ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಮರೆತ ಆಸ್ಪತ್ರೆ ನಿವೇಶನ

11 ವರ್ಷದ ಹಿಂದೆ ಬಿಡಿಎಯಿಂದ ಹಂಚಿಕೆ; ಬಹುತೇಕ ಒಂದು ಎಕರೆ ಪ್ರದೇಶ
Last Updated 6 ಅಕ್ಟೋಬರ್ 2022, 20:57 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಬೃಹತ್‌ ಆಸ್ಪತ್ರೆ ನಿರ್ಮಿಸಲು ಸ್ಥಳದ ಕೊರತೆ ಇದೆ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೇಳುತ್ತಿರುತ್ತಾರೆ. ಆದರೆ, ಕೈಯಲ್ಲಿರುವ ಸುಮಾರು ಒಂದು ಎಕರೆ ನಿವೇಶನದಲ್ಲಿ ಆಸ್ಪತ್ರೆ ನಿರ್ಮಿಸದೆ ಬಿಬಿಎಂಪಿ ಕೈಕಟ್ಟಿ ಕುಳಿತಿದೆ.

ಆಸ್ಪತ್ರೆನಿರ್ಮಿಸುವ ಉದ್ದೇಶಕ್ಕಾಗಿ ಬಿಬಿಎಂಪಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಿಎ ನಿವೇಶವನ್ನು ಹಂಚಿಕೆ ಮಾಡಿ 11 ವರ್ಷ ಕಳೆದಿದೆ. ಆದರೂ ಯಾವ ರೀತಿಯ ಅಭಿವೃದ್ಧಿ ಕಾರ್ಯವನ್ನೂ ಬಿಬಿಎಂಪಿ ಕೈಗೊಂಡಿಲ್ಲ. ಈ ನಿವೇಶನವನ್ನು ಬೇರೆಯವರು ಪಡೆದುಕೊಳ್ಳಲು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಆದರೆ ಈವರೆಗೆ ಗಿಡ–ಬಳ್ಳಿ ಬೆಳೆದುಕೊಂಡು ನಿವೇಶನ ಹಾಗೆಯೇ ಉಳಿದುಕೊಂಡಿದೆ.

ಬಿಡಿಎ ಸರ್‌ ಎಂ. ವಿಶ್ವೇಶ್ವರಯ್ಯ 2ನೇ ಬ್ಲಾಕ್‌ ಬಡಾವಣೆಯಲ್ಲಿ ನಾಗರಿಕ ಸೌಲಭ್ಯ ನಿವೇಶನವನ್ನು (ಸಿಎ) ಬಿಬಿಎಂಪಿಗೆ ಮಂಜೂರು ಮಾಡಿ 2011ರ ಜ.1ರಂದು ಹಂಚಿಕೆ ಪತ್ರ ನೀಡಿದೆ. ಸಂಖ್ಯೆ
2ರ ನಿವೇಶನದ ಅಳತೆ 3,432 ಚದರ ಮೀಟರ್‌. ಅಂದರೆ 36,942 ಚದರ ಅಡಿ. ಪ್ರತಿ ಚದರ ಮೀಟರ್‌ಗೆ
₹5 ಸಾವಿರದಂತೆ ₹1.71 ಕೋಟಿ ಗುತ್ತಿಗೆ ಹಣ ನೀಡಬೇಕು. ವಾರ್ಷಿಕವಾಗಿ ₹31.11 ಲಕ್ಷಗಳನ್ನು ಪಾವತಿಸಬಹುದು ಎಂದು ಹಂಚಿಕೆ ಪತ್ರದಲ್ಲಿ ವಿವರಿಸಲಾಗಿದೆ. ಬಿಡಿಎ ಸಿಎ ನಿವೇಶನ ಹಂಚಿಕೆ ಸಮಿತಿ ಸಭೆಯಲ್ಲಿ 2010ರ ಫೆ.16ರಂದು ಆದೇಶವಾಗಿದೆ. ಹಂಚಿಕೆ ಪತ್ರವನ್ನು 2011ರ ಜನವರಿಯಲ್ಲಿ ನೀಡಲಾಗಿದೆ. ಇದಾದ ನಂತರ ನಿವೇಶನದ ಕುರಿತು ನಡೆದಿರುವ ಪ್ರಕ್ರಿಯೆಯ ಮಾಹಿತಿ ಬಿಬಿಎಂಪಿಯಲ್ಲಿ ಲಭ್ಯ ಇಲ್ಲ.

‘ಬೆಂಗಳೂರಿನಲ್ಲಿ ಅತ್ಯಾಧುನಿಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕೊರತೆ ಇದೆ. ದೊಡ್ಡ ಆಸ್ಪತ್ರೆ ಬೇಕು ಎಂದಾಗಲೆಲ್ಲ ಇದನ್ನು ನಿರ್ಮಿಸಲು
ಸ್ಥಳ ಇಲ್ಲ ಎಂದೇ ಹೇಳಲಾಗುತ್ತದೆ. ಆದರೆ, ಸುಮಾರು ಒಂದು ಎಕರೆ ಭೂಮಿ ಲಭ್ಯವಿದ್ದರೂ ಬಿಬಿಎಂಪಿ ಇದನ್ನು ಮರೆತುಹೋಗಿದೆ. ಇದಕ್ಕೆ ಅಧಿಕಾರಿಗಳ ಜಾಣ ಮರೆವು ಹಾಗೂ ಖಾಸಗಿ ವ್ಯಕ್ತಿಗಳ ಭೂಕಬಳಿಕೆ ದಾಹವೂ ಕಾರಣ’ ಎಂದು ಜಯಪ್ರಕಾಶ್‌ ನಾರಾಯಣ್‌ ವಿಚಾರ ವೇದಿಕೆಯ ಶಿವಕುಮಾರ್‌ ದೂರಿದರು.

‘ಎಸ್‌ಎಂವಿ 2ನೇ ಬ್ಲಾಕ್‌ನಲ್ಲಿ ಮಂಜೂರಾಗಿರುವ ಸಿಎ ನಿವೇಶನದಲ್ಲಿ ಬಿಬಿಎಂಪಿ ಈ ವೇಳೆಗಾಗಲೇ ಬೃಹತ್‌ ಆಸ್ಪತ್ರೆಯನ್ನು ನಿರ್ಮಾಣ ಮಾಡಬಹುದಿತ್ತು. ಕೆಂಗೇರಿ, ಮಾಗಡಿ ರಸ್ತೆ, ಮೈಸೂರು ರಸ್ತೆ, ಹೊರ ವರ್ತುಲ ರಸ್ತೆಗಳ ಸುತ್ತಮುತ್ತ ಅತ್ಯಾಧುನಿಕ ವ್ಯವಸ್ಥೆಯುಳ್ಳ ಹಾಗೂ ಹೆಚ್ಚಿನ ಹಾಸಿಗೆಗಳ ಆಸ್ಪತ್ರೆ ಇಲ್ಲ. ಈ ಕೊರತೆಯನ್ನು ಬಿಬಿಎಂಪಿ ನೀಗಿಸಬಹುದಿತ್ತು. ಖಾಸಗಿ ಆಸ್ಪತ್ರೆಗಳ ಒತ್ತಡಗಳಿಗೆ ಮಣಿಯದೆ ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು, ಈ ಜಾಗದಲ್ಲಿ ಎಲ್ಲ ರೀತಿಯ ಚಿಕಿತ್ಸೆಯನ್ನು ನೀಡುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಾಣ ಮಾಡಬೇಕು’ ಎಂದು ಆಗ್ರಹಿಸಿದರು.‌

ಪರಿಶೀಲಿಸಿ, ಕ್ರಮ...

‘11 ವರ್ಷಗಳ ಹಿಂದೆ ಬಿಡಿಎಯಿಂದ ಹಂಚಿಕೆಯಾಗಿರುವ ಸಿಎ ನಿವೇಶನ ಇದು. ಇದರ ಬಗ್ಗೆ ಮಾಹಿತಿ ಹಾಗೂ ಈಗಿನ ಸ್ಥಿತಿ ಬಗ್ಗೆ ಪರಿಶೀಲಿಸುತ್ತೇವೆ. ದಾಖಲೆಗಳನ್ನು ಹುಡುಕಿಸಿ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇಷ್ಟೊಂದು ದೊಡ್ಡ ನಿವೇಶನ ಇದ್ದರೆ ಬಿಬಿಎಂಪಿಯಿಂದ ದೊಡ್ಡ ಆಸ್ಪತ್ರೆಯನ್ನು ನಿರ್ಮಿಸಿ ಜನರಿಗೆ ಚಿಕಿತ್ಸೆಯನ್ನು ಒದಗಿಸಬಹುದು. ಶೀಘ್ರ ಕ್ರಮ ಕೈಗೊಳ್ಳುತ್ತೇವೆ’ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ. ತ್ರಿಲೋಕ್‌ ಚಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT