ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವನಪುರ ಕೆರೆ ದುರಸ್ತಿ: ಕೊಳಚೆ ನೀರು ಹರಿವು ಸ್ಥಗಿತ

Last Updated 7 ಆಗಸ್ಟ್ 2021, 22:10 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರದ ಬಸವನಪುರ ಕೆರೆಗೆ ಒಳಚರಂಡಿಯ ಕೊಳಚೆ ನೀರು ಹರಿಯುವುದನ್ನು ತಡೆಯಲಾಗಿದೆ. ಕೊಳಚೆ ನೀರು ಕೆರೆಗೆ ಸೇರುವುದನ್ನು ತಡೆಯುವ ಕೊಳವೆ ಮಾರ್ಗವನ್ನು ಬಿಬಿಎಂಪಿ ಕೆರೆ ವಿಭಾಗದ ಅಧಿಕಾರಿಗಳು ದುರಸ್ತಿ ಪಡಿಸಿದ್ದಾರೆ.

ಬಸವನಪುರ ಕೆರೆಗೆ ಕೊಳಚೆ ನೀರು ಸೇರುತ್ತಿರುವ ಬಗ್ಗೆ ‘ಪ್ರಜಾವಾಣಿ’ಯು ಶುಕ್ರವಾರದ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಅದೇ ದಿನ ಬಿಬಿಎಂಪಿ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೊಂಡಿದ್ದರು.

‘ಕೊಳಚೆ ನೀರು ಬಸವನಪುರ ಕೆರೆಗೆ ಸೇರದಂತೆ ತಡೆಯಲು ಅಳವಡಿಸಿದ್ದ ಕೊಳವೆಯಲ್ಲಿ ತ್ಯಾಜ್ಯ ನೀರು ಹರಿಯುವಿಕೆ ಪ್ರಮಾಣ ಇತ್ತೀಚೆಗೆ ತೀರಾ ಹೆಚ್ಚಳವಾಗಿತ್ತು. ಈ ಕೊಳವೆಯೊಳಗೆ ಪ್ಲಾಸ್ಟಿಕ್‌ ಮತ್ತಿತರ ಕಸಗಳು ಕಟ್ಟಿಕೊಂಡು ತ್ಯಾಜ್ಯ ನೀರಿನ ಸಹಜ ಹರಿವಿಗೆ ಅಡ್ಡಿ ಉಂಟಾಗಿತ್ತು. ಕಟ್ಟಿಕೊಂಡಿದ್ದ ಕಸಗಳನ್ನು ತೆಗೆಸಿ ನೀರು ಸರಾಗವಾಗಿ ಹರಿಯುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ’ ಎಂದು ಬಿಬಿಎಂಪಿ ಕೆರೆ ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ದುರಸ್ತಿ ಕಾರ್ಯ ಕೈಗೊಂಡ ಬಳಿಕ ಬಸವನಪುರ ಕೆರೆಗೆ ಯಾವುದೇ ಕೊಳಚೆ ನೀರು ಸೇರುತ್ತಿಲ್ಲ. ಇನ್ನೂ ಕೆಲವು ದಿನಗಳ ಕಾಲ ಕೆರೆಗೆ ಕೊಳಚೆ ನೀರು ಸೇರುತ್ತದೆಯೋ ಇಲ್ಲವೋ ಎಂಬ ಬಗ್ಗೆ ನಿಗಾ ಇಟ್ಟು ಮತ್ತೊಮ್ಮೆ ಖಚಿತಪಡಿಸಿಕೊಳ್ಳಲಿದ್ದೇವೆ’ ಎಂದರು.

‘ಕೆರೆಗೆ ಕೊಳಚೆ ನೀರು ಸೇರುತ್ತಿರುವ ಬಗ್ಗೆ ಗಮನಕ್ಕೆ ತಂದ ತಕ್ಷಣವೇ ಬಿಬಿಎಂಪಿ ಕೆರೆ ವಿಭಾಗದ ಅಧಿಕಾರಿಗಳು ಸ್ಪಂದಿಸಿದ್ದಾರೆ. ಶುಕ್ರವಾರ ಮುಂಜಾನೆ 3 ಗಂಟೆವರೆಗೂ ದುರಸ್ತಿ ಕಾರ್ಯ ಕೈಗೊಳ್ಳುವ ಮೂಲಕ ಸಮಸ್ಯೆ ನೀವಾರಿಸಿದ್ದಾರೆ. ಅವರಿಗೆ ಧನ್ಯವಾದಗಳು’ ಎಂದು ಸ್ಥಳೀಯ ನಿವಾಸಿ ಬಾಲಾಜಿ ರಘೋತ್ತಮ ಬಾಲಿ ತಿಳಿಸಿದರು.

18 ಎಕರೆ ವಿಸ್ತೀರ್ಣದ ಈ ವಿಶಾಲ ಕೆರೆಯನ್ನು ಐದು ವರ್ಷಗಳ ಹಿಂದೆ ಬಿಬಿಎಂಪಿಯು ₹ 3.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿತ್ತು. ಕೊಳಚೆ ನೀರಿನಿಂದ ಕಲುಷಿತಗೊಂಡಿದ್ದ ಈ ಜಲಕಾಯಕ್ಕೆ ಒಳಚರಂಡಿಯ ತ್ಯಾಜ್ಯ ನೀರು ಸೇರದಂತೆ ವ್ಯವಸ್ಥೆ ಕಲ್ಪಿಸಿತ್ತು. ಆ ಬಳಿಕ ಸ್ವತಂತ್ರನಗರ, ಕೊಡಿಗೆಹಳ್ಳಿ ರಸ್ತೆಗಳ ಪ್ರದೇಶದ ಮಳೆನೀರು ಮಾತ್ರ ಈ ಕೆರೆಗೆ ಹರಿದುಬರುತ್ತಿತ್ತು.

ಈ ಸಲ ಮೊದಲ ಮಳೆಗೆ ಈ ಕೆರೆ ತುಂಬಿ ಕೋಡಿ ಹರಿದಿತ್ತು. ಇದರಿಂದ ಸಂಭ್ರಮ ಪಟ್ಟಿದ್ದ ಸ್ಥಳೀಯರು ಸೋಮವಾರ ಕೆರೆಗೆ ಬಾಗೀನವನ್ನೂ ಸಮರ್ಪಿಸಿದ್ದರು. ಇದಾಗಿ ಎರಡೇ ದಿನದಲ್ಲೇ ಕೆರೆಗೆ ಕೊಳಚೆ ನೀರು ಸೇರಲು ಶುರುವಾಗಿತ್ತು. ತಿಳಿಯಾಗಿದ್ದ ಕೆರೆಯ ನೀರಿನ ಬಣ್ಣ ನಿಧಾನವಾಗಿ ನೀಲಿ ಬಣ್ಣಕ್ಕೆ ತಿರುಗಲು ಆರಂಭವಾಗಿತ್ತು. ಈ ಬಗ್ಗೆ ವಿಶೇಷ ವರದಿ ಪ್ರಕಟಿಸುವ ಮೂಲಕ ‘ಪ್ರಜಾವಾಣಿ’ ಅಧಿಕಾರಿಗಳ ಗಮನ ಸೆಳೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT