ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ಅಧಿಕಾರ ಸ್ವೀಕಾರ– ಅಧಿಕಾರಿಗಳ ಪ್ರಹಸನ

ನಗರ ಯೋಜನಾ ವಿಭಾಗ
Last Updated 12 ಜುಲೈ 2021, 20:57 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ ನಗರ ಯೋಜನಾ ವಿಭಾಗದ ಜಂಟಿ ನಿರ್ದೇಶಕರ ಅಧಿಕಾರ ಸ್ವೀಕಾರ ಪ್ರಕ್ರಿಯೆ ಪ್ರಹಸನದ ರೂಪ ತಾಳಿದೆ.

ನಗರ ಯೋಜನಾ ವಿಭಾಗದ ಜಂಟಿ ನಿರ್ದೇಶಕ ವೆಂಕಟದುರ್ಗಾ ಪ್ರಸಾದ್‌ ಕುಂಚಾಲ ಅವರು ಬೆಂಗಳೂರು ಉತ್ತರ ವಿಭಾಗದ ಜಂಟಿ ನಿರ್ದೇಶಕರಾಗಿ ಶುಕ್ರವಾರ ಮಧ್ಯಾಹ್ನ ಅಧಿಕಾರ ಸ್ವೀಕರಿಸಿದ್ದರು. ಜಂಟಿ ನಿರ್ದೇಶಕರಾಗಿದ್ದ (ಉತ್ತರ) ಬಿ.ಮಂಜೇಶ್‌, ‘ನಾನು ಕಚೇರಿಯಲ್ಲಿ ಇಲ್ಲದ ಸಂದರ್ಭದಲ್ಲಿ ವೆಂಕಟದುರ್ಗಾ ಪ್ರಸಾದ್‌ ಅವರು ಬಂದು ನನ್ನ ಕುರ್ಚಿಯಲ್ಲಿ ಕುಳಿತಿದ್ದಾರೆ’ ಎಂದು ದೂರಿದ್ದಾರೆ. ಇದನ್ನು ಅಲ್ಲಗಳೆದ ವೆಂಕಟದುರ್ಗಾ ಪ್ರಸಾದ್‌ ತಾವು ’ಕೆಎಟಿ’ ಆದೇಶದ ಪ್ರಕಾರ ಅಧಿಕಾರ ಸ್ವೀಕರಿಸಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ಸೋಮವಾರವೂ ಇದೇ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

ವಿವಾದ ಏನು?

ವೆಂಕಟದುರ್ಗಾ ಪ್ರಸಾದ್‌ ಈ ಹಿಂದೆ ಬಿಬಿಎಂಪಿಯಲ್ಲಿಯೇ ಜಂಟಿ ನಿರ್ದೇಶಕರಾಗಿ (ನಗರ ಯೋಜನಾ ಸ್ಕ್ವಾಡ್‌) ಕಾರ್ಯನಿರ್ವಹಿಸಿದ್ದರು. ಇದು ಮಂಜೂರಾದ ಹುದ್ದೆಯಲ್ಲ. ತಮ್ಮ ಅರ್ಹತೆಗೆ ಹಾಗೂ ಹಿರಿತನಕ್ಕೆ ಅನುಗುಣವಾಗಿ ಬಿಬಿಎಂಪಿಯ ಜಂಟಿ ನಿರ್ದೇಶಕ (ನಗರ ಯೋಜನೆ ಉತ್ತರ) ಹುದ್ದೆಯನ್ನು ನೀಡುವಂತೆ ಕೋರಿದ್ದರು. ಇದಕ್ಕೆ ಬಿಬಿಎಂಪಿ ಒಪ್ಪದಿದ್ದಾಗ ಕೆಎಟಿ ಮೊರೆ ಹೋಗಿದ್ದರು.

2020ರ ಡಿಸೆಂಬರ್‌ 31ರಂದು ಬೆಂಗಳೂರು ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ (ಬಿಎಂಐಸಿಎಪಿಎ) ನಗರ ಮತ್ತು ಗ್ರಾಮಾಂತರ ಯೋಜನೆ ಜಂಟಿ ನಿರ್ದೇಶಕರಾಗಿದ್ದ ಎಚ್‌.ಎನ್‌.ರಘು ಅವರನ್ನು ಸರ್ಕಾರ ಬಿಬಿಎಂಪಿಗೆ ವರ್ಗ ಮಾಡಿತ್ತು (ಅವರು ಹಿಂದೆಯೂ ಬಿಬಿಎಂಪಿಯಲ್ಲಿಯೇ ಇದ್ದರು). ಇದರಿಂದ ತೆರವಾಗಿದ್ದ ಹುದ್ದೆಗೆ ವೆಂಕಟರದುರ್ಗಾ ಪ್ರಸಾದ್‌ ಅವರನ್ನು ವರ್ಗ ಮಾಡಲಾಗಿತ್ತು. ಈ ಅವಧಿಪೂರ್ಣ ವರ್ಗಾವಣೆಯನ್ನು ವೆಂಕಟದುರ್ಗಾ ಪ್ರಸಾದ್‌ ಕೆಎಟಿಯಲ್ಲಿ ಪ್ರಶ್ನಿಸಿದ್ದರು. ಈ ವರ್ಗಾವಣೆ ಆದೇಶವನ್ನು ಕೆಎಟಿ 2021ರ ಏ.16ರಂದು ರದ್ದುಪಡಿಸಿತ್ತು. ಹಾಗಾಗಿ ರಘು ಅವರನ್ನು ಮತ್ತೆ ಬಿಎಂಐಸಿಎಪಿಎಗೆ ಹಾಗೂ ವೆಂಕಟದುರ್ಗಾ ಪ್ರಸಾದ್‌ ಅವರನ್ನು ಮರಳಿ ಬಿಬಿಎಂಪಿಗೆ ಸರ್ಕಾರ 2021ರ ಏ. 30ರಂದು ವರ್ಗ ಮಾಡಿತ್ತು. ಈ ಆದೇಶವನ್ನು ರಘು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

‘ನಾನು ಬಿಬಿಎಂಪಿಯ ಜಂಟಿ ನಿರ್ದೇಶಕ ( ನಗರ ಯೋಜನೆ–ಉತ್ತರ) ಹುದ್ದೆ ನೀಡುವಂತೆ ಸಲ್ಲಿಸಿದ್ದ ಪ್ರಕರಣ ಸಂಬಂಧಿಸಿಯೂ ಕೆಎಟಿ ನನ್ನ ಪರವಾಗಿ ಆದೇಶ ಮಾಡಿದೆ. ಅದರ ಪ್ರಕಾರ ನಾನು ಜಂಟಿ ನಿರ್ದೇಶಕನಾಗಿ (ನಗರ ಯೋಜನೆ ಉತ್ತರ) ಶುಕ್ರವಾರ ಅಧಿಕಾರ ಸ್ವೀಕರಿಸಿದ್ದೇನೆ. ಇದಕ್ಕೆ ಮುನ್ನ ಮಂಜೇಶ್‌ ಅವರಿಗೆ ಕರೆ ಮಾಡಿದ್ದರೂ ಸ್ವೀಕರಿಸಿಲ್ಲ. ಮುಕ್ಕಾಲು ಗಂಟೆ ಕಾದ ಬಳಿಕ ಅಧಿಕಾರ ಸ್ವೀಕಾರ ಪ್ರಕ್ರಿಯೆ ಪೂರ್ಣಗೊಳಿಸಿದ್ದೆ’ ಎನ್ನುತ್ತಾರೆ ವೆಂಕಟದುರ್ಗಾ ಪ್ರಸಾದ್‌.

‘ಅವರೇನಿದ್ದರೂ ಬಿಬಿಎಂಪಿ ಮುಖ್ಯ ಆಯುಕ್ತರಲ್ಲಿ ವರದಿ ಮಾಡಿಕೊಂಡು ನಂತರ ಅಧಿಕಾರ ಸ್ವೀಕರಿಸಬೇಕಿತ್ತು. ಅವರ ಸೂಚನೆಯೇ ಇಲ್ಲದೇ ನನ್ನ ಕುರ್ಚಿಯಲ್ಲಿ ಬಂದು ಕುಳಿತಿದ್ದರು’ ಎಂಬುದು ಮಂಜೇಶ್‌ ಅವರ ಆಕ್ಷೇಪ.

ಅಧಿಕಾರ ಸ್ವೀಕಾರ ಪ್ರಹಸನ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಮುಖ್ಯ ಆಯುಕ್ತ ಗೌರವ್‌ ಗುಪ್ತ ಮಧ್ಯಪ್ರವೇಶ ಮಾಡಿದ್ದಾರೆ. ಸದ್ಯಕ್ಕೆ ಮಂಜೇಶ್‌ ಅವರನ್ನು ಜಂಟಿ ನಿರ್ದೇಶಕ (ಉತ್ತರ) ಹುದ್ದೆಯಲ್ಲಿ ಮುಂದುವರಿಸಿ ಆದೇಶ ಮಾಡಿದ್ದಾರೆ.ವೆಂಕಟದುರ್ಗಾ ಪ್ರಸಾದ್‌ ಅವರನ್ನು ಜಂಟಿ ನಿರ್ದೇಶಕರಾಗಿ (ನಗರ ಯೋಜನೆ ಸ್ಕ್ವಾಡ್‌) ಮುಂದುವರಿಯುವಂತೆ ಸೂಚಿಸಿ ಆದೇಶ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT