ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | 110 ಹಳ್ಳಿಗಳಿಗೆ ಟ್ಯಾಂಕರ್‌ ನೀರು

Published 22 ಆಗಸ್ಟ್ 2023, 16:24 IST
Last Updated 22 ಆಗಸ್ಟ್ 2023, 16:24 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದರೆ ಕೂಡಲೇ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ಸೂಚಿಸಲಾಗಿದೆ ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

110 ಹಳ್ಳಿಗಳಿಗೆ ಮಾತ್ರ ಕುಡಿಯುವ ನೀರಿನ ಪೂರೈಕೆ ಜವಾಬ್ದಾರಿ ಬಿಬಿಎಂಪಿಗಿರುವುದು. ಆದ್ದರಿಂದ, ಕೊಳವೆಬಾವಿ ಕೊರೆಯುವುದು ತಡವಾದರೆ ಟ್ಯಾಂಕರ್‌ ಮೂಲಕ ನೀರು ಪೂರೈಸಬೇಕು. ಇದಕ್ಕೆ ಟ್ರ್ಯಾಕರ್‌ ಹಾಕಿ ನೀರು ಅಗತ್ಯವಿರುವವರಿಗೆ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ವಲಯದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ತುರ್ತು ಸಂದರ್ಭದಲ್ಲಿ ಕಾಮಗಾರಿಗಾಗಿ ₹10 ಕೋಟಿಗೆ ಅನುಮೋದನೆ ದೊರೆತಿದೆ. ಈ ಅನುದಾನದಲ್ಲಿ ಕೊಳವೆಬಾವಿ ಕೊರೆಸಲಾಗುವುದು. ಅಗತ್ಯವಿರುವ ಕಡೆ ಅದಕ್ಕೆ ಅನುಮತಿ ಪಡೆದುಕೊಂಡು ಮುಂದುವರಿಯಬೇಕಿದೆ. ಮಹದೇಪುರ ಕ್ಷೇತ್ರದವರು ಹೆಚ್ಚಿನ ಹಣ ಕೇಳಿದ್ದು, ಅನುಮೋದನೆಗೆ ಕಳುಹಿಸಲಾಗಿದೆ. ಒಪ್ಪಿಗೆ ಸಿಕ್ಕ ಮೇಲೆ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

₹44 ಕೋಟಿ ಬಿಡುಗಡೆ

₹25 ಲಕ್ಷಕ್ಕೂ ಕಡಿಮೆ ಮೊತ್ತ ಬಿಲ್‌ಗಳನ್ನು 2021ರ ಮೇ, ಜೂನ್‌, ಜುಲೈ ಬಾಬ್ತಿನಲ್ಲಿ ಗುತ್ತಿಗೆದಾರರಿಗೆ ಜುಲೈ 18ರಂದು ‘ಹಣ ಭರವಸೆ ಪತ್ರ’ ಮೂಲಕ ಒಟ್ಟು ₹44.33 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ತುಷಾರ್‌ ಗಿರಿನಾಥ್‌ ತಿಳಿಸಿದರು.

ಕಾಮಗಾರಿಗಳಿಗೆ ಸಂಬಂಧಿಸಿದ ಬಿಲ್ಲುಗಳ ನೈಜತೆ ಪರಿಶೀಲಿಸಿಕೊಂಡು ನಿಯಮಾನುಸಾರ ಬಿಡುಗಡೆ ಮಾಡಲಾಗಿದೆ. ಒಬ್ಬರಿಗೆ ಗರಿಷ್ಠ ಮೂರು ಬಿಲ್‌ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಎಸ್ಐಟಿ ತನಿಖೆ ಪೂರ್ಣಗೊಂಡ ಮೇಲೆ ಅದರನುಸಾರ ಮುಂದಿನ ಬಿಲ್‌ಗಳನ್ನು ಪಾವತಿ ಮಾಡಲಾಗುತ್ತದೆ ಎಂದರು.

ಮೊದಲೇ ನೀಡಿದ್ದರು

‘ಹಣ ಭರವಸೆ ಪತ್ರ’ವನ್ನು ₹25 ಲಕ್ಷಕ್ಕೂ ಕಡಿಮೆ ಮೊತ್ತ ಬಿಲ್‌ಗಳಿಗೆ ಜುಲೈ 18ರಂದೇ ಬಿಡುಗಡೆ ಮಾಡಲಾಗಿದೆ. ಎಲ್ಲ ಗುತ್ತಿಗೆದಾರರಿಗೆ ಬಾಕಿ ಇರುವ ₹675 ಕೋಟಿ ಹಾಗೂ ₹2,500 ಕೋಟಿ ಹಣ ಬಿಡುಗಡೆ ಮಾಡಿ ಎಂದು ನಾವು ಕೇಳುತ್ತಿದ್ದೇವೆ’ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ರವೀಂದ್ರ ಹೇಳಿದರು.

‘ಗುತ್ತಿಗೆದಾರರು ಆ.7ರಿಂದ ಕಾಮಗಾರಿಗಳನ್ನು ಸ್ಥಗಿತ ಮಾಡಿ ಹೋರಾಟ ಮಾಡುತ್ತಿದ್ದೇವೆ. ಆದರೆ ಬಿಬಿಎಂಪಿ ಮುಖ್ಯ ಆಯುಕ್ತರು ಜುಲೈ 18ರಂದು ಬಿಡುಗಡೆ ಮಾಡಿರುವ ಹಣವನ್ನು ಇದೀಗ ಬಿಡುಗಡೆ ಮಾಡಿರುವಂತೆ ಮಾತನಾಡುತ್ತಿರುವುದು ಸರಿಯಲ್ಲ’ ಎಂದು ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ. ಮಂಜುನಾಥ್‌ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT