ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಬಿಎಂಪಿಯಿಂದ ಸಸಿ ಬೆಳೆಸಲು ದುಬಾರಿ ಹಣ ವ್ಯಯ: ಒಂದು ಗಿಡಕ್ಕೆ ₹3,100 ವೆಚ್ಚ!

Published 17 ಜೂನ್ 2024, 23:30 IST
Last Updated 17 ಜೂನ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೈಗೊಳ್ಳುವ ‘ಅರಣ್ಯೀಕರಣ‘ದ ಹೆಸರಿನಲ್ಲಿ ಬಿಬಿಎಂಪಿ ಪ್ರತಿಯೊಂದು ಸಸಿಗೆ ₹3,100 ವೆಚ್ಚ ಮಾಡಲು ಮುಂದಾಗಿದೆ. ಇನ್ನೊಂದು ಯೋಜನೆಯಲ್ಲಿ ತಲಾ ಸಸಿಗೆ ₹1,800 ವ್ಯಯ ಮಾಡಲು ಟೆಂಡರ್‌ ಕರೆದಿದೆ.

ದಾಬಸಪೇಟೆ ಮತ್ತು ದೊಡ್ಡಬೆಳವಂಗಲ ನಡುವೆ ನಗರದ ಹೊರವಲಯದಲ್ಲಿ ನಿರ್ಮಾಣವಾಗುವ ಸ್ಯಾಟಲೈಟ್‌ ಟೌನ್‌ ರಿಂಗ್ ರಸ್ತೆಯ (ಎಸ್‌ಟಿಆರ್‌ಆರ್) ಎರಡೂ ಬದಿಯಲ್ಲಿ 10,900 ಗಿಡಗಳನ್ನು ನೆಡಲು ₹3.4 ಕೋಟಿ ವೆಚ್ಚ ಮಾಡಲಿದೆ. ಪ್ರತಿ ಸಸಿಗೆ ₹3,100 ವೆಚ್ಚ ಮಾಡಲಿದ್ದು, ಸಸಿಯನ್ನು ನೆಟ್ಟ ಗುತ್ತಿಗೆದಾರರು ನಂತರದ ಐದು ವರ್ಷ ಅವುಗಳ ನಿರ್ವಹಣೆ ಮಾಡಬೇಕು.

ಇನ್ನೊಂದು ಯೋಜನೆಯಲ್ಲಿ, ಬಿಬಿಎಂಪಿಯಲ್ಲಿ ವಲಯವಾರು ಗಿಡಗಳನ್ನು ನೆಟ್ಟು ಮೂರು ವರ್ಷ ನಿರ್ವಹಣೆ ಮಾಡಲೂ ಅರಣ್ಯ ವಿಭಾಗ ಟೆಂಡರ್‌ ಆಹ್ವಾನಿಸಿದೆ. 27 ಕಾಮಗಾರಿಗಳಲ್ಲಿ ಒಟ್ಟು 1,13,500 ಸಸಿಗಳನ್ನು ನೆಡಲಾಗುತ್ತದೆ. ಇದಕ್ಕಾಗಿ ₹21.36 ಕೋಟಿ ವೆಚ್ಚ ಮಾಡಲು ನಿರ್ಧರಿಸಲಾಗಿದೆ. ಈ ಯೋಜನೆಯಲ್ಲಿ ಪ್ರತಿ ಸಸಿಗೆ ₹1,800 ವೆಚ್ಚ ಮಾಡಲಾಗುತ್ತಿದೆ.

ಸಸಿಗಳಿಗೆ ರಕ್ಷಾ ಕವಚ, ಗೊಬ್ಬರ ಹಾಗೂ ನೀರು ಹಾಕುವ ವೆಚ್ಚವೂ ಈ ನಿರ್ವಹಣೆಯಲ್ಲಿ ಸೇರಿಕೊಂಡಿದೆ ಎಂದು ಹೇಳಲಾಗಿದೆ. ಆದರೆ, ಖಾಸಗಿ ವಲಯದಲ್ಲೇ ಅತಿ ಹೆಚ್ಚಿನ ರೀತಿಯಲ್ಲಿ ನಿರ್ವಹಣೆ ಇದ್ದರೂ, ಪಾಲಿಕೆ ವೆಚ್ಚ ಮಾಡುತ್ತಿರುವ ಅರ್ಧದಷ್ಟೂ ಹಣ ವೆಚ್ಚವಾಗುವುದಿಲ್ಲ. ಆದರೆ, ಈಗಾಗಲೇ ನೆಟ್ಟಿರುವ ಗಿಡಗಳಲ್ಲಿ ಶೇ 50 ರಷ್ಟನ್ನೂ ಉಳಿಸಿಕೊಳ್ಳಲು ಸಾಧ್ಯವಾಗದ ಬಿಬಿಎಂಪಿ, ಅರಣ್ಯೀಕರಣದ ಹೆಸರಲ್ಲಿ ಲೂಟಿ ಮಾಡಲು ಮುಂದಾಗಿದೆ. ಹಸಿರು ರಕ್ಷಕ ಹೆಸರಿನಲ್ಲಿ ವಿದ್ಯಾರ್ಥಿಗಳ ನಿರ್ವಹಣೆ ಎಂದು ಲಕ್ಷಾಂತರ ಸಸಿ ನೆಡಲಾಗಿದೆ ಎಂದು ತೋರಿಸಲಾಗಿದೆ. ಆದರೆ, ವಾಸ್ತವದಲ್ಲಿ ಅವುಗಳಲ್ಲಿ ಅರ್ಧದಷ್ಟು ನಿರ್ವಹಣೆ ಇಲ್ಲದೆ ಸೊರಗಿವೆ.

ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಎಂಟರ್‌ಪ್ರೈಸಸ್‌ (ಕೆ–ರೈಡ್‌) ತನ್ನ ಯೋಜನೆಯಿಂದ ಮರಗಳು ತೆರವಾಗುವುದರಿಂದ, ಪರ್ಯಾಯವಾಗಿ ಗಿಡಗಳನ್ನು ನೆಡಲು ₹8 ಕೋಟಿಯನ್ನು ಈಗಾಗಲೇ ಬಿಬಿಎಂಪಿ ಅರಣ್ಯ ಇಲಾಖೆಗೆ ಬಿಡುಗಡೆ ಮಾಡಿದೆ. ಆದರೆ, ಅರಣ್ಯ ಇಲಾಖೆ ಈ ಬಾಬ್ತಿನಲ್ಲಿ ಯಾವುದೇ ಸಸಿಗಳನ್ನು ನೆಟ್ಟಿಲ್ಲ.

ಸಸಿಗಳಿಗೆ ದುಂದು ವೆಚ್ಚದ ಬಗ್ಗೆ ಪ್ರತಿಕ್ರಿಯಗೆ ಅರಣ್ಯ ವಿಭಾಗದ ಉಪಸಂರಕ್ಷಣಾಧಿಕಾರಿ ಸ್ವಾಮಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT