಿ ಇನ್ನು ಸ್ಥಳೀಯವಾಗಿ ಲಭ್ಯ ಇರುವ ಇಬ್ಬರು ವೈದ್ಯರ ಮೊಬೈಲ್‌ ಸಂಖ್ಯೆಯನ್ನೂ ಉಲ್ಲೇಖಿಸಲಾಗುತ್ತದೆ. ವೈದ್ಯರು ತಕ್ಷಣ ಲಭ್ಯ ಇರುವಂತೆ ನೋಡಿಕೊಳ್ಳುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಅಗತ್ಯ ಬಿದ್ದರೆ ಸೋಂಕಿತರು ಈ ವೈದ್ಯರನ್ನು ಸಂಪರ್ಕಿಸಬಹುದು. ಅಲರ್ಜಿ, ಬೇಧಿ ಮುಂತಾದ ಸಮಸ್ಯೆ ಕಾಣಿಸಿಕೊಂಡರೆ ಪರ್ಯಾಯ ಔಷಧವನ್ನು ವೈದ್ಯರು ಸೂಚಿಸಲಿದ್ದಾರೆ’ ಎಂದರು.

ಶೇ 67ರಷ್ಟು ಮಂದಿಗೆ ಲಸಿಕೆ

ಪಾಲಿಕೆ ವ್ಯಾಪ್ತಿಯಲ್ಲಿ 60,54, 264 ಮಂದಿ (ಶೇ 67) ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಹಾಗೂ 17,07,679 ಮಂದಿ (ಶೇ 19) ಎರಡನೇ ಡೋಸ್‌ ಪಡೆದಿದ್ದಾರೆ.ಬೆಂಗಳೂರು ನಗರ ಜಿಲ್ಲೆಯಲ್ಲಿ ಬಿಬಿಎಂಪಿಯ ಹೊರಗಿನ ಪ್ರದೇಶಗಳಲ್ಲಿ 9,78,671 (ಶೇ 92) ಮಂದಿ ಮೊದಲ ಡೋಸ್‌ ಹಾಗೂ 2,13,976 ಮಂದಿ (ಶೇ 22)ಎರಡನೇ ಡೋಸ್‌ ಪಡೆದಿದ್ದಾರೆ ಎಂದು ಆರ್‌.ಅಶೋಕ ತಿಳಿಸಿದರು.

ಕೋಟ್‌...

ಜನರಲ್ಲಿ ಆತ್ಮವಿಶ್ವಾಸ ತುಂಬುವುದರ ಜೊತೆ ಆರೋಗ್ಯದ ಕುರಿತ ಅಂಕಿ– ಅಂಶ ಕಲೆ ಹಾಕಲು ‘ಮನೆ ಬಾಗಿಲಿಗೆ ಪಾಲಿಕೆ ವೈದ್ಯರ ನಡೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ಅನ್ಯ ರಾಜ್ಯಗಳಿಗೂ ಮಾದರಿ ಆಗಲಿದೆ

ಆರ್‌.ಅಶೋಕ, ಕಂದಾಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT