ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಕಾಮಗಾರಿ: ₹47 ಕೋಟಿ ಟೆಂಡರ್‌ ಅಕ್ರಮ

Last Updated 13 ಜುಲೈ 2021, 20:14 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿಯವರ ನವನಗರೋತ್ಥಾನ ಯೋಜನೆಯಡಿ ಪುಲಿಕೇಶಿನಗರ, ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳ ಮುಖ್ಯ ರಸ್ತೆ, ಉಪಮುಖ್ಯ ರಸ್ತೆ, ಮಳೆನೀರು ಚರಂಡಿ, ಪಾದಚಾರಿ ಮಾರ್ಗ ನಿರ್ಮಾಣದ ₹ 47.70 ಕೋಟಿ ಮೊತ್ತದ ಕಾಮಗಾರಿಯ ಟೆಂಡರ್‌ನಲ್ಲಿ ಅಕ್ರಮ ನಡೆದಿದೆ.

ಟೆಂಡರ್‌ನಲ್ಲಿ ಕಡಿಮೆ ಮೊತ್ತ ದಾಖಲಿಸಿದ (ಎಲ್‌1) ಗುತ್ತಿಗೆದಾರನ ಬದಲು ಹೆಚ್ಚು ಮೊತ್ತ ದಾಖಲಿಸಿದ ಗುತ್ತಿಗೆದಾರನಿಗೆ ಕಾಮಗಾರಿಯ ಟೆಂಡರ್‌ ವಹಿಸುವಬಿಬಿಎಂಪಿಯ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಬಿಬಿಎಂಪಿಯ ಶಿಫಾರಸ್ಸನ್ನು ಬದಿಗಿರಿಸಿದ ನಗರಾಭಿವೃದ್ಧಿ ಇಲಾಖೆಯ ಅಧಿಕಾರಯುಕ್ತ ಸಮಿತಿ ಎಲ್‌–1 ಗುತ್ತಿಗೆದಾರರಿಗೇ ಕಾಮಗಾರಿಯ ಟೆಂಡರ್‌ ನೀಡಲು ನಿರ್ಧರಿಸಿದೆ.

ಈ ಕಾಮಗಾರಿಗಳ ಕ್ರಿಯಾಯೋಜನೆಗಳಿಗೆ ನಗರಾಭಿವೃದ್ಧಿ ಇಲಾಖೆಯು 2019ರ ಸೆ.20ರಂದು ಅನುಮೋದನೆ ನೀಡಿತ್ತು. ಬಿಬಿಎಂಪಿಯು 2020ರ ಜ.22ರಂದು ಈ ಕಾಮಗಾರಿಗಳಿಗೆ ಟೆಂಡರ್‌ ಆಹ್ವಾನಿಸಿತ್ತು. ಒಟ್ಟು ಏಳು ಗುತ್ತಿಗೆದಾರರು ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಅವರಲ್ಲಿ ಎ.ಮೋಹನ ನರಸಿಂಹಲು (ಜೆಎಂಸಿ ಕನ್‌ಸ್ಟ್ರಕ್ಷನ್ಸ್‌), ಎಂ.ಎಸ್‌.ವೆಂಕಟೇಶ್‌ ಹಾಗೂ ಎಸ್‌.ಟಿ.ರಮೇಶ್‌ (ಗಣಪತಿ ಸ್ಟೋನ್‌ ಕ್ರಷರ್ಸ್‌) ತಾಂತ್ರಿಕ ಅರ್ಹತೆ ಪಡೆದಿದ್ದರು. 2020ರ ಮೇ 20ರಂದು ಬಿಬಿಎಂಪಿ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದಿದ್ದ ತಾಂತ್ರಿಕ ಮೌಲ್ಯಮಾಪನ ಸಮಿತಿ ಟೆಂಡರ್‌ ಮೊತ್ತವನ್ನು ₹37.86 ಕೋಟಿಗೆ ಪರಿಷ್ಕರಿಸಿತ್ತು.

2020ರ ಮೇ 16ರಂದು ಆರ್ಥಿಕ ಬಿಡ್‌ ತೆರೆಯಲಾಗಿತ್ತು. ಎ.ಮೋಹನ್‌ ₹ 33.69 ಕೋಟಿಗೆ, ಎಂ.ಎಸ್.ವೆಂಕಟೇಶ್‌ ₹ 38.91 ಕೋಟಿಗೆ ಹಾಗೂ ಎಸ್‌.ಟಿ.ರಮೇಶ್‌ ₹ 41.61 ಕೋಟಿಗೆ ಬಿಡ್‌ ಸಲ್ಲಿಸಿದ್ದರು. ಟೆಂಡರ್‌ನ ಪರಿಷ್ಕೃತ ಮೊತ್ತಕ್ಕಿಂತ ಶೇ 11.01ರಷ್ಟು ಕಡಿಮೆ ದರವನ್ನು ನಮೂದಿಸಿದ್ದರೂ ಮಾದರಿ ಟೆಂಡರ್‌ ದಾಖಲೆ (ಕೆಡಬ್ಲ್ಯು–4) ಸೆಕ್ಷನ್‌ IIನ ಪ್ರಕಾರ ಟೆಂಡರ್‌ದಾರರಿಗೆ ನೀಡುವ ಸೂಚನೆಗಳ ಅನುಚ್ಛೇದ 25.5ರನ್ವಯ ಹೆಚ್ಚುವರಿ ದಾಖಲೆ ಸಲ್ಲಿಸುವಂತೆ ಕಾರ್ಯಪಾಲಕ ಎಂಜಿನಿಯರ್‌ ಎ.ಮೋಹನ್‌ ಅವರಿಗೆ ಸೂಚಿಸಿದ್ದರು. ಸೂಕ್ತ ದಾಖಲೆ ನೀಡಿಲ್ಲ ಎಂಬ ಕಾರಣ ನೀಡಿ ಅವರ ಅರ್ಜಿಯನ್ನು ತಿರಸ್ಕರಿಸಿದ್ದರು.

ಈ ನಡುವೆ, 2020ರ ಜುಲೈ 1ರಂದು ಟೆಂಡರ್‌ ಮೊತ್ತವನ್ನು ಮತ್ತೆ ₹ 39.28 ಕೋಟಿಗೆ ಪರಿಷ್ಕರಿಸಲಾಗಿತ್ತು. ಬಿಬಿಎಂಪಿ ಆಯುಕ್ತರ ಅಧ್ಯಕ್ಷತೆಯಲ್ಲಿ 2020ರ ಆ.11ರಂದು ತಾಂತ್ರಿಕ ಮೌಲ್ಯಮಾಪನ, ಆರ್ಥಿಕ ಮೌಲ್ಯಮಾಪನ ಮತ್ತು ದರ ಸಂಧಾನ ಸಭೆ ನಡೆದಿತ್ತು. ವೆಂಕಟೇಶ್‌ ಟೆಂಡರ್ ಮೊತ್ತಕ್ಕಿಂತ ಶೇ 1.89ರಷ್ಟು ಕಡಿಮೆ ಮೊತ್ತ ನಮೂದಿಸಿದ್ದಾರೆ ಎಂದು ಅವರಿಗೆ ಟೆಂಡರ್‌ ನೀಡಲು ಬಿಬಿಎಂಪಿ ಶಿಫಾರಸು ಮಾಡಿತ್ತು. ಇದಕ್ಕೆ ಅನುಮೋದನೆ ಕೋರಿ ಬಿಬಿಎಂಪಿಯು ಅಧಿಕಾರಯುಕ್ತ ಸಮಿತಿಗೆ 2021ರ ಮಾರ್ಚ್‌ 16ರಂದು ಪ್ರಸ್ತಾವನೆ ಸಲ್ಲಿಸಿತ್ತು.

ಎಲ್‌–1 ಗುತ್ತಿಗೆದಾರರು ನಮೂದಿಸಿದ್ದ ಮೊತ್ತಕ್ಕಿಂತ ₹ 5.02 ಕೋಟಿಗಳಷ್ಟು ಹೆಚ್ಚು ಮೊತ್ತವನ್ನು ನಮೂದಿಸಿರುವ ಎಲ್‌–2 ಗುತ್ತಿಗೆದಾರರಿಗೆ ಟೆಂಡರ್‌ ನೀಡಲು ಶಿಫಾರಸು ಮಾಡುವ ಮೂಲಕ ಬಿಬಿಎಂಪಿಯು ಸರ್ಕಾರಕ್ಕೆ ಆರ್ಥಿಕ ಹಾನಿ ಉಂಟು ಮಾಡಿದೆ. ಇದು ಅಧಿಕಾರಿಗಳ ಕರ್ತವ್ಯ ಲೋಪ ಎಂದು ಅಧಿಕಾರಯುಕ್ತ ಸಮಿತಿಯು2021ರ ಮೇ 21ರಂದು ನಡೆದ ಸಭೆಯಲ್ಲಿ ಅಭಿಪ್ರಾಯಪಟ್ಟಿದೆ. ಕೆಲವು ಷರತ್ತುಗಳನ್ನು ವಿಧಿಸಿ ಎಲ್–1 ಗುತ್ತಿಗೆದಾರರಾದ ಮೋಹನ್‌ ಅವರಿಗೆ ಕಾಮಗಾರಿ ಗುತ್ತಿಗೆ ನೀಡಲು ಅಧಿಕಾರಯುಕ್ತ ಸಮಿತಿ ಜುಲೈ 6ರಂದು ಆದೇಶ ಮಾಡಿದೆ.

ಗುತ್ತಿಗೆದಾರರು ತಪ್ಪುಮಾಹಿತಿ ನೀಡಿದ್ದಲ್ಲಿ ಟೆಂಡರ್‌ ರದ್ದುಪಡಿಸಿ ಅವರ ವಿರುದ್ಧ ಬಿಬಿಎಂಪಿ ಮುಖ್ಯ ಆಯುಕ್ತರುಕ್ರಮವಹಿಸಬಹುದು. ಕಾಮಗಾರಿ ಅನುಷ್ಠಾನಗೊಳಿಸಲು ವಿಫಲವಾದರೆ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾಗದಂತೆ ತಡೆಯಲು ಹೆಚ್ಚುವರಿ ಭದ್ರತಾ ಠೇವಣಿಯನ್ನು ಗುತ್ತಿಗೆದಾರರಿಂದ ಪಡೆಯಬೇಕು ಎಂದು ಸಮಿತಿ ಆದೇಶದಲ್ಲಿ ತಿಳಿಸಿದೆ.

* ₹ 47.70 ಕೋಟಿ ಮೊತ್ತದ ಕಾಮಗಾರಿ

* ಕಾಮಗಾರಿಗೆ 2020ರ ಜ.22ರಂದು ಟೆಂಡರ್‌ ಆಹ್ವಾನ

* ಬಿಬಿಎಂಪಿ ಶಿಫಾರಸಿನಂತೆ ಗುತ್ತಿಗೆ ನೀಡಿದ್ದರೆ ಸರ್ಕಾರದ ಬೊಕ್ಕಸಕ್ಕೆ ₹ 5.02 ಕೋಟಿ ನಷ್ಟ

ಇಇ ವಿರುದ್ಧ ಶಿಸ್ತುಕ್ರಮಕ್ಕೆ ಸೂಚನೆ

ಈ ಟೆಂಡರ್‌ ಪ್ರಕ್ರಿಯೆಯಲ್ಲಿ ಸರ್ಕಾರಕ್ಕೆ ನಷ್ಟ ಉಂಟಾಗುವಂತಹ ಶಿಫಾರಸು ಮಾಡಿದ ಬಿಬಿಎಂಪಿಯ ಕಾರ್ಯಪಾಲಕ ಎಂಜಿನಿಯರ್‌ (ಇಇ) ಅವರ ನಡೆಗೆ ಅಧಿಕಾರಯುಕ್ತ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.

ಕೆಡಬ್ಲ್ಯು–4 ನಿಯಮವನ್ನು ಕಾರ್ಯಪಾಲಕ ಎಂಜಿನಿಯರ್‌ ಅವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಬಿಬಿಎಂಪಿಗೆ ಹಾಗೂ ಸರ್ಕಾರಕ್ಕೆ ಹಾನಿ ಆಗದಷ್ಟು ಹೆಚ್ಚುವರಿ ಬ್ಯಾಂಕ್‌ ಗ್ಯಾರಂಟಿಯನ್ನು ಎಲ್‌–1 ಗುತ್ತಿಗೆದಾರರಿಂದ ಪಡೆಯಲು ಅವಕಾಶವಿದ್ದರೂ ಅವರು ಉದ್ದೇಶಪೂರ್ವಕವಾಗಿ ಎಲ್–2 ಗುತ್ತಿಗೆದಾರರಿಗೆ ಟೆಂಡರ್‌ ನೀಡಲು ಶಿಫಾರಸು ಮಾಡಿದ್ದಾರೆ. ಅವರ ವಿರುದ್ಧ ಬಿಬಿಎಂಪಿ ಮುಖ್ಯ ಆಯುಕ್ತರು ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT