ಗುರುವಾರ , ಜುಲೈ 7, 2022
23 °C

ಬಿಬಿಎಂಪಿ ಶಿಕ್ಷಕರು, ಉಪನ್ಯಾಸಕರ ವೇತನ ಬಾಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ ಬಿಬಿಎಂಪಿ ಶಾಲಾ ಕಾಲೇಜುಗಳ 340ಕ್ಕೂ ಹೆಚ್ಚು ಶಿಕ್ಷಕರು ಮತ್ತು ಉಪನ್ಯಾಸಕರ ಎರಡು ತಿಂಗಳ ವೇತನವನ್ನು ಬಿಬಿಎಂಪಿ ಬಾಕಿ ಉಳಿಸಿಕೊಂಡಿದೆ.

‘2020ರ ಜೂನ್ ಮತ್ತು ಜುಲೈನಲ್ಲಿ ಕೋವಿಡ್‌ ಇದ್ದರೂ ಉಪನ್ಯಾಸಕರು ಮತ್ತು ಶಿಕ್ಷಕರನ್ನು ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿತ್ತು. ಶಾಲಾ–ಕಾಲೇಜುಗಳು ಮುಚ್ಚಿದ್ದರಿಂದ ಕೋವಿಡ್ ನಿರ್ವಹಣೆ ಕೆಲಸಕ್ಕೆ ನೇಮಿಸಿಕೊಳ್ಳಲಾಗಿತ್ತು. ಮನೆ–ಮನೆ ಸರ್ವೆ ಸೇರಿ ವಹಿಸಿದ ಎಲ್ಲ ಕೆಲಸಗಳನ್ನು ಶಿಕ್ಷಕರು ಮಾಡಿದ್ದಾರೆ. ಆದರೆ, ವೇತನ ಮಾತ್ರ ಬಂದಿಲ್ಲ’ ಎಂದು ಶಿಕ್ಷಕರು ಬೇಸರ ವ್ಯಕ್ತಪಡಿಸುತ್ತಾರೆ.

‘ಕೋವಿಡ್‌ ಪರಿಸ್ಥಿತಿ ಉತ್ತುಂಗದಲ್ಲಿ ಇದ್ದ ಆ ಸಂದರ್ಭದಲ್ಲಿ ಮನೆ ಬಿಟ್ಟು ಹೊರಗೆ ಬರಲು ಜನ ಭಯಪಡುತ್ತಿದ್ದರು. ಜೀವಭಯವನ್ನೂ ತೊರೆದು ಕೋವಿಡ್‌ ನಿಯಂತ್ರಣಕ್ಕೆ ಶ್ರಮಿಸಿದ್ದೆವು. ದುಡಿಸಿಕೊಂಡ ಬಿಬಿಎಂಪಿ ನಮ್ಮನ್ನು ಮರೆತುಬಿಟ್ಟಿದೆ’ ಎಂದು ಶಿಕ್ಷಕರೊಬ್ಬರು ‘ಪ್ರಜಾವಾಣಿ’ ಜತೆ ಅಳಲು ತೋಡಿಕೊಂಡರು.

‘2020ರ ನವೆಂಬರ್‌ನಲ್ಲಿ ಹಾಜರಾತಿ ಒದಗಿಸಲು ಬಿಬಿಎಂಪಿ ಅಧಿಕಾರಿಗಳು ಕೇಳಿದ್ದರು. ಮೊದಲಿಗೆ ಹಾಜರಾತಿ ಒದಗಿಸಿದ 108 ಶಿಕ್ಷಕರಿಗೆ ಮಾತ್ರ ಸಂಬಳ ನೀಡಲಾಗಿದೆ. ನಂತರ ಹಾಜರಾತಿ ತಲುಪಿಸಿದ ಉಳಿದ 340ಕ್ಕೂ ಹೆಚ್ಚು ಶಿಕ್ಷಕರಿಗೆ ವೇತನವೇ ಬಂದಿಲ್ಲ. ಬಿಬಿಎಂಪಿ ಶಿಕ್ಷಣ ವಿಭಾಗದಿಂದ ಪಾಲಿಕೆಯ ಹಣಕಾಸು ವಿಭಾಗ ಮತ್ತು ಮುಖ್ಯ ಆಯುಕ್ತರ ಕಚೇರಿಗೆ ಕಳುಹಿಸುವ ಕಡತವನ್ನು ಪದೇ ಪದೇ ವಾಪಸ್ ಕಳುಹಿಸಲಾಗುತ್ತಿದೆ. ಮುಖ್ಯ ಆಯುಕ್ತರೂ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ’ ಎಂದರು.

‘ಶಿಕ್ಷಕರು ಮತ್ತು ಉಪನ್ಯಾಸಕರು ಕೋವಿಡ್ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿರುವ ಬಗ್ಗೆ ಕಳುಹಿಸಿದ್ದ ಕಡತವನ್ನು ಹಣಕಾಸು ವಿಭಾಗದವರು ಎರಡು ಬಾರಿ ವಾಪಸ್‌ ಕಳುಹಿಸಿ ಕೆಲವು ದಾಖಲೆಗಳನ್ನು ಕೇಳಿದ್ದರು. ಅವೆಲ್ಲವನ್ನೂ ಈಗ ಒದಗಿಸಿದ್ದೇವೆ. ಈಗ ಮುಖ್ಯ ಆಯುಕ್ತರ ಮುಂದೆ ಕಡತ ಇದೆ. ಅವರು ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ಬಿಬಿಎಂಪಿ ಶಿಕ್ಷಣ ವಿಭಾಗದ ಸಹಾಯಕ ಆಯುಕ್ತ ಉಮೇಶ್ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು