ಸೋಮವಾರ, ಏಪ್ರಿಲ್ 6, 2020
19 °C

ನಾಯಿ ಸಾಕಲು ಪರವಾನಗಿ – ಒಳಿತೇ ಕೆಡುಕೇ?

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪಾಲಿಕೆಯ ಸಾಕು ನಾಯಿ ಪರವಾನಗಿ ಉಪವಿಧಿಯನ್ನು (ಬೈಲಾ) ಪರಿಷ್ಕರಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ನಾಯಿ ಸಾಕುವವರು ಅದಕ್ಕೆ ಪರವಾನಗಿ ಪಡೆಯುವುದನ್ನು ಕಡ್ಡಾಯವಾಗಿ ಜಾರಿಗೊಳಿಸಲು ಹಾಗೂ ನಾಯಿ ಸಾಕುವವರಿಗೆ ಕೆಲವೊಂದು ಮಾನದಂಡಗಳನ್ನು ನಿಗದಿಪಡಿಸಲು ಮುಂದಾಗಿದೆ. ಪಾಲಿಕೆಯ ಈ ನಡೆ ಚರ್ಚೆಗೆ ಗ್ರಾಸವಾಗಿದೆ. 

ಪಶುವೈದ್ಯಕೀಯ ವಿಭಾಗದ ಅಧಿಕಾರಿಗಳು ರೂಪಿಸಿರುವ ‘ಸಾಕು ನಾಯಿ ಪರವಾನಗಿ ಬೈಲಾ 2020’ರ ಕರಡಿನಲ್ಲಿರುವ ಕೆಲವು ಅಂಶಗಳಿಗೆ ನಾಯಿಪ್ರಿಯರು ಆಕ್ಷೇಪ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಇಂತಹ ಕ್ರಮಗಳ ಅಗತ್ಯವಿತ್ತು ಎನ್ನುವ ಮೂಲಕ ಪಾಲಿಕೆಯ ಕ್ರಮವನ್ನು ಬೆಂಬಲಿಸಿದ್ದಾರೆ. ವಿದೇಶಿ ತಳಿಗಳ ನಾಯಿಗಳನ್ನು ಮಾರಾಟದ ಉದ್ದೇಶಕ್ಕಾಗಿಯೇ ಸಾಕುವವರಿಗೆ ಕಡಿವಾಣ ಹಾಕಬೇಕು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಪರಿತ್ಯಕ್ತ ನಾಯಿಗಳನ್ನು ಸಾಕುವವವರಿಗೆ ಪರವಾನಗಿ ಹೆಸರಿನಲ್ಲಿ ಕಿರಿಕಿರಿಯನ್ನುಂಟುಮಾಡಬೇಡಿ ಎಂದೂ ಒತ್ತಾಯಿಸಿದ್ದಾರೆ. 

ನಾಯಿಗಳು ಸಾರ್ವಜನಿಕ ಪ್ರದೇಶ ಗಲೀಜು ಮಾಡಿದರೆ ಅದರ ಮಾಲೀಕರೇ ಅದನ್ನು ಸ್ವಚ್ಛಗೊಳಿಸಬೇಕು. ಸಾಕುವ ನಾಯಿಗೆ ಕಡ್ಡಾಯವಾಗಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿರಬೇಕು. ಸಾರ್ವಜನಿಕ ಪ್ರದೇಶಗಳಲ್ಲಿ ಸಾಕುನಾಯಿಗಳನ್ನು ಕರೆದೊಯ್ಯುವಾಗ ಅವುಗಳಿಂದ ಇತರ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗದಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಸಾಕು ನಾಯಿಗಳಿಗೆ ಮೈಕ್ರೊಚಿಪ್‌ಗಳನ್ನು ಅಳವಡಿಸಬೇಕು ಮುಂತಾದ ಸುಧಾರಣಾ ಕ್ರಮಗಳನ್ನು ಕರಡಿನಲ್ಲಿ ಪ್ರಸ್ತಾಪಿಸಲಾಗಿದೆ.

ಅಕ್ಕಪಕ್ಕದ ನಿವಾಸಿಗಳಿಗೆ ಸಮಸ್ಯೆ ಉಂಟಾಗುವುದನ್ನು ತಪ್ಪಿಸಲು ಫ್ಲ್ಯಾಟ್‌ಗಳು ಹಾಗೂ ಅನೇಕ ಕುಟುಂಬಗಳು ಒಟ್ಟಿಗೆ ನೆಲೆಸಿರುವ ವಸತಿ ಸಮುಚ್ಚಯಗಳಲ್ಲಿ ಡಾಬರ್‌ಮನ್, ಜರ್ಮನ್ ಶೆಫರ್ಡ್, ರಾಟ್‌ವೆಯ್ಲರ್, ಹೌಂಡ್ ಮುಂತಾದ ಆಕ್ರಮಣಕಾರಿ ತಳಿಯ ನಾಯಿಗಳನ್ನು ಸಾಕುವುದು ಬೇಡ ಎಂದು ಶಿಫಾರಸು ಮಾಡಲಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ನಾಯಿ ಸಾಕಣೆಗೆ ಸಂಬಂಧಿಸಿದ ಕರಡು ಬೈ–ಲಾ ರೂಪಿಸುವ ಪ್ರಯತ್ನ 2012ರಲ್ಲೇ ನಡೆದಿತ್ತು. ಆದರೆ, ಜಾರಿಯಾಗಿರಲಿಲ್ಲ. 2018ರಲ್ಲಿ ಈ ಹಳೆ ಬೈಲಾವನ್ನು ಪರಿಷ್ಕರಿಸಲಾಗಿತ್ತು. ನಗರಾಭಿವೃದ್ಧಿ ಇಲಾಖೆ ಅಧಿಸೂಚನೆಯನ್ನೂ ಹೊರಡಿಸಿತ್ತು. ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ವತಿಯಿಂದ ವ್ಯಾಪಕ ವಿರೋಧ ಎದುರಾಗಿತ್ತು.

ಈ ಕುರಿತ ಅಧಿಸೂಚನೆ ರದ್ದುಗೊಳಿಸುವಂತೆ ಕೋರಿ ವಿವಿಧ ಸಂಸ್ಥೆಗಳು ಹೈಕೋರ್ಟ್‌ ಮೆಟ್ಟಿಲೇರಿದ್ದವು. ಬಳಿಕ ಸರ್ಕಾರ ಅಧಿಸೂಚನೆಯನ್ನು ಹಿಂಪಡೆದಿತ್ತು. ‘ಭವಿಷ್ಯದಲ್ಲಿ ಹೊಸ ಮಾರ್ಗಸೂಚಿ ರಚಿಸಲಾಗುವುದು’ ಎಂದು ನ್ಯಾಯಪೀಠಕ್ಕೆ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಇನ್ನಷ್ಟು ಸುಧಾರಣೆಗಳೊಂದಿಗೆ ಬೈಲಾ ಸಿದ್ಧಪಡಿಸಿದೆ. ನಾಯಿ ಸಾಕುವವರ ಜವಾಬ್ದಾರಿ ಹೆಚ್ಚಿಸುವ ಹಾಗೂ ದತ್ತು ಸ್ವೀಕಾರವನ್ನು ಪ್ರೋತ್ಸಾಹಿಸುವ ಕೆಲವು ಅಂಶಗಳ ಸೇರ್ಪಡೆ ಮಾಡಿ ಹಳೆ ಬೈಲಾವನ್ನು ಮತ್ತಷ್ಟು ಬಲಪಡಿಸಲಾಗಿದೆ. 

ಫ್ಲ್ಯಾಟ್‌ಗಳಲ್ಲಿ ಒಂದು ನಾಯಿಯನ್ನು ಮಾತ್ರ ಸಾಕುವುದಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸ್ವತಂತ್ರ ಮನೆಗಳಲ್ಲಿ ಗರಿಷ್ಠ ಮೂರು ನಾಯಿಗಳನ್ನು ಸಾಕಬಹುದು ಎಂಬ ನಿರ್ಬಂಧ ವಿಧಿಸಲಾಗಿದೆ. ಆದರೆ, ಪರಿತ್ಯಕ್ತ ನಾಯಿಗಳು, ರಕ್ಷಿಸಿದ ನಾಯಿಗಳು ಮತ್ತು ಸ್ಥಳೀಯ ದೇಸಿ ನಾಯಿಗಳ ಹಿತದೃಷ್ಟಿಯಿಂದ ಅವುಗಳನ್ನು ಸಡಿಲಿಸಲು ಅವಕಾಶ ಕಲ್ಪಿಸಲಾಗಿದೆ. ಬಿಬಿಎಂಪಿಯ ಅಧಿಕಾರಿಗಳಿಂದ ಪ್ರಮಾಣೀಕರಿಸಿದ ಬಳಿಕ ಸಾಕು ನಾಯಿಗಳ ಸಂಖ್ಯೆಯ ಮಿತಿಯನ್ನು ಸಡಿಲಗೊಳಿಸಬಹುದಾಗಿದೆ. ಸಾಕು ನಾಯಿಯ ಮಾಲೀಕತ್ವವನ್ನು ವರ್ಗಾಯಿಸುವುದಕ್ಕೂ ಅವಕಾಶ ಕಲ್ಪಿಸಲಾಗಿದೆ.

6 ತಿಂಗಳಲ್ಲಿ ಪರವಾನಗಿ ಕಡ್ಡಾಯ
ಸಾಕುನಾಯಿಗಳ ಸಂಖ್ಯೆಗೆ ಸಂಬಂಧಿಸಿದ ಈ ನಿರ್ಬಂಧಗಳು ಈಗಾಗಲೇ ಪರವಾನಗಿ ಪಡೆದಿರುವ ಸಾಕುನಾಯಿ ಮಾಲೀಕರಿಗೆ ಅನ್ವಯಿಸುವುದಿಲ್ಲ. ಭವಿಷ್ಯದಲ್ಲಿ ಹೊಸದಾಗಿ ಪರವಾನಗಿ ಪಡೆದು ನಾಯಿ ಸಾಕುವವರಿಗೆ ಮಾತ್ರ ಅನ್ವಯವಾಗಲಿವೆ. ಈಗಾಗಲೇ ವಿವಿಧ ತಳಿಗಳ ನಾಯಿ ಸಾಕುತ್ತಿರುವವರು ಬೈಲಾ ಅಧಿಸೂಚನೆ ಹೊರಡಿಸಿದ 6 ತಿಂಗಳ ಒಳಗೆ ಪರವಾನಗಿ ಪಡೆಯುವುದು ಕಡ್ಡಾಯ. ಆನ್‌ಲೈನ್‌ನಲ್ಲೇ ಸಾಕುನಾಯಿ ಪರವಾನಗಿ ಪಡೆಯಲು ಅವಕಾಶ ಕಲ್ಪಿಸುತ್ತೇವೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದರು.

ಪರವಾನಗಿ– ಮಾನದಂಡಗಳೇನು?

* ಮಾಲೀಕರು ಸಾಕುಪ್ರಾಣಿಗಳಿಗೆ ಸ್ವಂತ ವೆಚ್ಚದಲ್ಲಿ ಮೈಕ್ರೋ ಚಿಪ್ ಅಳವಡಿಸಬೇಕು. 

* ಜಂತು ನಾಶಕ ಔಷಧಿ ಮತ್ತು ರೇಬಿಸ್, ಕೆನೈನ್ ಡಿಸ್ಟೆಂಪರ್, ಲೆಪ್ಟೋಸ್ಪೈರೋಸಿಸ್ ಮುಂತಾದ ಪ್ರಾಣಿಜನ್ಯ ಸಾಂಕ್ರಾಮಿಕ ರೋಗಗಳ ವಿರುದ್ಧ ಲಸಿಕೆ ಹಾಕಿಸಬೇಕು.

* 12 ತಿಂಗಳಿಗಿಂತ ಹೆಚ್ಚು ವಯಸ್ಸಿನ ಹೆಣ್ಣು ನಾಯಿಗಳನ್ನು ಕಡ್ಡಾಯವಾಗಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಬೇಕು (ನೋಂದಾಯಿತ ಪಶುವೈದ್ಯರು ಅವುಗಳು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಯೋಗ್ಯವಲ್ಲ ಎಂದು ಪ್ರಮಾಣಿಸಿಕರಿಸಿದರೆ ಇದರಿಂದ ವಿನಾಯಿತಿ ಇದೆ)  

ಸಾಕು ನಾಯಿ ಮಾಲೀಕರ ಹೊಣೆಗಳು

* ನಾಯಿಗೆ ಸಾಕಷ್ಟು ಜಾಗವನ್ನು ಮತ್ತು ಕಾಳಜಿಯನ್ನು ಒದಗಿಸಬೇಕು. ಕ್ರೌರ್ಯ ಮತ್ತು ಪ್ರಾಣಿ ಕಲ್ಯಾಣ ಕಾಯ್ದೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಬಾರದು

* ಸಾಕುನಾಯಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಕರೆದೊಯ್ಯುವಾಗ ಅದು ಇತರ ಪ್ರಾಣಿಗೆ ಅಥವಾ ವ್ಯಕ್ತಿಗೆ ಕಚ್ಚುವುದನ್ನು ಅಥವಾ ಗಾಯಗೊಳಿಸುವುದನ್ನು ತಪ್ಪಿಸಲು ಕಡ್ಡಾಯವಾಗಿ ಸರಪಳಿಯಿಂದ ಕಟ್ಟಬೇಕು 

* ಉದ್ಯಾನ, ಪಾದಚಾರಿ ಮಾರ್ಗ, ರಸ್ತೆ ಮುಂತಾದ ಸ್ಥಳಗಳಲ್ಲಿ ಸಾಕು ನಾಯಿ ಮಲ ವಿಸರ್ಜನೆ ಮಾಡಿದರೆ, ಅದನ್ನು ಸಂಗ್ರಹಿಸಿ ಗೊತ್ತುಪಡಿಸಿದ ಸ್ಥಳದಲ್ಲಿ ವಿಲೇ ಮಾಡುವುದು ಮಾಲೀಕರ ಹೊಣೆ

ಬೈಲಾದ ಪ್ರಮುಖ ಅಂಶಗಳು
* ಯಾವುದೇ ನಾಯಿಯನ್ನು ಸಾಕಲು ಮಾಲೀಕರು ನಿಗದಿತ ಶುಲ್ಕವನ್ನು ಪಾವತಿಸಿ ಪರವಾನಗಿ ಪಡೆಯಬೇಕು. ಪ್ರತಿವರ್ಷ ಶುಲ್ಕ ಪಾವತಿಸಿ ಅದನ್ನು ನವೀಕರಿಸಿಕೊಳ್ಳಬೇಕು.

* ಬಿಬಿಎಂಪಿಯಿಂದ ನಿಯೋಜಿತರಾಗಿರುವ ಪಶುವೈದ್ಯಾಧಿಕಾರಿಗಳು ಪರವಾನಗಿ ನೀಡುವ ಅಧಿಕಾರ ಹೊಂದಿರುತ್ತಾರೆ.

* ಸಾಕುನಾಯಿಗಳ ಪರವಾನಗಿ ಶುಲ್ಕವನ್ನು ನಿರ್ದಿಷ್ಟ ದೈತ್ಯ ನಾಯಿ, ದೊಡ್ಡ ತಳಿಗಳು, ಮಧ್ಯಮ ತಳಿಗಳು ಮತ್ತು ಸಣ್ಣ ತಳಿಗಳಾಗಿ ಕೆನಲ್ ಕ್ಲಬ್ ಆಫ್ ಇಂಡಿಯಾದ ವರ್ಗೀಕರಣದ ಆಧಾರದ ಮೇಲೆ ನಿಗದಿಪಡಿಸಲಾಗುತ್ತದೆ.

* ಪಶುವೈದ್ಯಾಧಿಕಾರಿಗಳಿಂದ ದೃಢೀಕೃತಗೊಂಡಿರುವ ಯಾವುದೇ ದೇಸಿ ನಾಯಿಗಳು, ಪರಿತ್ಯಕ್ತ, ದತ್ತು ಪಡೆದ, ಸಂರಕ್ಷಿಸಿದ ಅಥವಾ ಗಾಯಗೊಂಡ ನಾಯಿಗಳಿಗೆ ಪರವಾನಗಿ ಶುಲ್ಕ ಪಾವತಿಯಿಂದ ವಿನಾಯಿತಿ ಇದೆ.

ನಾಯಿ ತಪ್ಪಿಸಿಕೊಂಡರೆ ಮಾಲೀಕರಿಗೆ ದಂಡ
* ಪರವಾನಗಿ ಪಡೆಯದೇ ಸಾಕಿರುವ ನಾಯಿ ಹಾಗೂ ಮೈಕ್ರೊ-ಚಿಪ್‌ ಅಳವಡಿಸದ ಸಾಕು ನಾಯಿ ಉದ್ಯಾನವನ, ಬಸ್ ನಿಲ್ದಾಣ, ರೈಲ್ವೆನಿಲ್ದಾಣ, ವಿಮಾನ ನಿಲ್ದಾಣ ಮತ್ತು ರಸ್ತೆ, ದೇವಾಲಯ, ಮಾರುಕಟ್ಟೆ, ಕಸಾಯಿಖಾನೆ, ಹೋಟೆಲ್, ಸಿನಿಮಾ ಮಂದಿರ, ಮದ್ಯದಂಗಡಿ, ಕಾರ್ಖಾನೆ, ಕಲ್ಯಾಣ ಮಂಟಪ, ಕೈಗಾರಿಕಾ ಆವರಣ ಮತ್ತಿತರ ಸಾರ್ವಜನಿಕ ಸ್ಥಳಗಳ ಬಳಿ ಕಂಡು ಬಂದರೆ ಪಾಲಿಕೆಯ ಆಯುಕ್ತರು ನೇಮಿಸಿದ ಯಾವುದೇ ವ್ಯಕ್ತಿ ಅವುಗಳನ್ನು ಹಿಡಿದು ನಾಯಿಗೂಡುಗಳಲ್ಲಿ 72 ಗಂಟೆ ಇಡಬಹುದು. ಆಯುಕ್ತರು ಈ ಅವಧಿಯನ್ನು ವಿಸ್ತರಿಸಬಹುದು. ಇಂತಹ ನಾಯಿಯನ್ನು ಸೂಕ್ತ ತಪಾಸಣೆ ಬಳಿಕ ಮಾಲೀಕರಿಗೆ ಮರಳಿಸಬಹುದು. 72 ಗಂಟೆಗಳು ನಾಯಿಯನ್ನು ಇಟ್ಟುಕೊಂಡರೆ ಅದಕ್ಕೆ ₹ 1 ಸಾವಿರ ಹಾಗೂ ನಂತರದ ಪ್ರತಿ ಗಂಟೆಗೆ ₹ 200ರಂತೆ ಮಾಲೀಕರಿಂದ ದಂಡ ವಸೂಲಿ ಮಾಡಬಹುದು.

ಪರಿತ್ಯಕ್ತ ನಾಯಿ ಸಾಕಲು ಉತ್ತೇಜನ
ಪರಿತ್ಯಕ್ತವಾದ ನಾಯಿ ಪತ್ತೆಯಾದರೆ ಅದರ ಮಾಲೀಕರನ್ನು ಗುರುತಿಸಿ ಅವರಿಗೆ ನೋಟಿಸ್ ಕಳುಹಿಸಲಾಗುತ್ತದೆ. ಅವರು ನಿಗದಿತ ಸಮಯದೊಳಗೆ ಅದನ್ನು ಕರೆದೊಯ್ಯದಿದ್ದಲ್ಲಿ, ಆ ನಾಯಿಯನ್ನು ದತ್ತು ಪಡೆಯಲು ಅವಕಾಶ ಕಲ್ಪಿಸಬಹುದು. ನಾಯಿಯನ್ನು ತ್ಯಜಿಸಿದ ಮಾಲೀಕರಿಗೆ ಆಯುಕ್ತರು ದಂಡ ವಿಧಿಸಬಹುದು ಮತ್ತು  ಶಿಸ್ತುಕ್ರಮ ಕೈಗೊಳ್ಳಬಹುದು.

‘ಸಂತುಲಿತ ಮಾರ್ಗ ಅನುಸರಿಸಬೇಕು’
ನಾಯಿ ಸಾಕುವ ಬಗ್ಗೆ ಪ್ರಾಣಿಪ್ರಿಯದ್ದು ಒಂದು ವಾದವಾದರೆ, ನಾಯಿಗಳ ಬಗ್ಗೆ ಭಯ ಹೊಂದಿರುವವರದ್ದು ಇನ್ನೊಂದು ವಾದ. ಎರಡೂ ಕಡೆಯವರ ಅಭಿಪ್ರಾಯಗಳನ್ನು ಆಲಿಸಿ ಬಿಬಿಎಂಪಿ ಸಂತುಲಿತ ಮಾರ್ಗೋಪಾಯ ಕಂಡುಕೊಳ್ಳುವ ಅಗತ್ಯವಿದೆ.

ಫ್ಲ್ಯಾಟ್‌ಗಳಲ್ಲಿ ಆಕ್ರಮಣಕಾರಿ ತಳಿಯ ನಾಯಿಗಳನ್ನು ಸಾಕುವುದನ್ನು ನಿರ್ಬಂಧಿಸುವ ನಿರ್ಧಾರ ತಪ್ಪಲ್ಲ. ಜನರಿಗೂ ನಾಯಿಗಳ ಬಗ್ಗೆ ಭಯ ಇರುತ್ತದೆ. ಹಾಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ನಾಯಿಗಳನ್ನು ಒಯ್ಯುವಾಗ ಮುನ್ನೆಚ್ಚರಿಕೆ ಪಾಲಿಸುವುದನ್ನು ಕಡ್ಡಾಯ ಮಾಡುವ ಅಗತ್ಯವಿದೆ. ಪರವಾನಗಿ ಪಡೆಯುವುದನ್ನು ಕಡ್ಡಾಯ ಮಾಡುವುದು ಸರಿಯಾದ ನಿರ್ಧಾರ
–ಡಾ.ಪರ್ವೆಜ್‌ ಅಹ್ಮದ್‌ ಪಿರಾನ್ಹ, ನಿವೃತ್ತ ಅಧಿಕಾರಿ

‘ಪರವಾನಗಿ ಕಡ್ಡಾಯ ಬೇಡ’
ನಾಯಿ ಸಾಕುವುದಕ್ಕೂ ಪರವಾನಗಿ ಕಡ್ಡಾಯ ಸಲ್ಲದು. ಇದು ಪರಿತ್ಯಕ್ತ ನಾಯಿಗಳನ್ನು ಸಾಕುವವರಿಗೆ ಇದರಿಂದ ಸಮಸ್ಯೆ ಆಗಲಿದೆ. ವಿದೇಶಿ ತಳಿಗಳ ನಾಯಿಗಳನ್ನು ವಾಣಿಜ್ಯ ಉದ್ದೇಶಕ್ಕೆ ಸಾಕುವವರಿಗೆ ಮಾತ್ರ ಪರವಾನಗಿ ಕಡ್ಡಾಯ ಮಾಡಲಿ. ನಾನಂತೂ ಪರವಾನಗಿ ಪಡೆಯುವುದಿಲ್ಲ. 
–ನಿರ್ಭಯಾ, ಬೊಮ್ಮನಹಳ್ಳಿ

‘ವಾಣಿಜ್ಯ ಉದ್ದೇಶಕ್ಕೆ ನಾಯಿಸಾಕಣೆ ನಿರ್ಬಂಧಿಸಲಿ’
ವಾಣಿಜ್ಯ ಉದ್ದೇಶಕ್ಕೆ ನಾಯಿ ಸಾಕುವುದನ್ನು ಹತ್ತಿಕ್ಕಬೇಕು. ಅವು ನಾಯಿ ಗಳನ್ನು ಕ್ರೂರವಾಗಿ ನಡೆಸಿಕೊಳ್ಳುತ್ತಾರೆ. ನಾಯಿ ಮರಿ ಹಾಕುವ ಸಾಮರ್ಥ್ಯ ಕಳೆದುಕೊಂಡ ನಾಯಿಯನ್ನು ಬೀದಿಯಲ್ಲಿ ಬಿಡುತ್ತಾರೆ. ಪರಿತ್ಯಕ್ತ ನಾಯಿಗಳನ್ನು ದತ್ತು ಪಡೆಯುವುದಕ್ಕೆ ಉತ್ತೇಜನ ನೀಡಬೇಕು. ನಾಯಿ ಸಾಕುವವರು ಪರಿತ್ಯಕ್ತ ನಾಯಿಗಳನ್ನೇ ಆಯ್ಕೆ ಮಾಡಿಕೊಳ್ಳುವುದನ್ನು ಕಡ್ಡಾಯ ಮಾಡಬೇಕು.
–ನೆವಿನಾ ಕಾಮತ್‌, ಆ್ಯಕ್ಷನ್‌ ಫಾರ್‌ ಅನಿಮಲ್‌ ಜಸ್ಟೀಸ್‌

‘ಎಬಿಸಿ ಸರಿಯಾಗಿ ಮಾಡಲಿ’
ಬೀದಿನಾಯಿಗಳ ಸಂತಾನ ನಿಯಂತ್ರಣ (ಎಬಿಸಿ) ಕಾರ್ಯಕ್ರಮವನ್ನೇ ಬಿಬಿಎಂಪಿ ಸರಿಯಾಗಿ ಜಾರಿಗೆ ತರುತ್ತಿಲ್ಲ. ಮೊದಲು ಈ ವ್ಯವಸ್ಥೆಯನ್ನು ಹದ್ದುಬಸ್ತಿಗೆ ತರಲಿ. ನಂತರ ಬೈಲಾ ರೂಪಿಸಲಿ.
–ರಾಮ್‌ಕುಮಾರ್‌ ಬಿ.ಕೆ., ನಾಯಿ ಪ್ರಿಯ

ನಿಯಮ ಉಲ್ಲಂಘನೆ– ದಂಡವೆಷ್ಟು
* ಮೊದಲ ಸಲ ನಿಯಮ ಉಲ್ಲಂಘಿಸಿದರೆ ₹ 500

* ಎರಡನೆಯ ಸಲ ಮತ್ತು ಅದಕ್ಕಿಂತ ಹೆಚ್ಚು ಬಾರಿ ಉಲ್ಲಂಘಿಸಿದರೆ ದುಪ್ಪಟ್ಟು ದಂಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು