ಭಾನುವಾರ, ಜನವರಿ 26, 2020
23 °C

ಬಿಬಿಎಂಪಿ: ಸ್ಥಾಯಿ ಸಮಿತಿ ಚುನಾವಣೆ 30ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರ ಆಯ್ಕೆಗೆ ಇದೇ 30ರಂದು ಚುನಾವಣೆ ನಡೆಯಲಿದೆ.  

‘ಬೆಳಿಗ್ಗೆ 11.30 ಗಂಟೆಗೆ ಪಾಲಿಕೆ ಕೇಂದ್ರ ಕಚೇರಿಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ಅಧ್ಯಕ್ಷತೆಯಲ್ಲಿ ಚುನಾವಣೆ ನಡೆಯಲಿದೆ’ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

ಪಾಲಿಕೆಯ 2018–19ನೇ ಸಾಲಿನ ಸ್ಥಾಯಿ ಸಮಿತಿಗಳ ಅವಧಿ ಡಿ.5ಕ್ಕೆ ಕೊನೆಗೊಂಡಿದೆ. ಹಾಗಾಗಿ ಪಾಲಿಕೆಯಲ್ಲಿ ಸದ್ಯಕ್ಕೆ ಯಾವುದೇ ಸ್ಥಾಯಿ ಸಮಿತಿ ಅಸ್ತಿತ್ವದಲ್ಲಿಲ್ಲ. ಈ ಸಮಿತಿಗಳಿಗೆ ಡಿ.4ರಂದು ಚುನಾವಣೆ ನಡೆಸಲು ಪ್ರಾದೇಶಿಕ ಆಯುಕ್ತರು ಅಧಿಸೂಚನೆ ಹೊರಡಿಸಿದ್ದರು. ಆದರೆ, ಅಂದು ಯಾರೂ ನಾಮಪತ್ರ ಸಲ್ಲಿಸದ ಕಾರಣ ಮತದಾನ ಪ್ರಕ್ರಿಯೆಯನ್ನು ರದ್ದುಪಡಿಸಲಾಗಿತ್ತು.

ಮತದಾರರ ಪಟ್ಟಿ ಪರಿಷ್ಕರಣೆ: ಬಿಬಿಎಂಪಿ ವ್ಯಾಪ್ತಿಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಹಾಗೂ ಒಂದು ರಾಜ್ಯ ಸಭಾ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆದ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಗಿದೆ.

ಡಿ.4ರಂದು ಚುನಾವಣೆಗೆ ಸಿದ್ಧಪಡಿಸಿದ್ದ ಮತದಾರರ ಪಟ್ಟಿ ಪ್ರಕಾರ ಪಾಲಿಕೆಯ 198 ಸದಸ್ಯರು ಸೇರಿದಂತೆ 256 ಮಂದಿಗೆ ಮತದಾನದ ಹಕ್ಕು ಇತ್ತು. ಪರಿಷ್ಕೃತ ಪಟ್ಟಿಯ ಪ್ರಕಾರ 260 ಮಂದಿ ಮತದಾನದ ಹಕ್ಕು ಹೊಂದಿದ್ದಾರೆ. ಪಟ್ಟಿಗೆ ಉಪಚುನಾವಣೆಯಲ್ಲಿ ಗೆದ್ದ ನಾಲ್ವರು ಶಾಸಕರಾದ ರಿಜ್ವಾನ್‌ ಅರ್ಷದ್‌, ಕೆ.ಗೋಪಾಲಯ್ಯ, ಎಸ್‌.ಟಿ.ಸೊಮಶೇಖರ, ಬಿ.ಎಸ್‌.ಬಸವರಾಜು ಹಾಗೂ ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಹೆಸರು ಸೇರ್ಪಡೆಯಾಗಿದೆ. ವಿಧಾನ ಪರಿಷತ್‌ ಸದಸ್ಯರಾಗಿದ್ದ ರಿಜ್ವಾನ್‌ ಅರ್ಷದ್‌ ಅವರ ಹೆಸರು ಹಿಂದಿನ ಪಟ್ಟಿಯಲ್ಲೂ ಇತ್ತು. ಈಗ ಅವರು ವಿಧಾನ ಪರಿಷತ್‌ ಸದಸ್ಯ ಎಂಬುದರ ಬದಲು ವಿಧಾನ ಸಭಾ ಸದಸ್ಯ ಎಂಬ ಕಾರಣಕ್ಕೆ  ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಕೌನ್ಸಿಲ್‌ ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.  

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು