ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದೋರ್‌ ಮಾದರಿಯ ಬೆನ್ನು ಹತ್ತಿ ಬೆಲೆ ತೆತ್ತಿತೇ ಪಾಲಿಕೆ?

ಸ್ವಚ್ಛ ಸರ್ವೇಕ್ಷಣ್‌ ಸಮೀಕ್ಷೆ– ಕಸ ನಿರ್ವಹಣೆಯಲ್ಲಿ ಶೂನ್ಯ ಸಂಪಾದನೆ
Last Updated 20 ಆಗಸ್ಟ್ 2020, 19:19 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ‘ಬಿಬಿಎಂಪಿಯಲ್ಲೂ ಇಂದೋರ್‌ ಮಾದರಿಯ ಕಸ ನಿರ್ವಹಣೆಯನ್ನು ಜಾರಿಗೆ ತರುತ್ತೇವೆ. ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲೂ ಉತ್ತಮ ಶ್ರೇಯಾಂಕ ಪಡೆಯುತ್ತೇವೆ...’

ಬಿಜೆಪಿಯು ಬಿಬಿಎಂಪಿಯ ಆಡಳಿತ ಚುಕ್ಕಾಣಿ ಹಿಡಿದ ದಿನದಿಂದ ಜಪಿಸುತ್ತಿದ್ದ ಮಂತ್ರವಿದು. ಈ ಸಲುವಾಗಿ ಇಂದೋರ್‌ಗೆ ಮೇಯರ್‌ ಎಂ.ಗೌತಮ್‌ ಕುಮಾರ್ ನೇತೃತ್ವದಲ್ಲಿ ನಿಯೋಗ ಒಯ್ಯಲಾಗಿತ್ತು. ಇಂದೋರ್‌ನ ಕಸ ವಿಲೇವಾರಿ ವ್ಯವಸ್ಥೆಯನ್ನು ಈ ತಂಡವು ಅಧ್ಯಯನವನ್ನೂ ನಡೆಸಿತ್ತು. ಅಲ್ಲಿಂದ ತಜ್ಞರ ತಂಡವನ್ನು ಕರೆಯಿಸಿ ಆಯ್ದ ಐದು ವಾರ್ಡ್‌ಗಳಲ್ಲಿ ಇಂದೋರ್‌ ಮಾದರಿಯಲ್ಲಿ ಕಸ ವಿಲೇವಾರಿ ಜಾರಿಗೊಳಿಸುವ ಪ್ರಯತ್ನವೂ ನಡೆದಿತ್ತು. ಆದರೆ, ಅದರ ಸಮರ್ಪಕ ಅನುಷ್ಠಾನ ಸಾಧ್ಯವಾಗಲೇ ಇಲ್ಲ.

‘ಕಸ ನಿರ್ವಹಣೆ ವ್ಯವಸ್ಥೆ ಸುಧಾರಣೆ ಆಗದ ಕಾರಣ ಈ ಬಾರಿಯ ಸ್ವಚ್ಛ ಸರ್ವೇಕ್ಷಣ್‌ ಸಮೀಕ್ಷೆಯಲ್ಲಿ ‘ಕಸ ಮುಕ್ತ ನಗರ’ (ಜಿಎಫ್‌ಸಿ) ವಿಭಾಗದಲ್ಲಿ ಬಿಬಿಎಂಪಿ ಶೂನ್ಯ ಸಂಪಾದನೆ ಮಾಡುವಂತಾಗಿದೆ. ಈ ವಿಭಾಗಕ್ಕೆ 1000 ಅಂಕ ನಿಗದಿಯಾಗಿತ್ತು. ಈ ಹಿನ್ನಡೆಯೇ ಈ ಬಾರಿಯ ಸಮೀಕ್ಷೆಯಲ್ಲಿ ಪಾಲಿಕೆ 20 ಸ್ಥಾನ ಕುಸಿಯಲು ಮುಖ್ಯ ಕಾರಣ’ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.

‘ಕಳೆದ ಸಾಲಿನಲ್ಲಿ ಲೋಪಗಳನ್ನು ಪಟ್ಟಿಮಾಡಿ ಅವುಗಳನ್ನು ಸರಿಪಡಿಸಲು ಕ್ರಮ ಕೈಗೊಂಡಿದ್ದೆವು. ಕೇಂದ್ರವು 2016ರಲ್ಲಿ ರೂಪಿಸಿದ್ದ ಕಸ ವಿಲೇವಾರಿ ನಿಯಮಗಳು ಹಾಗೂ ಹಸಿರು ನ್ಯಾಯಮಂಡಳಿ ಆದೇಶಗಳಿಗೆ ಅನುಗುಣವಾಗಿ ಕಸ ನಿರ್ವಹಣೆ ವ್ಯವಸ್ಥೆ ರೂಪಿಸಿದ್ದೆವು. ಮನೆ ಮನೆಯಿಂದ ಹಸಿ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸುವುದಕ್ಕೆ ಟೆಂಡರ್‌ ಕರೆದಿದ್ದೆವು. ಆದರೆ, ಬಿಬಿಎಂಪಿ ಹೊಸ ಆಡಳಿತ ಅದರ ಅನುಷ್ಠಾನಕ್ಕೆ ಮುಂದಾಗಲಿಲ್ಲ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

‘198 ವಾರ್ಡ್‌ಗಳಲ್ಲಿ 160 ವಾರ್ಡ್‌ಗಳ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿತ್ತು. 2019ರ ಅಕ್ಟೋಬರ್‌ನಿಂದಲೇ ಕಸ ವಿಲೇವಾರಿ ಟೆಂಡರ್‌ ಜಾರಿಗೊಳಿಬಹುದಿತ್ತು. ಆದರೆ, ಪಾಲಿಕೆಯಲ್ಲಿ ಹೊಸ ಆಡಳಿತ ಬಂದ ಬಳಿಕ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು ಆಸಕ್ತಿ ತೋರಿಸಲೇ ಇಲ್ಲ. ಈಗ ಹೈಕೋರ್ಟ್‌ನ ಕೆಂಗಣ್ಣಿಗೆ ಗುರಿಯಾಗುವ ಆತಂಕದಿಂದ ಈಗ ತರಾತುರಿಯಲ್ಲಿ ಕಾರ್ಯಾದೇಶ ನೀಡಲು ಮುಂದಾಗಿದೆ. ವರ್ಷದ ಹಿಂದೆಯೇ ಕಾರ್ಯಾದೇಶ ನೀಡುತ್ತಿದ್ದರೆ ಕಸ ವಿಲೇವಾರಿ ವ್ಯವಸ್ಥೆಯಲ್ಲಿ ಖಂಡಿತಾ ಸುಧಾರಣೆ ಆಗುತ್ತಿತ್ತು’ ಎನ್ನುತ್ತಾರೆ ನಿಕಟಪೂರ್ವ ಮೇಯರ್‌ ಗಂಗಾಂಬಿಕೆ.

‘ನಮ್ಮಲ್ಲಿ ಕಸ ವಿಲೇವಾರಿಗೆ ಟೆಂಡರ್‌ ಜಾರಿಯಾಗಲಿಲ್ಲ. ವಾಹನಗಳಿಗೆ ಜಿಪಿಎಸ್‌ ಅಳವಡಿಸಿರಲಿಲ್ಲ. ಸಮೀಕ್ಷಕರ ತಂಡ ಸ್ಥಳ ಪರಿಶೀಲನೆ ನಡೆಸಿದಾಗ ಕಸದ ರಾಶಿಗಳು ಕಂಡು ಬಂದಿದ್ದವು. ಕಸ ಸಾಗಿಸುವ ಎಲ್ಲ ವಾಹನಗಳಿಗೆ ಜಿಪಿಎಸ್‌ ಅಳವಡಿಸಿರಲಿಲ್ಲ. ಕಸ ವಿಲೇವಾರಿ ಬಗ್ಗೆ ಸಂಪೂರ್ಣ ನಿಗಾ ಇಡಲು ಕೇಂದ್ರೀಕೃತ ವ್ಯವಸ್ಥೆಯೇ ಇರಲಿಲ್ಲ. ಇವೆಲ್ಲ ಕಾರಣಗಳಿಂದ ನಾವು ನಿರೀಕ್ಷಿಸಿದಷ್ಟು ಅಂಕ ಪಡೆಯಲು ಸಾಧ್ಯವಾಗಲಿಲ್ಲ’ ಎಂದು ವಿಶೇಷ ಆಯುಕ್ತ (ಕಸ ವಿಲೇವಾರಿ) ಡಿ.ರಂದೀಪ್‌ ತಿಳಿಸಿದರು.

ಪಾಲಿಕೆಯ ಏಳು ಕಸ ಸಂಸ್ಕರಣಾ ಘಟಕಗಳಲ್ಲಿ ನಿತ್ಯ ಸರಾಸರಿ 2 ಸಾವಿರ ಟನ್‌ಗಳಷ್ಟು ಹಸಿ ಕಸ ಸಂಸ್ಕರಣೆ ಮಾಡಬಹುದು. ಅವುಗಳಲ್ಲಿ, ನಿತ್ಯ ತಲಾ 150 ಟನ್‌ ಕಸ ಸಂಸ್ಕರಣಾ ಸಾಮರ್ಥ್ಯ ಹೊಂದಿರುವ ಸುಬ್ಬರಾಯನಪಾಳ್ಯ ಹಾಗೂ ಸೀಗೇಹಳ್ಳಿ ಘಟಕಗಳು ರಾಜಕೀಯ ಒತ್ತಡದಿಂದಾಗಿ ಮುಚ್ಚಿವೆ. ಕೆಸಿಡಿಸಿ ಘಟಕವು 350 ಟನ್‌ ಸಾಮರ್ಥ್ಯವಿದೆ. ಆದರೆ, ಅಲ್ಲಿ ನಿತ್ಯ 80 ಟನ್‌ ಕಸ ಮಾತ್ರ ಸಂಸ್ಕರಣೆಯಾಗುತ್ತಿದೆ.

‘ಕಸ ಸಂಸ್ಕರಣಾ ಘಟಕಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸದೇ ಇರುವುದನ್ನೂ ಸಮೀಕ್ಷಕರ ತಂಡ ಪರಿಗಣಿಸಿದೆ’ ಎಂದು ರಂದೀಪ್‌ ತಿಳಿಸಿದರು.

ಕೈಹಿಡಿಯದ ಜನಾಭಿಪ್ರಾಯ
ಈ ಬಾರಿ ಸ್ವಚ್ಚತೆ ಕುರಿತ ಜನಾಭಿಪ್ರಾಯ ಸಂಗ್ರಹದಲ್ಲೂ ಬಿಬಿಎಂಪಿ 750 ಅಂಕ ಕಳೆದುಕೊಂಡಿದೆ. ಸಮೀಕ್ಷಕರ ತಂಡ ನಡೆಸಿದ ಮುಖಾಮುಖಿ ಪ್ರತಿಕ್ರಿಯೆಯಲ್ಲಿ 880 ಅಂಕಗಳಲ್ಲಿ 550 ಅಂಕ. ಇತರ ಮೂಲಗಳಿಂದ ಸಂಗ್ರಹಿಸಿದ ಪ್ರತಿಕ್ರಿಯೆಗೆ 220ರಲ್ಲಿ 189 ಅಂಕ ಹಾಗೂ ಸ್ವಚ್ಛತಾ ಆ್ಯಪ್‌ ಮೂಲಕ ಸಂಗ್ರಹಿಸಿದ ಜನಾಭಿಪ್ರಾಯದಲ್ಲಿ 400ರಲ್ಲಿ 0.45 ಅಂಕಗಳು ಮಾತ್ರ ಸಿಕ್ಕಿವೆ.

1.39 ಕೋಟಿ ಜನರಿರುವ ನಗರದಲ್ಲಿ ಕನಿಷ್ಠ 3.5 ಲಕ್ಷ ಜನರು ಸ್ವಚ್ಛತಾ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಅಭಿಪ್ರಾಯ ತಿಳಿಸಬೇಕಿತ್ತು. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಮೂರು ವಿಭಾಗಗಳಲ್ಲಿ 56,021 ಮಂದಿ ಮಾತ್ರ ಪ್ರತಿಕ್ರಿಯೆ ನೀಡಿದ್ದರು.

**

ಕಸ ವಿಲೇವಾರಿಗೆ ಇಂದೋರ್ ಮಾದರಿಯ ಪೂರ್ಣ ಅನುಷ್ಠಾನಕ್ಕೆ ಇನ್ನೂ 3–4 ವರ್ಷಗಳು ಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ. ಸರ್ವೆಯಲ್ಲಿ ಉತ್ತಮ ಸ್ಥಾನ ಪಡೆಯಲು ಜನರ, ಸರ್ಕಾರದ ಹಾಗೂ ಅಧಿಕಾರಿ ವರ್ಗದ ಸಹಕಾರವೂ ಮುಖ್ಯ;
–ಎಂ.ಗೌತಮ್‌ ಕುಮಾರ್‌, ಮೇಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT