ಶನಿವಾರ, ಮೇ 21, 2022
25 °C

ಸಫಾಯಿ ಮಿತ್ರ ಸುರಕ್ಷಾ ಸವಾಲು: ಬಿಬಿಎಂಪಿ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಕೇಂದ್ರ ಸರ್ಕಾರ ಏರ್ಪಡಿಸಿದ್ದ ಸ್ವಚ್ಛ ಸರ್ವೇಕ್ಷಣ್ 2021ರ ‘ಸಫಾಯಿ ಮಿತ್ರ ಸುರಕ್ಷಾ ಸ್ಪರ್ಧೆ’ಯಲ್ಲಿ ಬಿಬಿಎಂಪಿಯು ಪ್ರಶಸ್ತಿಗೆ ಆಯ್ಕೆಯಾಗಿದೆ.

ನವದೆಹಲಿಯ ವಿಜ್ಞಾನ ಭವನದಲ್ಲಿ ನ. 20 ರಂದು ಏರ್ಪಡಿಸಿರುವ ಸ್ವಚ್ಛ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸ್ವಚ್ಛ ಸರ್ವೇಕ್ಷಣ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಯಾವ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ ಎಂಬುದನ್ನು ರಾಷ್ಟ್ರಪತಿಯವರೇ ಪ್ರಕಟಿಸಲಿದ್ದಾರೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ರಾಜ್ಯ ಸರ್ಕಾರದ ಸ್ವಚ್ಛ ಭಾರತ ಅಭಿಯಾನದ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಬಿಬಿಎಂಪಿಯು ‘ಸಫಾಯಿ ಮಿತ್ರ ಸುರಕ್ಷಾ ಸ್ಪರ್ಧೆ’ಯ ಪ್ರಶಸ್ತಿಗೆ ಆಯ್ಕೆ ಆಗಿರುವುದಕ್ಕೆ ಪಾಲಿಕೆಯ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಹರ್ಷ ವ್ಯಕ್ತಪಡಿಸಿದ್ದಾರೆ.

ನೇಚರ್ಸ್‌ ಬ್ಯಾಸ್ಕೆಟ್‌ನಲ್ಲಿ ಅಮೆರಿಕ ಆಹಾರ ಉತ್ಸವ

ಬೆಂಗಳೂರು: ಅಮೆರಿಕದ ಕೃಷಿ ಇಲಾಖೆಯ ಕೃಷಿ ಸೇವೆಗಳ ವಿಭಾಗವು (ಎಫ್‌ಎಎಸ್‌) ನೇಚರ್ಸ್‌ ಬ್ಯಾಸ್ಕೆಟ್‌ ಸಹಯೋಗದಲ್ಲಿ ‘ಅಮೆರಿಕದ ರುಚಿ’ ಹೆಸರಿನಲ್ಲಿ ಆಹಾರ ಉತ್ಸವವನ್ನು ಆಯೋಜಿಸಿದೆ.

ಎರಡು ತಿಂಗಳ ಕಾಲ ಎಫ್‌ಎಎಸ್‌ ಈ ಅಭಿಯಾನ ಕೈಗೊಂಡಿದೆ. ಅಮೆರಿಕದ ಆಯ್ದ ವಿವಿಧ ಭಕ್ಷ್ಯಗಳನ್ನು ಮತ್ತು ಪಾನೀಯಗಳನ್ನು ಸ್ಥಳೀಯರಿಗೆ ಪರಿಚಯಿಸುವುದು ಈ ಉತ್ಸವದ ಉದ್ದೇಶ. ಜತೆಗೆ, ಆಹಾರಕ್ಕೆ ಸಂಬಂಧಿಸಿದ ಉತ್ಪನ್ನಗಳಿಗೆ ಉತ್ತೇಜನ ನೀಡುವುದಾಗಿದೆ.

ಕೋರಮಂಗಲದ 5ನೇ ಬ್ಲಾಕ್‌ನಲ್ಲಿರುವ ನೇಚರ್ಸ್‌ ಬ್ಯಾಸ್ಕೆಟ್‌ನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಷೆಪ್‌ ಜೂಹಿ ಗೋಯಲ್‌ ಅವರು ಪ್ರಾದೇಶಿಕ ಭಕ್ಷ್ಯಗಳನ್ನು ತಯಾರಿಸಿದರು. ಕ್ರ್ಯಾನ್‌ಬೆರ್ರಿ ಪುಲಿಹೊರಾ ಮತ್ತು ಫುಷನ್ ದೋಸಾ ಅನ್ನು ಜೂಹಿ ಅವರು ತಯಾರಿಸಿ ಗಮನಸೆಳೆದರು.

‘ಅಮೆರಿಕದ ವಿವಿಧ ಪದಾರ್ಥಗಳನ್ನು ಬಳಸಿಕೊಂಡು ದಕ್ಷಿಣ ಭಾರತದ ವಿವಿಧ ತಿಂಡಿಗಳನ್ನು ತಯಾರಿಸಲಾಯಿತು. ಬೆಂಗಳೂರಿನಲ್ಲಿ ನಡೆಯುತ್ತಿರುವುದರಿಂದ ದಕ್ಷಿಣ ಭಾರತದ ತಿಂಡಿಗಳಿಗೆ ಆದ್ಯತೆ ನೀಡಲಾಗಿದೆ. ಹೀಗಾಗಿಯೇ ಫುಷನ್‌ ದೋಸೆ ತಯಾರಿಸಲಾಯಿತು. ಫುಷನ್‌ ದೋಸಾದ ಜತೆ ಅಮೆರಿಕದ ಸಾಸ್‌ ಬಳಸಲಾಯಿತು. ರುಚಿಕರವಾದ ಈ ತಿಂಡಿಯು ಗಮನಸೆಳೆಯಿತು’ ಎಂದು ಜೂಹಿ ವಿವರಿಸಿದರು.  ಎಫ್‌ಎಎಸ್‌ನ ಹಿರಿಯ ಅಧಿಕಾರಿ ಮಾರಿನೊ ಜೆ. ಬಿಲ್ಲಾರ್ಡ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.